ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಬಾರದ ಮಳೆ; ಆಗಸದತ್ತ ರೈತರ ಮುಖ

Published 18 ಜೂನ್ 2023, 6:12 IST
Last Updated 18 ಜೂನ್ 2023, 6:12 IST
ಅಕ್ಷರ ಗಾತ್ರ

ಬಿ.ಜಿ.ಪ್ರವೀಣಕುಮಾರ

ಮುಂಗಾರು ಹಂಗಾಮಿನಲ್ಲಿ ರೋಹಿಣಿ, ಮೃಗಶಿರ ಹೆಚ್ಚು ಸುರಿದರೆ ರೈತರು, ಹೆಸರು, ಉದ್ದು ಬಿತ್ತನೆ ಮಾಡುತ್ತಿದ್ದರು. ಅಲ್ಪಾವಧಿ ಬೆಳೆಯಾದ ಹೆಸರು ಸಣ್ಣ ಪುಟ್ಟ ಖರ್ಚಿಗೆ ಹಣ ಹೊಂದಿಕೆಯಾಗುತ್ತಿತ್ತು. ಆದರೆ, ಮಳೆ ಬಾರದ ಕಾರಣ ದೀರ್ಘಾವಧಿ ಬೆಳೆಗಳಾದ ತೊಗರಿ, ಹತ್ತಿ ಬಿತ್ತನೆಗೆ ರೈತರು ಮುಂದಾಗಬೇಕಿದೆ.

ಯಾದಗಿರಿ: ಜಿಲ್ಲೆಯಲ್ಲಿ ಮಳೆಯು ವಾಡಿಕೆಗಿಂತ ಶೇ23ರಷ್ಟು ಕಡಿಮೆ ಸುರಿದಿದ್ದು, ಅನ್ನದಾತರು ಮುಗಿನತ್ತ ಚಿತ್ತ ನೆಟ್ಟು ಬಿತ್ತನೆಗೆ ಕಾಯುತ್ತಿದ್ದಾರೆ.

ಜಿಲ್ಲೆಯ ಯಾದಗಿರಿ, ಗುರುಮಠಕಲ್‌, ವಡಗೇರಾ ಭಾಗದಲ್ಲಿ ಹೆಚ್ಚು ಮಳೆಯಾಶ್ರಿತ ಬಯಲು ಪ್ರದೇಶವಿದೆ. ಹೆಸರು, ಉದ್ದು ಬೆಳೆ ಮುಂಗಾರು ಆರಂಭದಲ್ಲೇ ಬಿತ್ತನೆ ಮಾಡುತ್ತಾರೆ. ಆದರೆ, ಈ ಬಾರಿ ನಿರೀಕ್ಷೆಯಷ್ಟು ಮಳೆ ಬಾರದ ಕಾರಣ ಬೇರೆ ಬೆಳೆಯತ್ತ ರೈತರು ಗಮನ ಹರಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ರೋಹಿಣಿ, ಮೃಗಶಿರ ಹೆಚ್ಚು ಸುರಿದರೆ ರೈತರು, ಹೆಸರು, ಉದ್ದು ಬಿತ್ತನೆ ಮಾಡುತ್ತಿದ್ದರು. ಅಲ್ಪಾವಧಿ ಬೆಳೆಯಾದ ಹೆಸರು ಸಣ್ಣ ಪುಟ್ಟ ಖರ್ಚಿಗೆ ಹಣ ಹೊಂದಿಕೆಯಾಗುತ್ತಿತ್ತು. ಆದರೆ, ಮಳೆ ಬಾರದ ಕಾರಣ ದೀರ್ಘಾವಧಿ ಬೆಳೆಗಳಾದ ತೊಗರಿ, ಹತ್ತಿ ಬಿತ್ತನೆಗೆ ರೈತರು ಮುಂದಾಗಬೇಕಿದೆ.

ಮುಂಗಾರಿಗೆ ಅಲ್ಪಾವಧಿ ಹೆಸರು ಉದ್ದು ಬಿತ್ತನೆಗೆ ಮೃಗಶಿರ ಮಳೆ ಉತ್ತಮ. ನಿರೀಕ್ಷಿತ ಮಳೆಯಾಗದ ಕಾರಣ ಬಿತ್ತನೆ ಸಮಯವೂ ಮುಗಿದೆ. ತೊಗರಿ ಹತ್ತಿ ಬಿತ್ತನೆಗೆ ತಿಂಗಳ ಸಮಯವಿದ್ದು ಉತ್ತಮ ಮಳೆ ನಿರೀಕ್ಷಿಸಬಹುದು
ಆಬಿದ್‌ ಎಸ್‌.ಎಸ್‌., ಜಂಟಿ ಕೃಷಿ ನಿರ್ದೇಶಕ

ಜಿಲ್ಲೆಯಲ್ಲಿ 16 ಹೋಬಳಿ ಕೇಂದ್ರಗಳಿದ್ದು, ಯಾದಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಯಾದಗಿರಿ, ಹತ್ತಿಕುಣಿ, ಬಳಿಚಕ್ರ, ಸೈದಾಪುರ ಹೋಬಳಿ ಒಳಗೊಂಡಿದೆ. ಅಲ್ಲಿನ ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜಗಳನ್ನು ರಿಯಾಯಿ ದರದಲ್ಲಿ ವಿತರಿಸಲಾಗುತ್ತಿದೆ.

ನಾಲ್ಕು ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 4,01,638 ಹೆಕ್ಟೇರ್‌ ಬಿತ್ತನೆ ಗುರಿ ಬಿತ್ತನೆ ಗುರಿ ಇದ್ದು, ಜೂನ್‌ 17ರ ತನಕ ಕೇವಲ ಶೇ 1.77ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯ ಆರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ 7,096 ಹೆಕ್ಟೇರ್‌ ಪ್ರದೇಶದಲ್ಲಿ ಮಳೆ ಬರುತ್ತದೆ ಎನ್ನುವ ಭರವಸೆ ಮೇಲೆ ಬಿತ್ತನೆ ಮಾಡಲಾಗಿದೆ. ಕೊಳವೆ ಬಾವಿ ಇದ್ದ ಕೆಲವರು ಹನಿ ನೀರಾವರಿ ಮಾಡಿಕೊಂಡಿದ್ದಾರೆ.

ಈ ಬಾರಿಯ ಮುಂಗಾರು ವಿಳಂಬದಿಂದ ಜಮೀನಿನಲ್ಲಿ ತೇವಾಂಶವೇ ಇಲ್ಲ. ಹೆಸರು ಉದ್ದು ಬಿಟ್ಟು ಹತ್ತಿ ತೊಗರಿ ಬೆಳೆಯುವ ಪರಿಸ್ಥಿತಿ ಬಂದಿದೆ. ರೈತರ ಮೇಲೆ ವರುಣ ಮುನಿಸಿಕೊಂಡಿದ್ದಾನೆ.
ಚನ್ನಬಸಪ್ಪಗೌಡ ಪಾಟೀಲ, ರೈತ

ಶಹಾಪುರ ತಾಲ್ಲೂಕಿನಲ್ಲಿ ಖುಷ್ಕಿ, ನೀರಾವರಿ ಸೇರಿ 73,267 ಹೆಕ್ಟೇರ್‌ ಬಿತ್ತನೆ ಗುರಿ ಇತ್ತು. ಶೇಕಡವಾರು 0.7 ಮಾತ್ರ ಬಿತ್ತನೆಯಾಗಿದೆ. ವಡಗೇರಾ ತಾಲ್ಲೂಕಿನಲ್ಲಿ ಖುಷ್ಕಿ, ನೀರಾವರಿ ಸೇರಿ 54,556 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಇಲ್ಲಿಯೂ ಶೇ 0.7ರಷ್ಟು ಬಿತ್ತನೆ ಮಾಡಲಾಗಿದೆ. ಸುರಪುರ ತಾಲ್ಲೂಕಿನಲ್ಲಿ ಖುಷ್ಕಿ, ನೀರಾವರಿ ಸೇರಿ 91,861 ಹೆಕ್ಟೇರ್‌ ಗುರಿ ಇದ್ದರೆ, ಶೇ 0.19ರಷ್ಟು ಬಿತ್ತನೆ ಕೈಗೊಳ್ಳಲಾಗಿದೆ. ಹುಣಸಗಿ ತಾಲ್ಲೂಕಿನಲ್ಲಿ ಖುಷ್ಕಿ, ನೀರಾವರಿ ಸೇರಿ 63,507 ಹೆಕ್ಟೇರ್‌ ಬಿತ್ತನೆ ಗುರಿಯ ‍ಪೈಕಿ ಶೇ 0.12ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ.

ಯಾದಗಿರಿ ತಾಲ್ಲೂಕಿನಲ್ಲಿ ಖುಷ್ಕಿ, ನೀರಾವರಿ ಸೇರಿ 69,172 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದರೆ, ಶೇ 3.76ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಗುರುಮಠಕಲ್‌ ತಾಲ್ಲೂಕಿನಲ್ಲಿ ಖುಷ್ಕಿ, ನೀರಾವರಿ ಸೇರಿ 49,275 ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದರೆ, ಇದರಲ್ಲಿ ಶೇ 8.44ರಷ್ಟು ಬಿತ್ತನೆ ಮಾಡಲಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ ತೊಗರಿ ಬಿತ್ತನೆ ಖುಷ್ಕಿ, ನೀರಾವರಿ ಸೇರಿ 20 ಸಾವಿರ ಹೆಕ್ಟೇರ್‌ ಗುರಿ ಇದ್ದರೆ, ಇದರಲ್ಲಿ ಕೇವಲ 755 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಹೆಸರು 5,700 ಗುರಿ ಇದ್ದರೆ, 733 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಗುರುಮಠಕಲ್‌ ತಾಲ್ಲೂಕಿನಲ್ಲಿ ತೊಗರಿ 184 ಹೆಕ್ಟೇರ್‌, ಹೆಸರು 261 ಹೆಕ್ಟೇರ್‌, ಶಹಾಪುರ ತಾಲ್ಲೂಕಿನಲ್ಲಿ 20 ಹೆಕ್ಟೇರ್, ವಡಗೇರಾ ತಾಲ್ಲೂಕಿನಲ್ಲಿ ತೊಗರಿ 15 ಹೆಕ್ಟೇರ್, ಸುರಪುರ ತಾಲ್ಲೂಕಿನಲ್ಲಿ ತೊಗರಿ 110 ಹೆಕ್ಟೇರ್, ಹುಣಸಗಿ ತಾಲ್ಲೂಕಿನಲ್ಲಿ ತೊಗರಿ 50 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಜೂನ್ 4 ರಂದು ಮುಂಗಾರು ಪ್ರವೇಶವಾಗುವ ನಿರೀಕ್ಷೆ ಇತ್ತು. ಆದರೆ ಈ ಸಲ ಮುಂಗಾರು ವಿಳಂಬವಾಗುತ್ತಿದೆ. ಮಳೆ ಬರಬಹುದೆನ್ನುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.
ಗುರುನಾಥ, ಕೃಷಿ ಸಹಾಯಕ ನಿರ್ದೇಶಕ, ಸುರಪುರ

ಅದರಂತೆ ಶಹಾಪುರ ತಾಲ್ಲೂಕಿನಲ್ಲಿ ಹತ್ತಿ 30ಹೆಕ್ಟೇರ್‌, ವಡಗೇರಾ ತಾಲ್ಲೂಕಿನಲ್ಲಿ ಹತ್ತಿ 22 ಹೆಕ್ಟೇರ್‌, ಸುರಪುರ ತಾಲ್ಲೂಕಿನಲ್ಲಿ ಹತ್ತಿ 60 ಹೆಕ್ಟೇರ್‌, ಹುಣಸಗಿ ತಾಲ್ಲೂಕಿನಲ್ಲಿ ಹತ್ತಿ 25 ಹೆಕ್ಟೇರ್‌, ಯಾದಗಿರಿ ತಾಲ್ಲೂಕಿನ ನೀರಾವರಿ ಪ್ರದೇಶದಲ್ಲಿ ಹತ್ತಿ 1,116 ಹೆಕ್ಟೇರ್‌, ಗುರುಮಠಕಲ್‌ ತಾಲ್ಲೂಕಿನಲ್ಲಿ ಹತ್ತಿ 3,710 ಹೆಕ್ಟೇರ್‌ ಪ‍್ರದೇಶದಲ್ಲಿ ಬಿತ್ತನೆಯಾಗಿದೆ.

ವಾಡಿಕೆ ಮಳೆ ಕೊರತೆ

ಜಿಲ್ಲೆಯಲ್ಲಿ ಜೂನ್‌ 1ರಿಂದ 17ರ ವರೆಗೆ ವಾಡಿಕೆಯಂತೆ 54.01 ಮಿಲಿಮೀಟರ್ ಮಳೆ ಸುರಿಯಬೇಕಿತ್ತು. ಆದರೆ, ಈ ಅವಧಿಯಲ್ಲಿ 30.02 ಎಂಎಂ ಮಳೆಯಾಗಿದ್ದು, ವಾಡಿಕೆಗಿಂತಲೂ ಶೇ23.98ರಷ್ಟು ಮಳೆ ಕೊರತೆಯಾಗಿದೆ.

ಜೂನ್‌ 11ರಿಂದ ಜೂನ್ 17ರ ವರೆಗೆ 27 ಎಂಎಂ ಮಳೆ ವಾಡಿಕೆ ಇದ್ದರೆ, ಸುರಿದಿರುವುದು ಕೇವಲ 8 ಎಂಎಂ ಮಳೆ ಮಾತ್ರ.

ಮಳೆ ಕೈಗೊಡುತ್ತಿದೆ. ರೈತ ಕಂಗಾಲಾಗಿದ್ದಾನೆ. ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟವೂ ಕಡಿಮೆ ಇದೆ. ಸರ್ಕಾರ ಈ ಬಗ್ಗೆ ತುರ್ತು ಸಭೆ ನಡೆಸಬೇಕು. ರೈತರ ನೆರವಿಗೆ ಬರಬೇಕು.
ಅಯ್ಯಣ್ಣ ಜಂಬಲದಿನ್ನಿ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ

ಶಹಾಪುರ ತಾಲ್ಲೂಕಿನಲ್ಲಿ 65.04 ಎಂಎಂ ವಾಡಿಕೆ ಮಳೆಯಿದ್ದರೆ, 32.06 ಎಂಎಂ, ಸುರಪುರ ತಾಲ್ಲೂಕಿನಲ್ಲಿ 57.02 ಎಂಎಂ ವಾಡಿಕೆ ಮಳೆ ಇದ್ದು, 31.04 ಎಂಎಂ ಮಳೆಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 67.04 ಎಂಎಂ ವಾಡಿಕೆ ಮಳೆ ಇದ್ದರೆ, ಇದರಲ್ಲಿ 31.07 ಎಂಎಂ ಮಳೆಯಾಗಿದೆ.

ಗುರುಮಠಕಲ್‌ ತಾಲ್ಲೂಕಿನಲ್ಲಿ 61.05 ಎಂಎಂ ವಾಡಿಕೆ ಮಳೆ ಇದ್ದರೆ, 43.05 ಎಂಎಂ ಮಳೆಯಾಗಿದೆ. ವಡಗೇರಾ ತಾಲ್ಲೂಕಿನಲ್ಲಿ 42.01 ಎಂಎಂ ವಾಡಿಕೆ ಮಳೆ ಇದ್ದರೆ, 39.01 ಎಂಎಂ ಮಳೆಯಾಗಿದೆ. ಹುಣಸಗಿ ತಾಲ್ಲೂಕಿನಲ್ಲಿ 36.09 ಎಂಎಂ ವಾಡಿಕೆ ಮಳೆ ಆಗಬೇಕಿತ್ತು. ಆದರೆ, ಕೇವಲ 4.09 ಎಂಎಂ ಮಳೆಯಾಗಿದೆ.

ಸುರಪುರ: ಮಳೆ ಅಭಾವ ಬಿತ್ತನೆ ಕುಂಠಿತ

ಮುಂಗಾರು ಮಳೆ ವಿಳಂಬವಾಗುತ್ತಿದೆ. ಜೂನ್ 6ರಂದು ಉತ್ತಮವಾಗಿ ಸುರಿದ ಮಳೆ ಬಳಿಕ ಮಾಯವಾಗಿದೆ. ಭೂಮಿ ಹದ ಮಾಡಿರುವ ರೈತ ಬಿತ್ತನೆ ಮಾಡಲು ವರುಣನ ಮೊರೆ ಹೋಗುವಂತಾಗಿದೆ. ಸುರಪುರ ಮತ್ತು ಹುಣಸಗಿ ತಾಲ್ಲೂಕು ಸೇರಿ ಒಟ್ಟು 1.45 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರವಿದೆ. ಅದರಲ್ಲಿ 40 ಸಾವಿರ ಹೆಕ್ಟೇರ್ ತೊಗರಿ 30 ಸಾವಿರ ಹೆಕ್ಟೇರ್ ಹತ್ತಿ 45 ಸಾವಿರ ಹೆಕ್ಟೇರ್ ಭತ್ತ 2 ಸಾವಿರ ಹೆಕ್ಟೇರ್ ಸಜ್ಜೆ 500 ಹೆಕ್ಟೇರ್ ಹೆಸರು ಬಿತ್ತನೆ ಆಗಬೇಕಿತ್ತು. ಆದರೆ ಮಳೆ ಅಭಾವದಿಂದ ಬಿತ್ತನೆ ಕುಂಠಿತವಾಗಿದೆ.

ವಾಡಿಕೆಯಂತೆ ಮಳೆ ಬಂದಿದ್ದರೆ ಈಗಾಗಲೇ ಶೇ 25ರಷ್ಟು ಬಿತ್ತನೆ ಮುಗಿಯುತ್ತಿತ್ತು. ಈಗ ಕೇವಲ 500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹತ್ತಿ ಬೀಜ ಬಿತ್ತನೆಯಾಗಿದೆ. ಸುರಪುರ ಹುಣಸಗಿ ಕೊಡೇಕಲ್ ಕಕ್ಕೇರಾ ಮತ್ತು ಕೆಂಭಾವಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳಿವೆ.

ಮುಂಗಾರು ಹಂಗಾಮಿಗೆ 15 ಸಾವಿರ ಮೆಟ್ರಿಕ್ ಟನ್ ಯೂರಿಯಾ 10 ಸಾವಿರ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ 8 ಸಾವಿರ ಮೆಟ್ರಿಕ್ ಟನ್ ಡಿಎಪಿ ಅವಶ್ಯಕತೆ ಇದೆ. ಅದರಲ್ಲಿ ಬಹುತೇಕ ಲಭ್ಯವಿದೆ. ಕೃಷಿ ಇಲಾಖೆ ಸಣ್ಣ ಮತ್ತು ಅತಿಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡುತ್ತಿದೆ. ಈಗಾಗಲೇ 500 ಕ್ವಿಂಟಲ್ ತೊಗರಿ ಬೀಜ 30 ಕ್ವಿಂಟಲ್ ಹೆಸರು ಬೀಜ ವಿತರಿಸಲಾಗಿದೆ. ಇನ್ನಷ್ಟು ಬಿತ್ತನೆ ಬೀಜ ವಿತರಿಸಬೇಕಿದೆ. ಆಯ್ದ ಫಲಾನುಭವಿಗಳಿಗೆ ತಾಡಪತ್ರಿಗಳನ್ನು ನೀಡಲಾಗಿದೆ.

ಶಹಾಪುರ: ನಕಲಿ ಹತ್ತಿ ಬೀಜ ಮಾರಾಟ ಹಾವಳಿಗೆ ಬ್ರೇಕ್ ಹಾಕಿ

ನೀರಾವರಿ ಆಶ್ರಿತ ಇಲ್ಲಿನ ಪ್ರದೇಶದಲ್ಲಿ ಹೆಚ್ಚಾಗಿ ರೈತರು ವಾಣಿಜ್ಯ ಬೆಳೆಯಾದ ಹತ್ತಿ ಬಿತ್ತನೆಗೆ ಮುಂದಾಗಿದ್ದಾರೆ. ಒಂದು ಉತ್ತಮ ಮಳೆಯಾದರೆ ಸಾಕು ಬಿತ್ತನೆ ಮಾಡುತ್ತಾರೆ. ನಂತರ ಕಾಲುವೆ ನೀರು ಬರುತ್ತದೆ ಎಂಬ ಆಶಾಭಾವನೆ ರೈತರದ್ದು. ‘ತಾಲ್ಲೂಕಿನ ನಕಲಿ ಬೀಜ ಹಾಗೂ ಹತ್ತಿ ಬೀಜ ಕೃತಕ ಅಭಾವವನ್ನು ಕೆಲ ರಸಗೊಬ್ಬರ ಹಾಗೂ ಬೀಜ ಮಾರಾಟ ಮಳಿಗೆಗಳು ಸೃಷ್ಟಿಸುತ್ತಿವೆ. ಆದರೂ ಕೃಷಿ ಇಲಾಖೆ ಹಾಗೂ ಪೊಲೀಸರು ಮೃದು ಧೋರಣೆ ಹೊಂದಿದ್ದಾರೆ’ ಎಂದು ರೈತ ಮುಖಂಡ ಚೆನ್ನಪ್ಪ ಆನೆಗುಂದಿ ಆರೋಪಿಸುತ್ತಾರೆ.

‘ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಬೇಡಿಕೆಯ ಅನುಗುಣವಾಗಿ ಬೀಜಗಳು ಸಿಗುತ್ತಿಲ್ಲ. ಗುಣಮಟ್ಟದ ಬೀಜಗಳನ್ನು ಖರೀದಿಸುವ ಚಿಂತೆ ರೈತರನ್ನು ಕಾಡುತ್ತಿದೆ. ಸದ್ಯಕ್ಕೆ ರಸಗೊಬ್ಬರ ಕೊರತೆ ಬರುವುದಿಲ್ಲ. ಯಾವಾಗ ನಿಷೇಧಿತ ಬೆಳೆ ಭತ್ತ ನಾಟಿ ಮಾಡುತ್ತಾರೆ ಆಗ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗುತ್ತದೆ’ ಎಂದು ರೈತ ಮುಖಂಡರೊಬ್ಬರು ಹೇಳಿದರು.

ಗುರುಮಠಕಲ್ : ಮುಂಗಾರು ಬಿತ್ತನೆಗೆ ಸಿದ್ಧತೆ; ಮಳೆ ಅಭಾವ

ಗುರುಮಠಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದು ಬಿತ್ತನೆ ಬೀಜ ರಸಗೊಬ್ಬರ ಶೇಖರಿಸಿಕೊಂಡಿದ್ದಾರೆ. ಆದರೆ ಮೃಗಶಿರ ಮಳೆಯ ಅಭಾವದಿಂದ ಬಿತ್ತನೆಗೆ ಹಿನ್ನಡೆಯಾಗಿದೆ. ತೊಗರಿ ಭತ್ತ ಹೆಸರು ಉದ್ದು ಬಿತ್ತನೆಗೆ ರೈತರ ಆಸಕ್ತಿ ತೋರಿದ್ದು ಕೊಂಕಲ್ ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ ನಾಟಿ ಮಾಡುವತ್ತ ತಯಾರಿ ಮಾಡಿಕೊಂಡಿದ್ದಾರೆ. ಕೊಳವೆಬಾವಿ ತೆರೆದ ಬಾವಿಯಿದ್ದವರು ಹೆಸರು ಬಿತ್ತನೆ ಮಾಡಿದ್ದು ನೀರುಣಿಸುತ್ತಿದ್ದಾರೆ.

ಕೊಂಕಲ್ ರೈತ ಸಂಪರ್ಕ ಕೇಂದ್ರದಿಂದ ವಿವಿಧ ತಳಿಗಳ ತೊಗರಿ 124.4 ಕ್ವಿಂಟಲ್ ಹೆಸರು 20.4 ಕ್ವಿಂಟಲ್ ಹಾಗೂ ಉದ್ದು 2 ಕ್ವಿಂಟಲ್ ದಾಸ್ತಾನಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಲ್ಲಿ ತೊಗರಿ 65.8 ಕ್ವಿಂಟಲ್ ಹಾಗೂ ಹೆಸರು 20.4 ಕ್ವಿಂಟಲ್ ದಾಸ್ತಾನು ಲಭಿಸಿದೆ. ಈವರೆಗೆ ತೊಗರಿ 53.4 ಕ್ವಿಂಟಲ್ ಹಾಗೂ 14 ಕ್ವಿಂಟಲ್ ಹೆಸರು ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ.

ಗುರುಮಠಕಲ್ ರೈತ ಸಂಪರ್ಕ ಕೇಂದ್ರದಲ್ಲಿ 150 ಕ್ವಿಂಟಲ್ ತೊಗರಿ 10 ಕ್ವಿಂಟಲ್ ಉದ್ದು 50 ಕ್ವಿಂಟಲ್ ಹೆಸರು ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಬೇಡಿಕೆಯಷ್ಟೂ ಬಿತ್ತನೆ ಬೀಜ ಪೂರೈಕೆಯಾಗಿದ್ದು ತೊಗರಿ 150 ಕ್ವಿಂಟಲ್ ಹೆಸರು 45 ಕ್ವಿಂಟಲ್ ಮತ್ತು 1 ಕ್ವಿಂಟಲ್‌ನಷ್ಟು ಉದ್ದು ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ತಾಲ್ಲೂಕಿನ ಗುರುಮಠಕಲ್ ಮತ್ತು ಕೊಂಕಲ್ ರೈತ ಸಂಪರ್ಕ ಕೇಂದ್ರಗಳಲ್ಲಿ ಅವಶ್ಯಕ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿದ್ದು ರೈತರ ಬೇಡಿಕೆಗೆ ಅನುಗುಣವಾಗಿ ವಿತರಣೆ ಕಾರ್ಯ ನಡೆದಿದೆ ಎಂದು ಕೃಷಿ ಇಲಾಖೆಯ ಮಲ್ಲಿಕಾರ್ಜುನ ವಾರದ ಮತ್ತು ಮಹಿಪಾಲರೆಡ್ಡಿ ಮಾಹಿತಿ ನೀಡಿದರು.

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ.

ಯಾದಗಿರಿ ತಾಲ್ಲೂಕಿನ ಬೆಳಗೇರಾ ಗ್ರಾಮದ ಹೊರ ವಲಯದಲ್ಲಿ ಮುಂಗಾರು ಹಂಗಾಮಿನ ಬೆಳೆಗಾಗಿ ಜಮೀನು ಹದ ಮಾಡಿದ ರೈತ
ಯಾದಗಿರಿ ತಾಲ್ಲೂಕಿನ ಬೆಳಗೇರಾ ಗ್ರಾಮದ ಹೊರ ವಲಯದಲ್ಲಿ ಮುಂಗಾರು ಹಂಗಾಮಿನ ಬೆಳೆಗಾಗಿ ಜಮೀನು ಹದ ಮಾಡಿದ ರೈತ
ಯಾದಗಿರಿ ತಾಲ್ಲೂಕಿನ ಬೆಳಗೇರಾ ಗ್ರಾಮದ ಜಮೀನಿನಲ್ಲಿ ಮಳೆಗಾಗಿ ಆಗಸದತ್ತ ಮುಖ ಮಾಡಿದ ರೈತ
ಯಾದಗಿರಿ ತಾಲ್ಲೂಕಿನ ಬೆಳಗೇರಾ ಗ್ರಾಮದ ಜಮೀನಿನಲ್ಲಿ ಮಳೆಗಾಗಿ ಆಗಸದತ್ತ ಮುಖ ಮಾಡಿದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT