ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುವೈದ್ಯರು ಸಕಾಲಕ್ಕೆ ರೈತರ ಸಮಸ್ಯೆಗೆ ಸ್ಪಂದಿಸಿ: ಸಚಿವ ಪ್ರಭು ಚವಾಣ್‌

ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ
Last Updated 1 ಜೂನ್ 2022, 5:08 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಪಶುವೈದ್ಯಾಧಿಕಾರಿಗಳು ಹಾಗೂ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಜಿಲ್ಲಾ ಉಸ್ತುವಾರಿಸಚಿವ ಪ್ರಭು ಚವಾಣ್‌ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡಿಸಿದ ಅವರು, ಎಲ್ಲ ಅಧಿಕಾರಿ ಮತ್ತು ಪಶುವೈದ್ಯರು ರೈತರ ಜಾನುವಾರುಗಳಿಗೆ ಸಮಸ್ಯೆಯಾದಲ್ಲಿ ತಕ್ಷಣ ಸ್ಪಂದಿಸಬೇಕು. ಈ ಹಿಂದಿನ ಗೋ ಹತ್ಯೆ ನಿಷೇಧ ಕಾನೂನು ಹಾಗೂ ಸದ್ಯ ಜಾರಿಯಲ್ಲಿರುವ ತಿದ್ದುಪಡಿ ಕಾನೂನಿನ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಇಲಾಖೆಯ ಸಮಗ್ರ ಯೋಜನೆಗಳ ಮಾಹಿತಿ ಪಡೆದು, ಸಕಾಲಕ್ಕೆ ಸಾರ್ವಜನಿಕರಿಗೆ ಸ್ಪಂದಿಸಲು ಸೂಚನೆ ನೀಡಿದರು.

ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆ ಆಗಬೇಕು ಎಂಬುದು ತಮ್ಮ ಆಶಯವಾಗಿದ್ದು, ಸರ್ಕಾರವೂ ಹೊಸ ಯೋಜನೆ ಜಾರಿ ಮಾಡಿದೆ. ಅಮೃತ ಯೋಜನೆ, ವಲಸೆ ಕುರಿಗಾರರಿಗೆ ವಿಮಾ ಸೌಲಭ್ಯ, ಗೋ ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ, ಪಶುಸಂಗೋಪನೆ ಇಲಾಖೆಯಲ್ಲಿ ನೂತನ ಅಧಿಕಾರಿಗಳ ನೇಮಕಾತಿ, ರೈತರ ಮನೆ ಬಾಗಿಲಿಗೆ ಪಶುಗಳಿಗೆ, ಜಾನುವಾರಗಳಿಗೆ ಅಂಬುಲೆನ್ಸ್ ಚಿಕಿತ್ಸಾ ಸೌಲಭ್ಯ ಕಲ್ಪಿಸಿದ್ದು, ಅಧಿಕಾರಿಗಳು ಪ್ರಮಾಣಿಕತೆಯಿಂದ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕಾಲ ಕಾಲಕ್ಕೆ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ನೆರವಾಗುವಂತೆ ಸೂಚಿಸಿದ ಅವರು ಉಪನಿರ್ದೇಶಕರು ಈ ಕುರಿತು ಗಮನ ವಹಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ದೇಶದಲ್ಲಿ ಪ್ರಥಮಬಾರಿಗೆ ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭಿಸಿದ ಕೀರ್ತಿ ನಮಗೆ ಇದ್ದು, ಈ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಬಡ ಜನರಿಗೆ ಲಾಭ ದೊರಕಿಸಲು ಸಾಧ್ಯ. ಗೋ ಶಾಲೆ ಸ್ಥಾಪನೆಗಾಗಿ ಯಾದಗಿರಿಯಲ್ಲಿ ಗೋಮಾಳ ಜಮೀನು ಗುರುತಿಸಬೇಕು. ಪಶುವೈದ್ಯರಿಗೆ ಯೋಜನೆಯ ಅರಿವು, ತರಬೇತಿ ಹಾಗೂ ಗ್ರಾಮ ಸಭೆ ನಡೆಸಬೇಕು. ಎಫ್‌ಎಂಡಿ ಯೋಜನೆಯಲ್ಲಿ ಸೂಕ್ತ ಪ್ರಗತಿ ಸಾಧಿಸಬೇಕು. ಅಕ್ರಮ ಕಸಾಯಿ ಖಾನೆ ಬಗ್ಗೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಮರೇಶ ನಾಯ್ಕ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
ಬಸವರಾಜ ಚಂಡ್ರಿಕಿ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಪಶು ಇಲಾಖೆ ಉಪನಿರ್ದೇಶಕ ರಾಜು ದೇಶಮುಖ ಇದ್ದರು.

***

‘ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಿ’
ಯಾದಗಿರಿ: ಜಿಲ್ಲೆಗೆ ಸಂಬಂಧಿಸಿದಂತೆ ಕೃಷ್ಣಾ ಹಾಗೂ ಭೀಮಾ ನದಿಯಲ್ಲಿ ಉದ್ಭವಾಗುವ ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ಎದುರಿಸಲು ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೂಚಿಸಿದರು.

ಕಳೆದ ಪ್ರವಾಹದಿಂದ ಸಮಸ್ಯೆಗಳನ್ನು ಎದುರಿಸಿರುವ ಗ್ರಾಮಗಳ ಬಗ್ಗೆ ಅವಶ್ಯಕ ಗಮನ ವಹಿಸಬೇಕು. ಪ್ರವಾಹ ಎದುರಿಸಲು ಸೂಕ್ತ ಯೋಜನೆ ಸನ್ನದ್ಧವಾಗಿಟ್ಟುಕೊಂಡು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಳ್ಳುವಂತೆ ಸೂಚಿಸಿದರು.

ಪ್ರವಾಹ ಸಂದರ್ಭದಲ್ಲಿ ತುರ್ತು ಸಹಾಯವಾಣಿ, ರಕ್ಷಣಾಪಡೆ, ಅಧಿಕಾರಿಗಳ ಸಮನ್ವಯತೆ ಸೇರಿದಂತೆ ಆಲಮಟ್ಟಿ, ನಾರಾಯಣಪುರ ಹಾಗೂ ಸನ್ನತಿ ಡ್ಯಾಂ ಗಳ ಅಧಿಕಾರಿಗಳೊಂದಿಗೆ ಸಮನ್ವಯತೆ ಹಾಗೂ ಅಧಿಕಾರಿಗಳ ತಂಡ ಕಾಳಜಿ ಕೇಂದ್ರಗಳ ಬಗ್ಗೆಯೂ ಸೂಕ್ತ ಗಮನ ನೀಡಿ ಜನ-ಜಾನುವಾರುಗಳ ಸ್ಥಳಾಂತರ ಕಾಳಜಿಕೇಂದ್ರ ಮತ್ತು ಗೋ ಶಾಲೆಗಳ ಬಗ್ಗೆ ಗಮನ ಹರಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಮಳೆಗಾಲ ಆರಂಭಗೊಳ್ಳಲಿದ್ದು, ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಶೈಕ್ಷಣಿಕ ವ್ಯವಸ್ಥೆ ಸುಧಾರಿಸಲು ಅವಶ್ಯ ಗಮನ ನೀಡಬೇಕು. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ನಾಯ್ಕ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ನಗರಾಭಿವೃದ್ಧಿ ಯೋಜನಾ ಅಧ್ಯಕ್ಷ ಬಸವರಾಜ ಚಂಡ್ರಿಕಿ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ಪಶು ಸಂಗೋಪನೆ ಉಪನಿರ್ದೇಶಕ ಡಾ. ರಾಜು ದೇಶಮುಖ ಇದ್ದರು.

ಅಧಿಕಾರಿಗಳಿಗೆ ಸಚಿವರ ತರಾಟೆ
ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಶು ಸಂಗೋಪನಾ ಇಲಾಖೆಯಿಂದ ಬಂದಿರುವ ಯೋಜನೆಗಳು ಯಾವುವು ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ ಸಚಿವರಿಗೆ ಅಧಿಕಾರಿಗಳಿಂದ ಸರಿಯಾದ ಉತ್ತರ ಬಾರದ ಕಾರಣ ಅಧಿಕಾರಿಗಳಿಗೆ ಸಚಿವರು ಕ್ಲಾಸ್‌ ತೆಗೆದುಕೊಂಡರು.

ಇಲಾಖೆಯ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ಇಲ್ಲವಾದರೆ ಜನರಿಗೆ ಏನು ಸಂದೇಶ ತಲುಪಿಸುತ್ತೀರಿ ಎಂದು ಪ್ರಶ್ನಿಸಿ, ಜನರಿಗೆ ಯಾವ ರೀತಿ ಕೆಲಸ ಮಾಡುತ್ತಿರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಅಧಿಕಾರಿಗಳು ತಬ್ಬಿಬ್ಬಾದರು.

ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಹಾಗೂ ತರಬೇತಿ ನೀಡಬೇಕು. ಮುಂದಿನ ಸಭೆಯ ಒಳಗಾಗಿ ಎಲ್ಲ ಮಾಹಿತಿ ನೀಡಿರಬೇಕು. ಸಾರ್ವಜನಿಕರಿಗೆ ಎಲ್ಲಾ ಮಾಹಿತಿಯನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಪ್ರಭು ಚವಾಣ್‌ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT