ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆಗೊಳಗಾದ ಯುವಕ ಸೇರಿ 16 ಜನರ ವಿರುದ್ಧ ಪೋಕ್ಸೊ ಪ್ರಕರಣ

ಮತಾಂತರಕ್ಕೆ ಯತ್ನಿಸಿದ್ದ ಯುವಕ: ಬಾಲಕಿ ಆರೋಪ
Published 21 ಮಾರ್ಚ್ 2024, 16:29 IST
Last Updated 21 ಮಾರ್ಚ್ 2024, 16:29 IST
ಅಕ್ಷರ ಗಾತ್ರ

ಯಾದಗಿರಿ: ಹಿಂದೂ ಧರ್ಮದ ಬಾಲಕಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಮುಸ್ಲಿಂ ಯುವಕ ವಾಹಿದ್ ತನವೀರ್‌ ಬಾದಲ್‌ ಮೇಲೆ ಗುಂಪೊಂದು ತೀವ್ರವಾಗಿ ಹಲ್ಲೆ ನಡೆಸಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಹಾಗೂ ಮತಾಂತರಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಿ ಬಾಲಕಿಯು ವಾಹಿದ್‌ ಸೇರಿ 16 ಜನರ ವಿರುದ್ಧ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಾಹೀದ್, ಯಾಯಾ ಮುಸ್ಲಿಂಪುರ, ಲಾಯಕ್‌ ಹುಸೇನ್‌ ಬಾದಲ್‌, ಇರ್ಫಾನ್‌ ಬಾದಲ್‌, ತನ್ವೀರ್‌ ಬಾದಲ್‌, ಮುಜೀಬ್‌ ಬಾದಲ್‌, ಮತೀನ್‌ ಗೋರಿ, ತಜಮುಲ್‌, ಇಜಾಜ್‌ ಬಾದಲ್‌, ಇಮ್ರಾನ್‌ ಬಾದಲ್‌, ಮೌಲಾಲಿ ಬಾದಲ್‌, ಶಹಬಾದ್‌ ಬಾದಲ್‌, ಆಸೀಫ್‌ ಖುರಂ, ಖುರಂ ಬಾದಲ್‌, ಮಹ್ಮದ್‌, ಹಸನ್‌, ಅಲಿ ಮೋಟಾರ್‌ ಅವರ ವಿರುದ್ಧ ಬಾಲಕಿ ದೂರು ನೀಡಿದ್ದಾಳೆ.

‘ವಾಹಿದ್ ಪುಸಲಾಯಿಸಿ ಮತಾಂತರಕ್ಕೆ ಯತ್ನಿಸಿದ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ತಮ್ಮ ಸಮುದಾಯದ ಹಿರಿಯರೆಲ್ಲ ಮುಸ್ಲಿಂ ಧರ್ಮಕ್ಕೆ ಕರೆದುಕೊಳ್ಳುತ್ತಾರೆ. ನಿನಗೆ ಬೇಕಾದಂತೆ ಇರಬಹುದು ಎಂದು ನಂಬಿಸಿದ್ದಾನೆ. ಸಲುಗೆಯಿಂದ ಇದ್ದ ಕ್ಷಣಗಳ ಫೋಟೊ, ವಿಡಿಯೊ ತೆರೆದುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ತಾನು ಹೇಳಿದಂತೆ ಕೇಳದಿದ್ದರೆ ವಿಡಿಯೊ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾಳೆ. 

‘ಇದಕ್ಕೂ ಮೊದಲು ಬಾಲಕಿಯು ಈ ವಿಷಯ ಮನೆಯಲ್ಲಿ ತಿಳಿಸಿದಾಗ ಪೋಷಕರು ಬಜರಂಗದಳದ ಮುಖಂಡರಿಗೆ ಮಾಹಿತಿ ನೀಡಿದ್ದಾರೆ. ಬಜರಂಗದಳದ ಮುಖಂಡರು ಯುವಕನನ್ನು ಕರೆಸಿ ಥಳಿಸಿ, ಮೊಬೈಲ್‌ನಲ್ಲಿದ್ದ ವಿಡಿಯೊ ಹಾಗೂ ಫೋಟೊಗಳನ್ನು ಡಿಲೀಟ್‌ ಮಾಡಿ, ಬಾಲಕಿಯ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದಾರೆ. ನಂತರ ಯುವಕನು ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿರುವುದಕ್ಕೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಒಂಬತ್ತು ಜನರ ವಿರುದ್ಧ ದೂರು ದಾಖಲಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಬಾಲಕಿಯು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಮತಾಂತರಕ್ಕೆ ಯತ್ನಿಸಿದ್ದ ಆರೋಪದ ಮೇಲೆ ಐಪಿಸಿಯ 504, 506, 511, 354,354 (ಎ), 354 (ಬಿ), 354 (ಸಿ), 354 (ಡಿ), 149, ಪೋಕ್ಸೊ ಕಾಯ್ದೆ–2012ರ ಅಡಿ ದೂರು ನೀಡಿದ್ದಾಳೆ.

ಮೂವರ ಬಂಧನ: ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಮಲ್ಲು, ತಾಯಪ್ಪ, ಶಿವು ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪೋಕ್ಸೊ ಪ್ರಕರಣದ ತನಿಖೆ ನಡೆಸಲು ಡಿವೈಎಸ್‌ಪಿ ನೇತೃತ್ವ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT