ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆ ಹೆಸರಿಗೆ ಮಾತ್ರ ಮಹತ್ವಾಕಾಂಕ್ಷಿ ಜಿಲ್ಲೆ; ಬಾರದ ನೆರವು

ಜಿಲ್ಲೆಯಿಂದ ₹32 ಕೋಟಿ ಅನುದಾನಕ್ಕೆ ಪ್ರಸ್ತಾವನೆ
Last Updated 15 ಜೂನ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಸರ್ಕಾರದ 5 ವರ್ಷಗಳ ಯೋಜನೆಯಾದ ‘ಮಹತ್ವಾಕಾಂಕ್ಷಿ ಜಿಲ್ಲೆ’ಯಡಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಯಾವುದೇ ನೆರವು ಬಂದಿಲ್ಲ. ಇದು ಹೆಸರಿಗೆ ಮಾತ್ರ ಮಹತ್ವಾಕಾಂಕ್ಷಿ ಜಿಲ್ಲೆ ಎನ್ನುವಂತಾಗಿದೆ.

ಶಿಕ್ಷಣ, ಆರೋಗ್ಯ, ಕೃಷಿ, ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಸೂಚ್ಯಂಕಗಳನ್ನು ಆಧರಿಸಿ ನೆರವು ಬರುತ್ತದೆ. ಆದರೆ, ಆರೋಗ್ಯಕ್ಕೆ ಸಂಬಂಧಿಸಿದ ವಿಶೇಷ ಅನುದಾನ ಬಂದಿಲ್ಲ.

ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆಎಲ್ಲದರಲ್ಲೂ ಕೊನೆ ಸ್ಥಾನದಲ್ಲಿದೆ. ವೈದ್ಯರು, ದಾದಿಯರು, ತಜ್ಞವೈದ್ಯರ ಕೊರತೆ ಕಾಡುತ್ತಿದೆ. ಕೆಲ ಕಡೆ ಸೂಕ್ತ ಕಟ್ಟಡವೂ ಇಲ್ಲ. ಇದೆಲ್ಲವನ್ನು ಗಮನಿಸಿದರೆ ಆರೋಗ್ಯ ಕ್ಷೇತ್ರಕ್ಕೆ ಅನುದಾನ ಹೆಚ್ಚಿನ ಮಟ್ಟದಲ್ಲಿ ಬರಬೇಕಿತ್ತು. ಆದರೆ, ಅದಾಗಿಲ್ಲ.

10ರಿಂದ 20 ಕಿ.ಮೀ ಅಂತರದಲ್ಲಿ ಆರೋಗ್ಯ ಕೇಂದ್ರಗಳು ಇವೆ. ಇದ್ದರೂ ಮುಖ್ಯರಸ್ತೆಯಿಂದ ಒಳಭಾಗದಲ್ಲಿವೆ. ಇದರಿಂದ ತುರ್ತು ಚಿಕಿತ್ಸೆಗೂ ಸಮಸ್ಯೆ ಅನುಭವಿಸಬೇಕಾಗಿದೆ. ಅಲ್ಲದೆ ಅಂಬುಲೆನ್ಸ್‌ ಕೊರತೆಯೂ ಇದೆ.

ಒಂದೇ ಸಿಟಿ ಸ್ಕ್ಯಾನ್‌ ಯಂತ್ರ: ನಗರದಲ್ಲಿ ಹೊಸ ಮತ್ತು ಹಳೆ ಜಿಲ್ಲಾಸ್ಪತ್ರೆಗಳಿದ್ದು, ಒಂದೇಒಂದೇ ಸಿಟಿ ಸ್ಕ್ಯಾನ್‌ ಯಂತ್ರ ಇದೆ. ಹೊಸ ಜಿಲ್ಲಾಸ್ಪತ್ರೆಯಿಂದ ಹಳೆ ಆಸ್ಪತ್ರೆಗೆ ರೋಗಿಗಳು ಪರೀಕ್ಷೆಗಾಗಿ ಬರಬೇಕಿದೆ. ಕೋವಿಡ್‌ ಸಂದರ್ಭದಲ್ಲಿಒಂದೇ ಸಿಟಿ ಸ್ಕ್ಯಾನ್‌ ಯಂತ್ರದಿಂದ ಸಾಮಾನ್ಯ ರೋಗಿಗಳು, ಕೋವಿಡ್‌ ಸೋಂಕಿತರಿಗೆ ಸಮಸ್ಯೆ ಉಂಟು ಮಾಡಿದೆ. ಕೇಂದ್ರ ಸರ್ಕಾರದಿಂದ ಸಿಟಿ ಸ್ಕ್ಯಾನಿಂಗ್‌ ಯಂತ್ರ ಮಂಜೂರು ಆಗಿದ್ದರೆ ಈ ಸಮಸ್ಯೆ ನೀಗುತ್ತಿತ್ತು.

‘ಕೋವಿಡ್‌ ಜಿಲ್ಲಾಸ್ಪತ್ರೆಗೆ ಕೇಂದ್ರೀಕೃತ ಕ್ರಿಮಿನಾಶಕ ಘಟಕ, ಲಾಂಡ್ರಿ ಘಟಕ, ಜಿಲ್ಲಾ ಆರೋಗ್ಯ ಕಲ್ಯಾಣ ಇಲಾಖೆಗೆ ಶಹಾಪುರ, ಸುರಪುರ ತಾಲ್ಲೂಕಿನಲ್ಲಿ ಚಿಕ್ಕಮಕ್ಕಳ ತುರ್ತು ಚಿಕಿತ್ಸಾ ಘಟಕ, ಉಪಕೇಂದ್ರ ಕೇಂದ್ರ ಕಟ್ಟಡ, ಸಮುದಾಯ ಆರೋಗ್ಯ ಕೇಂದ್ರ, ದೋಬಿ ಘಟಕ, ಮೂರು ಚಕ್ರದ ಮೊಬೈಲ್‌ ಅಂಬುಲೆನ್ಸ್, ನಾಲ್ಕು ಚಕ್ರದ ಅಂಬ್ಯುಲೆನ್ಸ್‌ ಸೇರಿದಂತೆ ಕೋವಿಡ್ ಜಿಲ್ಲಾಸ್ಪತ್ರೆಯ ವಿವಿಧ ಸಲಕರಣೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಟ್ಟಾರೆ ₹32.84 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇವುಗಳು ಮಂಜೂರಾದರೆ ಜಿಲ್ಲೆಯ ಆರೋಗ್ಯ ಕ್ಷೇತ್ರ ಉತ್ತಮ ಪಡಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌. ಅವರು.

‘ಜಿಲ್ಲೆಯನ್ನು ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಹೆಸರಿಸಿದರೆ ಸಾಲದು. ವಿವಿಧ ಕ್ಷೇತ್ರಗಳಲ್ಲಿ ಅನುದಾನ ನೀಡಬೇಕು. ಕೋವಿಡ್‌ ಸಂದರ್ಭದಲ್ಲಿ ಈ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದ್ದರೆ ಸಾವು–ನೋವು ಕಡಿಮೆ ಮಾಡಬಹುದಿತ್ತು. ಆದರೆ, ಕೇಂದ್ರ ಸರ್ಕಾರ ಕೈಬಿಟ್ಟಿದೆ. ಹೀಗಾಗಿ ಮುಂಬರುವ ದಿನಗಳಲ್ಲಾದರೂ ಹೆಸರಿಗೆ ತಕ್ಕಂತೆ ಅನುದಾನ ನೀಡಿ ಜಿಲ್ಲೆಯನ್ನು ಬಲಪಡಿಸಬೇಕು’ ಎನ್ನುತ್ತಾರೆ ನಗರ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಮಸ್ಕನಳ್ಳಿ.

‘ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಲ್ಲಿ ಸಾಲದ ಬಡ್ಡಿ ಮನ್ನಾ, ಕೃಷಿಕರಿಗೆ ಸಹಾಯಧನ, ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನಿತರ ಸೌಲಭ್ಯ ಕಲ್ಪಿಸಬೇಕು’ ಎಂದು ಜಿಲ್ಲೆಯ ಸಾರ್ವಜನಿಕರ ಆಗ್ರಹವಾಗಿದೆ.

ಸಿಎಸ್‌ಆರ್‌ ಅನುದಾನ
ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅನುದಾನದಿಂದ ಜಿಲ್ಲೆಯ ವಿವಿಧ ಸಂಘ–ಸಂಸ್ಥೆಗಳು ಯಂತ್ರಗಳನ್ನು ಪೂರೈಕೆ ಮಾಡಲಾಗಿದೆ.

ಅಜೀಂ ಪ್ರೇಮ್‌ ಜಿ ಫೌಂಡೆಷನ್‌, ಗಿವ್‌ ಇಂಡಿಯಾ, ಬಿಜೆಎಸ್‌, ಅಮೀನರೆಡ್ಡಿ ಯಾಳಗಿ ಫೌಂಡೇಷನ್‌, ಶಾಸಕ ರಾಜೂಗೌಡ, ಬಾಬುರಾವ, ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಆಮ್ಲಜನಕ ಸಾಂದ್ರಕ, ಹಾಸಿಗೆ, ಆಮ್ಲಜನಕ ಸಿಲಿಂಡರ್‌ ಸೇರಿದಂತೆ ವಿವಿಧ ಸಾಮಾಗ್ರಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ಆದರೆ, ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಅನುದಾನ ಬಂದಿಲ್ಲ.

***
ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಯಾವುದೇ ಅನುದಾನ ಬಂದಿಲ್ಲ. ವಿವಿಧ ಯೋಜನೆಗಳಿಗಾಗಿ ₹32 ಕೋಟಿ ವೆಚ್ಚದ ಸಾಮಾಗ್ರಿಗಳನ್ನು ಮಂಜೂರು ಮಾಡಲು ಪತ್ರ ಬರೆಯಲಾಗಿದೆ.
-ಡಾ.ರಾಗಪ್ರಿಯಾ ಆರ್‌, ಜಿಲ್ಲಾಧಿಕಾರಿ

***

ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಜಿಲ್ಲೆಗೆ ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಂತೆ ಮನವಿ ಮಾಡಿದ್ದೆ. ರಾಜ್ಯ ಸರ್ಕಾರದ ಮೂಲಕ ಮನವಿ ಕಳಿಸುವಂತೆ ತಿಳಿಸಲಾಗಿದೆ.
-ರಾಜಾ ಅಮರೇಶ ನಾಯಕ, ರಾಯಚೂರು ಸಂಸದ

***
ಕೋವಿಡ್‌ ಕಾಲದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಅನುದಾನ ಕೊಡಬೇಕಿತ್ತು. ಹೆಸರಿಗೆ ಮಾತ್ರ ಮಹತ್ವಾಕಾಂಕ್ಷಿ ಜಿಲ್ಲೆಯಾದರೆ ಯಾವುದೇ ಉಪಯೋಗವಿಲ್ಲ. ದೊಡ್ಡ ಯಂತ್ರಗಳಾನ್ನಾದೂ ನೀಡಬೇಕಿತ್ತು.
-ಸೋಮಶೇಖರ ಮಸ್ಕನಳ್ಳಿ, ನಗರ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT