ಗುರುವಾರ , ಜನವರಿ 28, 2021
15 °C
ಮುಂಗಾರಿನಲ್ಲಿ 43 ಹೆಕ್ಟೇರ್‌, ಹಿಂಗಾರಿನಲ್ಲಿ 24 ಸಾವಿರ ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆ

ಮೋಡ ಕವಿದ ವಾತಾವರಣ ಜೋಳಕ್ಕೆ ವರದಾನ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಇದು ಜೋಳದ ಬೆಳೆಗೆ ಅನುಕೂಲವಾಗಿದೆ.

ನಗರ, ಗ್ರಾಮಾಂತರ ಪ್ರದೇಶದಲ್ಲಿ ಬೆಳಗಿನ ಜಾವ ಮಂಜು ಆವರಿಸಿದ್ದು, ವ್ಯಾಯಾಮ ಮಾಡುವವರು ಹಿಂದೇಟು ಹಾಕುವಂತೆ ಆಗಿದೆ.

ಯಾದಗಿರಿ ಕೋಟೆಯ ಬೆಟ್ಟ ಮಂಜಿನಿಂದ ಆವರಿಸುವ ದೃಶ್ಯ ಬೆಳಗಿನ ಜಾವ ಕಾಣಿಸುತ್ತದೆ. ಲುಂಬಿನಿ ವನದಿಂದ ಕೋಟೆ ಮಂಜು ಮುಸುಕಿರುವ ದೃಶ್ಯ ಕಾಣಿಸುತ್ತದೆ. ಜಿಲ್ಲೆಯ ಅಲ್ಲಲ್ಲಿ ತೊಗರಿ ರಾಶಿ ನಡೆಯುತ್ತಿದ್ದು, ತುಂತುರು ಮಳೆಯಿಂದ ಅಷ್ಟೇನೂ ಸಮಸ್ಯೆ ಆಗಿಲ್ಲ. ಹೆಚ್ಚು ಮಳೆಯಾಗಿದ್ದರೆ ಸಮಸ್ಯೆ ಆಗುತ್ತಿತ್ತು.

ತಂಪಾದ ವಾತಾವರಣ:

ಬೆಳಗಿನ ಜಾವ ಮತ್ತು ರಾತ್ರಿ 8 ಗಂಟೆ ನಂತರ ಮೈಕೊರೆಯುವ ಚಳಿ ಅನುಭವವಾಗುತ್ತಿದೆ. ಬೆಳಗಿನ ಜಾವದಲ್ಲಿ ಜೋಳದ ಹೊಲಗಳಲ್ಲಿ ಮಂಜಿನ ಹನಿಗಳು ಕಾಣಸಿಗುತ್ತವೆ. ಬಿಸಿಲು ಏರಿದಂತೆ ಭೂಮಿಗೆ ಬಿದ್ದು, ಮಣ್ಣಿನ ತೇವಾಂಶ ಕಾಪಾಡಿಕೊಳ್ಳಲು ಕೂಡ ಇದು ಸಾಧ್ಯವಾಗಿದೆ.

‘ಎರಡು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದಿಂದ ಜೋಳಕ್ಕೆ ಅನುಕೂಲವಾಗಿದೆ. ಬೆಳಗಿನ ಜಾವ ಮಂಜು ಸುರಿಯುತ್ತಿದ್ದರಿಂದ ತೇವಾಂಶವೂ ಇದೆ. ಸದ್ಯಕ್ಕೆ ಬೆಳೆಗೆ ಸಮಸ್ಯೆಗಳು ಕಾಣಿಸಿಕೊಂಡಿಲ್ಲ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಅವರು.

ಮುಂಗಾರು ಜೋಳ

ಮುಂಗಾರು ಹಂಗಾಮಿನಲ್ಲಿ ನೀರಾವರಿ ಪ್ರದೇಶದಲ್ಲಿ 2.2, ಖುಷ್ಕಿ ಭೂಮಿಯಲ್ಲಿ 40.8 ಹೆಕ್ಟೇರ್‌ ಸೇರಿದಂತೆ ಒಟ್ಟಾರೆ 43 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿತ್ತು.

ಯಾದಗಿರಿ ತಾಲ್ಲೂಕಿನಲ್ಲಿ 22 ಹೆಕ್ಟೇರ್‌ ಖುಷ್ಕಿ ಭೂಮಿ, ಸುರಪುರ ತಾಲ್ಲೂಕಿನ 2.2 ಹೆಕ್ಟೇರ್‌ ನೀರಾವರಿ, 18.8 ಖುಷ್ಕಿ ಪ‍್ರದೇಶದಲ್ಲಿ ಜೋಳ ಬಿತ್ತನೆಯಾಗಿತ್ತು.

ಹಿಂಗಾರು ಜೋಳ ಬಿತ್ತನೆ

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದೆ. ಕೃಷಿ ಇಲಾಖೆಯಲ್ಲಿ ಹಿಂದಿನ ಮೂರು ತಾಲ್ಲೂಕು ಯಾದಗಿರಿ, ಶಹಾಪುರ, ಸುರಪುರ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ 19,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಇದರಲ್ಲಿ 11,864 ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ಹಿಂಗಾರು ಹಂಗಾಮಿನ ಜೋಳ ಬಿತ್ತನೆಯಾಗಿದೆ.

ಶಹಾಪುರ ತಾಲ್ಲೂಕಿನಲ್ಲಿ 6,570 ಹೆಕ್ಟೇರ್‌ ನೀರಾವರಿ ಮತ್ತು ಖುಷ್ಕಿ ಬಿತ್ತನೆ ಗುರಿ ಇತ್ತು. ಇದರಲ್ಲಿ 65 ನೀರಾವರಿ, 6,350 ಖುಷ್ಕಿ ಭೂಮಿಯಲ್ಲಿ ಜೋಳ ಬಿತ್ತನೆಯಾಗಿದೆ.

ಸುರಪುರ ತಾಲ್ಲೂಕಿನಲ್ಲಿ 259 ನೀರಾವರಿ, 5,774 ಹೆಕ್ಟೇರ್‌ ಖುಷ್ಕಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಒಟ್ಟಾರೆ 6,047 ಜೋಳ ಬಿತ್ತನೆಯಾಗಿದೆ. 324 ನೀರಾವರಿ, ಖುಷ್ಕಿ 23,988 ಹೆಕ್ಟೇರ್‌ ಭೂಮಿಯಲ್ಲಿ ಹಿಂಗಾರು ಜೋಳ ಬಿತ್ತನೆಯಾಗಿದೆ.

ಬಿತ್ತನೆ ಪ್ರಮಾಣ ಕುಂಠಿತ

ಜಿಲ್ಲೆಯಲ್ಲಿ ಜೋಳ ಬಿತ್ತನೆ ವೇಳೆ ಅಧಿಕ ಮಳೆ ಮತ್ತು ಪ್ರವಾಹ ಬಂದಿದ್ದರಿಂದ ಹೆಚ್ಚಿನ ತೇವಾಂಶದಿಂದ ರೈತರು ಜೋಳ ಬಿತ್ತನೆ ಮಾಡಲು ಆಗಿಲ್ಲ. ಈ ಭಾಗದ ಪ್ರಮುಖ ಬೆಳೆಯಾದ ಜೋಳ ನಿಗದಿತ ಗುರಿಗಿಂತ ಕಡಿಮೆ ಬಿತ್ತನೆಯಾಗಿದೆ. ಆದರೆ, ಗುರುಮಠಕಲ್‌ ತಾಲ್ಲೂಕಿನಲ್ಲಿ ಈಗ ಎಲ್ಲ ಕಡೆ ಜೋಳದ ಬೆಳೆ ಕಾಣಿಸುತ್ತಿದೆ. ಎಕರೆಗೆ ಮೂರರಿಂದ ಐದು ಕ್ವಿಂಟಲ್‌ ಜೋಳ ಇಳುವರಿ ಬರುವ ನಿರೀಕ್ಷೆ ಇದೆ. 

***

ಜೋಳದ ಬೆಳೆ ಈಗ ತೆನೆ ಕಟ್ಟುವ ಹಂತಕ್ಕೆ ಬಂದಿದೆ. ಇನ್ನೂ ಒಂದು ತಿಂಗಳಲ್ಲಿ ಜೋಳದ ರಾಶಿ ಮಾಡಲು ಬರುತ್ತಿದೆ. ರೈತರಿಗೆ ಯಾವುದೇ ಸಮಸ್ಯೆ ಕಂಡು ಬಂದರೆ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು

- ದೇವಿಕಾ ಆರ್‌, ಕೃಷಿ ಜಂಟಿ ನಿರ್ದೇಶಕಿ

***

ನಮ್ಮ ಎರಡು ಎಕರೆ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಿದ್ದು, ಉತ್ತಮ ಇಳುವರಿ ನಿರೀಕ್ಷೆ ಮಾಡಲಾಗಿದೆ. ಚಳಿಯಿಂದ ಜೋಳದ ಬೆಳೆ ತೆನೆ ಕಟ್ಟುವ ಹಂತಕ್ಕೆ ಬೆಳೆದಿದೆ

- ಬಸವರಾಜ ದ್ಯಾವಪ್ಪನೋರ, ರೈತ ನಾಯ್ಕಲ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.