ಬುಧವಾರ, ನವೆಂಬರ್ 25, 2020
24 °C
ತಾಲ್ಲೂಕು ಪಂಚಾಯಿತಿಯಂತೆ ಪುರಸಭೆ ಆಡಳಿತಕ್ಕಾಗಿ ಕಾಯುತ್ತಿರುವ ಜೆಡಿಎಸ್‌

ಗುರುಮಠಕಲ್‌ ಪುರಸಭೆ ಗದ್ದುಗೆಗಾಗಿ ಕಾಂಗ್ರೆಸ್‌, ಜೆಡಿಎಸ್ ಕಸರತ್ತು

ಎಂ.ಪಿ.ಚಪೆಟ್ಲಾ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾದ ನಂತರ ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಾ ಜನರಲ್ಲಿ ಹಲವು ಊಹಾಪೋಹಗಳನ್ನುಂಟು ಮಾಡಿವೆ.

ಪುರಸಭೆಯು 23 ವಾರ್ಡ್‌ ಗಳನ್ನು ಹೊಂದಿದ್ದು, ಕಾಂಗ್ರೆಸ್‌ 12, ಜೆಡಿಎಸ್‌ 8, ಬಿಜೆಪಿ 2 ಮತ್ತು 1 ಪಕ್ಷೇತರ ಸದಸ್ಯರು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬಿಸಿಎ ಮೀಸಲಾತಿ ಘೋಷಣೆಯಾಗಿದೆ. ಮೀಸಲಾತಿ ಪ್ರಕಟಗೊಳ್ಳುತ್ತಲೇ ಕಾಂಗ್ರೆಸ್ ಪಾಳಯಕ್ಕೆ ಅರ್ಧ ಹೊಡೆತ ಬಿದ್ದಂತಾಗಿತ್ತು. ಪಕ್ಷವು ಪುರಸಭೆಯಲ್ಲಿ 12 ಸದಸ್ಯರನ್ನು ಹೊಂದಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಟವಾದ ಮೀಸಲಾತಿ (ಪರಿಶಿಷ್ಟ ಜಾತಿ ಮಹಿಳೆ)ಯ ಅಭ್ಯರ್ಥಿಯಿಲ್ಲದೆ ಕೇವಲ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತಾಗಿದೆ.

8 ಜನ ಸದಸ್ಯರನ್ನು ಹೊಂದಿ ರುವ ಜೆಡಿಎಸ್ ಪಕ್ಷದಲ್ಲಿ ಪರಿಶಿಷ್ಟ ಜಾತಿ ಮಹಿಳೆ ಸದಸ್ಯೆ ಇದ್ದಾರೆ. ಇದರಿಂದ ಉಪಾಧ್ಯಕ್ಷ ಸ್ಥಾನವನ್ನು ಅನಾಯಾಸವಾಗಿ ತನ್ನದಾಗಿಸಿ ಕೊಂಡಂತಿದ್ದು, ಅಧ್ಯಕ್ಷ ಸ್ಥಾನವನ್ನೂ ಪಡೆದು ಪುರಸಭೆಯ ಗದ್ದುಗೆಯನ್ನು ವಶಪಡಿಸಿಕೊಳ್ಳುವ ನಿರೀಕ್ಷೆಯನ್ನು ಸ್ಥಳೀಯ ಮುಖಂಡರಲ್ಲಿದ್ದರೂ, ಪಕ್ಷದ ವರಿಷ್ಠರ ಸೂಚನೆಗಳಿಗಾಗಿ ಕಾಯುತ್ತಿರುವುದಾಗಿ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಇನ್ನೂ ಬಿಜೆಪಿಯ ಇಬ್ಬರು ಸದಸ್ಯರು ಜೆಡಿಎಸ್ ಪಾಳಯಕ್ಕೆ ಬಾಹ್ಯ ಬೆಂಬಲ ನೀಡಲು ಒಪ್ಪಿರುವುದಾಗಿ, ಕಾಂಗ್ರೆಸ್‌ನ ಮೂವರು ಸದಸ್ಯರು ಕಾಂಗ್ರೆಸ್ ವರಿಷ್ಠರ ಸಂಪರ್ಕ ಕಳೆದುಕೊಂಡು ಜೆಡಿಎಸ್ ಮುಖಂಡರ ಸಂಪರ್ಕದಲ್ಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಅದಕ್ಕೆ ಪೂರಕವೆನ್ನುವಂತೆ ಶುಕ್ರವಾರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯ ಸಭೆಯಲ್ಲಿ ಕಾಂಗ್ರೆಸ್‌ನ 9 ಜನ ಸದಸ್ಯರು ಮಾತ್ರ ಹಾಜರಿದ್ದು, ಮೂವರು ಗೈರಾಗಿರುವುದು ಹಲವು ಅಂತೆ-ಕಂತೆಗಳಿಗೆ ಪುಷ್ಟಿ ನೀಡುತ್ತಿದೆ. ಈಚೆಗೆ ನಡೆದ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗುರುಮಠಕಲ್ ತಾಲ್ಲೂಕು ಪಂಚಾಯಿತಿಯನ್ನು ವಶಪಡಿಸಿಕೊಂಡಿರುವ ‘ದಳ’ಪತಿಗಳು ಈಗ ಶತಾಯಗತಾಯ ಪುರಸಭೆಯ ಗದ್ದುಗೆಯನ್ನು ಪಡೆಯುವ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಪಾಪಣ್ಣ ಮನ್ನೆ, ಸಿರಾಜ್ ಚಿಂತಕುಂಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪವಿತ್ರಮ್ಮ ಲಿಕ್ಕಿ, ಭೀಮವ್ವ ಆಕಾಂಕ್ಷಿಗಳಾಗಿದ್ದು, ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಗುಟ್ಟು ಬಿಟ್ಟುಕೊಡದ ಜೆಡಿಎಸ್ ಸ್ಥಳೀಯ ಮುಖಂಡರು, ರಾಜಕೀಯ ಚಟುವಟಿಕೆಗಳಲ್ಲಿ ಅಲೆಯೆಬ್ಬಿಸಲು ಕಾದು ನೋಡುವ ತಂತ್ರದಲ್ಲಿದ್ದಾರೆ.

***

ಅಭ್ಯರ್ಥಿ ಘೋಷಣೆ; ವಿಪ್ ಜಾರಿ

ಗುರುಮಠಕಲ್: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಗುರುಮಠಕಲ್ ಬ್ಲಾಕ್ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ ಖಾಜಾ ಮೈನೋದ್ದೀನ್ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ.

ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಸದಸ್ಯರಿಗೆ ನಿರ್ದೇಶಿಸಿದ ಅವರು ಸೋಮವಾರ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತಚಲಾವಣೆ ಮಾಡುವುದು ಅಥವಾ ಉದ್ದೇಶಪೂರ್ವಕ ಗೈರಾಗುವವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಂತೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ವಿಪ್ ಅಸ್ತ್ರ ಪ್ರಯೋಗ ಮಾಡಿದ್ದಾರೆ.

ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರ, ಶರಣಪ್ಪ ಮಾನೇಗಾರ, ಬಸರೆಡ್ಡಿ ಪಾಟೀಲ ಅನಪುರ, ಶ್ರೇಣಿಕಕುಮಾರ ದೋಖಾ, ಕೃಷ್ಣಾ ಚಪೆಟ್ಲಾ, ಬಸಣ್ಣ ದೇವರಳ್ಳಿ, ರವೀಂದ್ರರೆಡ್ಡಿ ಗವಿನೋಳ, ಪಾಪಣ್ಣ ಅಲೆಗಾರ್ ಸೇರಿದಂತೆ ಪುರಸಭೆ ಕಾಂಗ್ರೆಸ್ ಸದಸ್ಯರಾದ ರವೀಂದ್ರರೆಡ್ಡಿ ಶೇರಿ, ನರಸಪ್ಪ ಗಡ್ಡಲ್, ಕೃಷ್ಣಾ ಮೇದಾ, ಪಾಪಿರೆಡ್ಡಿ ಬುರ್ಜು, ರೇಣುಕಾ ಪಡಿಗೆ, ಅನ್ವರ್ ಅಹ್ಮದ್, ಮಾಲನ್ ಬೀ, ಖಾಜಾ ಮೈನೋದ್ದೀನ್, ಬಾಬು ತಲಾರಿ ಇದ್ದರು.

***

ಸಭೆಗೆ ಗೈರಾದ ಸದಸ್ಯರ ಮನೆಗಳಿಗೆ ತೆರಳಿ ವಿಪ್ ನೊಟೀಸ್ ನೀಡಲಾಗಿದೆ. ಚುನಾವಣೆಗೆ ಗೈರಾಗುವುದು ಅಥವಾ ಪಕ್ಷದ ವಿರುದ್ಧ ಮತಚಲಾಯಿಸಿದರೆ ಶಿಸ್ತುಕ್ರಮ ಖಂಡಿತ

ಮಹಿಪಾಲರೆಡ್ಡಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ

***

ಜೆಡಿಎಸ್‌ 8 ಜನ ಸದಸ್ಯರಿದ್ದಾರೆ. ವರಿಷ್ಠರ ನಿರ್ಧಾರವೇ ಅಂತಿಮ.ಪಕ್ಷಕ್ಕೆ ಬೆಂಬಲಿಸುವ ಬಿಜೆಪಿ ಅಥವಾ ಕಾಂಗ್ರೆಸ್ ಸದಸ್ಯರ ಮಾಹಿತಿಯಿಲ್ಲ

ಶರಣು ಆವಂಟಿ, ಅಧ್ಯಕ್ಷ, ಜೆಡಿಎಸ್ ಗುರುಮಠಕಲ್ ತಾಲ್ಲೂಕು ಘಟಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು