ಮಂಗಳವಾರ, ಮೇ 24, 2022
27 °C
ಹತ್ತಿಗೆ ತಂಬಾಕು ಕೀಡೆ, ಶೇಂಗಾಕ್ಕೆ ಗೊಣ್ಣೆಹುಳು ಬಾಧೆ, ಇಳುವರಿ ಕುಂಠಿತ ಆತಂಕದಲ್ಲಿರುವ ರೈತರು

ಯಾದಗಿರಿ: ಹತ್ತಿ, ಶೇಂಗಾಕ್ಕೆ ಹುಳು ಬಾಧೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮುಂಗಾರು ಹಂಗಾಮಿನ ಹತ್ತಿ, ಹಿಂಗಾರಿನ ಶೇಂಗಾ ಬಿತ್ತನೆ ಬೀಜಕ್ಕೆ ಹುಳುಗಳ ಕಾಟ ಶುರುವಾಗಿದ್ದು, ಇಳುವರಿ ಕುಂಠಿತವಾಗುವ ಆತಂಕ ರೈತರನ್ನು ಕಾಡುತ್ತಿದೆ.

ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಅದಕ್ಕೆ ಈಗ ತಂಬಾಕು ಕೀಡೆ ಬಾಧೆ ಕಾಣಿಸಿಕೊಂಡಿದೆ. ಅಲ್ಲದೇ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾಕ್ಕೆ ಗೊಣ್ಣೆಹುಳು ಬಾಧೆ ಇದ್ದು, ನಿಯಂತ್ರಣ ಮಾಡಲು ರೈತರು ಹರಸಾಹಸ ಮಾಡುತ್ತಿದ್ದಾರೆ.

ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದ ಸುತ್ತಮುತ್ತಲಿನ ಹತ್ತಿ ಜಮೀನುಗಳಲ್ಲಿ ಹೆಚ್ಚಾಗಿ ತಂಬಾಕು ಕೀಡೆ ಬಾಧೆ ಕಾಣಿಸಿಕೊಂಡಿದೆ.

ಅಧಿಕ ತೇವಾಂಶ:

ಜಿಲ್ಲೆಯಲ್ಲಿ ಎರಡು ವಾರಗಳಿಂದ ಸುರಿದ ಮಳೆಗೆ  ತೇವಾಂಶ ಹೆಚ್ಚಾಗಿ ಹತ್ತಿಗೆ ಹುಳು ಬೀಳಲು ಕಾರಣವಾಗಿದೆ. ಶೇಂಗಾ ಬಿತ್ತನೆ ಮಾಡಿದ ನಂತರವೂ ಗೊಣ್ಣೆ ಹುಳು ಅಧಿಕವಾಗಿದೆ. ಫಸಲು ಚೆನ್ನಾಗಿದೆ ಎಂದುಕೊಳ್ಳುವಷ್ಟರಲ್ಲೇ ಬೆಳೆ ಹಾಳಾಗುವ ಆತಂಕ ಕಾಡುತ್ತಿದೆ.

ಗುತ್ತಿಗೆ ಪಡೆದವರಿಗೆ ಸಂಕಷ್ಟ:

ಜಮೀನು ಗುತ್ತಿಗೆ ಪಡೆದು ಹತ್ತಿ ಬಿತ್ತನೆ ಮಾಡಿದ ರೈತರಿಗೆ ಈ ಬಾರಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ. ಪ್ರತಿ ಎಕರೆಗೆ ಸಾವಿರಾರು ಖರ್ಚು ಮಾಡಿದರೂ ಮತ್ತೆ ಹುಳುಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಎಲೆಗಳನ್ನು ರಂಧ್ರಗಳನ್ನಾಗಿ ಮಾಡಿ ಪಂಜರದಂತೆ ತಿಂದಿವೆ. 

‘ನಾಲ್ಕು ಎಕರೆಯಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಈಗ ತಂಬಾಕು ಕೀಡೆ ಬಾಧಿಸುತ್ತಿದೆ. ರಾತ್ರಿ–ಬೆಳಗು ಆಗುವಷ್ಟರಲ್ಲಿ ಹೊಲದ ತುಂಬಾ ಹುಳುಗಳೆ ಕಾಣಿಸುತ್ತವೆ. ಎಲೆಗಳ ಮೇಲೆ ಕುಳಿತು ನಾಶ ಮಾಡುಬಿಡುತ್ತಿವೆ. ಜಮೀನು ಗುತ್ತಿಗೆಗೆ ಹಾಕಿಕೊಂಡಿದ್ದು, ನಮ್ಮ ಬಂಡವಾಳ ಬರದಿದ್ದರೆ ನಮಗೆ ಸಾಲವೇ ಗತಿ ಎನ್ನುತ್ತಾರೆ’ ರೈತ ಬಸವರಾಜ ಪಾಟೀಲ.

‘ಒಂದು ಹತ್ತಿ ಗಿಡದಲ್ಲಿ ಕಳೆದ ಬಾರಿ 40ರಿಂದ 50 ಕಾಯಿಗಳು ಬಿಟ್ಟಿದ್ದವು. ಈ ಬಾರಿ 30ರಿಂದ 35 ಇವೆ. ಜಮೀನಿನಲ್ಲಿ ಎಲ್ಲಿ ನೋಡಿದರೂ ಹುಳುಗಳು ಇದ್ದು, ನಿಯಂತ್ರಣಕ್ಕೆ ಬಾರದಾಗಿದೆ. ಎಕರೆಗೆ ಸುಮಾರು ₹20ರಿಂದ 25 ಸಾವಿರ ಖರ್ಚು ಮಾಡಲಾಗಿದೆ. ಉಳುಮೆ, ಬೀಜ, ಗೊಬ್ಬರ ಸೇರಿದಂತೆ ಕೂಲಿಗಾಗಿ ಖರ್ಚಾಗಿದೆ. ಇದರಿಂದ ಈ ವರ್ಷ ರೈತರಿಗೆ ನಷ್ಟವೇ ಉಂಟಾಗಲಿದೆ’ ಎನ್ನುತ್ತಾರೆ ಗ್ರಾ.ಪಂ ಸದಸ್ಯ ಮಾಳಪ್ಪ ಪೂಜಾರಿ ಬಬಲಾದ.

****

ಜೈವಿಕ ನಿಯಂತ್ರಣಕ್ಕೆ ಸಲಹೆ

‘ಜಿಲ್ಲೆಯಲ್ಲಿ ಹತ್ತಿ, ಶೇಂಗಾ ಬೆಳೆಗೆ ಹುಳುಗಳ ಬಾಧೆ ಕಾಣಿಸಿಕೊಂಡಿದ್ದು, ರೈತರು ಜೈವಿಕ ನಿಯಂತ್ರಣ ಕ್ರಮಗಳ ಮೂಲಕ ಬೆಳೆ ಕಾಪಾಡಿಕೊಳ್ಳಬಹುದು. ಹತ್ತಿಯಲ್ಲಿ ತಂಬಾಕು ಕೀಡೆ ಹೊಟ್ಟೆಬಾಕತನ (voracious feeder) ರಾತ್ರಿ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಎಲೆಗಳಲ್ಲಿ ಸಣ್ಣ ವೃತ್ತಾಕಾರದ ರಂದ್ರ ಮಾಡುತ್ತದೆ. ಇದರಿಂದ ಎಲೆಗಳು ಪಂಜರದಂತೆ ಕಾಣಿಸುತ್ತವೆ. ಹತ್ತಿ ನಾಟಿ ಮಾಡುವಾಗ ಹೊಲದ ಸುತ್ತಲೂ ಔಡಲ ಬೆಳೆಸಬೇಕು’ ಎಂದು ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಸತೀಶಕುಮಾರ ಕಾಳೆ ಸಲಹೆ ನೀಡುತ್ತಾರೆ.

‘ಹತ್ತಿಯಲ್ಲಿ ಹೂಗಳು ಎದುರುವ ಸಮಸ್ಯೆಗೆ ಎನ್‌ಎಎ 0.4 ಗ್ರಾಂ 1 ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು. ಕ್ಲೂರಪೈರಿಪಾಸ್‌ 20 ಇಸಿ–2 ಎಂಎಲ್‌ ನೀರಿಗೆ ಹಾಕಿ ಸಿಂಪರಣೆ ಮಾಡಬೇಕು. ಶೇಂಗಾ ಹೊಲದಲ್ಲಿ ಗೊಣ್ಣೆ ಹುಳು ನಿಯಂತ್ರಣಕ್ಕಾಗಿ ಕ್ಲೂರಪೈರಿಪಾಸ್‌ 2.5 ಎಂಎಲ್‌ 1 ಲೀಟರ್‌ ನೀರಿಗೆ ಹಾಕಿ ಸಿಂಪರಿಸಬೇಕು’ ಎನ್ನುತ್ತಾರೆ ಅವರು.

****

ಹತ್ತಿಗೆ ಕಾಣಿಸಿಕೊಂಡಿರುವ ತಂಬಾಕು ಕೀಡೆ ಎಲೆಗಳನ್ನು ತಿಂದು ಬಿಡುತ್ತದೆ. ಗೊಣ್ಣೆ ಹುಳು ಜಮೀನಿನ ಮಣ್ಣಿನಲ್ಲಿ ಅಡಗಿಕೊಂಡು ಬೇರುಗಳಲ್ಲಿ ಹಾನಿಯುಂಟು ಮಾಡುತ್ತದೆ

- ಡಾ.ಸತೀಶಕುಮಾರ ಕಾಳೆ, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ

****

ಕಳೆದ 20 ದಿನಗಳಿಂದ ಶೇಂಗಾ ಬಿತ್ತನೆ ಮಾಡಲಾಗಿದ್ದು, ಹುಳುಗಳ ಬಾಧೆ ಹೆಚ್ಚಾಗಿದೆ. ಬೀಜ ತಿಂದು ಹಾಕುವುದರಿಂದ ಬೆಳೆ ಕಾಪಾಡಿಕೊಳ್ಳುವುದೇ ಸವಾಲಾಗಿದೆ

- ವೆಂಕಟೇಶ ಕುಂಬಾರ ಬೆಳೆಗೇರಾ, ರೈತ

****

ನಮ್ಮ ಹೊಲದಲ್ಲಿ ಬಿತ್ತಿದ ಹತ್ತಿ ಬೆಳೆಗೆ ಹುಳುಗಳ ಬಾಧೆ ಹೆಚ್ಚಾಗಿದ್ದು, ಬೆಳೆ ‌ನಾಶವಾಗಿದೆ. ಎಲೆಗಳನ್ನೆಲ್ಲ ತಿಂದು ಹಾಕಿದ್ದು, ಪಂಜರದಂತೆ ಕಾಣಿಸುತ್ತದೆ

- ಮಲ್ಲಾರೆಡ್ಡಿ ಬಬಲಾದ, ರೈತ

****

ಹುಳುಗಳ ಬಾಧೆಯಿಂದ ಕಾಯಿಗಳು ಹೆಚ್ಚು ಬಿಟ್ಟಿಲ್ಲ. ಉಳಿದಿರುವ ಬೆಳೆಯಲ್ಲಿ ಪೂಜೆ ಮಾಡಿ ಹತ್ತಿ ಬಿಡಿಸಲಾಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಫಸಲು ಇಲ್ಲದಂತಾಗಿದೆ

- ಮಾಳಪ್ಪ ಪೂಜಾರಿ ಬಬಲಾದ, ಗ್ರಾ.ಪಂ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು