ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಔಷಧೀಯ ಸಸ್ಯಗಳ ಸಿರಿ ಆಸ್ಪತ್ರೆ ಅಂಗಳ

ಮೈಲಾಪುರದಲ್ಲಿ ಔಷಧಿ ಸಸ್ಯಗಳ ಸಂರಕ್ಷಣೆ, ಮಳೆ ಕೊಯ್ಲು ಅಳವಡಿಕೆ
Last Updated 1 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಮೈಲಾಪುರ (ಯಾದಗಿರಿ): ತಾಲ್ಲೂಕಿನ ಮೈಲಾಪುರ ಸರ್ಕಾರಿ ಹೋಮಿಯೋಪಥಿಕ್‌ ಚಿಕಿತ್ಸಾಲಯ ಆವರಣದಲ್ಲಿ 25 ರಿಂದ 30 ಔಷಧಿ ಗುಣವುಳ್ಳ ಸಸ್ಯಗಳು ಬೆಳೆದು ನಿಂತು ಸುವಾಸನೆ ಬೀರುತ್ತಿವೆ. ನೋಡುಗರ ಕಣ್ಣಿಗೂ ಮುದ ನೀಡುತ್ತಿವೆ.

ಆವರಣದೊಳಗೆ ಪ್ರವೇಶಿಸುತ್ತಲೇ ವಿವಿಧ ಜಾತಿಯ ಸಸಿಗಳು ಸ್ವಾಗತಿಸುತ್ತವೆ. ಮಳೆ ಕಾಡುಗಳಲ್ಲಿ ಬೆಳೆಯುವ ಸಸಿ, ಗಿಡಗಳು ಇಲ್ಲಿವೆ. 80X40 ಜಾಗದಲ್ಲಿ ಚಿಕಿತ್ಸಾಲಯ, ಔಷಧಿ ಸಸ್ಯಗಳು ದಟ್ಟವಾಗಿ ಬೆಳೆದು ನಿಂತಿವೆ.

ನರೇಗಾ ಯೋಜನೆಯಡಿ ಕಾಮಗಾರಿ:

ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಂಡು ಸಸಿಗಳನ್ನು ಪೋಷಿಸಲಾಗಿದೆ. ಹಿಂಭಾಗದ ಖಾಲಿ ಜಾಗದಲ್ಲಿ ಆಳವಾದ ತಗ್ಗು ಬಿದ್ದಿದ್ದು, ಅದನ್ನು ಮುಚ್ಚಿ ಔಷಧೀಯ ಸಸಿಗಳು ನೆಡಲಾಯಿತು. ವೈದ್ಯಾಧಿಕಾರಿಗೆ ಪಂಚಾಯಿತಿ ಸದಸ್ಯರು ಸಾಥ್‌ ನೀಡಿದ್ದರು. ಅದರ ಪ್ರತಿಫಲವಾಗಿ ಇಂದು ಸಸ್ಯಗಳ ಸಿರಿ ಆವರಿಸಿದೆ.

ಮಳೆ ನೀರು ಕೊಯ್ಲು: ಮಳೆ ನೀರು ಕೊಯ್ಲು ಆರಂಭಿಸಲಾ ಗಿದ್ದು, 1,000 ಲೀಟರ್‌ ನೀರು ಸಂಗ್ರಹಿಸುವ ಸಾಮರ್ಥ್ಯದ ಸಂಪು ನಿರ್ಮಿ ಸಲಾಗಿದೆ. ಇದಕ್ಕೆ ₹1.50 ಸಾವಿರ ಖರ್ಚು ಮಾಡಲಾಗಿದೆ. ಇದರಲ್ಲಿನ ನೀರನ್ನು ನಿತ್ಯ ಸಸಿಗಳಿಗೆ ಉಣಿಸಲಾಗುತ್ತಿದೆ.

ಎಲ್ಲೆಲ್ಲಿ ಆಯುಷ್‌ ಆಸ್ಪತ್ರೆಗಳಿವೆ?:

ಯಾದಗಿರಿ ತಾಲ್ಲೂಕಿನ ಹೊನಗೇರಾ, ಹತ್ತಿಕುಣಿ ಮತ್ತು ಗುರುಮಠಕಲ್‌ ತಾಲ್ಲೂಕಿನ ಮಾಧ್ವರ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸಾಲಯಗಳಿದ್ದರೇ ಯಾದಗಿರಿ, ಶಹಾಪುರ ತಾಲ್ಲೂಕಿನಲ್ಲಿ ಆಯುರ್ವೇದ ಆಸ್ಪತ್ರೆಗಳಿವೆ.

ಯಾದಗಿರಿ ನಗರ, ಸೈದಾ‍ಪುರ, ಶಹಾಪುರ ತಾಲ್ಲೂಕಿನ ವನದುರ್ಗ ಹಾಗೂ ಸುರಪುರ ತಾಲ್ಲೂಕಿನ ರಂಗಪೇಟ–ತಿಮ್ಮಾಪುರದಲ್ಲಿ ಯುನಾನಿ ಆಸ್ಪತ್ರೆ ಮತ್ತು ಚಿಕಿತ್ಸಾಲಯ ಇವೆ.

ಯಾದಗಿರಿ ನಗರ, ಮೈಲಾಪುರ, ಬಾಡಿಯಾಳ, ಬದ್ದೇಪಲ್ಲಿ ಮತ್ತು ವಡಗೇರಾ ತಾಲ್ಲೂಕಿನ ನಾಯ್ಕಲ್‌, ತುಮಕೂರು, ಕೊಂಕಲ್‌ ಹಾಗೂ ಸುರಪುರ ತಾಲ್ಲೂಕಿನ ಯಡಿಯಾಪುರ ಮತ್ತು ದೇವರಗೋನಾಲದಲ್ಲಿ ಹೋಮಿಯೋಪಥಿಕ್‌ ಆಸ್ಪತ್ರೆ, ಚಿಕಿತ್ಸಾಲಯಗಳಿವೆ.

ಆದರೆ ಕೆಲ ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳು ಇಲ್ಲ. ‘ಡಿ’ ಗ್ರೂಪ್‌ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತಿಲ್ಲ. ಇದರಿಂದಾಗಿ ಖಾಲಿ ಹುದ್ದೆಗಳು ಭರ್ತಿ ಆಗುತ್ತಿಲ್ಲ.

‘ಔಷಧಿ ಸಸಿಗಳನ್ನು ಬೇರೆ ಭಾಗದಿಂದ ತಂದು ನಾಟಿ ಮಾಡಲಾಗಿದೆ. ಅವುಗಳ ಬಗ್ಗೆ ತಜ್ಞರಿಂದ ತರಬೇತಿ ನೀಡಿ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಲಾಗುವುದು. ಔಷಧಿ ಸಸಿಗಳನ್ನು ಒಣಗಿಸಿ ಕಷಾಯ ಮಾಡಿಕೊಂಡು ಕುಡಿಯಬೇಕು. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ, ಕೋವಿಡ್‌ ಕಾಲದಲ್ಲಿ ಅನೇಕರುಆಯುಷ್‌ ಇಲಾಖೆ ನೀಡಿದ್ದ ಕಷಾಯ ಸೇವಿಸಿದ್ದರು. ಇಲ್ಲಿರುವ ಸಸಿಗಳಿಂದ ಔಷಧಿ ತಯಾರಿಸಬಹುದು’ ಎನ್ನುತ್ತಾರೆ ವೈದ್ಯಾಧಿಕಾರಿ ಡಾ.ಪ್ರಕಾಶ ರಾಜಾಪುರ. ***

ಅಂಕಿ ಅಂಶ

ಜಿಲ್ಲೆಯಲ್ಲಿರುವ ಆಸ್ಪತ್ರೆ, ಚಿಕಿತ್ಸಾಲಯ ವಿವರ
ಆಸ್ಪತ್ರೆಗಳ ಸಂಖ್ಯೆ;4
ಯೂನಾನಿ;2
ಆಯುರ್ವೇದ;2
ಚಿಕಿತ್ಸಾಲಯಗಳು;16

ಯಾವ್ಯಾವು ಔಷಧಿ ಸಸ್ಯಗಳಿವೆ?

ಮೈಲಾಪುರ ಸರ್ಕಾರಿ ಹೋಮಿಯೋಪಥಿಕ್‌ ಚಿಕಿತ್ಸಾಲಯದಲ್ಲಿ ಪಾರಿಜಾತ, ಬಿಳಿ ದಾಸವಾಳ, ಕೆಂಪು, ನೆಲನೆಲ್ಲಿ, ಕಾಡು ನೆಲ್ಲಿ, ಊರು ನೆಲ್ಲಿ, ಅಮೃತಬಳ್ಳಿ, ಆಸ್ಥಿಶುಂಕಲ, ಲೋಳೆಸರ, ನುಗ್ಗೆ ಗಿಡ, ಶಂಕರಪುಷ್ಟಿ, ರಾಮ ತುಳಿಸಿ, ಕೃಷ್ಣ ತುಳಸಿ, ನಂದಿ ಬಟ್ಟಲು, ನಿಂಬೆ, ಪಪ್ಪಾಯ, ವೀಳ್ಯದೆಲೆ, ನಿಂಬೆ ಹುಲ್ಲು (ಮಜ್ಜಿಗೆ ಹುಲ್ಲು), ಇನ್ಸುಲೆನ್ಸ್‌ ಪ್ಲಾಂಟ್‌, ಊರ ಔಡಲ, ಕಾಡು ಔಡಲ, ಬಸಳೆಸೊಪ್ಪು, ಹಲಸು, ಸಿಂಬಳಹಣ್ಣು, ಆಡು ಮುಟ್ಟದ ಸೋಗೆ, ಬಿಲ್ವಪತ್ರೆ, ಬಕುಳ, ಲಕ್ಕಿಗಿಡ, ಎಕ್ಕೆ ಗಿಡ, ಬೋಗವಿಲ್ಲಿ, ಪಾಪಸ್‌ಕಳ್ಳಿ, ಈಚಲ, ಪುಂಡಿಪಲ್ಯೆ, ಟೊಮೆಟೊ, ಚವಳೆಕಾಯಿ, ನೇರಳೆ, ಪೇರಲ, ಗುಡಮಾಲ, ಪರ್ಣಬೀಜ, ಉತ್ತರಾಣಿ, ಲಕ್ಷ್ಮಣ ಫಲ ಮುಂತಾದ ಸಸ್ಯಗಳಿವೆ.

* ಮೈಲಾಪುರದ ಹೋಮಿಯೋಪಥಿಕ್‌ ಚಿಕಿತ್ಸಾಲಯದಲ್ಲಿ ಔಷಧಿ ಗುಣವುಳ್ಳ ಸಸ್ಯಗಳನ್ನು ಬೆಳೆಸಲು ಗ್ರಾಮಸ್ಥರು ಸಹಕಾರ ನೀಡಿದ್ದಾರೆ.

-ಡಾ.ಪ‍್ರಕಾಶ ರಾಜಾಪುರ, ವೈದ್ಯಾಧಿಕಾರಿ

* ಚಿಕಿತ್ಸಾಲಯದಲ್ಲಿ ಔಷಧಿ ಸಸ್ಯಗಳ ಪಾಲನೆ, ನೀರುಣಿಸುವುದು ಇತ್ಯಾದಿ ಕೆಲಸ ಮಾಡುತ್ತೇನೆ. ಒಂದೊಂದು ಬಗೆಬಗೆಯಲ್ಲಿ ವಾಸನೆ ಬೀರುತ್ತಿವೆ.

-ಬಸಯ್ಯ ನೂಲಿ ಕೆಲಸಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT