ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣ ಕಹಳೆ ಮೊಳಗಿಸಿದ ಸೇನಾನಿಗಳು

ನಿಜಾಮ ಕಪಿಮುಷ್ಠಿಯಿಂದ ಹೊರಬರಲು ಎರಡು ಬಾರಿ ಹೋರಾಟ
Published 17 ಸೆಪ್ಟೆಂಬರ್ 2023, 7:19 IST
Last Updated 17 ಸೆಪ್ಟೆಂಬರ್ 2023, 7:19 IST
ಅಕ್ಷರ ಗಾತ್ರ

ಯಾದಗಿರಿ: ಹೈದರಾಬಾದ್ ಕರ್ನಾಟಕ ಪ್ರದೇಶ ವಿಮೋಚನೆ ಅತ್ಯಂತ ರೋಚಕವಾಗಿದೆ. 1947ರ ಆಗಸ್ಟ್ 15ರಂದು ದೇಶದೆಲ್ಲೆಡೆ ಜನತೆ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದರೆ, ಹೈದರಾಬಾದ್ ಪ್ರಾಂತ್ಯದಲ್ಲಿ ಮಾತ್ರ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ರಣ ಕಹಳೆ ಮೊಳಗಿಸುವ ಗುರುತರ ಜವಾಬ್ದಾರಿಯನ್ನು ನಾಯಕರು ಸಿದ್ಧಪಡಿಸಿದ್ದರು.

ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಿಜಾಮನ ಕಪಿಮುಷ್ಠಿಯಿಂದ ಹೊರ ಬರಲು 13 ತಿಂಗಳುಗಳೇ ಬೇಕಾಯಿತು. ಇದಕ್ಕಾಗಿ ಹೋರಾಟಗಾರರು ವೃತ್ತಿಯಲ್ಲಿ ಕೃಷಿಕರಾಗಿದ್ದರೂ ಪ್ರವೃತ್ತಿಯಲ್ಲಿ ವಿಮೋಚನಾ ಹೋರಾಟಗಾರರಾಗಿ ರೂಪುಗೊಂಡಿದ್ದರು.

ಹೈದರಾಬಾದ್ ಸಂಸ್ಥಾನದ ವಿರುದ್ಧ ನಡೆದ ಹೋರಾಟದಲ್ಲಿ ‘ವಂದೇ ಮಾತರಂ‘ ಘೋಷಣೆ ಪ್ರಮುಖ ಸ್ಥಾನ ವಹಿಸಿ ಹೋರಾಟಕ್ಕೆ ಸ್ಫೂರ್ತಿ ನೀಡಿತು. ನಿಜಾಮ ಸರ್ಕಾರದ ರಜಾಕಾರರು ಜನರ ಮೇಲೆ ಬಲವಂತವಾದ ಹೇರಿಕೆಗಳನ್ನು ಹಾಕಿದ್ದರು. ಪರಿಣಾಮ ಜನರು ದಂಗೆ ಏಳುವಂತೆ ಆಯಿತು.

ಜಿಲ್ಲೆಯಲ್ಲಿ ಮುಖ್ಯವಾಗಿ ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ ಅವರ ಮುಂಚೂಣಿ ನಾಯಕತ್ವದಲ್ಲಿ ಅನೇಕ ಹೋರಾಟಗಾರರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ವಿಶ್ವನಾಥ ರೆಡ್ಡಿ ಮುದ್ನಾಳ, ಕೋಲೂರು ಮಲ್ಲಪ್ಪ, ವಿರೂಪಾಕ್ಷಪ್ಪ, ಮಲ್ಲಣ್ಣ ಅಂಬಿಗರ, ವಿದ್ಯಾಧರ ಗುರೂಜಿ, ಚಂಡ್ರಿಕಿ ಜಗನ್ನಾಥ ರಾವ್, ಚಟ್ನಳ್ಳಿ ವೀರಣ್ಣ, ಈಶ್ವರಲಾಲ್ ಮುಂತಾದ ಹೋರಾಟಗಾರರು ಈ ಭಾಗದಿಂದ ಮುಂಚೂಣಿಯಲ್ಲಿದ್ದರು. ಇವರ ದೇಶಪ್ರೇಮ, ತ್ಯಾಗ, ಛಲ, ಶ್ರದ್ಧೆ ಅಮೋಘವಾದುದು.

ಶಹಾಪುರ ತಾಲ್ಲೂಕಿನ ಅಚ್ಚಪ್ಪಗೌಡ ಸುಬೇದಾರ ನೇತೃತ್ವದಲ್ಲಿ ಹಲವು ನಾಯಕರು ಹೆಗಲೇಣಿಯಾಗಿದ್ದರು. ಅದರಲ್ಲಿ ಮುಖ್ಯವಾಗಿ ಶಂಕರಯ್ಯ ಸ್ವಾಮಿ, ಸೋಪಣ್ಣ, ತಿಮ್ಮಣ್ಣ ಕೈನೂರ್, ಶರಣಪ್ಪ, ವಿಠಲರಾವ್, ಯಲ್ಲಪ್ಪ ಗಲಗ, ಮಲ್ಲಣ್ಣ ಪ್ರಮುಖರು ವಿಮೋಚನೆಯ ಹೋರಾಟದಲ್ಲಿ ತಮ್ಮದೆ ಆದ ಪಾತ್ರ ನಿರ್ವಹಿಸಿದ್ದರು.

‘ಜಿಲ್ಲಾಡಳಿತವು ವಿಮೋಚನೆಯಲ್ಲಿ ಹೋರಾಟ ನಡೆಸಿದ ನಾಯಕರ ಸಂಪೂರ್ಣವಾದ ಮಾಹಿತಿಯ ಕೈಪಿಡಿ ಹೊರ ತರಬೇಕು. ಅವರ ಕುಟುಂಬದ ಸದಸ್ಯರಿಗೆ ಉಚಿತ ಶಿಕ್ಷಣ, ಪತ್ನಿಯರಿಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಬೇಕು. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ವೇಳೆ ಮಾತೆಯರನ್ನು ಕರೆಯಿಸಿ ಗೌರವಿಸಿ ಯುವ ಪೀಳಿಗೆಗೆ ಮಾಹಿತಿ ಹಂಚುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿ’ ಎಂದು ಹಿರಿಯರಾದ ಭಾಸ್ಕರರಾವ ಮುಡಬೂಳ ಸಲಹೆ ನೀಡಿದ್ದಾರೆ.

ಹೋರಾಟಗಾರರ ಕುಟುಂಬಗಳಿಗೆ ಸರ್ಕಾರದಿಂದ ಪಿಂಚಣಿ ಹೊರತುಪಡಿಸಿ ಬೇರಾವುದೇ ಸೌಲಭ್ಯಗಳು ದೊರಕುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.

ಜುನಾಗಢ, ಜಮ್ಮು-ಕಾಶ್ಮೀರ, ಹೈದರಾಬಾದ್– ಈ ಮೂರು ರಾಜ್ಯಗಳ ರಾಜರು ಭಾರತದ ಒಕ್ಕೂಟಕ್ಕೆ ಸವಾಲು ಹಾಕಿದಾಗ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು ಸೈನ್ಯ ಬಳಸಿ, ರಾಜ್ಯಗಳನ್ನು ನಿಯಂತ್ರಣಕ್ಕೆ ಪಡೆದು, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು.

****

ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ

ವಿಶ್ವನಾಥರೆಡ್ಡಿ ಮುದ್ನಾಳ
ವಿಶ್ವನಾಥರೆಡ್ಡಿ ಮುದ್ನಾಳ
ಮಲ್ಲಣ್ಣ ಅಂಬಿಗೇರ
ಮಲ್ಲಣ್ಣ ಅಂಬಿಗೇರ
ವಿದ್ಯಾಧರ ಗುರೂಜಿ
ವಿದ್ಯಾಧರ ಗುರೂಜಿ
ಜಗನ್ನಾಥರಾವ ಚಂಡ್ರಕಿ
ಜಗನ್ನಾಥರಾವ ಚಂಡ್ರಕಿ
ರಾಮಗಿರಿ ಮಹಾರಾಜ 
ರಾಮಗಿರಿ ಮಹಾರಾಜ 
ವಿಮೋಚನಾ ಹೋರಾಟಕ್ಕೆ ಪ್ರೇರಣೆ ಮಾರ್ಗದರ್ಶನ ನೀಡಿದ್ದ ರಾಮಗಿರಿ ಮಹಾರಾಜರು ತಮ್ಮ ಶಿಷ್ಯರೊಂದಿಗೆ. (ಕುಳಿತವರು) ಬುಜಂಗರಾವ್ ಕಾಶೀಗಾಂವ್ ಮಾಣಿಕಪ್ಪ ಕಾಮಿನ್ ವಿಠ್ಠಪ್ಪ ಬುದ್ಧಿ ಸುಭಾಶ ಹೌಜಿ (ನಿಂತವರು) ಶೇಷರಾವ ಕಂಬದ ಹಣಮಂತರಾವ ಗೋಂಗ್ಲೆ ಬುಡ್ಡಪ್ಪ ಹೌಜಿ ಲುಂಗಣ್ಣ ನೌದಿ ವೆಂಕಟರಾವ ಹೌಜಿ ಲಕ್ಷ್ಮಣರಾವ ಪಾಂಚಾಳ
ವಿಮೋಚನಾ ಹೋರಾಟಕ್ಕೆ ಪ್ರೇರಣೆ ಮಾರ್ಗದರ್ಶನ ನೀಡಿದ್ದ ರಾಮಗಿರಿ ಮಹಾರಾಜರು ತಮ್ಮ ಶಿಷ್ಯರೊಂದಿಗೆ. (ಕುಳಿತವರು) ಬುಜಂಗರಾವ್ ಕಾಶೀಗಾಂವ್ ಮಾಣಿಕಪ್ಪ ಕಾಮಿನ್ ವಿಠ್ಠಪ್ಪ ಬುದ್ಧಿ ಸುಭಾಶ ಹೌಜಿ (ನಿಂತವರು) ಶೇಷರಾವ ಕಂಬದ ಹಣಮಂತರಾವ ಗೋಂಗ್ಲೆ ಬುಡ್ಡಪ್ಪ ಹೌಜಿ ಲುಂಗಣ್ಣ ನೌದಿ ವೆಂಕಟರಾವ ಹೌಜಿ ಲಕ್ಷ್ಮಣರಾವ ಪಾಂಚಾಳ
ಯಾದಗಿರಿ ನಗರದ ಕೋಲೂರು ಮಲ್ಲಪ್ಪ ಸಮಾಧಿ 
ಯಾದಗಿರಿ ನಗರದ ಕೋಲೂರು ಮಲ್ಲಪ್ಪ ಸಮಾಧಿ 
ಜಿಲ್ಲೆಯಲ್ಲಿ 19 ಜನ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರಿಗೆ ಪಿಂಚಣಿ ಸೌಲಭ್ಯ ಒದಗಿಸಿಕೊಡಲಾಗಿದೆ. ಪಿಂಚಣಿ ಬರದಿದ್ದರೆ ನಮ್ಮ ಕಚೇರಿಯನ್ನು ಸಂಪರ್ಕಿಸಬಹುದು
ಶರಣಬಸಪ್ಪ ಕೋಟಪ್ಪಗೋಳ ಹೆಚ್ಚುವರಿ ಜಿಲ್ಲಾಧಿಕಾರಿ
ಕೋಲೂರು ಮಲ್ಲಪ್ಪ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ₹2 ಕೋಟಿ ನೀಡಿದೆ. ಈಗ ಬ್ಯಾಂಕ್‌ನಲ್ಲಿ ₹70 ಲಕ್ಷ ಬಡ್ಡಿ ಜಮಾ ಆಗಿದೆ. ಜಾಗದ ಸಮಸ್ಯೆ ಇರುವುದರಿಂದ ಸ್ಮಾರಕ ನಿರ್ಮಾಣ ಸಾಧ್ಯವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳ ಮಾಹಿತಿ ನೀಡಿದ್ದು ಜಾಗ ಸಿಕ್ಕರೆ ಸ್ಮಾರಣ ನಿರ್ಮಾಣವಾಗಲಿದೆ
ಉತ್ತರದೇವಿ ಮಠಪತಿ ಸಹಾಯಕ ನಿರ್ದೇಶಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

19 ಜನರಿಗೆ ಪಿಂಚಣಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರರಿಗೆ ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸಿದೆ. ಲಕ್ಷ್ಮೀಬಾಯಿ ಜೀವನ್ ಮಲ್ಲಮ್ಮ ಸೀತಾರಾಮಪ್ಪ ಸೀತಾಬಾಯಿ ಭೀಮಸೇನ್ ರಾವ್ ಮಲ್ಲಮ್ಮ ಮಲ್ಲಣ್ಣ ಯಶೋಧಬಾಯಿ ಲಕ್ಷ್ಮಣ್ ರಾವ್ ಲಕ್ಷ್ಮಿಬಾಯಿ ಮಲ್ಲಪ್ಪ ರತ್ನಮ್ಮ ರಾಮರೆಡ್ಡಿ ಮಾಲಿಪಾಟೀಲ ಸಿದ್ಲಿಂಗಮ್ಮ ಈರಯ್ಯ ಹಿರೇಮಠ ಸಂಗಮ್ಮ ಬಸಲಿಂಗಪ್ಪ ಸಂಗಪ್ಪ ಬಸಪ್ಪ ಮಂಟೆ ಮಲ್ಲಮ್ಮ ಯಂಕನಗೌಡ ಬಸಮ್ಮ ಬಸವರಾಜಪ್ಪ ಮಹಾಂತಮ್ಮ ಶಂಕ್ರಯ್ಯ ಸ್ವಾಮಿ ಗಂಗಮಾಳಮ್ಮ ಸೋಪಣ್ಣ ಮಲ್ಲಮ್ಮ ತಿಮ್ಮಣ್ಣ ಕೈನೊರ ಶಿವಕಾಂತಮ್ಮ ಶರಣಪ್ಪ ಸೀತಾಬಾಯಿ ವಿಠಲ್ ರಾವ್ ನರಸಮ್ಮ ಯಲ್ಲಪ್ಪ ಗಲಗ ಗೌರಮ್ಮ ಮಲ್ಲಣ್ಣ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರ ಗೌರವ ಧನ ಹಾಗೂ ಕುಟುಂಬ ಪಿಂಚಣಿ ಫಲಾನುಭವಿಗಳು ಆಗಿದ್ದಾರೆ. ಪ್ರತಿ ತಿಂಗಳು ಪಿಂಚಣಿಯು ಅವರ ಖಾತೆಗೆ ಜಮಾ ಆಗುತ್ತಲಿದೆ ಎನ್ನುತ್ತಾರೆ ಅವರ ಕುಟುಂಬ ಸದಸ್ಯರು.

ರಜಾಕಾರರನ್ನು ಬಗ್ಗು ಬಡೆಯುತ್ತಿದ್ದ ಈರಯ್ಯ ಈರಯ್ಯ ಹಿರೇಮಠ ಕೊಡೇಕಲ್‌ನವರು. ವಿರುಪಾಕ್ಷಪ್ಪ ರಾಜನಕೋಳೂರು ಅವರ ನೇತೃತ್ವದಲ್ಲಿ ನಿಜಾಮರ ವಿರುದ್ಧ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಹಲವು ಬಾರಿ ರಜಾಕಾರರ ವಿರುದ್ಧ ನೇರವಾಗಿ ಹೋರಾಡಿದ್ದಾರೆ. ಗಂಭೀರ ಗಾಯಗೊಂಡಿದ್ದಾರೆ. ಸೂಕ್ಷ್ಯ ಸನ್ನಿವೇಶಗಳಲ್ಲಿ ಭೂಗತರಾಗಿದ್ದಾರೆ. 1999ರಲ್ಲಿ ನಿಧನರಾದರು. ಈರಯ್ಯ ಜೀವಂತವಿದ್ದಾಗಲೇ ಅವರ ಮೊದಲ ಪತ್ನಿ ಮತ್ತು ಪುತ್ರ ನಿಧನರಾದರು. ಸಿದ್ದಲಿಂಗಮ್ಮ ಅವರನ್ನು ಎರಡನೇ ಪತ್ನಿಯಾಗಿ ಮದುವೆಯಾಗುತ್ತಾರೆ. ತಮ್ಮ ನಂತರ ಪಿಂಚಣಿ ಸಿದ್ದಲಿಂಗಮ್ಮ ಅವರಿಗೆ ಸಿಗುವ ವ್ಯವಸ್ಥೆ ಮಾಡಿದ್ದಾರೆ. ಸಿದ್ದಲಿಂಗಮ್ಮ ಅವರಿಗೂ ಮಕ್ಕಳಿಲ್ಲ. 2016ರಲ್ಲಿ ಅವರ ಮನೆ ಮಳೆಗೆ ಬೀಳುತ್ತದೆ. ಆಗ ಕೇಂದ್ರ ಸರ್ಕಾರದ ಪಿಪಿಒ ಪಿಂಚಣಿ ಪ್ರತಿ ಕಳೆದುಹೋಗುತ್ತದೆ. ಕಾರಣ 2017 ರಿಂದ ಅವರಿಗೆ ಕೇಂದ್ರ ಸರ್ಕಾರದ ಮಾಸಾಶನ ಸಿಗುತ್ತಿಲ್ಲ. ಈಚೆಗೆ ಕೊಡೇಕಲ್‌ದಲ್ಲಿರುವ ಮನೆ ಮಾರಿ ತವರುಮನೆ ದೇವಾಪುರಕ್ಕೆ ಆಗಮಿಸಿ ಅಲ್ಲಿ ಪುಟ್ಟ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಸಧ್ಯ ರಾಜ್ಯ ಸರ್ಕಾರದ ಪಿಂಚಣಿ ₹10 ಸಾವಿರ ಮಾತ್ರ ದೊರೆಯುತ್ತಿದೆ. ಉಪಜೀವನಕ್ಕೆ ಪಿಂಚಣಿಯೊಂದೆ ಆಸರೆ. ವೃದ್ಧ ತಾಯಿ ಸಿದ್ದಲಿಂಗಮ್ಮ ಅವರ ಜೊತೆಗಿದ್ದಾರೆ. ‘ಕೇಂದ್ರ ಸರ್ಕಾರದ ಪಿಂಚಣಿ ಕುರಿತು ಜಿಲ್ಲಾಧಿಕಾರಿ ತಹಶೀಲ್ದಾರ್ ಅವರಿಗೆ ಭೇಟಿ ಆಗಿದ್ದೇನೆ. ಹಲವು ಬಾರಿ ದೆಹಲಿಗೆ ಹೋಗಿ ಬಂದಿದ್ದೇನೆ. ನಮ್ಮಲ್ಲಿರುವ ದಾಖಲೆಗಳನ್ನು ಕೊಟ್ಟಿದ್ದೇನೆ. ಪಿಂಚಣಿ ಮತ್ತೆ ಸಿಗುವ ಅಶಾಭಾವನೆ ಇದೆ ಎನ್ನುತ್ತಾರೆ’ ಸಿದ್ದಲಿಂಗಮ್ಮ ಅವರ ಭಾವನ ಮಗ ಶರಣಯ್ಯ.

ಹೈ.ಕ. ವಿಮೋಚನೆಗೆ ಸುರಪುರದ ಅನನ್ಯ ಕೊಡುಗೆ ಸುರಪುರ: ಸ್ವಾತಂತ್ರ್ಯ ಚಳವಳಿ ಮತ್ತು ಹೈದರಾಬಾದ್‌ ವಿಮೋಚನಾ ಹೋರಾಟಕ್ಕೆ ಸುರಪುರ ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿನ ಚಳವಳಿಗಾರರು ತಮ್ಮ ಕೆಚ್ಚೆದೆಯ ಹೋರಾಟದ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಇಲ್ಲಿನ ಗೋಸಲ ವಂಶದ ಅರಸ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಇಡೀ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದರು. ಈ ಪ್ರೇರಣೆಯೇ ಇಲ್ಲಿ ಹೋರಾಟದ ಕಿಚ್ಚು ಹಚ್ಚಿಕೊಂಡು ಚಳವಳಿಗಾರರ ಸಂಖ್ಯೆ ಹೆಚ್ಚಲು ಕಾರಣವಾಯಿತು. ಸಂಸ್ಥಾನಿಕ ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ ಲಂಡನ್‌ನಲ್ಲಿ ಬಾರ್ ಅಟ್ ಲಾ (ಬ್ಯಾರಿಸ್ಟರ್) ಕಾನೂನು ಪದವಿ ಮುಗಿಸಿದವರು. ಹೈದರಾಬಾದ್ ನಿಜಾಮನ ಆಡಳಿತದಿಂದ ಇಲ್ಲಿನ ಜನರಿಗೆ ಮುಕ್ತಿ ಕೊಡಿಸಲು ತಮ್ಮ ಜೀವ ಮುಡಿಪಾಗಿಟ್ಟರು. ಇವರ ನೇತೃತ್ವದಲ್ಲಿ ಮಹಾದೇವಪ್ಪ ಹೂಗಾರ ನಿಜಾಮ ಅಧಿಕಾರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಮುದನೂರಿನ ಹನುಮಾನ ದೇವಸ್ಥಾನದ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು. ಮಾಸಾಶನ ಪಡೆಯಲು ಗೌರವದಿಂದ ನಿರಾಕರಿಸಿದ್ದರು. ಅಪ್ಪಾರಾವ ವಕೀಲ ಹೋರಾಟದ ಪಡೆಯ ಕಮಾಂಡೆಂಟ್ ಆಗಿದ್ದರು. ಹಣಮಂತರಾಯ ದರಬಾರಿ ಹೋರಾಟಗಾರರಿಗೆ ಆಹಾರ ಪೂರೈಸುತ್ತಿದ್ದರು. ತಿಮ್ಮಯ್ಯ ದರಬಾರಿ ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕರ ಬಂಧನದ ವಾರಂಟ್‌ನ್ನು ನುಂಗಿ ಬಿಟ್ಟಿದ್ದರು. ಡಾ.ಜಿ.ಸುಬ್ಬಯ್ಯ ರಜಾಕಾರರಿಂದ ಹಲ್ಲೆಗೊಳಗಾದವರಿಗೆ ಚಿಕಿತ್ಸೆ ನೀಡುತ್ತಿದ್ದರು. ಬಸಪ್ಪ ಬಾರಿ ತ್ರಿವರ್ಣ ಧ್ವಜ ಹೊಲೆದು ಹೋರಾಟಗಾರರಿಗೆ ಪೂರೈಸುತ್ತಿದ್ದರು. ಎಂ.ಆರ್. ಬುದ್ಧಿವಂತಶೆಟ್ಟಿ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ತಮ್ಮಣ್ಣ ಬಾಸೂತ್ಕರ್ ಎಂ.ಜಿ.ಕುಲಕರ್ಣಿ ಡಿ. ಗೋವಿಂದಪ್ಪ ರಾಮಣ್ಣ ಬೋಡಾ ಇತರರು ವಿಮೋಚನಾ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಈಗ ಇವರೆಲ್ಲರೂ ನಿಧನರಾಗಿದ್ದಾರೆ. ಆದರೆ ಅವರು ಧೈರ್ಯದಿಂದ ರಜಾಕಾರರನ್ನು ಎದುರಿಸಿದ್ದು ನಿಜಾಮನ ವಿರುದ್ಧ ಜೀವದ ಹಂಗು ತೊರೆದು ಚಳವಳಿ ಸಂಘಟಿಸಿದ ರೀತಿ ಗಂಭೀರ ಸಂದರ್ಭಗಳಲ್ಲಿ ಭೂಗತರಾಗಿದ್ದು ಎಲ್ಲವೂ ರೋಚಕವಾಗಿವೆ.

ನಿರ್ಮಾಣವಾಗದ ಸ್ಮಾರಕ ಹೈದರಾಬಾದ್‌ ಕರ್ನಾಟಕದ ಗಾಂಧಿ ಎಂದೇ ಖ್ಯಾತಿ ಹೊಂದಿದ್ದ ಕೋಲೂರು ಮಲ್ಲಪ್ಪ ಅವರ ಸ್ಮಾರಣ ನಿರ್ಮಾಣವಾಗದೇ ನೆನಗುದಿಗೆ ಬಿದ್ದಿದೆ. 1905ರಲ್ಲಿ ಯಾದಗಿರಿ ತಾಲ್ಲೂಕಿನ ಪಗಲಾಪುರದಲ್ಲಿ ಜನಿಸಿದ ಮಲ್ಲಪ್ಪ ಅವರು ಲಿಂಗಪ್ಪ-ಭೀಮವ್ವ ದಂಪತಿ ಪುತ್ರ. 1946 ರಲ್ಲಿ ‘ನಿಜಾಮರರೇ ಸರ್ವರಿಗೂ ಸ್ವಾತಂತ್ರ್ಯ ಕೊಡಿ’ ಎಂದು ಘೋಷಣೆ ಕೂಗುತ್ತಾ ಯಾದಗಿರಿಯಲ್ಲಿ ಚಳವಳಿ ಆರಂಭಿಸಿದ್ದರು. 2016ರಲ್ಲೇ ಕೂಲೂರು ಮಲ್ಲಪ್ಪ ಸ್ಮಾರಕಕ್ಕಾಗಿ ಅಂದಿನ ಸರ್ಕಾರ ₹2 ಕೋಟಿ ಹಣ ಮೀಸಲೀಡಲಾಗಿತ್ತು. ಆದರೆ ಜಾಗದ ಸಮಸ್ಯೆಯಿಂದ ಇನ್ನೂ ಹಣ ಖಜಾನೆಯಲ್ಲಿದೆ. ‘ಸ್ವಾತಂತ್ರ್ಯ ಹೋರಾಟ ಹಾಗೂ ರಜಕಾರ ಹಾವಳಿಯಲ್ಲಿ ನಿಜಾಮನ ವಿರುದ್ಧ ತೊಡೆ ತಟ್ಟಿ ಹೋರಾಟ ನಡೆಸಿ ಈ ಭಾಗದ ಸ್ವಾತಂತ್ರ್ಯಕ್ಕೆ ಕಾರಣೀಕರ್ತರಾಗಿದ್ದ ಮಲ್ಲಪ್ಪ ಅವರ ಬಗ್ಗೆ ಈ ಭಾಗದವರ ನಿರ್ಲಕ್ಷ್ಯದಿಂದ ಸ್ಮಾರಣ ನಿರ್ಮಾಣ ಆಗಿಲ್ಲ’ ಎಂದು ಮಲ್ಲಪ್ಪಾಜಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹಣಮಂತರಾಯಗೌಡ ಮಾಲೀಪಾಟೀಲ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT