ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಪರೀಕ್ಷೆ ಆಧರಿಸಿ ರಸಗೊಬ್ಬರ ಬಳಸಿ: ವಿಜ್ಞಾನಿ ಡಾ.ಅಮರೇಶ ವೈ.ಎಸ್ ಸಲಹೆ

Last Updated 5 ಡಿಸೆಂಬರ್ 2021, 14:23 IST
ಅಕ್ಷರ ಗಾತ್ರ

ಸುರಪುರ: ‘ರೈತರು ತಪ್ಪದೇ ತಮ್ಮ ಹೊಲದ ಮಣ್ಣು ಪರೀಕ್ಷೆ ಮಾಡಿಸಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ರಸ ಗೊಬ್ಬರಗಳನ್ನು ಹಾಕಬೇಕು. ಈ ಮೂಲಕ ಅಮೂಲ್ಯವಾದ ಮಣ್ಣು ಸಂಪತ್ತು ರಕ್ಷಿಸಬೇಕು’ ವಿಜ್ಞಾನಿ ಡಾ.ಅಮರೇಶ ವೈ.ಎಸ್. ಹೇಳಿದರು.

ತಾಲ್ಲೂಕಿನ ಕವಡಿಮಟ್ಟಿಯಲ್ಲಿ ಭಾನುವಾರ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೋರಮಂಡಲ್ ಇಂಟರ್‌ನ್ಯಾಷನಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಣ್ಣಿನ ಆರೋಗ್ಯ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜೀವಂತ ಜೀವಿಗಳ ಈ ವೈವಿಧ್ಯಮಯ ಸಮುದಾಯವು ಮಣ್ಣನ್ನು ಆರೋಗ್ಯಕರವಾಗಿ ಮತ್ತು ಫಲವತ್ತಾಗಿರಿಸುತ್ತದೆ. ಈ ವಿಶಾಲ ಜಗತ್ತು ಮಣ್ಣಿನ ಜೀವ ವೈವಿಧ್ಯತೆಯನ್ನು ರೂಪಿಸುತ್ತದೆ. ಭೂಮಿಯ ಮೇಲೆ ಜೀವವನ್ನು ಸಾಧ್ಯವಾಗಿಸುವ ಮುಖ್ಯ ಜೈವಿಕ ರಾಸಾಯನಿಕ ಪ್ರಕ್ರಿಯೆಗಳನ್ನು ನಿರ್ಧರಿಸುತ್ತದೆ’ ಎಂದು ತಿಳಿಸಿದರು.

'ಮಣ್ಣು ಘನ, ದ್ರವ, ಅನಿಲ ರೂಪದ ವಸ್ತುಗಳಿಂದ ಕೂಡಿದೆ. ಲಕ್ಷಾಂತರ ನಿರ್ಜೀವಿ ಮತ್ತು ಸಜೀವಿಗಳನ್ನು ಒಳಗೊಂಡಿರುತ್ತವೆ. ಸಸ್ಯಗಳನ್ನು ಮಣ್ಣು ಪೋಷಿಸಿ, ರಕ್ಷಿಸುತ್ತದೆ. ಸಸ್ಯಗಳು ಮಣ್ಣಿನಲ್ಲಿರುವ ಇಡೀ ಜೀವಿಗಳನ್ನು ಪೋಷಿಸುತ್ತವೆ ’ ಎಂದು ಅವರು ಹೇಳಿದರು.

ವಿಜ್ಞಾನಿ ಡಾ.ಉಮೇಶ ಭರೀಕರ, ಮಣ್ಣಿನ ಕಣಗಳ ರಚನೆ, ಮಹತ್ವ, ಮಣ್ಣಿನ ಸಮರ್ಪಕ ಸದ್ಬಳಕೆ ಕುರಿತು ತಿಳಿಸಿ, ‘ಮಣ್ಣಿಗೆ ರಾಸಾಯನಿಕ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಮಹತ್ವ ಕೊಡಿ’ ಎಂದು ಸಲಹೆ ನೀಡಿದರು.

ಡಾ.ಗುರುಪ್ರಸಾದ್ ಮಾತನಾಡಿ, ‘ಮಣ್ಣಿನ ಆರೋಗ್ಯದ ಬಗ್ಗೆ ಗಮನ ಹರಿಸಲು ಮತ್ತು ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಸಲಹೆ ನೀಡುವ ಸಾಧನವಾಗಿಪ್ರತಿವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತದೆ’ ಎಂದು ತಿಳಿಸಿದರು.

ಡಾ.ಕೊಟ್ರೇಶ ಪ್ರಸಾದ ಅವರು ಮಣ್ಣಿನ ಸತ್ವ ಹಾಗೂ ಮಣ್ಣಿನಲ್ಲಿರುವ ಖನಿಜಗಳು ಹೇಗೆ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ವಿವರಿಸಿದರು ಮತ್ತು ವಿವಿಧ ಜಾನುವಾರುಗಳ ಬಗ್ಗೆ ತಿಳಿಸಿದರು.

ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್‍ನ ಬೇಸಾಯ ಶಾಸ್ತ್ರಜ್ಞ ಶಿವಾನಂದ, ಮಣ್ಣಿನ ಪರೀಕ್ಷೆ ಮಾಡಿಸಿ ಪ್ರಾತ್ಯಕ್ಷಿತೆ ನೀಡಿದರು. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಹಾಗೂ ವಿವಿಧ ಪೋಷಕಾಂಶಗಳ ಕುರಿತು ಮಾತನಾಡಿದರು.

ಹನುಮಂತ, ಇಮ್ರಾನ್, ಅಮಾತೆಪ್ಪ, ಕೋರಮಂಡಲ್ ಇಂಟರ್‍ನ್ಯಾಷನಲ್ ಲಿಮಿಟೆಡ್ ಸಿಬ್ಬಂದಿ ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT