ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೀಡಾಡಿ ದನಗಳ ಹಾವಳಿ ಅತಿಯಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಬರುವ ಜಾನುವಾರುಗಳ ಸಂಚಾರಕ್ಕೆ ಮತ್ತು ಜನರಿಗೆ ತೊಂದರೆ ಉಂಟು ಮಾಡುತ್ತಿವೆ.
ಪಾದಚಾರಿಗಳು, ಬೈಕ್ ಸವಾರರು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಅಲ್ಲದೇ ಪೊಲೀಸರು ಪ್ರತಿ ನಿತ್ಯವೂ ಈ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ದನಗಳ ಹಾವಳಿಗೆ ಕಡಿವಾಣ ಹಾಕಿ ಅವುಗಳನ್ನು ನಗರದಿಂದ ಬೇರೆಡೆ ಸ್ಥಳಾಂತರ ಮಾಡಬೇಕಾದ ಪುರಸಭೆ ಮಾತ್ರ ನಿದ್ರೆಗೆ ಜಾರಿದ್ದು, ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಬೀಡಾಡಿ ದನಗಳಲ್ಲಿ ಹಸುಗಲೇ ಹೆಚ್ಚು. ಹಾಲು ಕರಿಯದಿರುವ ಹಸುಗಳನ್ನು ಅವುಗಳ ಮಾಲೀಕರು ಹೊರಗೆ ಬಿಟ್ಟು ಬಿಡುತ್ತಾರೆ. ಅವು ಊರೆಲ್ಲ ತಿರುಗಾಡಿ ಜನರು ಕೊಡುವ ಆಹಾರ ಮತ್ತು ರಸ್ತೆಯಲ್ಲಿ ಬಿಡ್ಡಿರುವ ತ್ಯಾಜ್ಯ ತಿಂದು ಸಂಜೆ ಮನೆಗೆ ತೆರಳುತ್ತವೆ. ಕೆಲವು ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತವೆ.
ಜನನಿಬಿಡ ಮತ್ತು ಜನದಟ್ಟಣೆ ಪ್ರದೇಶಗಳಲ್ಲಿ ರಾಜಾರೋಷವಾಗಿ ಅಡ್ಡಾಡುವ ದನಗಳಿಂದ ಸಂಚಾರಕ್ಕೆ ಸಂಚಕಾರ ಆಗಿದೆ. ಹಲವು ಬಾರಿ ಅಪಘಾತ ಸಂಭವಿಸಿದ ಘಟನೆ ನಡೆದಿವೆ.
ಯಾದಗಿರಿ ನಗರದ ಹೊಸ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ರಸ್ತೆ, ಚಿತ್ತಾಪುರ ರಸ್ತೆ, ನೇತಾಜಿ ಸುಭಾಷ್ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ, ಹೊಸಳ್ಳಿ ಕ್ರಾಸ್, ಗಂಜ್ ಪ್ರದೇಶ ಇನ್ನಿತರ ಕಡೆ ಬೀಡಾಡಿ ದನಗಳು ರಸ್ತೆಯಲ್ಲಿ ಮಲಗಿಕೊಂಡು ಸಂಚಾರಕ್ಕೆ ತೊಂದರೆ ಮಾಡುತ್ತಿವೆ. ಕೆಲವೆಡೆ ರಸ್ತೆ ಮಧ್ಯದಲ್ಲಿ ನಿಂತು ಎಷ್ಟು ಶಬ್ದ ಮಾಡಿದರೂ ಕದಲುವುದಿಲ್ಲ. ಇದರಿಂದ ವಾಹನ ಸವಾರರು ಕೆಳಗೆ ಇಳಿದು ಓಡಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
‘ಪುರಸಭೆ, ನಗರಸಭೆಯು ಬೀಡಾಡಿ ದನಗಳನ್ನು ವಶಕ್ಕೆ ಪಡೆದುಕೊಂಡು ಬೇರೆಡೆ ಸಾಗಿಸಬೇಕು ಎನ್ನುವಷ್ಟರಲ್ಲಿ ಸ್ಥಳೀಯ ರಾಜಕೀಯ ಮುಖಂಡರು ಸ್ಥಳಕ್ಕೆ ಆಗಮಿಸಿ ತಕರಾರು ತೆಗೆದು ಮರಳಿ ವಶಕ್ಕೆ ಪಡೆದುಕೊಂಡು ಓಡಿಸಿ ಬಿಡುತ್ತಾರೆ. ನಾವು ದೇವರಿಗೆ ಹರಿಕೆ ಬಿಟ್ಟ ಎತ್ತು, ಆಕಳು, ಕರು ಆಗಿವೆ ಎಂದು ಭಾವನಾತ್ಮಕ ಹಾಗೂ ಧಾರ್ಮಿಕ ಭಾವನೆಗಳನ್ನು ಮುಂದೆ ಇಡುತ್ತಾರೆ. ಅನಿವಾರ್ಯವಾಗಿ ನಾವು ಕೈ ಚೆಲ್ಲಿ ಕುಳಿತುಕೊಳ್ಳುತ್ತೇವೆ’ ಎನ್ನುತ್ತಾರೆ ನಗರಸಭೆಯ ಅಧಿಕಾರಿ ಒಬ್ಬರು.
ಬಸ್ ನಿಲ್ದಾಣಗಳಲ್ಲಿ ಮಲಮೂತ್ರ ಮಾಡಿ ಗಲೀಜು ಮಾಡುತ್ತವೆ. ಪ್ರಯಾಣಿಕರ ಬ್ಯಾಗ್‌ಗಳಿಗೆ ಬಾಯಿ ಹಾಕುತ್ತವೆ. ಬಡಾವಣೆಗಳಲ್ಲೂ ಸಂಚರಿಸಿ ಗಲೀಜು ಮಾಡುತ್ತವೆ. ಮನೆಯ ಒಳಗೆ ಹೋಗಿ ಧಾನ್ಯ, ಆಹಾರ ಕಬಳಿಸುತ್ತವೆ. ಘನತ್ಯಾಜ್ಯ ತಿಂದು ಮತ್ತು ಅಪಘಾತಕ್ಕೆ ಸಿಲುಕಿ ಹಲವು ದನಗಳು ಸಾವನ್ನಪ್ಪಿವೆ.
ಕಕ್ಕೇರಾ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೀಡಾಡಿ ದನಗಳ ಹಾವಳಿ ತುಂಬಾ ಹೆಚ್ಚಾಗಿದ್ದು, ದನಗಳ ಹಾವಳಿಯಿಂದ ಮನೆಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವುದು ದುಸ್ತರವಾಗಿದೆ. ಹಲವಾರು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಾಹನ ಸವಾರರಿಗೆ ಸಂಜೆ ವೇಳೆ ಜಾನುವಾರು ಸಮಸ್ಯೆ ಹೇಳತೀರದು. ವಾಹನ ಚಾಲಕರು ರಸ್ತೆಯಲ್ಲಿ ಇಳಿದು ದನಗಳನ್ನು ಎಬ್ಬಿಸುವುದು ಸಾಮಾನ್ಯವಾಗಿದೆ.
‘ಪುರಸಭೆ ಅಧಿಕಾರಿಗಳು ಬೀಡಾಡಿ ದನಗಳ ಬಗ್ಗೆ ಮಾಲೀಕರಿಗೆ ಎಚ್ಚರಿಸಿಲ್ಲ. ಹೀಗಾಗಿ ಬೀಡಾಡಿ ದನಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಸ್ಥಳೀಯರಾದ ಕೆಂಚಪ್ಪ ಕಟ್ಟಿಮನಿ, ಪುರಸಭೆ ಮಾಜಿ ಸದಸ್ಯ ದೌವಲಸಾಬ್ ಆಗ್ರಹಿಸುತ್ತಾರೆ.
‘ಪೊಲೀಸರನ್ನು ಪ್ರತಿ ಬುಧವಾರಕ್ಕೊಮ್ಮೆಯಾದರೂ ಕಕ್ಕೇರಾ ಪಟ್ಟಣದ ಮಹರ್ಷಿ ವೃತ್ತದಲ್ಲಿ ನಿಯೋಜನೆ ಮಾಡಬೇಕು ಎಂದು ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬೀಡಾಡಿ ದನಗಳ ಮೇಲೆ ಕ್ರಮವಿಲ್ಲ. ಪೊಲೀಸ್ ಸಿಬ್ಬಂದಿ ಕಾರ್ಯವೈಖರಿ ಸರಿಯಿಲ್ಲ’ ಎಂದು ರೈತ ಮುಖಂಡ ಬುಚ್ಚಪ್ಪನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ತಿಂಗಳಿಂದದ ಇವುಗಳ ಉಪಟಳ ಹೇಳ ತೀರದಂತಾಗಿದ್ದು, ಮಕ್ಕಳು, ವಯೋವೃದ್ಧರು ರಸ್ತೆಯಲ್ಲಿ ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಬೀಡಾಡಿ ದನಗಳು ಹಿಂಡು ಹಿಂಡಾಗಿ ರಸ್ತೆಯ ಮಧ್ಯದಲ್ಲಿಯೇ ಮಲಗುವುದು ಹಾಗೂ ಒಂದಕ್ಕೊಂದು ಹಾಯುತ್ತಾ ರಸ್ತೆಯಲ್ಲೇ ಕಾದಾಡಲು ಪ್ರಾರಂಭಿಸಿದರೆ ಆ ರಸ್ತೆಯಲ್ಲಿ ಸಂಚಾರವೇ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಈಗಾಗಲೇ ಹಲವರು ರಸ್ತೆಯಲ್ಲಿ ಬಿಡಾಡಿ ದನಗಳ ಕಾದಾಟದಿಂದ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ.
ಗಣೇಶೋತ್ಸವ ಮುಗಿದ ನಂತರ ಬೀಡಾದಿ ದನಗಳನ್ನು ಗೋಶಾಲೆಗೆ ಬಿಡಲು ನಗರದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ನಗರಸಭೆ ಸಹಭಾಗಿತ್ವದಲ್ಲಿ ನಡೆಸುತ್ತೇವೆ. ಸಾರ್ವಜನಿಕರ ಸಹಕಾರ ಮುಖ್ಯ.-ವಿರೇಶ್, ಟ್ರಾಫಿಕ್ ಪಿಎಸ್‌ಐ ಯಾದಗಿರಿ
ಬಿಡಾಡಿ ದನಗಳ ಹಾವಳಿ ತಪ್ಪಿಸಲು ಬೆಳಕು ಪ್ರತಿಫಲಿಸುವ ಪಟ್ಟಿಯನ್ನು ಮುಖ್ಯ ರಸ್ತೆಗಳಲ್ಲಿ ಹಾಕಬೇಕು. ಬಿಡಾಡಿ ದನಗಳನ್ನು ಕೊಂಡವಾಡಿಗೆ ಸೇರಿಸಬೇಕು-ಗೋಪಾಲ ಚಿನ್ನಾಕಾರ, ಸಾಮಾಜಿಕ ಕಾರ್ಯಕರ್ತ
ವಾಹನ ಸವಾರರಿಗೆ ಕಂಟಕ
