ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಗಣೇಶ ಚತುರ್ಥಿ; ‘ಪಿಒಪಿ’ ವಿರುದ್ಧ ಪರಿಸರ ಇಲಾಖೆ ಸಮರ

ಜಿಲ್ಲಾದ್ಯಂತ 300ಕ್ಕೂ ಹೆಚ್ಚು ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮೂರ್ತಿ ವಶ
Last Updated 10 ಸೆಪ್ಟೆಂಬರ್ 2021, 6:05 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲಾದ್ಯಂತ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಪರಿಸರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ 300ಕ್ಕೂ ಹೆಚ್ಚು ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಪರಿಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಸಲಹೆ ನೀಡುತ್ತಿದ್ದಾರೆ.

ಈಗಾಗಲೇ ಸರ್ಕಾರವೇ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸದೇ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಎಂದು ಸೂಚಿಸಿದೆ. ಜಿಲ್ಲಾಡಳಿತವೂಮಣ್ಣಿಮೂರ್ತಿಗಳಿಗೆ ಉತ್ತೇಜನ ನೀಡುತ್ತಿದೆ. ಅದರಂತೆ ಪರಿಸರ ಇಲಾಖೆ ಜೊತೆಗೆ ನಗರಸಭೆ, ಪುರಸಭೆಗಳಲ್ಲಿರುವ ಪರಿಸರ ಎಂಜಿನಿಯರ್‌ಗಳ ಮೂಲಕ ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕಲಾಗುತ್ತಿದೆ.

300ಕ್ಕೂ ಹೆಚ್ಚು ವಶ:ಜಿಲ್ಲಾದ್ಯಂತ ಕಳೆದ ಎರಡು ದಿನಗಳಲ್ಲಿ 300ಕ್ಕೂ ಹೆಚ್ಚು ಪಿಒಪಿ ಮೂರ್ತಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಯಾದಗಿರಿ ನಗರಸಭೆ ವತಿಯಿಂದ 84, ಶಹಾಪುರ 66, ಸುರಪುರ 53, ಗುರುಮಠಕಲ್‌ 48, ಕೆಂಭಾವಿ 24, ಕಕ್ಕೇರಾ 18 ಸೇರಿದಂತೆ ವಿವಿಧ ಕಡೆ 300ಕ್ಕೂ ಹೆಚ್ಚು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರವೂ ದಾಳಿ ಮುಂದುವರಿಸಲಾಗುವುದು ಎಂದು ಪರಿಸರ ಇಲಾಖೆ ಅಧಿಕಾರಿಗಳು ಹೇಳುವ ಮಾತು.

ಜಲಮೂಲಗಳಲ್ಲಿ ಹಾಕುವಂತಿಲ್ಲ:ಈ ಬಾರಿ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ವೇಳೆಬಾವಿ, ಕೆರೆ ಕುಂಟೆ ಸೇರಿದಂತೆ ಜಲಮೂಲಗಳಲ್ಲಿ ಹಾಕುವಂತಿಲ್ಲ ಎಂದು ಸರ್ಕಾರ ತಿಳಿಸಿದೆ. ಇದರಿಂದ ಜಿಲ್ಲೆಯಲ್ಲಿ ಕೃತಕವಾಗಿ ಹೊಂಡಗಳನ್ನು ನಿರ್ಮಿಸಲಾಗಿದೆ.

ಯಾದಗಿರಿಯಲ್ಲಿ ಸಣ್ಣ ಕೆರೆ, ದೊಡ್ಡ ಬಳಿ, ಶಹಾಪುರದಲ್ಲಿ ಚರಬಸವೇಶ್ವರ ಕೆರೆ ಬಳಿ, ಸುರಪುರದಲ್ಲಿ ಹಳೆ ಬಾವಿ ಬಳಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ಕಡೆಮೊಬೈಲ್‌ ಟ್ಯಾಂಕ್‌ ಮೂಲಕ ವಾರ್ಡ್‌ಗಳಿಗೆ ತೆರಳಿ ಮೂರ್ತಿಗಳನ್ನು ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ.

ಮೂರು ಮಾದರಿ ಸಂಗ್ರಹ:ಪರಿಸರ ಇಲಾಖೆ ವತಿಯಿಂದ ಗುರುವಾರ ಮೂರು ಮಾದರಿಯ ನೀರನ್ನು ಸಂಗ್ರಹಿಸಿ ರಾಯಚೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

2 ಲೀಟರ್‌ ಕ್ಯಾನ್‌ನಲ್ಲಿ ಕೆರೆ, ಕಲ್ಯಾಣಿಗಳ ನೀರು, ಅರ್ಧ ಲೀಟರ್‌ನಲ್ಲಿ ಮಣ್ಣಿನಲ್ಲಿರುವ ಖನಿಜಗಳು, ಮತ್ತೊಂದು ಅರ್ಧ ಲೀಟರ್‌ ಮಣ್ಣನ್ನು ತೆಗೆದುಕೊಳ್ಳಲಾಗಿದೆ. ಇದರ ಮೂಲಕ ಗಣೇಶ ವಿರ್ಸಜನೆಗೆ ಮುನ್ನ, ನಂತರದ ದಿನಗಳಲ್ಲಿ ಮಾದರಿ ಸಂಗ್ರಹ ಮಾಡುವುದರಿಂದ ನೀರಿನ ಗುಣಮಟ್ಟ ತಿಳಿಯಲು ಸಾಧ್ಯವಾಗುತ್ತದೆ.

ಬಸ್‌ಗಳಿಗೆ ಸ್ಟಿಕರ್‌:ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲು ಈಗಾಗಲೇ ಜಿಲ್ಲೆಯಲ್ಲಿ ಬಸ್‌, ನಾಲ್ಕು ಚಕ್ರದ ವಾಹನ, ಅಲ್ಲದೇ ವಿವಿಧ ಕಾರ್ಖಾನೆ, ದೊಡ್ಡ ಅಂಗಡಿಗಳಲ್ಲೂ ಸ್ಟಿಕರ್‌ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎನ್ನುತ್ತಾರೆ ಪರಿಸರ ಇಲಾಖೆ ಅಧಿಕಾರಿ ಸಣ್ಣ ವೆಂಕಟೇಶ.

ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಸಲಹೆ:ಪಿಒಪಿ ಗಣೇಶ ಮೂರ್ತಿ ಜನ–ಜಾನುವಾರುಗಳಿಗೂ ಮಾರಕವಾಗಿದೆ. ಹೀಗಾಗಿ ಇದರ ಬದಲು ನೀರಿನಲ್ಲಿ ಕರಗುವ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಂತೆ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಪರಿಸರ ಇಲಾಖೆ ಅಧಿಕಾರಿಗಳು ಶುದ್ಧ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.

‘ರಸಾಯನಿಕ ಬಣ್ಣದಿಂದ ನಿರ್ಮಿಸಿದ ಮೂರ್ತಿಗಳು ನೀರಿನಲ್ಲಿ ಬೇಗ ಕರಗುವುದಿಲ್ಲ. ಅಲ್ಲದೇ ಅವು ಜಲಮೂಲದಲ್ಲಿ ಸೇರಿದರೆ ಅಂಥ ನೀರನ್ನು ಸೇವಿಸಿದ ಜನ–ಜಾನುವಾರಿಗೆ ರೋಗ ಬರುವುದು ಖಂಡಿತ. ಹೀಗಾಗಿ 2016ರಲ್ಲೇ ಸುಪ್ರೀಂ ಕೋರ್ಟ್‌ ಪಿಒಪಿ ಮೂರ್ತಿಗಳನ್ನು ನಿಷೇಧಿಸಿದೆ. ಆದರೂ ಕೆಲವರು ಮಾರಾಟ ಮಾಡುತ್ತಿದ್ದಾರೆ. ಇವರಲ್ಲಿ ಜಾಗೃತಿ ಬಂದರೆ ಪರಿಸರ ಹಾಳಾಗುವುದು ತಪ್ಪಲಿದೆ’ ಎನ್ನುತ್ತಾರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸಣ್ಣ ವೆಂಕಟೇಶ ಸನಬಾಳ ಅವರು.

ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ
ಕಳೆದ ವರ್ಷದಿಂದ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಕಡಿಮೆಯಾಗಿದೆ. ಅಲ್ಲದೇ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಹಲವಾರು ಷರತ್ತುಗಳನ್ನು ಕಳೆದ ವರ್ಷದಿಂದ ವಿಧಿಸುತ್ತಿದೆ. ಇದರಿಂದ ಈ ವರ್ಷ ಮನೆಗಳಲ್ಲೇ ಜನರು ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ.

ನಗರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವಿಜಯ ವಿಠ್ಠಲ ಸೇವಾ ಸಂಸ್ಥೆಯವರು ಉಚಿತವಾಗಿ ಸಾರ್ವಜನಿಕರಿಗೆ ಮಣ್ಣಿನ ಮೂರ್ತಿಗಳನ್ನು ವಿತರಿಸುತ್ತಿದ್ದರೆ, ಚಿತ್ರಕಲಾ ಶಿಕ್ಷಕರು ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಣ್ಣದಿಂದ ಕೂಡಿದ ಮೂರ್ತಿಗಳಿಗಿಂತ ಶುದ್ಧ ಮಣ್ಣಿನ ಮೂರ್ತಿಗಳಿಗೆ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ.

**

ಕಳೆದ ವರ್ಷದಿಂದ ಪಿಒಪಿ ಮೂರ್ತಿಗಳ ಮಾರಾಟ ಗಣನೀಯವಾಗಿ ತಗ್ಗಿದೆ. ಸಾರ್ವಜನಿಕರಲ್ಲಿ ಈ ಬಗ್ಗೆಯೂ ಜಾಗೃತಿಯೂ ಅವಶ್ಯ.
-ಸಣ್ಣ ವೆಂಕಟೇಶ ಸನಬಾಳ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ

***

ಗಣೇಶೋತ್ಸವದಲ್ಲಿ ಪರಿಸರಕ್ಕೆ ಮಾರಕವಾಗುವ ಮೂರ್ತಿಗಳು ಬೇಡ. ಡಿಜೆ, ಮೆರವಣಿಗೆ ನಿಷೇಧಿಸಲಾಗಿದೆ. 20 ಜನಕ್ಕಿಂತ ಹೆಚ್ಚು ಜನ ಸೇರಬಾರದು.
-ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT