ಬಾಕಿ ಕೂಲಿ ಹಣ ಪಾವತಿಸಲು ಆಗ್ರಹ

ಯರಗೋಳ: ‘ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಬೇಕು. ಜೊತೆಗೆ ಕಾರ್ಯ ಆದೇಶ ಪ್ರತಿಯಲ್ಲಿ ಕಾರ್ಮಿಕರ ಹೆಸರುಗಳು ನಮೂದಿಸಿ ಕೆಲಸಗಳನ್ನು ನೀಡಬೇಕು‘ ಎಂದು ರೈತ ಕೃಷಿಕಾರ್ಮಿಕರ ಸಂಘಟನೆ ಗ್ರಾಮ ಘಟಕವು ಗುರುವಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿತು.
ಗ್ರಾಮದ ಗದ್ದೆ, ಅಡ್ಡಮಡ್ಡಿ ತಾಂಡಾ, ಮಲ್ಕಪನಹಳ್ಳಿ ರಸ್ತೆ ನಿರ್ಮಾಣ ಕೆಲಸಕ್ಕೆ ಕಾರ್ಮಿಕರಿಂದ ಕೆಲಸಗಳನ್ನು ತೆಗೆದುಕೊಳ್ಳಲಾಗಿತ್ತು. ತಿಂಗಳು ಕಳೆದರೂ ಅವರಿಗೆ ಕೂಲಿ ಹಣ ಪಾವತಿ ಮಾಡಿಲ್ಲ. ಬಾಕಿ ಇರುವ ಒಟ್ಟು 250 ಕಾರ್ಮಿಕರ ಕೂಲಿ ಹಣ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಯ ಆದೇಶ ಪ್ರತಿಯಲ್ಲಿ ಕಾರ್ಮಿಕರ ಹೆಸರುಗಳು ಸೇರಿಸದೇ ಕೆಲಸ ಪಡೆಯುವುದು ತಪ್ಪು ಕ್ರಮ. ಕಾರ್ಮಿಕರ ಕೆಲಸದ ಅವಧಿ, ಕೂಲಿಯಿಂದ ಕಾರ್ಮಿಕರನ್ನು ವಂಚನೆ ಮಾಡುವ ಹುನ್ನಾರವಾಗಿದೆ ಎಂದು ದೂರಿದರು.
ಕಾರ್ಮಿಕರ ಹೆಸರುಗಳು ಕಾರ್ಯ ಆದೇಶ ಪ್ರತಿಯಲ್ಲಿ ಅಧಿಕೃತವಾಗಿ ನಮೂದಿಸಿ, ಸಹಿ ಪಡೆದು, ಕೆಲಸ ನೀಡಬೇಕು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ 20 ದಿನಗಳು ಕಳೆದರೂ ಕೆಲಸ ಕೊಡದಿರುವುದು ಖಂಡನೀಯ. ಕೂಡಲೇ ಕಾರ್ಮಿಕರಿಗೆ ಕೆಲಸಗಳು ಕೊಡಬೇಕು. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
1 ವಾರದಲ್ಲಿ ಕೆಲಸ ಕೊಡದೆ ಹೋದರೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು. ಬೇಡಿಕೆಗಳನ್ನು ಈಡೇರಿಸಲು 4 ದಿನಗಳು ಗಡವು ನೀಡಲಾಗುವುದು ಎಂದು ಎಚ್ಚರಿಸಿದರು.
ರೈತ ಕೃಷಿ ಕಾರ್ಮಿಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷೆ ಪದ್ಮಾವತಿ, ಕಾರ್ಯದರ್ಶಿ ಭೀಮರಡ್ಡಿ, ಉಪಾಧ್ಯಕ್ಷರಾದ ಶಿವುಕಾಂತಮ್ಮ, ಸರೋಜಮ್ಮ ಹಾಗೂ ಬಸವರಾಜ, ಮಲ್ಲಪ್ಪ ಸೇರಿದಂತೆ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.