ಮತದಾನದಿಂದ ಸದೃಢ ರಾಷ್ಟ್ರ ನಿರ್ಮಾಣ: ನ್ಯಾಯಾಧೀಶ ರಾಚಪ್ಪ ಕೆ.ತಾಳಿಕೋಟಿ

7
ರಾಷ್ಟ್ರೀಯ ಮತದಾರರ ದಿನಾಚರಣೆ

ಮತದಾನದಿಂದ ಸದೃಢ ರಾಷ್ಟ್ರ ನಿರ್ಮಾಣ: ನ್ಯಾಯಾಧೀಶ ರಾಚಪ್ಪ ಕೆ.ತಾಳಿಕೋಟಿ

Published:
Updated:
Prajavani

ಯಾದಗಿರಿ: ‘ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಮಾಡುವುದು ಅವಶ್ಯವಾಗಿರುತ್ತದೆ. ಆದ್ದರಿಂದ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಚಪ್ಪ ಕೆ.ತಾಳಿಕೋಟಿ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಭಾರತ ಚುನಾವಣಾ ಆಯೋಗದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.

‘ರಾಷ್ಟ್ರದ ಪ್ರಗತಿ ಯುವಪೀಳಿಗೆಯ ಕೈಯಲ್ಲಿದೆ. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ತಪ್ಪದೇ ಮತಾದಾನ ಮಾಡಿ, ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಭಾರತದ ಸಂವಿಧಾನದ ಪ್ರಕಾರ ಚುನಾವಣಾ ಆಯೋಗವು18ವರ್ಷ ಮೇಲ್ಪಟ್ಟವರಿಗೆ ಮತದಾನದ ಅವಕಾಶವನ್ನು ನೀಡಿದೆ. ವಿದ್ಯಾರ್ಥಿಗಳು ತಮ್ಮ ಹಳ್ಳಿಗಳಲ್ಲಿ ಈ ಬಗ್ಗೆ ತಿಳಿಹೇಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮಾತನಾಡಿ,‘18ವರ್ಷ ಮೇಲ್ಪಟ್ಟ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು. 18 ವರ್ಷ ಪೂರೈಸಿದ ಯುವಕ, ಯುವತಿಯರು ಹೆಸರು ನೋಂದಾಯಿಸದಿದ್ದಲ್ಲಿ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಇನ್ನೂ ಅವಕಾಶ ಇದೆ’ ಎಂದರು.

‘ಮತದಾರರ ಪಟ್ಟಿಯಲ್ಲಿರುವ ಯಾವುದೇ ಮತದಾರ ಮತದಾನದಿಂದ ವಂಚಿತವಾಗಬಾರದು. ಮುಂದಿನ ಚುನಾವಣೆಯ ಮತದಾನ ಸಂದರ್ಭದಲ್ಲಿ ಅಂಧ ಮತದಾರರಿಗೆ ವಿಶೇಷವಾಗಿ ಬ್ರೈಲ್ ಲಿಪಿಯಲ್ಲಿ ಚುನಾವಣಾ ಗುರುತಿನ ಚೀಟಿ ವಿತರಿಸಲಾಗುತ್ತಿದೆ ಎಂದರು.

‘ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿರುವುದರಿಂದ ವಿದ್ಯಾರ್ಥಿಗಳಿಗೆ ಈಗಾಗಲೇ ಮತದಾನದ ಮಹತ್ವ ಗೊತ್ತಾಗಿದೆ. ಅದನ್ನು ಪೋಷಕರು, ಸ್ನೇಹಿತರು, ಸಂಬಂಧಿಕರಿಗೂ ತಿಳಿಸಬೇಕು ಎಂದು ಸಲಹೆ ನೀಡಿದ ಜಿಲ್ಲಾಧಿಕಾರಿ, ಬೂತ್ ಮಟ್ಟದ ಅಧಿಕಾರಿಗಳು ಅಂಗವಿಕಲ ಮತದಾರರನ್ನು ಸರಿಯಾಗಿ ಗುರುತಿಸಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್‌ ಅವರು ಮತದಾನ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಮತದಾರರ ದಿನಾಚರಣೆಯ ಅಂಗವಾಗಿ ಜಿಲ್ಲೆಯ ವಿವಿಧ ಶಾಲಾ- ಕಾಲೇಜುಗಳಲ್ಲಿ ಪ್ರಬಂಧ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಜತೆಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಪ್ರೌಢಶಾಲಾ ವಿಭಾಗದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಮಂಜುಳಾ ಸುರಪುರ, ಮಲ್ಲಪ್ಪ ಬಳಿಚಕ್ರ, ಅಮೀರ್ ಖಾನ್ ಚೌದರಿ ಶಹಾಪುರ, ಹಾಗೂ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಪೂಜಾ, ರಮ್ಯಾ ರಾಮಣ್ಣ, ಶಾಲಿನಿ ಕಟ್ಟಿಮನಿ ಮತ್ತು ಪೋಸ್ಟರ್ ಮೇಕಿಂಗ್ (ಚಿತ್ರಕಲೆ)ನಲ್ಲಿ ಶ್ರಾವಣಿ, ರಾಜೇಶ್ ಗೌರಿಶಂಕರ್, ನಿತೀಶ್ ಶಾಂತು, ರಸಪ್ರಶ್ನೆಯಲ್ಲಿ ಶಾಲಿನಿ ಕಟ್ಟಿಮನಿ ಮತ್ತು ತಂಡ, ಮನೋಜ್‌ಕುಮಾರ ಮತ್ತು ತಂಡ, ಖಾಲಿದ್ ಅಕ್ಬರ್ ಅಲಿ ಮತ್ತು ತಂಡದವರು ಪ್ರಶಸ್ತಿ ಪಡೆದರು.

ಪದವಿ ಪೂರ್ವ ಕಾಲೇಜು ಹಂತದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ದೇವೇಂದ್ರಮ್ಮ, ಚಂದ್ರಶೇಖರ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಆನಂದ ಮತ್ತು ರಸೂಲ್, ಶಶಿಕಲಾ ಮತ್ತು ನಾಗರಾಜ್ ಅವರು ಬಹುಮಾನ ಪಡೆದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !