ಶನಿವಾರ, ಮೇ 15, 2021
29 °C
5 ಕೃತಿಗಳನ್ನು ಬಿಡುಗಡೆ ಮಾಡಿದ ಸಚಿವ ಅರವಿಂದ ಲಿಂಬಾವಳಿ; ಶಿಸ್ತಿಲ್ಲದೇ ಹೋದರೆ ಯಶಸ್ಸು ಸಾಧ್ಯವಿಲ್ಲ: ಅಭಿಮತ

ಶಿವರಾತ್ರೀಶ್ವರ, ಹಾಲಭಾವಿ, ವೀರಪ್ಪ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠ ಹಾಗೂ ಶಿವರಾತ್ರೀಶ್ವರ ಮಹಾವಿದ್ಯಾಪೀಠದ ವತಿಯಿಂದ ಇಲ್ಲಿನ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಾಹಿತಿ ಮಹಾಂತಪ್ಪ ನಂದೂರ ಅವರಿಗೆ ಶಿವರಾತ್ರೀಶ್ವರ ಪ್ರಶಸ್ತಿಯನ್ನು (₹25 ಸಾವಿರ ಗೌರವಧನ) ಪ್ರದಾನ ಮಾಡಲಾಯಿತು.

‘ವಚನ ಚಿತ್ರರಚನಾ ಪಿತಾಮಹ ಎಂ.ವೀರಪ್ಪ ದತ್ತಿ ಪ್ರಶಸ್ತಿ’ಯನ್ನು (₹68 ಸಾವಿರ ಗೌರವಧನ) ರಾಧಾ ಮಲ್ಲಪ್ಪ ಅವರಿಗೆ, ಕಲಾಗುರು ಡಿ.ವಿ.ಹಾಲಭಾವಿ ಪ್ರಶಸ್ತಿಯನ್ನು (₹10 ಸಾವಿರ ಗೌರವಧನ) ಈಶ್ವರ್ ಎನ್. ಜೋಷಿ ಅವರಿಗೂ ಪ್ರದಾನ ಮಾಡಲಾಯಿತು. ಜತೆಗೆ, ಸಾಹಿತಿ ಕೆ.ಎಸ್.ಮಹಾದೇವಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ಸಚಿವ ಅರವಿಂದ ಲಿಂಬಾವಳಿ ಅವರು ಎಂ.ಆರ್.ಶ್ರೀನಿವಾಸಮೂರ್ತಿ ಅವರ ‘ಭಕ್ತಿ ಭಂಡಾರಿ ಬಸವಣ್ಣ’, ಎಸ್.ಎಂ.ಅಂಗಡಿ ಅವರ ‘ಬಸವ ದರ್ಶನ’, ಎಪಿಜೆ ಅಬ್ದುಲ್ ಕಲಾಂ ಅವರ ಭಾಷಣಗಳ ಸಂಗ್ರಹ ‘ಹಾರ್ಟ್‌ ಟು ಹಾರ್ಟ್’, ಸಿ.ಪಿ.ರಾಮ ಶೇಷ ಅವರ ‘ಸುತ್ತೂರು ಶ್ರೀ ಮಠದ ಗ್ರಂಥಾಲಯ‌’, ಮೃತ್ಯುಂಜಯ ರುಮಾಲೆ ಅವರ ‘ಸ್ವತಂತ್ರ ಸಿದ್ಧಲಿಂಗೇಶ್ವರರು’ ಕೃತಿಗಳನ್ನು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ‘ಮೊಬೈಲ್‌ನಲ್ಲಿ ಇ–ಪುಸ್ತಕ ಓದುವುದಕ್ಕಿಂತ ಮುದ್ರಿತ ಪುಸ್ತಕವನ್ನು ಓದುವುದೇ ಚೆಂದ. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಮಾಡಿದ ಇ–ಗ್ರಂಥಾಲಯಕ್ಕೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ’ ಎಂದು ಹೇಳಿದರು.‌

‘ಜೆಎಸ್‌ಎಸ್‌ನಲ್ಲಿ ಅದರದೇ ಆದ ಒಂದು ಶಿಸ್ತು ಇದೆ. ಆರ್‌ಎಸ್‌ಎಸ್‌ನಲ್ಲೂ ಒಂದು ಬಗೆಯ ಶಿಸ್ತು ಇದೆ. ಇಂತಹ ಶಿಸ್ತುಗಳನ್ನು ನಾವು ಕಲಿಯಬೇಕಿದೆ. ಶಿಸ್ತಿಲ್ಲದೇ ಹೋದರೆ ಯಶಸ್ಸು ಸಾಧ್ಯವಿಲ್ಲ’ ಎಂದರು.

ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ಉತ್ತೇಜನ ನೀಡಲು ಪೂರಕ ಕಾರ್ಯಕ್ರಮ ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಮಾತನಾಡಿ, ‘ಬಸವಣ್ಣನವರ ನಾಡಿನಲ್ಲಿ ಜಾತಿ, ಉಪಜಾತಿಗಳ ಒಡಕು ಇರುವುದು ನಿಜಕ್ಕೂ ದುರ್ದೈವ’ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ಮಾತನಾಡಿ, ‘ಬಸವಣ್ಣನವರು ಕುದುರೆ ಮೇಲೆ ಕುಳಿತ ಭಂಗಿಯ ಚಿತ್ರವು ಸಾಂಸ್ಕೃತಿಕ ಬಿಕ್ಕಟ್ಟಿನ ಫಲ. ಬೆಳಗಾವಿಯಲ್ಲಿ ಮೊದಲು ಇಂತಹ ಚಿತ್ರ ಬರೆಯಲಾಯಿತು. ಶಿವಾಜಿ ಮಹಾರಾಜರ ಚಿತ್ರವೂ ಇದೇ ಭಂಗಿಯಲ್ಲಿರುವುದನ್ನು ಗಮನಿಸಬೇಕು. ಕಲೆ ಇಂತಹ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಅಭಿವ್ಯಕ್ತಿಸುತ್ತದೆ’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹಾಂತಪ್ಪ ನಂದೂರ, ‘ಪ್ರಶಸ್ತಿ ನಿರ್ಣಾಯಕರಷ್ಟೇ ಪುಸ್ತಕ ಓದುತ್ತಾರೆ. ಸಾಹಿತ್ಯಾಸಕ್ತರಿಗೆ, ವಿಮರ್ಶಕರಿಗೆ ಇನ್ನೂ ಪುಸ್ತಕ ದೊರಕಿಲ್ಲ ಎಂಬ ಬೇಸರ ಇದೆ’ ಎಂದು ಹೇಳಿದರು.

ಅಕ್ಕನಾಗಮ್ಮ ಅವರು ವಚನಗಳನ್ನು ರಕ್ಷಣೆ ಮಾಡಿ, ಅವುಗಳ ಉಳಿವಿಗಾಗಿ ‘ಉಳವಿ’ಗೆ ಬಂದು, ತರಿಕೆರೆಯಲ್ಲಿ ಐಕ್ಯರಾಗುತ್ತಾರೆ. ಇಂತಹವರ ಬಗ್ಗೆ ಹೆಚ್ಚಿನ ಕೃತಿಗಳು ಬಂದಿಲ್ಲ ಎಂದು ಅವರು ತಿಳಿಸಿದರು.

‘ಗಿನ್ನೆಸ್ ದಾಖಲೆಯಾದಾಗಲೂ ನನಗೆ ಇಷ್ಟು ಖುಷಿಯಾಗಿರಲಿಲ್ಲ. ಇಂತಹ ದೊಡ್ಡ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು, ಸಂತಸ ತರಿಸಿದೆ. ಈ ವೇಳೆ ನಮ್ಮ ತಾಯಿ ಬದುಕಿದ್ದರೆ ತುಂಬಾ ಸಂತೋಷಪಡುತ್ತಿದ್ದರು’ ಎಂದು ರಾಧಾ ಮಲ್ಲಪ್ಪ ಭಾವುಕರಾದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು