ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸೋಂಕಿತರಿಗೆ ಸೂಕ್ತ ಸೌಲಭ್ಯ ಒದಗಿಸಿ: ಸಚಿವ ಪ್ರಭು ಚವ್ಹಾಣ್

ಔಷಧೋಪಚಾರ, ಊಟ, ಚಿಕಿತ್ಸೆ ಸಮಪರ್ಕವಾಗಿ ನೀಡಲು
Last Updated 4 ಆಗಸ್ಟ್ 2020, 15:08 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರಿಗೆ ಸರ್ಕಾರದಿಂದ ನೀಡುವ ಎಲ್ಲಾ ಔಷಧೋಪಚಾರ, ಊಟ, ಚಿಕಿತ್ಸೆಯನ್ನು ಸಮಪರ್ಕವಾಗಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚವ್ಹಾಣ್ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್‌.ಪಾಟೀಲ ಅವರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದಕೋವಿಡ್–19 ಸಂಬಂಧಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಮರ್ಪಕವಾಗಿ ಊಟ, ಉಪಾಹಾರ, ಕುಡಿಯುವ ನೀರು, ಔಷಧಿಗಳನ್ನು ಪೂರೈಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಗುಣಮುಖರನ್ನಾಗಿಸುವ ಯತ್ನಿಸಬೇಕು. ಕೋವಿಡ್ ಆಸ್ಪತ್ರೆಗಳಲ್ಲಿ ಸ್ಪಚ್ಛತೆ ಕಾಪಾಡಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಉದ್ಭವವಾಗದಂತೆ ಕೊರೊನಾ ಸೋಂಕಿತರನ್ನು ಉಪಚರಿಸಬೇಕು. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ.ಈಗಾಗಲೇ ಜಿಲ್ಲೆಗೆ 14 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲಾಗಿದೆ ಎಂದರು.

ವಿದ್ಯುತ್ ಕಡಿತ ಬೇಡ:ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಜಿಲ್ಲಾಸ್ಪತ್ರೆಗೆ 24 ತಾಸು ವಿದ್ಯುತ್ ಪೂರೈಸಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತಗೊಳಿಸಬಾರದು ಎಂದು ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ರಾಘವೇಂದ್ರ ಅವರಿಗೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಸ್ಪತ್ರೆಗೆ ವಿದ್ಯುತ್ ಕಡಿತಗೊಳಿಸದಂತೆ ಜೆಸ್ಕಾಂನ ಮುಖ್ಯ ಎಂಜಿನಿಯರ್‌ಗೆಈ ವೇಳೆಮೊಬೈಲ್ ಮೂಲಕ ಮಾತನಾಡಿ ನಿರ್ದೇಶನ ನೀಡಿದರು.

ಒಂದು ಎಕರೆ ಮೀಸಲಿಡಿ:ಕೋವಿಡ್‌ನಿಂದಾಗಿ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಒಂದು ಎಕರೆ ಜಮೀನನ್ನು ಆದ್ಯತೆಯ ಮೇರೆಗೆ ಗುರುತಿಸಬೇಕು. ಈ ಬಗ್ಗೆ ಪ್ರಸ್ತಾವವನ್ನು ಕೂಡಲೇ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಸಚಿವರು, ಈ ಕಾರ್ಯ ಅತಿ ತುರ್ತಾಗಿ ಆಗಬೇಕೆಂದರು.

ಫೋಟೊ ವಾಟ್ಸ್‌ ಆ್ಯಪ್‌ ಮಾಡಿ:ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ಪಚ್ಛಪಡಿಸಬೇಕು. ನೀರು ಸರಾಗವಾಗಿ ಹರಿಯುವಂತಾಗಬೇಕು. ಡೆಂಗಿ, ಚಿಕೂನ್‌ಗೂನ್ಯಾ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಬೇಕು ಎಂದು ನಗರಸಭೆ ಪ್ರಭಾರಿ ಪೌರಾಯುಕ್ತ ಬಕ್ಕಪ್ಪ ಅವರಿಗೆ ಸೂಚಿಸಿದರು.

ಚರಂಡಿಗಳನ್ನು ಸ್ಪಚ್ಛಪಡಿಸಿರುವುದನ್ನು ಖಾತ್ರಿ ಪಡಿಸಬೇಕು. ಹೀಗಾಗಿ ಕಾಮಗಾರಿ ಮುಗಿದ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ವಾಟ್ಸ್ ಆ್ಯಪ್‌ ಮೂಲಕ ಚಿತ್ರ ಕಳಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಹೆಚ್ಚು ಜನಸಾಂದ್ರತೆ ಇರುವ ಕಡೆ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ವೈದ್ಯರು ಮುಂದೆ ಬಂದಿದ್ದಾರೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಮಾತನಾಡಿ,ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಯಾವುದೇ ಔಷಧೋಪಚಾರಗಳ ಕೊರತೆಯಿಲ್ಲ. 108ನ 12 ವಾಹನಗಳು, 18 ಆ್ಯಂಬುಲೆನ್ಸ್‌ಗಳು, 10 ಮೊಬೈಲ್ ವ್ಯಾನ್‍ಗಳು, ಅಗತ್ಯ ಮಾಸ್ಕ್‌ಗಳು, ಸ್ಯಾನಿಟೈಸರ್, ಪಿಪಿಇ ಕಿಟ್‍ಗಳಿವೆ. ಆದರರ, ಸಿಬ್ಬಂದಿ ಕೊರತೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕೃಷಿ ಚಟುವಟಿಕೆಗಳಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಆಗಬಾರದು. ಜಿಲ್ಲೆಯ ಕೃಷಿಗೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್‌., ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.

ಶಾಸಕರಾಜೂಗೌಡ ಮಾತನಾಡಿ, ಕೆಲ ಪಿಡಿಒಗಳು ಬೆಂಗಳೂರಿನಿಂದ ಇದ್ದುಕೊಂಡು ಇಲ್ಲಿಯ ಕೆಲಸಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಇಂಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚಿಸಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವನಗೌಡ ಯಡಿಯಾಪುರ, ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೋಟ್ನಡಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾಶರ್ಮಾ, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

***

ಜಿಲ್ಲಾಡಳಿತದ ಸಣ್ಣಪುಟ್ಟ ತಪ್ಪುಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಕೋವಿಡ್‌ ಆಸ್ಪತ್ರೆಗಳಿಂದ ದೂರುಗಳು ಬರದಂತೆ ಅಧಿಕಾರಿಗಳು ನೋಡಿಕೊಳ್ಳಿ.
–ಪ್ರಭು ಚವ್ಹಾಣ್,ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT