ಶನಿವಾರ, ಅಕ್ಟೋಬರ್ 16, 2021
29 °C
ನೀಲಹಳ್ಳಿಯ ಸತ್ಯ ಘಟನೆ ತಿರುಚಿ ಸುಳ್ಳು ಪ್ರಕರಣ ದಾಖಲು: ಆರೋಪ

ಯಾದಗಿರಿ: ಮತಾಂತರ ಹೆಸರಿನಲ್ಲಿ ಕ್ರೈಸ್ತರ ಮೇಲೆ ಹಲ್ಲೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮತಾಂತರ ಹೆಸರಿನಲ್ಲಿ ಕ್ರೈಸ್ತರು ಮತ್ತು ಕ್ರೈಸ್ತ ಪಾದ್ರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ನೀಲಹಳ್ಳಿಯ ಸತ್ಯ ಘಟನೆಯನ್ನು ತಿರುಚಿ ಸುಳ್ಳು ಪ್ರಕರಣ ದಾಖಲಿಸಿ ಪಾದ್ರಿಗಳ ದೂರು ನಿರಾಕರಿಸಿದ ಪೊಲೀಸರ ಕ್ರಮವನ್ನು ವಿರೋಧಿಸಿ ನಗರದಲ್ಲಿ ಸೋಮವಾರ ಕ್ರೈಸ್ತರ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.

ಜಿಲ್ಲೆಯ 40ಕ್ಕೂ ಹೆಚ್ಚು ಗ್ರಾಮಗಳಿಂದ ಬಂದಿದ್ದ ಕ್ರೈಸ್ತರು ಮೈಲಾಪುರ ಅಗಸಿ ಬಳಿ ಜಮಾಯಿಸಿ ಬೃಹತ್‌ ರ್‍ಯಾಲಿ ನಡೆಸಿದರು.

‘ಇತ್ತೀಚಿನ ದಿನಗಳಲ್ಲಿ ಕ್ರೈಸ್ತರ ಮೇಲೆ ಮತ್ತು ಕ್ರೈಸ್ತ ಪಾದ್ರಿಗಳ ಮೇಲೆ ವಿನಾಕರಣ ಹಲ್ಲೆಯಂತ ಪ್ರಕರಣಗಳು ನಡೆಯುತ್ತಿವೆ. ಶಾಸಕ ಗೂಳಿಹಟ್ಟಿ ಶೇಖರ್ ಅವರು ವಿಧಾನಸೌಧದಲ್ಲಿ ಕ್ರೈಸ್ತರ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಪವಿತ್ರ ಸದನದಲ್ಲಿ ಮತಾಂತರ ವಿಷಯವಾಗಿ ಸುಳ್ಳು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಕ್ರೈಸ್ತರು ಬಲವಂತವಾಗಿ ಯಾರನ್ನೂ ಮತಾಂತರ ಮಾಡುವುದಿಲ್ಲ. ಹೆಣ್ಣುಮಕ್ಕಳನ್ನು ಕಟ್ಟಿಕೊಂಡು ಕ್ರೈಸ್ತರು ಅತ್ಯಾಚಾರ, ಅಟ್ರಾಸಿಟಿ ಕೇಸ್‌ ದಾಖಲಿಸುತ್ತಾರೆ ಎಂದು ಆಧಾರ ರಹಿತವಾಗಿ ಆರೋಪ ಮಾಡಿದ್ದಾರೆ’ ಎಂದು ಪ್ರತಿಭಟನಾಕಾರರು ಖಂಡಿಸಿದರು.

ಜಿಲ್ಲೆಯ ನೀಲಹಳ್ಳಿ ಗ್ರಾಮದಲ್ಲಿ ಪಾದ್ರಿ ಮತ್ತು ಅವರ ಕುಟುಂಬದವರ ವಿರುದ್ಧ ಸೈದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೈದಾಪುರ ಪೊಲೀಸ್ ಠಾಣೆಯ ಅಧಿಕಾರಿ ಪಾದ್ರಿ ಜೇಮ್ಸ್‌ ಪರವಾಗಿ ಯಾರೇ ಬಂದು ದೂರು ಸಲ್ಲಿಸಿದ್ದರೂ ದೂರನ್ನು ತೆಗೆದುಕೊಳ್ಳಬಾರದೆಂದು ಠಾಣೆಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. ಸೆಪ್ಟೆಂಬರ್ 27 ರಂದು ಜೇಮ್ಸ್‌ ಪಾಸ್ಟರ್ ಮಗ ಮತ್ತು ಜಿಲ್ಲೆಯ ಸಭಾಪಾಲಕರು ದೂರನ್ನು ನೀಡಲು ಹೋದಾಗ, ಠಾಣೆಯ ಪ್ರಭಾರಿ ಮುಖ್ಯ ಕಾನ್‌ಸ್ಟೆಬಲ್‌ ಯಾವುದೇ ದೂರನ್ನು ತೆಗೆದುಕೊಳ್ಳಬಾರದು. ಹಿಂಬರಹ ನೀಡಬಾರದೆಂದು ತಮ್ಮ ಸಾಹೇಬರು ಹೇಳಿದ್ದಾರೆಂದು ನೇರವಾಗಿ ಫೋನ್‌ ಕರೆಯಲ್ಲಿ ಹೇಳಿದ್ದು, ಇದು ಯಾವ ಉದ್ದೇಶಕ್ಕಾಗಿ ಎಂಬುವುದು ಇನ್ನೂ ಗೌಪ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ರೈಸ್ತರು ಪ‍್ರಾರ್ಥನಾ ಕೂಟಗಳನ್ನು ನಡೆಸಬಾರದು ಎಂದು ಹೇಳುವ ಮತ್ತು ಹೆದರಿಸುವ ನೈತಿಕ ಪೊಲೀಸ್‌ ಗಿರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕ್ರೈಸ್ತರಲ್ಲಿ ರಾಜ್ಯದಲ್ಲಿ ಸೂಕ್ತ ರಕ್ಷಣೆ ನೀಡಬೇಕು. ಚರ್ಚ್‌ಗಳ ಆಸ್ತಿ ಪಾಸ್ತಿಗೆ ಯಾವುದೇ ಹಾನಿಯಾದಂತೆ ಬಂದೋಬಸ್ತ್ ಮಾಡಬೇಕು. ಕ್ರೈಸ್ತ ಧರ್ಮಗುರುಗಳ ಮೇಲೆ ಸುಳ್ಳು ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಕ್ರೈಸ್ತರು ಶಾಂತಿ ಪ್ರಿಯರಾಗಿದ್ದಾರೆ. ದೇಶದ ಹಿತ ಬಯಸುವವರು ಆಗಿದ್ದಾರೆ. ಸಂವಿಧಾನವನ್ನು ಗೌರವಿಸುತ್ತೇವೆ. ಕ್ರೈಸ್ತರು ಶಿಕ್ಷಣ, ವೈದ್ಯಕೀಯ ಸೇವೆಯಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ. ಕ್ರೈಸ್ತರ ಮೇಲೆ ಸುಳ್ಳು ಆರೋಪಗಳನ್ನು ಮಾಡುವವರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಕ್ರೈಸ್ತ ಸಮುದಾಯಕ್ಕೆ ಕ್ಷಮೆಯಾಚಿಸಬೇಕು. ನೈತಿಕ ಹೋಣೆ ಹೊತ್ತು ರಾಜಿನಾಮೆ ನೀಡಬೇಕು ಒತ್ತಾಯಿಸಿದರು.
ಕೇಂದ್ರ ಮೆಥೋಡಿಸ್ಟ್‌ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವ.ಸತ್ಯಮಿತ್ರ ನೇತೃತ್ವ ಪ್ರತಿಭಟನೆ ವಹಿಸಿದ್ದರು. ಸಹಾಯಕ ಬೋಧಕರಾದ ರೆವ ಯೇಸುನಾಥ ನಂಬಿ, ವಿಧಾನ ಪರಿಷತ್ ಮಾಜಿ ಸಭಾಪತಿ ಡೇವಿಡ್‌ ಸಿಮಿಯೋನ್‌, ಡಾ.ಸುನಿತ್‌ ಕುಮಾರ ರೆಡ್ಸನ್‌, ಸಿಮಿಯೋನ
ಸಾಮುವೇಲ, ಬಾಲಮಿತ್ರ, ಶದ್ರಕ್‌ ಬಡಿಗೇರಾ, ಇಮಾನವೆಲ್‌ ಕಾಳೆಬೆಳಗುಂದಿ, ದೀಲಿಪ್‌ ಮುಳ್ಳಗ್ಸಿ, ಸಂಸೋನ್‌ ಮಾಳಿಕೇರಿ, ಉದಯಕುಮಾರ, ವೈ.ಎಸ್‌.ಸಾಮುವೇಲ್‌, ಇಮಾನ್‌ವೆಲ್‌ ಬೆಳ್ಳಿ, ವಕೀಲರಾದ ಸಾಲೋಮನ್‌ ಆಲಫ್ರೆಡ್‌, ಚೇತನ ಇದ್ದರು.

ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

ಕ್ರೈಸರ ಒಕ್ಕೂಟದಿಂದ ನಗರದ ಮೈಲಾಪುರ ಅಗಿಸಿಯಿಂದ ಬೃಹತ್‌ ಪ್ರತಿಭಟನಾ ರ್‍ಯಾಲಿ ಆರಂಭಿಸಲಾಯಿತು. ಎರಡು ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಹಿಸಿದ್ದರು. ಹಳ್ಳಿಗಳಿಂದ ಟ್ರ್ಯಾಕ್ಟರ್, ಬೈಕ್‌, ಟಂಟಂ ಆಟೊ, ಕ್ರೂಸರ್‌ ಮೂಲಕ ಕ್ರೈಸ್ತರು ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕೊಡುಗೆ ಅಪಾರ, ಕ್ರೈಸ್ತರನ್ನು ರಕ್ಷಿಸಿ, ಕ್ರೈಸ್ತರ ಕೂಗನ್ನು ಸರ್ಕಾರಿ ಕೇಳಬೇಕು ಇತ್ಯಾದಿ ನಾಮಫಲಕಗಳನ್ನು ಹಿಡಿದು ಮಹಾತ್ಮಗಾಂಧಿ ವೃತ್ತ, ನಗರಸಭೆ, ಡಾ.ಅಂಬೇಡ್ಕರ್‌ ವೃತ್ತ, ಮೆಥೋಡಿಸ್ಟ್‌ ಚರ್ಚ್‌, ಶಾಸ್ತ್ರಿ ವೃತ್ತ, ಸುಭಾಷ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸೇರಿ ಜಿಲ್ಲೆಯ ಅಲ್ಲಲ್ಲಿ ಕ್ರೈಸ್ತರು, ಪಾದ್ರಿಗಳ ಮೇಲೆ ಹಲ್ಲೆ ಆಗುತ್ತಿವೆ. ದೇಶಕ್ಕೆ ಕ್ರೈಸ್ತರ ಕೊಡುಗೆ ಅಪಾರವಾಗಿದೆ

- ರೆವ.ಸತ್ಯಮಿತ್ರ, ಕೇಂದ್ರ ಮೆಥೋಡಿಸ್ಟ್‌ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.