ಯಾದಗಿರಿ: ಜಿಲ್ಲೆಯ ನಗರ ಪ್ರದೇಶಗಳಲ್ಲಿ ವಸತಿ ರಹಿತರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಆಶ್ರಯ ಕಲ್ಪಿಸಲು ಡೇ–ನಲ್ಮ್ ಯೋಜನೆಯಡಿ ‘ನಗರ ವಸತಿ ರಹಿತರಿಗೆ ಆಶ್ರಯ ಕೇಂದ್ರ’ವನ್ನು ಸರ್ಕಾರ ಸ್ಥಾಪಿಸಿದೆ. ಆದರೆ, ಇಲ್ಲಿ ಸೌಲಭ್ಯಗಳೇ ಮರೀಚಿಕೆಯಾಗಿವೆ.
ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರದಲ್ಲಿ ಆಶ್ರಯ ಕೇಂದ್ರಗಳಿವೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಖಾಲಿ ಜಾಗ, ಪುಟ್‌ಪಾತ್ ಮೇಲೆ ಜೀವನ ಸಾಗಿಸುವವರಿಗೆ ರಾತ್ರಿ ವೇಳೆ ಸುರಕ್ಷತೆ ಒದಗಲಿಸಲು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಯೋಜನೆ ಇದೆ. ಆದರೆ, ಬಹುತೇಕರಿಗೆ ಈ ಬಗ್ಗೆ ಮಾಹಿತಿಯಿಲ್ಲ.
ನಗರಸಭೆಯ ಡೇ–ನಲ್ಮ್ ಯೋಜನೆ ಅಡಿಯಲ್ಲಿ ನಗರದಲ್ಲಿ ವಸತಿ ರಹಿತರಿಗೆ ಆಶ್ರಯ ತಾಣವಿದೆ. ನಗರದ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ಹೀಗೆ ಮುಂತಾದ ಪ್ರದೇಶದಲ್ಲಿ ನಿರ್ಗತಿಕ ಜನತೆಗೆ ರಾತ್ರಿ ಸಮಯದಲ್ಲಿ ಆಶ್ರಯ ನೀಡಿ ಊಟ, ವಸತಿ ವ್ಯವಸ್ಥೆ ಕಲ್ಪಿಸಬೇಕು. ನಗರ ಪ್ರಮುಖ ಬೀದಿಗಳಲ್ಲಿ ಸಂಸ್ಥೆಯು ನಡೆಸುವ ಆಶ್ರಯ ತಾಣದ ಮೊಬೈಲ್ ನಂಬರ್ ಹಾಗೂ ಅದರ ಸ್ಥಳದ ಬಗ್ಗೆ ಕಡ್ಡಾಯವಾಗಿ ಮಾಹಿತಿ ನಮೂದಿಸಬೇಕು. ಆಗಾಗ ನಗರದಲ್ಲಿ ಭಿತ್ತಿಪತ್ರ ಹಂಚಿ ಜಾಗೃತಿ ಮೂಡಿಸಬೇಕು ಎಂಬ ನಿಯಮವಿದೆ. ಆದರೆ, ನಗರದಲ್ಲಿ ಸಂಸ್ಥೆಯು ನಡೆಸುವ ಆಶ್ರಯ ತಾಣ ಎಲ್ಲಿದೆ ಎಂಬುವುದು ಹೆಚ್ಚಿನವರಿಗೆ ಗೊತ್ತಿಲ್ಲ.
ನಿರಾಶ್ರಿತರಿಗೆ ಮೂಲಸೌಲಭ್ಯ, ರಾತ್ರಿ ಮಲಗಲು ಜಾಗ, ಶುದ್ಧ ಕುಡಿಯುವ ನೀರು, ಶೌಚಾಲಯ, ಬಚ್ಚಲು ಮನೆ, ಸುಸಜ್ಜಿತ ಕಟ್ಟಡ, ಪ್ರತಿದಿನ ಯೋಗಭ್ಯಾಸ, ವ್ಯಾಯಾಮ, ವ್ಯಕ್ತಿತ್ವ ವಿಕಸನದ ಬಗ್ಗೆ ಕಾರ್ಯಕ್ರಮ, ಸಾಮಾಜಿಕ ಭದ್ರತೆ ಯೋಜನೆಗಳಾದ ವೃದ್ಧಾಪ್ಯ ವೇತನ, ಹಿರಿಯ ನಾಗರಿಕರಿಗೆ ಕಾನೂನು ಸಲಹೆ, ಪ್ರತಿ ತಿಂಗಳು ಆರೋಗ್ಯ ಉಚಿತ ತಪಾಸಣೆ ಶಿಬಿರ ಮತ್ತು ಔಷಧಿ, ದೌರ್ಜನ್ಯಕ್ಕೆ ಒಳಗಾಗಿ ಮನೆಯಿಂದ ಹೊರಗುಳಿದ ನಿರಾಶ್ರಿತರಿಗೆ ನ್ಯಾಯ ಒದಗಿಸುವುದು, ಆಧಾರ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಮನೋರಂಜನೆಗಾಗಿ ಟಿವಿ, ದಿನಪತ್ರಿಕೆ, ಮಾಸ ಪತ್ರಿಕೆ, ಅಂಗವಿಕಲರಿಗೆ ವೇತನ ಹಾಗೂ ಇತರೆ ಸೌಲಭ್ಯ ಒದಗಿಸಿಕೊಡಬೇಕು ಎಂಬ ನಿಯಮವಿದೆ. ಆದರೆ, ಇವುಗಳಲ್ಲಿ ಇಲ್ಲ ಎಂಬ ಅಂಶಗಳೇ ಜಾಸ್ತಿ ಇವೆ.
ಯಾದಗಿರಿ ನಗರಸಭೆಯ ನಿರಾಶ್ರಿತರ ಕೇಂದ್ರಕ್ಕೆ ಕಲಬುರಗಿ, ರಾಯಚೂರು, ವಿಜಯಪುರ, ಹೈದರಾಬಾದ್, ಸೊಲ್ಲಾಪುರ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ನಿರಾಶ್ರಿತರು ಬರುತ್ತಿದ್ದಾರೆ. ಬಹುತೇಕ ನಿರಾಶ್ರಿತರು 35 ರಿಂದ 65 ವಯಸ್ಸಿನವರಾಗಿದ್ದಾರೆ. ಸುಮಾರು ಶೇ 99ರಷ್ಟು ಪುರುಷ ನಿರಾಶ್ರಿತರಾಗಿದ್ದಾರೆ ಎಂದು ಆಶ್ರಯ ಕೇಂದ್ರದ ಮೂಲಗಳು ತಿಳಿಸಿವೆ.
ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ
ನಗರ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ನಾನು ಶೀಘ್ರ ಭೇಟಿ ನೀಡಿ ಪರಿಶೀಲಿಸುತ್ತೇನೆ. ರಸ್ತೆ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆಶರಣಬಸಪ್ಪ ಕೋಟೆಪ್ಪಗೋಳ ಹೆಚ್ಚುವರಿ ಜಿಲ್ಲಾಧಿಕಾರಿ
ಆಶ್ರಯ ಕೇಂದ್ರದ ಸೌಕರ್ಯದ ಬಗ್ಗೆ ಈಗಾಗಲೇ ಹಲವರಿಗೆ ಪತ್ರ ಬರೆಯಲಾಗಿದೆ. ಅಲ್ಲದೇ ಕಟ್ಟಡದ ಸರಹದ್ದು ಗುರುತಿಸಲು ಸಂಬಂಧಿಸಿದವರ ಗಮನಕ್ಕೂ ತರಲಾಗಿದೆಭೀಮಣ್ಣ ವೈದ್ಯ ಸಮುದಾಯ ಸಂಘಟನಾ ಅಧಿಕಾರಿ ಯಾದಗಿರಿ ನಗರಸಭೆ
ನಿರಾಶ್ರಿತರ ಸರ್ವೆ ಕಾರ್ಯ ಮಾಡುವಾಗ ಕೆಲವರು ನನ್ನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಹೀಗಾಗಿ ಅಗತ್ಯವಿದ್ದಲ್ಲಿ ಪೊಲೀಸರ ನೆರವು ಪಡೆಯುತ್ತೇನೆಚಿದಾನಂದ ಯಾಳವಾರ ಕೇಂದ್ರದ ವ್ಯವಸ್ಥಾಪಕ ಸುರಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.