ಶಹಾಪುರ: ರಾಜ್ಯ ಹೆದ್ದಾರಿಯ ಮೇಲೆ ಬೇಕಾಬಿಟ್ಟಿಯಾಗಿ ಗುಂಪಾಗಿ ನಿಲ್ಲುವ ಬೀಡಾಡಿ ದನಗಳು ವಾಹನ ಸವಾರರಿಗೆ ಕಂಟಕವಾಗಿವೆ. ತುಸು ಎಚ್ಚರ ತಪ್ಪಿದರೆ ಅಪಘಾತ ಗ್ಯಾರಂಟಿ. ಅದರಲ್ಲಿ ಹೆದ್ದಾರಿಯ ಬಸವೇಶ್ವರ ವೃತ್ತ ಸಿ.ಬಿ.ಕಮಾನ್ ಹಳೆ ಬಸ್ ನಿಲ್ದಾಣ ಹೊಸ ಬಸ್ ನಿಲ್ದಾಣ ಹೀಗೆ ಪ್ರಮುಖ ಜನದಟ್ಟಣೆಯ ಪ್ರದೇಶದಲ್ಲಿ ಬೀಡಾಡಿ ದನಗಳು ಆಶ್ರಯ ಪಡೆದುಕೊಂಡಿವೆ. ‘ರಾತ್ರಿ ಸಮಯದಲ್ಲಿ ಮತ್ತಷ್ಟು ಸಂಕಷ್ಟವನ್ನು ಸವಾರರು ಎದುರಿಸಬೇಕು. ಕೆಲ ಸಂದರ್ಭದಲ್ಲಿ ವಾಹನ ದನದ ಮೇಲೆ ಹಾಯ್ದು ಹೋಗಿರುವುದು ಕಾಣುತ್ತೇವೆ’ ಎನ್ನುತ್ತಾರೆ ನಗರದ ನಿವಾಸಿ ಉಮೇಶ ಕುಲಕರ್ಣಿ. ‘ರಾತ್ರಿ ಸಮಯದಲ್ಲಿ ರಸ್ತೆ ಹಾಗೂ ಎಮ್ಮೆ ಬಣ್ಣ ಕಪ್ಪಾಗಿ ಕಾಣಿಸುವುದರಿಂದ ವಾಹನ ಸವಾರರಿಗೆ ಕಾಣಿಸುವುದಿಲ್ಲ. ಇದು ತುಂಬಾ ಅಪಾಯಕಾರಿಯಾಗಿದೆ. ಎಮ್ಮೆಯ ಕೊಂಬಿಗೆ ರೇಡಿಯಂ ಹಚ್ಚಬೇಕು. ಅದು ಬೆಳಕಿಗೆ ಪ್ರತಿಫಲಿಸುತ್ತದೆ. ಇದರಿಂದ ತುಸು ಅಪಾಯ ಕಡಿಮೆಯಾಗಲಿದೆ’ ಎನ್ನುತ್ತಾರೆ ವಾಹನ ಸವಾರರು.
ಬೀಡಾಡಿ ದನಗಳ ಕಾಟಕ್ಕೆ ಮುಕ್ತಿ ಯಾವಾಗ?
ಗುರುಮಠಕಲ್: ಪಟ್ಟಣದ ಬಸ್ ನಿಲ್ದಾಣದ ಪ್ರದೇಶದಲ್ಲಿ ಬೀಡಾಡಿ ದನಗಳ ಕಾರಣ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸಮಸ್ಯೆಗೆ ಪರಿಹಾರ ಬೇಕಿದೆ. ‘ತರಕಾರಿ ಮಾರಾಟ ಮಾಡುತ್ತಾ ಸ್ವಲ್ಪ ಯಾಮಾರಿದರೂ ಬುಟ್ಟಿಗೆ ಬಾಯಿ ಹಾಕುವ ಬೀಡಾಡಿ ದನಗಳಿಂದ ಸಾಕಾಗಿದೆ. ದನಗಳ ಮಾಲೀಕರು ಅವುಗಳನ್ನು ಹಗಲು-ರಾತ್ರಿಯೆನ್ನದೆ ರಸ್ತೆಯಲ್ಲೇ ಬಿಡುತ್ತಾರೆ. ಕೆಲ ಬಾರಿ ಬೈಕ್ ವಾಹನಗಳತ್ತ ಏಕಏಕಿ ನುಗ್ಗುವುದರಿಂದ ಸವರಾರರು ಆಯತಪ್ಪಿ ಬಿದ್ದದ್ದೂ ಇದೆ’ ಎಂದು ತರಕಾರಿ ವ್ಯಾಪಾರಿಗಳು ತಿಳಿಸಿದರು. ಪಟ್ಟಣದ ಬಸ್ ನಿಲ್ದಾಣ ಮತ್ತು ಮುಖ್ಯರಸ್ತೆಯಲ್ಲಿ ಸುತ್ತುವ ಬೀಡಾಡಿ ದನಗಳಿಂದ ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಪಾದಾಚಾರಿ ಮತ್ತು ಮಕ್ಕಳಿಗೂ ತೊಂದರೆ. ಹಾಲು ಕೊಡುವ ಜಾನುವಾರನ್ನು ಮಾತ್ರ ಮನೆಯಲ್ಲಿಟ್ಟು ಉಳಿದ ಜಾನುವಾರುಗಳನ್ನು ಬಿಟ್ಟಿಯಾಗಿ ಬಿಡುವುದು ನಿಲ್ಲಿಸಬೇಕು. ಆದರೆ ಈ ಕುರಿತು ಯಾಕೆ ಇಷ್ಟೊಂದು ನಿಷ್ಕಾಳಜಿ ಎನ್ನುವುದು ತಿಳಿಯದು ಎನ್ನುತ್ತಾರೆ’ ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ. ‘ದನಗಳ ಕುರಿತು ಸಾಕಿದವರಿಗೂ ಕಾಳಜಿಯಿಲ್ಲ. ಆದರೆ ಸ್ಥಳೀಯವಾಗಿ ಜಾನುವಾರು ಮಾಲೀಕರಿಗೆ ಸ್ಥಳೀಯ ಆಡಳಿತದಿಂದ ಜಾಗೃತಿ ಮೂಡಿಸಿ ನೋಟಿಸ್ ನೀಡಬೇಕು. ನಂತರವೂ ಹೀಗೆ ಮುಂದುವರೆದರೆ ನಿಯಮಾನುಸಾರ ಕ್ರಮವಹಿಸಬೇಕು’ ಎನ್ನುವುದು ನಿವೃತ್ತ ಶಿಕ್ಷಕರೊಬ್ಬರ ಸಲಹೆ.
ಆತಂಕದಲ್ಲೇ ರಸ್ತೆಯಲ್ಲಿ ಸಂಚಾರ
ಕೆಂಭಾವಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಎಮ್ಮೆಗಳು ಬೀಡಾಡಿ ದನಗಳು ಠಿಕಾಣಿ ಹೂಡಿರುತ್ತವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ನಡೆದು ಹೋಗುವ ಮಕ್ಕಳು ಶಾಲೆಗೆ ತೆರಳುವ ವಿದ್ಯಾರ್ಥಿಗಳು ಮಹಿಳೆಯರು ಆತಂಕದಲ್ಲೇ ಸಂಚರಿಸುವಂತಾಗಿದೆ. ಬೀಡಾಡಿ ದನಗಳ ಉಪಟಳಕ್ಕೆ ಪರಿಹಾರ ಒದಗಿಸಲು ನಗರಸಭೆ ಪುರಸಭೆ ನಿರ್ಲಕ್ಷ್ಯತನ ಧೋರಣೆ ತಾಳಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಮೊದಲೇ ಹಲವು ಬಾರಿ ಬೀಡಾಡಿ ದನಗಳಿಂದ ಮುಕ್ತಿ ಒದಗಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ತೀರಾ ಒತ್ತಡ ಬಂದಾಗ ಒಮ್ಮೆ ನಾಲ್ಕಾರು ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಿ ಕಣ್ಣೊರೆಸುವ ತಂತ್ರ ಮಾಡುತ್ತಾರೆ. ಸಂಪೂರ್ಣವಾಗಿ ಸಮಸ್ಯೆಗೆ ಮುಕ್ತಿ ಹಾಡಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಟ್ಟಣದ ನಿವಾಸಿಗಳು ಆರೋಪಿಸಿದ್ದಾರೆ. ಬೀಡಾಡಿ ದನಗಳಲ್ಲದೇ ಎಮ್ಮೆಗಳು ನಗರದ ನಡು ರಸ್ತೆಗಳಲ್ಲಿ ಕಾಣ ಸಿಗುತ್ತವೆ. ದನಗಳಾದರೋ ಬೀಡಾಡಿ ಇರಬಹುದು. ಆದರೆ ಎಮ್ಮೆಗಳು ಸಾಕಿದ್ದೇ ಆಗಿರುತ್ತವೆ. ಹೀಗಾಗಿ ಪಶು ಸಂಗೋಪನಾ ಇಲಾಖೆಯ ನೆರವು ಪಡೆದು ಜಾನುವಾರುಗಳ ವಾರಸುದಾರರಿಗೆ ಖಡಕ್ ಎಚ್ಚರಿಕೆ ನೀಡಬೇಕಾದ ಕಾರ್ಯವಾಗುತ್ತಿಲ್ಲ.
ಬೀಡಾಡಿ ದನಗಳ ಹಾವಳಿ ಅನಗತ್ಯ ತೊಂದರೆ
ಹುಣಸಗಿ: ಪಟ್ಟಣದ ದೇವಪುರ–ಮನಗೂಳಿ ರಾಜ್ಯಹೆದ್ದಾರಿ ಮುಖ್ಯ ರಸ್ತೆಯಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗಿದೆ. ಅವುಗಳ ತೆರವಿಗೆ ಅಧಿಕಾರಿಗಳು ಮುಂದಾಗಬೇಕೆಂದು ಪಾದಚಾರಿಗಳ ಒತ್ತಾಸೆಯಾಗಿದೆ. ‘ಸುಂದರ ಮತ್ತು ಸ್ವಚ್ಛ ಪಟ್ಟಣವಾಗಿಸಲು ಪಟ್ಟಣ ಪಂಚಾತಿತಿ ಜೊತೆ ಸಾರ್ವಜನಿಕರು ಹಾಗೂ ದನಗಳ ಮಾಲೀಕರು ಸಹಕರಿಸುವುದು ಅಗತ್ಯವಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ಧರಾಮೇಶ್ವರ ಮನವಿ ಮಾಡಿದರು. ‘ಈಗಾಗಲೇ ಹಲವಾರು ಬಾರಿ ಪಟ್ಟಣ ಪಂಚಾಯಿತಿ ವಾಹನದಲ್ಲಿ ಮೈಕ್ ಮೂಲಕ ಜಾಗೃತಿ ಮೂಡಿಸಿದರೂ ದನಗಳ ಮಾಲೀಕರು ದನಗಳನ್ನು ತಮ್ಮ ಮನೆಗಳಲ್ಲಿ ಕಟ್ಟಿಕೊಳ್ಳುತ್ತಿಲ್ಲ. ರಸ್ತೆಗೆ ಬಿಡುತ್ತಿರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಸದ್ಯ ಮೂರು ದಿನಗಳಿಂದ ಮತ್ತೆ ಜಾಗೃತಿ ಮೂಡಿಸಲಾಗಿದೆ. ಈ ಬಾರಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ರಾಠೋಡ ತಿಳಿಸಿದರು. ಸುಮಾರು 50ಕ್ಕೂ ಹೆಚ್ಚು ದನಗಳನ್ನು ಹಿಡಿದು ಗೋಶಾಲೆಗೆ ಕಳಿಸಲು ಕಳೆದ ಮೂರು ತಿಂಗಳ ಹಿಂದೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಂಧಾನದ ಮೂಲಕ ಮತ್ತೆ ಅವುಗಳನ್ನು ಬಿಟ್ಟು ಕಳಿಸಲಾಗಿದೆ ಎಂದು ತಿಳಿದುಬಂದಿದೆ. ‘ಕಳೆದ ಎರಡು ವರ್ಷಗಳ ಹಿಂದೆ ಗೋ ಅಭಿಮಾನಿ ಯುವಕರ ತಂಡ ರಾತ್ರಿ ರಸ್ತೆಯಲ್ಲಿರುವ ಬೀಡಾಡಿ ದನಗಳ ಕೊರಳಿಗೆ ರೇಡಿಯಂ ಬಣ್ಣದ ಬೆಲ್ಟ್‌ಗಳನ್ನು ಕಟ್ಟುವ ಮೂಲಕ ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದರು. ಆದರೆ ದನಗಳ ಮಾಲೀಕರು ಕೆಲ ದಿನಗಳ ಬಳಿಕವನ್ನು ತೆರವುಗೊಳಿಸಿದ್ದಾರೆ. ಇದು ಬೇಸರದ ಸಂಗತಿ‘ ಎಂದು ಯುವಕ ಪ್ರದೀಪ್ ಮಿರಜಕರ್ ಅಸಮಾಧಾನ ವ್ಯಕ್ತಪಡಿಸಿದರು.
ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಾಶೇನರಾವ ಕುಲಕರ್ಣಿ, ಪವನ ಕುಲಕರ್ಣಿ, ಮಹಾಂತೇಶ ಹೊಗರಿ, ಎಂ.ಪಿ.ಚಪೆಟ್ಲಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.