ಯಾದಗಿರಿ: ಮುಂಗಾರು ಆರಂಭದ ಮೊದಲ ಹಬ್ಬವಾಗಿರುವ ಕಾರ ಹುಣ್ಣಿಮೆ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.
ನಗರ, ಪಟ್ಟಣಕ್ಕಿಂತ ಗ್ರಾಮೀಣ ಭಾಗದಲ್ಲಿ ರೈತರ ಸಂಭ್ರಮ ಮೇಳೈಸಿತ್ತು. ಬೆಳಿಗ್ಗೆ ರೈತರು ತಮ್ಮ ಎತ್ತು, ಹಸುಗಳಿಗೆ ಹಳ್ಳ, ಕೆರೆ, ನದಿ ದಂಡೆಗಳಲ್ಲಿ ಸ್ನಾನ ಮಾಡಿಸಿ ವಿವಿಧ ಬಣ್ಣಗಳಿಂದ ಅಲಂಕಾರ ಮಾಡಿದರು.
ಎತ್ತುಗಳನ್ನು ಶೃಂಗರಿಸಿ ದೈವಿ ಸ್ವರೂಪಿ ಎಂದು ತಿಳಿದು ವಿಶೇಷ ಪೂಜೆಗೈದು ಭವಿಷ್ಯತ್ತಿನಲ್ಲಿ ಉತ್ತಮ ಮಳೆಯಾಗಲಿ, ಸಮೃದ್ಧ ಬೆಳೆ ಬರಲಿ ಎಂದು ಪ್ರಾರ್ಥಿಸಿದರು.
ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಚೆನ್ನಾಗಿ ನಡೆಯಲಿ ಎಂದು ಹೋಳಿಗೆ ನೈವೇದ್ಯವಿಟ್ಟು ಪೂಜಿಸಲಾಯಿತು. ಭಾನುವಾರ ಮತ್ತು ಸೋಮವಾರ ಎರಡು ದಿನ ಆಚರಣೆ ಮಾಡಲಾಗುತ್ತಿದೆ.
ನಗರಸಭೆ ಬಳಿಯ ಯಾಕೂಬ್ ಬುಕಾರಿ ಮೊಹಲ್ಲಾ ದರ್ಗಾದಿಂದ ಕರಿ ಹರಿಯಲು ತೆಗೆದುಕೊಂಡು ಹೋಗಲಾಯಿತು. ಹಲಗೆ ಸದ್ದಿಗೆ ಯುವಕರು ನೃತ್ಯ ಮಾಡಿದರು.
ಮಹಾತ್ಮ ಗಾಂಧಿ ವೃತ್ತದಲ್ಲಿ ಎತ್ತುಗಳ ಮೆರವಣಿಗಾಗಿ ವಿವಿಧ ಅಲಂಕಾರಿಕ ಸಾಮಗ್ರಿ ಖರೀದಿಸಿದರು. ಕೊರಳಿಗೆ ಗೆಜ್ಜೆ, ಟೊಂಕಕ್ಕೆ ಕಪ್ಪುದಾರ, ಕೂಡಿಗೆ ಬಣ್ಣ ಖರೀದಿಸಿದರು.
ಮಾರುಕಟ್ಟೆಯಲ್ಲಿ ಅಲಂಕಾರಿಕ ವಸ್ತುಗಳು ₹50ರಿಂದ ₹500 ತನಕ ಬೆಲೆ ಇರುವುದು ಕಂಡು ಬಂದಿತು. ವಿವಿಧ ಬಣ್ಣ ₹20 ಪಾಕೆಟ್, ಬ್ರಷ್ ₹15, ಟೊಂಕದಪಟ್ಟಿ ₹70, ಹೂವಿನ ಗೊಂಡೆ ₹50, ಕೊರಳಿನ ಗಂಟೆ ₹400, ಜಡೆ ₹120 ಇತ್ಯಾದಿ ಖರೀದಿಯಲ್ಲಿ ರೈತರು ತೊಡಗಿಸಿಕೊಂಡಿದ್ದರು.
ಹಳ್ಳಿಗಳಲ್ಲಿ ಸಂಭ್ರಮ: ಕಾರ ಹುಣ್ಣಿಮೆ ಹಬ್ಬವನ್ನು ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಎತ್ತುಗಳಿಗೆ ವಿಶೇಷ ಸತ್ಕಾರ ಮಾಡಲಾಯಿತು.
ಕೆಲ ರೈತರು ತಮ್ಮ ಪ್ರೀತಿಯ ಎತ್ತುಗಳಿಗೆ ಕೊಂಬುಗಳಿಗೆ ಬಲೂನ್ ಕಟ್ಟಿ, ಕಾಲಿಗೆ ಕಾಲ್ಗೆಜ್ಜೆ, ಹಣೆಗೆ, ಕೊರಳಿಗೆ ಅಲಂಕಾರ ಮಾಡಿದ್ದರು.
ಸಂಜೆ ವೇಳೆ ಗ್ರಾಮದ ಅಗಸಿ ಬಳಿ ಕರಿ ಹರಿಯುವ ಸಂಭ್ರಮದ ಮೇಳೈಸಿತ್ತು. ಗ್ರಾಮದ ಮನೆಗಳಿಂದ ಅಗಸಿ ಬಳಿ ಮೆರವಣಿಗೆ ಮೂಲಕ ಎತ್ತುಗಳನ್ನು ಕರೆ ತರಲಾಯಿತು. ಅಲ್ಲಿಂದ ಕರಿ ಹರಿದು ಮನೆಗೆ ಸೇರಿಸಲಾಯಿತು.
ಹಬ್ಬದ ಅಂಗವಾಗಿ ಹೋಳಿಗೆ ಸಿಹಿಯೂಟ ತಯಾರಿಸಲಾಗಿತ್ತು
ಮುಂಗಾರು ಮಳೆಗಾಗಿ ರೈತರು ಎದುರು ನೋಡುತ್ತಿದ್ದು, ಹುಣ್ಣಿಮೆ ಅಂಗವಾಗಿ ಎತ್ತುಗಳಿಗೆ ಬಿಡುವು ನೀಡಿದ್ದರು.
‘ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ರೈತರು ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವುದು ಇತ್ತಿಚೆಗೆ ಕಡಿಮೆಯಾಗಿದೆ. ಹಿಂದೆ ಗ್ರಾಮದ ಜಾನುವಾರುಗಳ ಮೆರವಣಿಗೆ ಹಲಗೆ ಮೂಲಕ ಮಾಡಲಾಗುತ್ತಿತ್ತು. ಅಗಸಿ ಬಳಿಯಿಂದ ಮನೆತನಕ ಭರ್ಜರಿ ಮೆರವಣಿಗೆ ಮಾಡಲಾಗುತ್ತಿತ್ತು. ನಂತರ ಹೋಳಿಗೆ ಊಟ ಸೇವನೆ ಮಾಡುತ್ತಿದ್ದರು’ ಎಂದು ರೈತ ಬಸವರಾಜ ಪಾಟೀಲ ಹೇಳುತ್ತಾರೆ.
ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಕಲ್ಪಿತ ವಿವಾಹ ಮಾಡಿ ಸಸಿ ಆಡುವ ಹಬ್ಬ ಆಚರಿಸುವುದು ರೂಢಿಯಲ್ಲಿದೆ.
ಹಳ್ಳಿಗಳಲ್ಲಿ ಕಾರ ಹುಣ್ಣಿಮೆ ಸಂಭ್ರಮ ಎತ್ತುಗಳಿಗೆ ವಿಶೇಷ ಸಿಂಗಾರ, ಸತ್ಕಾರ ಕರಿ ಹರಿದು ಸಂಭ್ರಮಿಸದ ರೈತಾಪಿ ವರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.