ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ | ಬಸ್‌ನಲ್ಲೇ ಹೆರಿಗೆ: ತಾಯಿ–ಮಗು ಸೌಖ್ಯ

Last Updated 4 ಡಿಸೆಂಬರ್ 2019, 10:09 IST
ಅಕ್ಷರ ಗಾತ್ರ

ವಡಗೇರಾ (ಯಾದಗಿರಿ ಜಿಲ್ಲೆ):ತುಂಬು ಗರ್ಭಿಣಿಯ ಹೆರಿಗೆನೋವಿಗೆ ಬಸ್‌ನಲ್ಲಿದ್ದ ಎಲ್ಲ ಹೃದಯಗಳೂ ಒಮ್ಮೆಲೆಮಿಡಿದಿದ್ದವು. ರಸ್ತೆ ಬದಿಗೆ ಬಸ್ ನಿಲ್ಲಿಸಿದ ಚಾಲಕ ಸುಸೂತ್ರ ಹೆರಿಗೆಗೆ ಅನುವು ಮಾಡಿಕೊಟ್ಟರೆ ಅದೇ ಬಸ್‌ನಲ್ಲಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ತಾಯಿಯ ಆರೈಕೆಗೆ ಟೊಂಕಕಟ್ಟಿ ನಿಂತರು. ಕೆಲವೇ ನಿಮಿಷಗಳಲ್ಲಿ ಚಂದದ ಹೆಣ್ಣುಮಗು ಪಿಳಿಪಿಳಿ ಕಣ್ಣು ಬಿಡುತ್ತಾ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿತು.

ಈ ಘಟನೆ ನಡೆದದ್ದು ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ದೊರನಹಳ್ಳಿ ಗ್ರಾಮದಲ್ಲಿ. ಆರೋಗ್ಯ ತಪಾಸಣೆಗೆಂದು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದ ಸಸ್ತಾಪುರ ಗ್ರಾಮದ ಶೈಲಜಾ, ಸಾರಿಗೆ ಸಂಸ್ಥೆ ಬಸ್‌ನಲ್ಲಿ ಹಳ್ಳಿಗೆ ಹಿಂದಿರುಗುತ್ತಿದ್ದರು.

ತುಂಬು ಗರ್ಭಿಣಿಯಾಗಿದ್ದ ಅವರಿಗೆ ಬಸ್‌ನಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿತು. ಕಾಕತಾಳೀಯ ಎನ್ನುವಂತೆ ಲಸಿಕೆ ಅಭಿಯಾನಕ್ಕಾಗಿ (ಇಂದ್ರಧನುಷ್‌) ಶಹಾಪುರಕ್ಕೆ ಹೋಗುತ್ತಿದ್ದ ಬೆಂಡಬೆಂಗಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಮಸ್ತಾನ್ ಬಿ, ಅರುಣಾ, ಪ್ರತಿಭಾ, ಸಬೀನಾ ಸಹ ಅದೇ ಬಸ್‌ನಲ್ಲಿದ್ದರು.

ಮಹಿಳೆಯ ಸ್ಥಿತಿ ಅರಿತ ಆರೋಗ್ಯ ಕೇಂದ್ರದ ಸಿಬ್ಬಂದಿ ವಿಷಯವನ್ನುಚಾಲಕ–ನಿರ್ವಾಹಕರಿಗೆ ಮನಗಾಣಿಸಿದರು. ಚಾಲಕತಕ್ಷಣ ರಸ್ತೆ ಬದಿಗೆಬಸ್‌ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿ ಹೆರಿಗೆಗೆ ಅನುವು ಮಾಡಿಕೊಟ್ಟರು.

ಹೆರಿಗೆಯ ನಂತರ ಪ್ರಯಾಣಿಕರನ್ನು ಮತ್ತೆ ಬಸ್‌ಗೆ ಹತ್ತಿಸಿಕೊಂಡ ಸಾರಿಗೆ ಸಂಸ್ಥೆ ಸಿಬ್ಬಂದಿಸೀದಾ ಶಹಾಪುರದ ತಾಲ್ಲೂಕು ಆಸ್ಪತ್ರೆಗೆ ಕರೆತಂದು, ತಾಯಿ–ಮಗುವನ್ನು ದಾಖಲಿಸಿದರು. ತಮ್ಮ ಬಸ್‌ನಲ್ಲಿ ಮಗು ಹೆತ್ತ ತಾಯಿ ಆರೋಗ್ಯವಾಗಿರುವುದು ತಿಳಿದು ಅವರಿಗೂ ಖುಷಿಯಾಗಿತ್ತು.

ಸಾರಿಗೆ ಸಂಸ್ಥೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಈ ಮಾನವೀಯ ಸ್ಪಂದನೆಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT