ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರತೆಗಳ ಮಧ್ಯೆ ಪಿಯು ಶಿಕ್ಷಣ

ಮಳೆ ಬಂದರೇ ಅಲ್ಲಲ್ಲಿ ಸೋರುವ ಕೋಣೆಗಳು, ವಿದ್ಯುತ್, ಫ್ಯಾನ್ ವ್ಯವಸ್ಥೆಯೂ ಇಲ್ಲ
Published 19 ಜೂನ್ 2024, 15:41 IST
Last Updated 19 ಜೂನ್ 2024, 15:41 IST
ಅಕ್ಷರ ಗಾತ್ರ

ಹುಣಸಗಿ: ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕಷ್ಟು ಕೊರತೆಗಳ ಮಧ್ಯೆ ಕಾರ್ಯನಿರ್ವಹಿಸುತ್ತಾ ಉತ್ತಮ ಫಲಿತಾಂಶದೊಂದಿಗೆ ಮುನ್ನಡೆಯುತ್ತಿದೆ.

ಈ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅಂದಿನ ಸರ್ಕಾರ 1991ರಲ್ಲಿಯೇ ಹುಣಸಗಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಿತ್ತು. ಆದರೆ, ಇಂದು ಮುಖ್ಯವಾಗಿ ಪ್ರಾಚಾರ್ಯರು, ಉಪನ್ಯಾಸಕರು, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ, ಗ್ರಂಥ ಪಾಲಕರು, ಸೇವಕರು ಹೀಗೆ ಇಲ್ಲಗಳ ಮಧ್ಯೆಯೇ ಕಾರ್ಯನಿರ್ವಹಿಸುತ್ತಿದೆ.

‘2024-25 ನೇ ಸಾಲಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 180, ವಾಣಿಜ್ಯ ವಿಭಾಗದಲ್ಲಿ 14 ಹಾಗೂ ವಿಜ್ಞಾನ ವಿಭಾಗದಲ್ಲಿ 19 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ಪಿಯುಸಿ ಪ್ರಥಮ ವರ್ಷಕ್ಕೆ ಕಲಾ ವಿಭಾಗದಲ್ಲಿ 88, ವಾಣಿಜ್ಯ ವಿಭಾಗದಲ್ಲಿ 15 ಹಾಗೂ ವಿಜ್ಞಾನ ವಿಭಾಗದಲ್ಲಿ 15 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರವೇಶಕ್ಕೆ ಇನ್ನೂ ಅವಕಾಶವಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಪ್ರಭಾರ ಪ್ರಾಚಾರ್ಯ ವಿ.ಎಸ್.ಬಿರಾದಾರ ಮಾಹಿತಿ ನೀಡಿದರು.

‘ಸದ್ಯ ಈ ಕಾಲೇಜು ಅಡಿಯಲ್ಲಿ ಪ್ರಾಚಾರ್ಯ ಕಚೇರಿ ಸೇರಿದಂತೆ ಒಟ್ಟು 12 ಕೋಣೆಗಳಿದ್ದು, ಅದರಲ್ಲಿ 3 ಕೊಠಡಿಗಳಲ್ಲಿಕಾಲೇಜು ನಡೆಸಿಕೊಂಡು ಹೋಗಲಾಗುತ್ತಿದೆ. ಎರಡು ಕೋಣೆಗಳಲ್ಲಿ ಪ್ರಯೋಗಾಲಯ ಇದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇನ್ನೂ ಕೋಣೆಗಳ ಅಗತ್ಯವಿದ್ದು, ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಮಾಡುವುದು ಅಗತ್ಯ’ ಎಂದು ವಿದ್ಯಾರ್ಥಿಗಳಾದ ಪ್ರಿಯಾಂಕಾ ಕೃಷ್ಣಪ್ಪ ಹಾಗೂ ಶಿಲ್ಪಾ ಹೇಳಿದರು.

‘ಕಾಲೇಜು ಕೊಠಡಿಗಳಲ್ಲಿ ಸರಿಯಾದ ವಿದ್ಯುತ್, ಫ್ಯಾನ್ ವ್ಯವಸ್ಥೆಯೂ ಇಲ್ಲ. ಮಳೆ ಬಂದರೇ ಅಲ್ಲಲ್ಲಿ ಕೋಣೆಗಳು ಸೋರುತ್ತವೆ’ ಎಂದು ವಿದ್ಯಾರ್ಥಿ ದೇವರಾಜ ಪೂಜಾರಿ ಹೇಳಿದರು.

‘ತಾಲ್ಲೂಕು ಕೇಂದ್ರವಾಗಿರುವ ಹುಣಸಗಿಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಾಲಯ ವ್ಯವಸ್ಥೆ ಇಲ್ಲ. ಆದ್ದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಾಗೂ ಗ್ರಂಥಾಲಯಕ್ಕೆ ಹೆಚ್ಚು ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಂತ ಪುಸ್ತಕ ಹಾಗೂ ಪೀಠೋಪಕರಣಗಳ ವ್ಯವಸ್ಥೆಯಾದಲ್ಲಿ ಮಕ್ಕಳಿಗೆ ಇನ್ನೂ ಹೆಚ್ಚು ಅನುಕೂಲವಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಸಂಗನಬಸಪ್ಪ ಗೋಗಿ ಹಾಗೂ ಈರಣ್ಣ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪನ್ಯಾಸಕರ ಕೊರತೆ: ಕೆಲ ವರ್ಷಗಳಿಂದಲೂ ಪ್ರಾಚಾರ್ಯ ಹುದ್ದೆ ಖಾಲಿ ಇದ್ದು, ಪ್ರಭಾರ ಪ್ರಾಚಾರ್ಯರೇ ಕಾರ್ಯನಿರ್ವಹಿಸುತ್ತಿದ್ದಾರೆ. 4 ಜನ ಕಾಯಂ ಉಪನ್ಯಾಸಕರಿದ್ದಾರೆ. ಇನ್ನುಳಿದ 7ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಹಳೆಯ ಕಾಲೇಜುಗಳಲ್ಲಿ ಒಂದಾಗಿರುವ ಈ ಕಾಲೇಜಿಗೆ ಅತಿಥಿ ಉಪನ್ಯಾಸಕರೇ ಆಧಾರ ಎನ್ನುವಂತಾಗಿದೆ. ಅದರಲ್ಲೂ ಮುಖ್ಯವಾಗಿ ಕನ್ನಡ, ಇಂಗ್ಲಿಷ್‌, ಇತಿಹಾಸ, ವಾಣಿಜ್ಯಶಾಸ್ತ್ರ ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಉಪನ್ಯಾಸಕರ ಕೊರತೆ ಇದ್ದು, ಕೆಲವು ಸ್ಥಾನಗಳಿಗೆ ಎರವಲು ಮೇಲೆ ನಿಯೋಜನೆ ಮಾಡಲಾಗಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ಕೂಡಲೇ ಗುಣಮಟ್ಟದ ಶಿಕ್ಷಣಕ್ಕೆ ಸೂಕ್ತ ವಾತಾವರಣದ ವ್ಯವಸ್ಥೆ ಮಾಡಬೇಕು ಎಂಬುದು ಇಲ್ಲಿನ ಬಾಬು ರಾಠೋಡ ಹಾಗೂ ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.

‘ಕಾಲೇಜನಲ್ಲಿ ಒಂದೇ ಶೌಚಾಲಯವಿದ್ದು, ಇದು ವಿದ್ಯಾರ್ಥಿನಿಯರ ಬಳಕೆಗೆ ಇದೆ. ಆದರೆ, ವಿದ್ಯಾರ್ಥಿಗಳು ಶೌಚಕ್ಕೆ ಅನಿವಾರ್ಯವಾಗಿ ಬಯಲಿಗೆ ತೆರಳಬೇಕಿದೆ. ಆದ್ದರಿಂದ ಸೂಕ್ತ ವ್ಯವಸ್ಥೆ ಮಾಡಲಿ’ ಎಂದು ವಿದ್ಯಾರ್ಥಿಗಳಾದ ರಾಜು, ಯಮನಪ್ಪ ತಿಳಿಸಿದರು.

ಉತ್ತಮ ಫಲಿತಾಂಶ ಪಡೆದ ಕಾಲೇಜು

ಹುಣಸಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕಷ್ಟು ಕೊರತೆಗಳ ಮಧ್ಯೆಯೂ ಫಲಿತಾಂಶ ಮಾತ್ರ ಉತ್ತಮವಾಗಿದೆ. 2023ನೇ ಸಾಲಿನಲ್ಲಿ ಕಲಾ ವಿಭಾಗದಲ್ಲಿ 221 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 152 ಮಕ್ಕಳು ಪಾಸಾಗಿದ್ದು ಶೇ 71.9 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 36 ವಿದ್ಯಾರ್ಥಿಗಳಲ್ಲಿ 27 ಹಾಗೂ ವಿಜ್ಞಾನ ವಿಭಾಗದಲ್ಲಿ 17ರಲ್ಲಿ 8 ವಿದ್ಯಾರ್ಥಿಗಳು ಪಾಸ್‌ ಮಾಡಿದ್ದಾರೆ. 2024ರಲ್ಲಿ ಕಲಾ ವಿಭಾಗದಲ್ಲಿ 190 ವಿದ್ಯಾರ್ಥಿಗಳಲ್ಲಿ 176 ವಿದ್ಯಾರ್ಥಿಗಳು ಪಾಸು ಮಾಡಿದ್ದು ಶೇ 89 ಫಲಿತಾಂಶ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT