ಯಾದಗಿರಿ: ಜಿಲ್ಲೆಯಲ್ಲಿ 86 ಅಮೃತ ಸರೋವರಗಳನ್ನು (ಜಲಮೂಲಗಳ) ಪುನಶ್ಚೇತನ ಹಾಗೂ ಹೊಸದಾಗಿ ನಿರ್ಮಾಣ ಮಾಡಿದ್ದು, ಇದೇ ಆ.15ರಂದು 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಮೃತ ಸರೋವರಗಳ ಸ್ಥಳಗಳಲ್ಲಿ ರಾಷ್ಟ್ರ ಹಾರಾಡಲಿದೆ.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಸುತ್ತೋಲೆ ಅನುಸಾರ ಮಹಾತ್ಮಾಗಾಂಧಿ ನರೇಗಾ ಯೋಜನೆಯ ಮಿಷನ್ ಅಮೃತ ಸರೋವರ ಅಭಿಯಾನದಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಪುಶ್ಚೇತನಗೊಳಿಸಿ ಅಮೃತ ಸರೋವರಗಳಾಗಿ ನಿರ್ಮಿಸಿದೆ.
ಜಿಲ್ಲೆಯಲ್ಲಿ 150 ಕಡೆ ಅಮೃತ ಸರೋವರ ನಿರ್ಮಿಸಲು ಗುರಿ ಇದ್ದು, ವಿವಿಧ ಕಾರಣಗಳಿಂದ ಎಲ್ಲ ಕಡೆ ಸರೋವರಗಳು ಪೂರ್ಣಗೊಂಡಿಲ್ಲ. ಜಿಲ್ಲೆಯ ಆರು ತಾಲ್ಲೂಕುಗಳ 86 ಕಡೆ ಪೂರ್ಣಗೊಂಡಿದ್ದು, ಅಲ್ಲಿಯೇ ಧ್ವಜಾರೋಹಣಕ್ಕೆ ಜಿಲ್ಲಾ ಪಂಚಾಯಿತಿ ವಿವಿಧ ಸಿದ್ಧತೆಗಳನ್ನು ಕೈಗೊಂಡಿದೆ.
ನನ್ನ ಮಣ್ಣು ನನ್ನ ದೇಶ ಅಭಿಯಾನ:
ನನ್ನ ಮಣ್ಣು ನನ್ನ ದೇಶ (ಮೇರಾ ಮಾಟಿ, ಮೇರಾ ದೇಶ್) ಅಭಿಯಾನದ ಅಂಗವಾಗಿ ಭೂತಾಯಿಗೆ ನಮನ ಹಾಗೂ ವೀರಯೋಧರಿಗೆ ವಂದನೆ ಸಲ್ಲಿಸುವ ಉದ್ದೇಶದಿಂದ ಆ. 15, 2023ರೊಳಗೆ ಕೈಗೊಂಡ ನಿಗದಿತ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅಮೃತ ಸರೋವರದ ಸ್ಥಳಗಳಲ್ಲಿ ತಿರಂಗಾ ಧ್ವಜ ಹಾರಾಡಲಿದೆ.
ಜಲ ಸಂರಕ್ಷಣೆ ಜಾಗೃತಿ:
ಅಮೃತ ಸರೋವರ ಸ್ಥಳಗಳಲ್ಲಿ ಆಯೋಜಿಸಿದ ಧ್ವಜಾರೋಹಣದ ಅಂಗವಾಗಿ ಚುನಾಯಿತ ಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಕೆರೆ ನೀರು ಬಳಕೆದಾರರ ಸಂಘದ ಸದಸ್ಯರು ಹಾಗೂ ಶಾಲಾ ಕಾಲೇಜುಗಳ ಮಕ್ಕಳ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಂಡು ಜಲ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಅಂದು ಬೆಳಿಗ್ಗೆ ಇಡೀ ಗ್ರಾಮದಲ್ಲಿ ತಿರಂಗಾ ಯಾತ್ರೆ ಸಂಚರಿಸಿ, ಅಮೃತ ಸರೋವರ ಸ್ಥಳಗಳಲ್ಲಿ ಮುಕ್ತಾಯ ಮಾಡಲಾಗುತ್ತದೆ. ಅಮೃತ ಸರೋವರ ಸ್ಥಳಕ್ಕೆ ಬಂದ ಗ್ರಾಮ ಸಮುದಾಯದ ಸದಸ್ಯರಲ್ಲಿ ಅಮೃತ ಸರೋವರ ಸುತ್ತಮುತ್ತ ಹಾಗೂ ನೀರಿನ ಸ್ವಚ್ಛತೆ ಕಾಪಾಡುವಂತೆ ಸ್ವಚ್ಛತೆಯ ಪ್ರತಿಜ್ಞೆ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.
ಶಿಲಾಫಲಕ ಸಮರ್ಪಣೆ:
ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಧಿಕಾರಿಗಳು, ಸಿಬ್ಬಂದಿ, (ರಾಜ್ಯ ಪೊಲೀಸ್ ಸೇರಿದಂತೆ) ಕರ್ತವ್ಯದ ಸಾಲಿನಲ್ಲಿ ಪ್ರಾಣ ತ್ಯಾಗ ಮಾಡಿದ ವೀರರ ಹೆಸರನ್ನು ಶಿಲಾಫಲಕದಲ್ಲಿ ಬರೆದು ಎಲ್ಲಾ ಅಮೃತ ಸರೋವರಗಳ ಸ್ಥಳಗಳಲ್ಲಿ ನಿರ್ಮಿಸಬೇಕಿದೆ. ಒಂದು ವೇಳೆ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವೀರರು ಲಭ್ಯವಿಲ್ಲದಲ್ಲಿ ಸಾಮಾನ್ಯ ಸಮರ್ಪಣೆ ಶಿಲಾಫಲಕ ನಿರ್ಮಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ.
//ಬಾಕ್ಸ್//
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸರೋವರಗಳನ್ನು ನಿರ್ಮಿಸಿದ್ದು ಅಲ್ಲಿ ಧ್ವಜಾರೋಹಣ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅತ್ಯುತ್ತಮ ಅಮೃತ ಸರೋವರ ನಿರ್ಮಾಣ ಗುರುತಿಸಿ ಪ್ರಥಮ ದ್ವೀತಿಯ ತೃತೀಯ ಪ್ರಶಸ್ತಿ ನೀಡಲು ಜಿಲ್ಲಾಡಳಿತದಿಂದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗುವುದುಗರಿಮಾ ಪಂವಾರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಅಂಕಿ ಅಂಶ ಅಮೃತ ಸರೋವರ ವಿವರ ತಾಲ್ಲೂಕು;ಗುರಿ;ಸಾಧನೆ ಯಾದಗಿರಿ;32;11 ಶಹಾಪುರ;31;22 ಸುರಪುರ;28;25 ಗುರುಮಠಕಲ್;28;08 ಹುಣಸಗಿ;19;14 ವಡಗೇರಾ;12;06 ಒಟ್ಟು;150;86 ಆಧಾರ: ಜಿಲ್ಲಾ ಪಂಚಾಯಿತಿ
ಗ್ರಾಮೀಣ ಆಟಗಳ ಆಯೋಜನೆ ಅಮೃತ ಸರೋವರಗಳಲ್ಲಿ ಗ್ರಾಮೀಣ ಆಟಗಳ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಸಾಂಪ್ರದಾಯಿಕ ಗ್ರಾಮೀಣ ಆಟಗಳಾದ ಖೋ-ಖೋ ಲಗೋರಿ ಹಗ್ಗ ಜಗ್ಗಾಟ ಹಗ್ಗ ಜಿಗಿತ (ರೋಪ್ ಜಂಪಿಂಗ್) ಕುಂಟ ಓಟ ಕುರ್ಚಿ ಓಟ ಸೇರಿದಂತೆ ಇತರೆ ಸ್ಪರ್ಧೆಗಳಿರಲಿವೆ. ಅಮೃತ ಸರೋವರ ತಾಣಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆ ಸ್ಪರ್ಧೆಗಳು ನಡೆಯಲಿವೆ. ಚಿತ್ರಕಲೆ ಘೋಷಣೆ ಬರೆಯುವದು ರಂಗೋಲಿ ಭಾಷಣ ಸೇರಿದಂತೆ ಇತರೆ ಸ್ಪರ್ಧಾ ಚಟುವಟಿಕೆ ಆಯೋಜಿಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.