ಗುರುವಾರ , ಅಕ್ಟೋಬರ್ 21, 2021
29 °C
ಗುರುಮಠಕಲ್ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾದ ಬಿತ್ತನೆ ಬೀಜ ಖರೀದಿಸಲು ಬಂದಿದ್ದ ಮಹಿಳೆ

ಯಾದಗಿರಿ: ರೈತ ಮಹಿಳೆಯನ್ನು ತಳ್ಳಿದ ಪಿಎಸ್‌ಐ- ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಶೇಂಗಾದ ಬಿತ್ತನೆ ಬೀಜ ಖರೀದಿಸಲು ಸರದಿಯಲ್ಲಿ ನಿಂತಿದ್ದ ರೈತ ಮಹಿಳೆಯೊಬ್ಬರನ್ನು ಅಲ್ಲಿನ ಪಿಎಸ್‌ಐ ಗಂಗಮ್ಮ ಭದ್ರಾಪುರ ಹಿಂದೆ ತಳ್ಳಿದ್ದು, ಮಹಿಳೆ ನೆಲಕ್ಕುರುಳಿ ಬಿದ್ದಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗುರುಮಠಕಲ್ ತಾಲ್ಲೂಕಿನ ಸಿದ್ದಾಪುರ (ಬಿ) ಗ್ರಾಮದ ಮಾಣೆಮ್ಮ ಬುಗ್ಗಪ್ಪ ಗಡ್ಡಮೀನಿ ಎನ್ನುವ ರೈತ ಮಹಿಳೆ ನೆಲಕ್ಕೆ ಬಿದ್ದವರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಶೇಂಗಾ ವಿತರಣೆ ಆರಂಭಿಸಲಾಗಿತ್ತು. ಗೋದಾಮಿನಲ್ಲಿ ‘ಸದ್ಯ 400 ಕ್ವಿಂಟಲ್‌ ಶೇಂಗಾದ ದಾಸ್ತಾನಿದ್ದು, ಎಲ್ಲರಿಗೂ ವಿತರಣೆ ಮಾಡಲಾಗುತ್ತದೆ. ಬುಧವಾರ 300 ಕ್ವಿಂಟಲ್‌ ದಾಸ್ತಾನು ಬರುತ್ತದೆ. ಹೀಗೆ 1,000 ಕ್ವಿಂಟಲ್‌ ಶೇಂಗಾದ ದಾಸ್ತಾನು ಸರಬರಾಜಾಗಲಿದ್ದು, ಎಲ್ಲರಿಗೂ ವಿತರಿಸುತ್ತೇವೆ. ಗದ್ದಲ ಮಾಡುವುದು ಬೇಡ' ಎಂದು ಆರ್‌ಎಸ್‌ಕೆ ಸಿಬ್ಬಂದಿ ರೈತರಿಗೆ ಮನವಿ ಮಾಡಿದ್ದಾರೆ.

ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯ ನೆರವು ನೀಡಲು ಆರ್‌ಎಸ್‌ಕೆ ಅಧಿಕಾರಿಗಳು ಮನವಿ ಮಾಡಿದ್ದರು. ಜನರ ನೂಕು ನುಗ್ಗಲು ಹೆಚ್ಚಿದ್ದ ಸಮಯದಲ್ಲಿ ಗದ್ದಲ ನಿಯಂತ್ರಿಸಲು ಪಿಎಸ್‌ಐ ಗಂಗಮ್ಮ ಪ್ರಯತ್ನಿಸಿದ್ದು, ರೈತ ಮಹಿಳೆಯನ್ನು ಹಿಂದಕ್ಕೆ ನೂಕಿದ್ದಾರೆ. ಆಗ ಮಹಿಳೆಯು ನೆಲಕ್ಕುರುಳಿ ಬಿದ್ದಿದ್ದಾರೆ. ಅಲ್ಲಿದ್ದವರು ಈ ವಿಡಿಯೊ ಸೆರೆ ಹಿಡಿದಿದ್ದಾರೆ.

ಪಿಎಸ್‌ಐ ಗಂಗಮ್ಮ ಭದ್ರಾಪುರ ಅವರು ರೈತ ಮಹಿಳೆಯನ್ನು ಹಿಂದಕ್ಕೆ ನೂಕಿದ ದೃಶ್ಯ ಸದ್ಯ ವೈರಲ್ ಆಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆಯಲು ಸಂಪರ್ಕಿಸಿದರೆ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು