ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ನೆತ್ತಿ ಸುಡುತ್ತಿರುವ ಬಿಸಿಲು; ಬಸವಳಿದ ಜನ

ಗರಿಷ್ಠ 36, ಕನಿಷ್ಠ 21 ಡಿಗ್ರಿ ಸೆಲಿಯ್ಸಸ್‌ ಬಿಸಿಲು ದಾಖಲು
Published 24 ಫೆಬ್ರುವರಿ 2024, 5:45 IST
Last Updated 24 ಫೆಬ್ರುವರಿ 2024, 5:45 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಗರಿಷ್ಠ 36, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ತಾಪಮಾನ ದಾಖಲಾಗುತ್ತಿದ್ದು, ನೆತ್ತಿ ಸುಡುತ್ತಿದೆ. 8 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.

ಫೆಬ್ರುವರಿ ತಿಂಗಳಾರಂಭದಿಂದಲೂ ಬಿಸಿಲಿನ ತಾಪ ಏರಿಕೆಯಾಗುತ್ತಲಿದೆ. ಅಲ್ಲದೇ ಕೆಲವು ದಿನ ಬೆಳಗಿನ ಜಾವ ತಂಪಿನ ವಾತಾವರಣ ಇದ್ದು, ನಂತರ ಬೆಳಿಗ್ಗೆ 8 ಗಂಟೆಯಿಂದಲೇ ಸೂರ್ಯನ ಪ್ರಖರತೆ ಕಂಡು ಬರುತ್ತಿದೆ.

‘ಬೇಸಿಗೆಯಲ್ಲಿ ಎಳನೀರು ಕುಡಿಯುವುದು ಉತ್ತಮ. ನಿಂಬೆ ಶರಬತ್ತು, ಮಜ್ಜಿಗೆ, ಎಳನೀರು, ಕಬ್ಬಿನ ಹಾಲು, ಕಲ್ಲಂಗಡಿ, ಕಿತ್ತಳೆ ಹಣ್ಣು, ಕರಬೂಜ ಹಣ್ಣು ಸೇರಿದಂತೆ ಮನೆಯಲ್ಲಿ ತಯಾರಿಸಿ ದ್ರವ ಆಹಾರ ಸೇವಿಸಬೇಕು’ ಎನ್ನುತ್ತಾರೆ ಡಾ.ವೀರೇಶ ಜಾಕಾ.

‘ಬೆಳಿಗ್ಗೆ 5 ರಿಂದ 6 ಗಂಟೆ ಒಳಗೆ ವಾಕಿಂಗ್‌ ಮಾಡಿದರೆ ಉತ್ತಮ. ಅತಿಯಾದ ಉಷ್ಣತೆಯಿಂದ ಹೃದ್ರೋಗ ಸಮಸ್ಯೆಗಳು, ಉಸಿರಾಟ ಹಾಗೂ ಕಿಡ್ನಿ ಸಮಸ್ಯೆಗಳು ಅಧಿಕವಾಗುತ್ತವೆ. ನೀರು ಕಡಿಮೆ ಸೇವನೆ ಮಾಡಿದರೆ ಕಿಡ್ನಿಯಲ್ಲಿನ ಕಲ್ಲುಗಳು ನೋವುಕೊಡುತ್ತವೆ. ಇದಲ್ಲದೇ ತಲೆ ಸುತ್ತುವುದು, ವಾಂತಿ, ತಲೆನೋವು, ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ಏರು ಗತಿಯ ಹೃದಯದ ಬಡಿತ ಉಂಟಾಗುವ ಅಪಾಯಗಳಿರುತ್ತವೆ’ ಎಂದು ವೈದ್ಯರು ಎಚ್ಚರಿಸಿದ್ದಾರೆ.

‘ನವಜಾತು ಶಿಶುಗಳು, ಪುಟ್ಟ ಮಕ್ಕಳು, ಗರ್ಭಿಣಿಯರು, ಹೋರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಇರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು, ನಿರ್ಜಲೀಕರಣದಿಂದ ತಾಪಾಘಾತಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆ ಇರುತ್ತದೆ‘ ಎಂದು ವೈದ್ಯರು ಎಚ್ಚರಿಸಿದ್ದಾರೆ.

ನೆರಳು ಹುಡುಕಿಕೊಂಡು ತೆರಳುವ ಜನ:

ಬೇಸಿಗೆ ಆರಂಭದ ಬಿಸಿಲಿನ ಬೇಗೆಗೆ ಸಾರ್ವಜನಿಕರು ತತ್ತರಿಸಿದ್ದಾರೆ. ಗಿಡ, ಮರ, ನೆರಳು ಇರುವ ಕಡೆ ತೆರಳಿ ಆಶ್ರಯ ಪಡೆಯುತ್ತಿದ್ದಾರೆ. ಇದರಿಂದ ಬಿಸಿಲಿನ ತೀವ್ರತೆ ಗಮನಕ್ಕೆ ಬರುತ್ತಿದೆ.

ಇಳಿಕೆಯಾಗುತ್ತಿರುವ ನೀರು ಸಂಗ್ರಹ:

ಇನ್ನೂ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವ ಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಇಳಿಮುಖವಾಗುತ್ತಿದೆ. ಬೇಸಿಗೆಯ ಪ್ರಖರ ಬಿಸಿಲಿನ ತಾಪಕ್ಕೆ ಜಲಾಶಯದ ಸಂಗ್ರಹವಿರುವ ನೀರು ಆವಿಯಾಗುತ್ತಿರುವ ನೈಸರ್ಗಿಕ ಪ್ರಕ್ರಿಯೆ ನಡುವೆ ಜಲಾಶಯದ ಹಿನ್ನೀರಿನ ಸಂಗ್ರಹವು ಹಂತ ಹಂತವಾಗಿ ಕುಸಿಯುತ್ತಿದೆ. ಪ್ರಸ್ತುತ ಜಲಾಶಯದಲ್ಲಿ ಸಂಗ್ರಹವಿರುವ ಲಭ್ಯ ಹಿನ್ನೀರನ್ನು ಅವಲಂಬಿತ ನಗರ, ಪಟ್ಟಣಗಳಿಗೆ ಕುಡಿಯುವ ನೀರು ಸೇರಿದಂತೆ ಉದ್ಯಮಗಳಿಗೆ ವಾರ್ಷಿಕ ಬೇಡಿಕೆಗೆ ಅವಶ್ಯ ನೀರು ಪೂರೈಕೆಗೆ ಕೃಷ್ಣಾ ಭಾಗ್ಯ ಜಲ ನಿಗಮವು ಮುಂದಿನ ಮಳೆಗಾಲದವರೆಗೆ ನೀರು ನಿರ್ವಹಣೆಗೆ ಮಹತ್ವ ನೀಡಿದೆ.

ಕಳೆದ ವರ್ಷ ಜಲಾಶಯದ ಗರಿಷ್ಠ ಮಟ್ಟ 491.40 ಕ್ಯೂಸೆಕ್‌ ಇತ್ತು. ಒಳಹರಿವು 24,610, ಹೊರ ಹರಿವು1,341 ಕ್ಯೂಸೆಕ್‌ ಇತ್ತು.

ಪೊಲೀಸ್ ಇಲಾಖೆ ಕ್ರಮ‌ ಕೈಗೊಳ್ಳಲಿ

ಬಿಸಿಲಿನ ಬೇಗೆ ಹೆಚ್ಚುತ್ತಿದ್ದು ಸಿಗ್ನಲ್‌ಗಳಲ್ಲಿ ನೆರಳಿನ ಚಪ್ಪರ ಹಾಕಬೇಕು. ಆ ಮೂಲಕ ಬೈಕ್‌ ಸವಾರರಿಗೆ ನೆರವಿಗೆ ಬರಬೇಕು ಬೈಕ್ ಸವಾರರ ಒತ್ತಾಯವಾಗಿದೆ. ಯಾದಗಿರಿ ನಗರದಲ್ಲಿ ಲಾಲ್‌ಬಹದ್ದೂರ್‌ ಶಾಸ್ತ್ರಿ ವೃತ್ತ ನೇತಾಜಿ ಸುಭಾಶ್ಚಂದ್ರ ಬೋಸ್‌ ವೃತ್ತದಲ್ಲಿ ಸಿಗ್ನಲ್‌ಗಳಲ್ಲಿ ನೇತಾಜಿ ವೃತ್ತದಲ್ಲಿ ಮಾತ್ರ ಸಿಗ್ನಲ್‌ ದೀಪಗಳನ್ನು ಚಾಲನೆ ಮಾಡಲಾಗುತ್ತಿದೆ. ಇದರಿಂದ ವಾಹನ ಸವಾರರು ಬಿಸಿಲಿಗೆ ಪರದಾಡುವಂತೆ ಆಗಿದೆ. ನೆತ್ತಿ ಸುಡುವ ಬಿಸಿಲಿನಿಂದ ಮಧ್ಯಾಹ್ನದ ವೇಳೆಯಲ್ಲಿ ಸಿಗ್ನಲ್‌ಗಾಗಿ ಕಾಯುವುದರಿಂದ ಬಳಲಿಕೆ ಆಗುತ್ತಿದೆ. ಹೀಗಾಗಿ ಬೇರೆ ಜಿಲ್ಲೆಗಳಲ್ಲಿ ಅಳವಡಿಸುವ ನೆರಳಿನ ಚಪ್ಪರ ಇಲ್ಲಿಯೂ ಹಾಕಬೇಕು ಎಂದು ವಾಹನ ಸವಾರರ ಆಗ್ರಹವಾಗಿದೆ. ಪೊಲೀಸ್‌ ಇಲಾಖೆ ಇತ್ತ ಕಡೆ ಗಮನ ಹರಿಸಬೇಕಿದೆ.

ಜ್ಯೂಸ್ ಸೆಂಟರ್‌ಗಳಿಂದ ಜಾಗೃತಿ ಇರಲಿ

ಬೇಸಿಗೆ ಆರಂಭವಾಗುತ್ತಿದ್ದಂತೆ ಜ್ಯೂಸ್‌ ಸೆಂಟರ್‌ಗಳು ನಗರದ ಅಲ್ಲಲ್ಲಿ ತಲೆ ಎತ್ತಿವೆ. ತೆಲಂಗಾಣ ಆಂಧ್ರ ಪ್ರದೇಶದಿಂದ ಬರುವ ವ್ಯಾಪಾರಿಗಳು ಕಡಿಮೆ ಬೆಲೆಗೆ ವಿವಿಧ ರಾಸಾಯನಿಕ ಬೆರೆಸಿದ ಕೃತಕ ಹಣ್ಣುಗಳ ರಸವನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ‍್ರಾಧಿಕಾರದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಪರಿಶೀಲನೆ ಮಾಡಬೇಕು. ಕಡಿಮೆ ಬೆಲೆಗೆ ಜ್ಯೂಸ್‌ ಸಿಗುವುದರಿಂದ ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರು ಮುಗಿಬಿದ್ದು ಸೇವನೆ ಮಾಡುತ್ತಿದ್ದಾರೆ. ಇದಕ್ಕಾಗಿ ಎಚ್ಚರಿಕೆ ವಹಿಸುವುದು ಅವಶ್ಯವಿದೆ.

ಯಾರು ಏನಂದರು?

ಬೇಸಿಗೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಬಿಸಿಲಿನ ಪ್ರಖರತೆ ಹೆಚ್ಚಿರುತ್ತದೆ. ಕನಿಷ್ಠ 3 ರಿಂದ 5 ಲೀಟರ್‌ ಪ್ರತಿ ದಿನ ಕುಡಿಯಬೇಕು. ದೇಹದಲ್ಲಿ ಬೇಸಿಗೆಯಲ್ಲಿ ನೀರಿನ ಅಂಶ ಕಡಿಮೆ ಇರಬಾರದು - ವೀರೇಶ ಜಾಕಾ, ವೈದ್ಯ

ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವುದರಿಂದ ಎಳನೀರು ಸೇವನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ₹30 ರಿಂದ ₹40 ದರ ನಿಗದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ - ಮಲ್ಲಿಕಾರ್ಜುನ, ಮೊಸಂಬಿ ಎಳನೀರು ವ್ಯಾಪಾರಿ

ಕಬ್ಬಿನ ಹಾಲಿಗೆ ಹೆಚ್ಚಿನ ಬೇಡಿಕೆ ಬಂದಿದೆ. ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದು ಪ್ರತಿದಿನ ಸಾವಿರಾರು ರೂಪಾಯಿ ಆದಾಯ ಸಿಗುತ್ತಿದೆ. ಗ್ರಾಹಕರು ಬಯಸಿದ ಕಬ್ಬಿನ ಹಾಲು ತಯಾರಿಸಿ ಕೊಡುತ್ತೇವೆ - ನಬನಾ, ಕಬ್ಬಿನ ಹಾಲು ವ್ಯಾಪಾರಿ

ಯಾದಗಿರಿ ನಗರದ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದಲ್ಲಿ ಕಬ್ಬಿನ ಹಾಲು ಮಾರಾಟ
ಯಾದಗಿರಿ ನಗರದ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದಲ್ಲಿ ಕಬ್ಬಿನ ಹಾಲು ಮಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT