ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ವಿಶ್ವಾರಾಧ್ಯರ ಜಾತ್ರೆ: ಅಬ್ಬೆತುಮಕೂರು ಸಜ್ಜು

Published 13 ಮಾರ್ಚ್ 2024, 5:08 IST
Last Updated 13 ಮಾರ್ಚ್ 2024, 5:08 IST
ಅಕ್ಷರ ಗಾತ್ರ

ಯಾದಗಿರಿ: ಅಣಿಮಾದಿ ಅಷ್ಟಸಿದ್ಧಿಗಳನ್ನು ಕಟ್ಟಿ ಮೆರೆದ ಜಗಜಟ್ಟಿಯ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗಾಗಿ ಅಬ್ಬೆತುಮಕೂರು ಸಕಲ ವ್ಯವಸ್ಥೆಯೊಂದಿಗೆ ಸಜ್ಜುಗೊಳ್ಳುತ್ತಿದೆ ಎಂದು ಮಠದ ವಕ್ತಾರ ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.   

ಮಾರ್ಚ್‌ 15 ರಂದು ಸಂಜೆ 6.30ಕ್ಕೆ ವಿಶ್ವಾರಾಧ್ಯರ ಭವ್ಯ ರಥೋತ್ಸವ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಮಠದ ಆವರಣದ ತುಂಬ ಬೃಹತ್‌ ಪೆಂಡಾಲ್ ಹಾಕುವ ಕಾರ್ಯದಲ್ಲಿ ಕಾರ್ಮಿಕರು ತೊಡಗಿದ್ದು, ಅದು ಕೊನೆಯ ಹಂತದಲ್ಲಿದೆ. ಸಕ್ರೆಪ್ಪ ಗೌಡ ವೇದಿಕೆಯನ್ನು ಬಣ್ಣ-ಬಣ್ಣದ ಪರದೆಗಳಿಂದ ಅಲಂಕೃತಗೊಳಿಸಲಾಗಿದ್ದು, ಮಾನವ ಧರ್ಮ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ.

ಮಠದಿಂದ ಪಾದಗಟ್ಟೆಯವರೆಗೂ ಮತ್ತು ಮುದ್ನಾಳ ಹಾಗೂ ಯಾದಗಿರಿಯ ಮುಖ್ಯ ರಸ್ತೆಯಲ್ಲಿ ಬೃಹತ್ ಕಮಾನುಗಳನ್ನು ನಿರ್ಮಿಸಿದ್ದು, ಜಾತ್ರೆಗೆ ಭಕ್ತರನ್ನು ಸ್ವಾಗತಿಸುತ್ತಿವೆ. ಮಠದ ಮುಂಭಾಗ ಮತ್ತು ಅಕ್ಕ ಪಕ್ಕದ ಹೊಲಗಳನ್ನು ಶುಚಿಗೊಳಿಸಲಾಗಿದ್ದು, ಬೈಕ್‌, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ನಿಲುಗಡೆಯ ವ್ಯವಸ್ಥೆ ಮಾಡಲಾಗಿದೆ.

ಯಾದಗಿರಿ ಬಳಿಯ ವಿಶ್ವಾರಾಧ್ಯರ ವೃತ್ತ, ಮುದ್ನಾಳ ಗ್ರಾಮ, ಪಾದಗಟ್ಟೆ ಬಳಿ ಹೀಗೆ ಹಲವು ಕಡೆಗಳಲ್ಲಿ ಭಕ್ತರನ್ನು ಸ್ವಾಗತಿಸುವ ಬೃಹತ್ ದ್ವಾರ ಬಾಗಿಲುಗಳು ನಿರ್ಮಿಸಲಾಗಿದೆ.

ಯಾದಗಿರಿ ನಗರದ ತುಂಬಾ ಮತ್ತು ಅಬ್ಬೆತುಮಕೂರು ಗ್ರಾಮದವರೆಗೆ ಮಠದ ಭಕ್ತರು ಬೃಹತ್ ಕಟೌಟ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಹಾಕಿರುವುದಲ್ಲದೆ ಅಲ್ಲಲ್ಲಿ ಧ್ವಜಗಳನ್ನು ಕಟ್ಟಲಾಗಿದೆ.

ಜಾತ್ರೆಯ ದಾಸೋಹಕ್ಕಾಗಿ ವಿವಿಧ ಗ್ರಾಮಗಳಿಂದ ಶ್ರೀಮಠದ ಭಕ್ತರು ದವಸ, ಧಾನ್ಯಗಳನ್ನು, ಕಾಯಿಪಲ್ಯೆಗಳನ್ನು, ರೊಟ್ಟಿ, ಸಿಹಿ ತಿನಿಸುಗಳು ಸೇರಿದಂತೆ ವಿವಿಧ ಬಗೆಯ ಭಕ್ಷ ಖಾದ್ಯಗಳನ್ನು ಮಠಕ್ಕೆ ತಲುಪಿಸುತ್ತಿದ್ದಾರೆ.

ಮಠದಲ್ಲಿ ಧವಸ ಧಾನ್ಯಗಳನ್ನು ಸ್ವಚ್ಛಗೊಳಿಸುವ ಕಾರ್ಯ ನೂರಾರು ಮಹಿಳೆಯರಿಂದ ಭರದಿಂದ ಸಾಗಿದೆ. ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಜಾತ್ರೆಯ ಸಿದ್ದತೆಯ ಕಾರ್ಯಗಳಿಗೆ ಖುದ್ದಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

ಜಾತ್ರೆಗೆ ಬರುವ ಭಕ್ತರಿಗಾಗಿ 70-80 ಕ್ವಿಂಟಲ್ ಮಾಲದಿಯನ್ನು ಸಿದ್ದಪಡಿಸುವ ಕಾರ್ಯದಲ್ಲಿ ಗಂವ್ಹಾರದ ಭಕ್ತರು ತೊಡಗಿಸಿಕೊಂಡಿದ್ದಾರೆ.

ಆರೋಗ್ಯ ಇಲಾಖೆಯಿಂದ ಆರೋಗ್ಯ ಘಟಕ ಸ್ಥಾಪಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ವಿವಿಧ ಗ್ರಾಮಗಳ ವಿಶ್ವಾರಾಧ್ಯ ಸೇವಾ ಸಮಿತಿಯ ಸದಸ್ಯರು ಪ್ರತ್ಯೇಕವಾಗಿ ದಾಸೋಹ ಮನೆಗಳನ್ನು ಪ್ರಾರಂಭಿಸುತ್ತಿದ್ದು, ಅವರು ಸಿದ್ದತೆಯಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT