ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಶಿವಕುಮಾರ ಶ್ರೀಗಳು ನಿತ್ಯ ಸ್ಮರಣೀಯ

ಜಿಲ್ಲೆಯ ವಿವಿಧೆಡೆ ದಾಸೋಹ ದಿನ ಆಚರಣೆ: ಭಾವಚಿತ್ರಕ್ಕೆ ಪೂಜೆ
Last Updated 21 ಜನವರಿ 2022, 16:45 IST
ಅಕ್ಷರ ಗಾತ್ರ

ಯಾದಗಿರಿ: ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆದಾಸೋಹ ದಿನ ಆಚರಣೆ ಮಾಡಲಾಯಿತು.

ವಿವಿಧ ಕಡೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸಮಾಜದ ವತಿಯಿಂದ ಮತ್ತು ಕಾಲೇಜುಗಳಲ್ಲಿ ಪುಣ್ಯಸ್ಮರಣೆ ನಡೆಯಿತು.

ಪದವಿ ಮಹಾವಿದ್ಯಾಲಯ: ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸಿದ್ಧಗಂಗಾ ಶ್ರೀಗಳ ಮತ್ತು ವಚನಕಾರ ಅಂಬಿಗರ ಚೌಡಯ್ಯನವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಲಾಯಿತು.

ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ,‘ಲಕ್ಷಾಂತರ ಮಕ್ಕಳಿಗೆ ವಿದ್ಯೆ, ಆಶ್ರಯ ಮತ್ತು ಅನ್ನ ದಾಸೊಹ ಮಾಡಿದ ಸಿದ್ಧಗಂಗಾ ಶಿವಕುಮಾರ ಶ್ರೀಗಳು ಹಸಿದ ಒಡಲಿನ ಆಶ್ರಯದಾತರಾಗಿದ್ದರು’ ಎಂದು ಹೇಳಿದರು.

ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿ ದವಸ-ಧಾನ್ಯ ಸಂಗ್ರಹಿಸಿ, ನಿತ್ಯವೂ ತಪ್ಪದೇ ದಾಸೋಹ ಮಾಡಿಕೊಂಡು ಬಂದ ಶಿವಕುಮಾರ ಸ್ವಾಮೀಜಿ ಸ್ಮರಣೆಯಲ್ಲಿ ದಾಸೋಹ ದಿನವೆಂದು ಆಚರಣೆ ಮಾಡುತ್ತಿರುವುದು ಸೂಕ್ತವಾಗಿದೆ ಎಂದು ಹೇಳಿದರು.

ಅಸಮಾನತೆ, ಜಾತಿ ಪದ್ಧತಿಯ ವಿರುದ್ಧ ಬಂಡೆದ್ದ ಅಂಬಿಗರ ಚೌಡಯ್ಯನವರು ಒಂದು ಶಕ್ತಿಯಾಗಿ ಬಸವಾದಿ ಪರಂಪರೆಯಲ್ಲಿ ಪ್ರಖರ ವಿಚಾರಧಾರೆಗಳ ಶರಣರಾಗಿದ್ದರೆಂದು ಹೇಳಿದರು.

ಈ ವೇಳೆ ಡಾ.ಜೆಟ್ಟೆಪ್ಪ, ಡಾ.ಮೋನಯ್ಯ ಕಲಾಲ್‌, ಡಾ.ಚಂದ್ರಶೇಖರ ಕೊಂಕಲ್, ಡಾ.ಯಲ್ಲಪ್ಪ ಹಾಗೂ ಮಂಜುನಾಥ ಇದ್ದರು.

ವೀರಶೈವ ಮಹಾಸಭಾ: ನಗರದ ಮೌನೇಶ್ವರ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಅವರ 3ನೇ ಪುಣ್ಯಸ್ಮರಣೆ–ದಾಸೋಹ ದಿನದ ಅಂಗವಾಗಿ ಅನ್ನದಾಸೋಹ ನಡೆಯಿತು.

ದಾಸೋಹ ಮೂರ್ತಿಗಳಾಗಿ, ವಿಭೂತಿ ಪುರುಷರಾಗಿ ಈ ಕರುನಾಡಿನ ನೆಲವನ್ನು ದೈವ ಭೂಮಿಯನ್ನಾಗಿಸಿದ ಲಿಂ. ಶಿವಕುಮಾರ ಸ್ವಾಮೀಜಿ ನಿತ್ಯ ಸ್ಮರಣೀಯರಾಗಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್ ಮಣ್ಣೂರ ಹೇಳಿದರು.

ಕಾಯಕ ದಾಸೋಹದಿಂದ 111 ವರ್ಷಗಳ ಸಾರ್ಥಕ ಜೀವನ ಮಾಡಿದ ಸಂತ ಶಿಖಾಮಣಿ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆಯನ್ನು ದಾಸೋಹ ದಿನವನ್ನಾಗಿ ಆಚರಣೆ ಮಾಡಿಕೊಡಲು ಅನುವು ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶ್ರೀಗಳು ದಿನದ 24 ತಾಸುಗಳು ಕ್ರಿಯಾಶೀಲವಾಗಿ ಪಾದರಸದಂತೆ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಅವರನ್ನು ಕಾಯಕ ಯೋಗಿಗಳು ಎಂದು ಅಭಿದಾನದಿಂದ ಕರೆಯಲಾಗುತ್ತಿದೆ ಎಂದು ನುಡಿದರು.

ಈ ವೇಳೆ ನೂರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಆರ್.ಮಹಾದೇವಪ್ಪ ಅಯ್ಯಣ್ಣ ಹುಂಡೇಕಾರ, ಬಸವಂತರಾಯ ಮಾಲಿಪಾಟೀಲ, ಶೇಖರ್ ಅರಳಿ, ಡಾ. ಭೀಮರಾಯ ಲಿಂಗೇರಿ, ಎಸ್‌.ಎಸ್. ನಾಯಕ, ಬಸವರಾಜ್ ಮೋಟ್ನಳ್ಳಿ, ಭೀಮಣ್ಣಗೌಡ ಕ್ಯಾತನಾಳ ಹಾಗೂ ಶಶಿಕಲಾ ಭೀಮಣ್ಣಗೌಡ ಇದ್ದರು.

ಡಾ. ಕಾಮರೆಡ್ಡಿ ಅಭಿಮಾನಿ ಬಳಗ: ನಗರದ ಡಾ. ಕಾಮರೆಡ್ಡಿ ಅಭಿಮಾನಿಗಳ ಬಳಗದಿಂದ ತ್ರಿವಿಧ ದಾಸೋಹಿ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನವನ್ನು ದಾಸೋಹ ದಿನಾಚರಣೆಯನ್ನಾಗಿ ಅವರ ಕಚೇರಿಯಲ್ಲಿ ಆಚರಿಸಲಾಯಿತು.

ಅನ್ನದಾಸೋಹ ಮಾಡುವ ಮೂಲಕ ಆಚರಣೆ ಮಾಡಲಾಯಿತು.

ಇದೇ ವೇಳೆ ಮಾತನಾಡಿದ ವೈದ್ಯ ಡಾ. ಶರಣಬಸವಪ್ಪ ಕಾಮರೆಡ್ಡಿ ಬೆಂಡೆಬೆಂಬಳಿ,‘ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳು ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಜಾತಿ, ಧರ್ಮ ಬೇಧವಿಲ್ಲದೇ ವಿದ್ಯೆ, ವಸತಿ, ದಾಸೋಹ ನೀಡುವ ಮೂಲಕ ವಿಭಿನ್ನವಾದ ಕೊಡುಗೆ ನೀಡಿ ನಾಡಿನ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗುವುದು ಅಗತ್ಯವಿದೆ’ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಶಾಂತರಡ್ಡಿ ದೇಸಾಯಿ, ದಂಡಪ್ಪಗೌಡ ಉಳ್ಳೆಸೂಗೂರು, ಶಂಕರಲಿಂಗ ಬೊಳಶೆಟ್ಟಿ, ವಿಶಾಲ್ ಪಾಟೀಲ ರಸ್ತಾಪುರ ಹಾಗೂ ಮಲ್ಲಿಕಾರ್ಜುನ ಇದ್ದರು.

***

‘ದಾಸೋಹ ಕಾರ್ಯ ಶ್ಲಾಘನೀಯ’

ಶಹಾಪುರ: ‘ತ್ರಿವಿಧ ದಾಸೋಹದ ಮೂಲಕ ಸಿದ್ದಗಂಗಾ ಕ್ಷೇತ್ರದ ಡಾ.ಶಿವಕುಮಾರ ಶ್ರೀಗಳು ದಾಸೋಹ ಪರಂಪರೆಗೆ ಹೊಸ ಅರ್ಥವನ್ನು ನೀಡಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು’ ಎಂದು ನಗರದ ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.

ಸಿದ್ದಗಂಗಾ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಪ್ರಯುಕ್ತ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಶುಕ್ರವಾರ ನಡೆದ ದಾಸೋಹ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿರಾರು ಮಕ್ಕಳ ಬದುಕನ್ನು ರೂಪಿಸುವುದರ ಜತೆಗೆ ಅವರನ್ನು ಸಂಸ್ಕಾರವಂತರನ್ನಾಗಿಸಿದ್ದ ಶ್ರೀಗಳು ಜಗದಲ್ಲಿ ಲಕ್ಷಾಂತರ ಭಕ್ತರ ಆರಾಧ್ಯ ದೈವಿ ಪುರಷರಾಗಿದ್ದಾರೆ. ಅವರ ಸ್ಫೂರ್ತಿದಾಯಕ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಫಕೀರೇಶ್ವರ ಮಠದ ಗಂಗಾಧರ ಸ್ವಾಮೀಜಿ ಮಾತನಾಡಿ,‘12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ್ದ ತ್ರಿವಿಧ ದಾಸೋಹವನ್ನು ಇಂದಿನ ಶತಮಾನದಲ್ಲಿ ಮುನ್ನಡೆಸಿಕೊಂಡು ಬಂದಿದ್ದ ಶಿವಕುಮಾರ ಶ್ರೀಗಳು ಯಾವುದೇ ಜಾತಿ, ಮತ ಪಂಥಗಳನ್ನೆದೆ ಬಡ ಮಕ್ಕಳಲ್ಲಿ ಜ್ಞಾನದ ಜ್ಯೋತಿ ಬೆಳಗಿಸಿ ಅವರ ಕುಟುಂಬಗಳು ಸಮಾಜ ಹಾಗೂ ದೇಶದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದರು’ ಎಂದರು.

ನಗರದ ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ, ಮಲ್ಲಣ್ಣ ಸಾಹು ಮಡ್ಡಿ, ಸುರೇಂದ್ರ ಪಾಟೀಲ ಮಡ್ನಾಳ, ನಗನೂರ ಶರಣಪ್ಪ ಶರಣರು,ಶಿವರಾಜ ದೇಶಮುಖ, ಸಿದ್ದಲಿಂಗಣ್ಣ ಆನೆಗುಂದಿ, ಡಾ.ಚಂದ್ರಶೇಖರ ಸುಬೇದಾರ, ಬಸವರಾಜ ಹಿರೇಮಠ, ಶರಣು ಗದ್ದುಗೆ, ಅಡಿವೆಪ್ಪ ಸಾಹು, ಸುಧೀರ ಸಾಹು ಚಿಂಚೋಳಿ, ಯುವ ಘಟಕದ ಅಧ್ಯಕ್ಷ ಶಂಭುಲಿಂಗ ಗೋಗಿ,ಸಿದ್ದಣ್ಣ ಆರಬೋಳ, ಬಸವರಾಜ ಹೇರುಂಡಿ, ಶರಣಪ್ಪ ಮುಂಡಾಸ,ವೀರಭದ್ರ ಚೌದ್ರಿ,ಬಸವರಾಜಪ್ಪಗೌಡ ತಂಗಡಗಿ, ಪರ್ವತರೆಡ್ಡಿ ಬೆಂಡೆಬೆಂಬಳಿ, ವಿಜಯಕುಮಾರ ಸ್ಥಾವರಮಠ ಹಾಗೂ ರಾಜು ಆನೆಗೊಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT