ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ | ಕಳೆ ಕೀಳಲು ಸಿಗದ ಕಾರ್ಮಿಕರು

ಹುಣಸಗಿ: ವಾಡಿಕೆಗಿಂತ ಹೆಚ್ಚು ಮಳೆ ಆಗಿರುವುದರಿಂದ ಕಳೆಯೂ ಹೆಚ್ಚಳ
Last Updated 2 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳಲ್ಲಿ ಕಳೆ ತೆಗೆಯಲು ಕಾರ್ಮಿಕರ ಸಮಸ್ಯೆ ಎದುರಾಗಿದೆ. ಕಾರ್ಮಿಕರಿಗಾಗಿ ಗ್ರಾಮಗಳಲ್ಲಿ ಅಲೆಯುಂತಾಗಿದೆ ಎಂಬ ಮಾತುಗಳು ರೈತ ವಲಯದಲ್ಲಿ ಕೇಳಿ ಬರುತ್ತಿವೆ.

ಎರಡು ತಿಂಗಳ ಹಿಂದೆಯೇ ತಾಲ್ಲೂಕಿನ ವಿವಿಧ ಹಳ್ಳಿಗಳ ಮಳೆಯಾಶ್ರಿತ ಪ್ರದೇಶದ ಸಾವಿರಾರು ಹೆಕ್ಟೇರ್ ಜಮೀನುಗಳಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿ ಬೆಳೆ ಹುಲುಸಾಗಿ ಬೆಳೆಯುತ್ತಿದೆ. ಆದರೆ ಕಳೆ ಕೂಡಾ ಹೆಚ್ಚಾಗಿದ್ದು ಕಳೆ ಕೀಳಲು ಕಾರ್ಮಿಕರು ಸಿಗುತ್ತಿಲ್ಲ ಎಂದು ಗುಂಡಲಗೇರಾ ಗ್ರಾಮದ ರೈತ ಚನ್ನಬಸಪ್ಪಗೌಡ ಹಾಗೂ ಮಂಜಲಾಪುರ ಹಳ್ಳಿ ಗ್ರಾಮದ ಪರಮಣ್ಣ ನೀಲಗಲ್ಲ ಹೇಳಿದರು.

ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಲ್ಲಲ್ಲಿ ಕೆಲಸಗಳು ನಡೆದಿವೆ. ಅಲ್ಲದೆ ಕಾಲುವೆಗೆ ನೀರು ಹರಿಸಿದ್ದರಿಂದ ಭತ್ತ ನಾಟಿ ಕೂಡಾ ಭರದಿಂದ ನಡೆದಿದೆ. ಇದರಿಂದಾಗಿ ಕಾರ್ಮಿಕರ ಸಮಸ್ಯೆ ಎದುರಾಗುತ್ತಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಕೆಲ ದೊಡ್ಡ ರೈತರು ಹಾಗೂ ಟ್ರ್ಯಾಕ್ಟರ್ ಹೊಂದಿರುವ ರೈತರು ತೊಗರಿ ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಕುಂಟಿ ಹೊಡೆದು ಕಳೆ ಕೀಳುತ್ತಿದ್ದಾರೆ ಎಂದು ರಾಜನಕೋಳುರ ಗ್ರಾಮದ ರೈತ ರಾಮನಗೌಡ ವಠಾರ ತಿಳಿಸಿದರು.

ಸಣ್ಣ ರೈತರು ಕಾರ್ಮಿಕರು ಸಮಸ್ಯೆ ಎದುರಿಸುವಂತಾಗಿದೆ. ಕಳೆದ ವರ್ಷ ಮಹಿಳಾ ಕಾರ್ಮಿಕರಿಗೆ ದಿನಕ್ಕೆ ₹100 ರಿಂದ 120 ನೀಡಲಾಗುತ್ತಿತ್ತು. ಸದ್ಯ ₹180 ರಿಂದ ₹200 ಕೊಟ್ಟರೂ ಕಾರ್ಮಿಕರು ಸಿಗುತ್ತಿಲ್ಲ ಎಂದು ಗೆದ್ದಲಮರಿ ಗ್ರಾಮದ ಶಿವರಾಜ ಹೊಕ್ರಾಣಿ ಹೇಳಿದರು.

ತಾಲ್ಲೂಕಿನ ಕೊಡೇಕಲ್ಲ, ಬರದೇವನಾಳ, ನಾರಾಯಣಪುರ, ರಾಜನಕೋಳುರ, ಬಪ್ಪರಗಿ, ಹೊರಟ್ಟಿ, ಕೋಮಲಾಪುರ, ತೀರ್ಥ ಮತ್ತಿತರ ಗ್ರಾಮಗಳ ಶೇ 70 ಕ್ಕೂ ಹೆಚ್ಚಿನ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಬೆಳೆ ಚೆನ್ನಾಗಿದೆ. ಮಳೆ ವಾಡಿಕೆಗಿಂತ ಹೆಚ್ಚಾಗಿದ್ದರಿಂದಾಗಿ ಕಳೆ ಕೀಳುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಕೊಡೇಕಲ್ಲ ಗ್ರಾಮದ ರೈತ ಶಿವಶರಣ ಕಟ್ಟಿಮನಿ ವಿವರಿಸಿದರು.

ಸುಮಾರು 25 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ತೊಗರಿ ಹಾಗೂ ಹತ್ತಿ ಬಿತ್ತನೆ ಮಾಡಲಾಗಿದ್ದು, 45 ರಿಂದ 50 ದಿನಗಳ ಬೆಳೆ ಇದೆ. ಬೆಳೆ ಕೂಡಾ ಬಹುತೇಕ ಚೆನ್ನಾಗಿ ಇದೆ ಎಂದು ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT