ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಅಧಿಕಾರಿಯಿಂದ 100 ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಉಚಿತ ವಿತರಣೆ

100 ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಉಚಿತ ವಿತರಣೆಗೆ ಸಿದ್ಧತೆ, ₹15 ಸಾವಿರ ಖರ್ಚು
Last Updated 7 ಸೆಪ್ಟೆಂಬರ್ 2021, 17:02 IST
ಅಕ್ಷರ ಗಾತ್ರ

ಯಾದಗಿರಿ: ಪೊಲೀಸರೆಂದರೆ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲ ಪರಿಸರ ಕಾಳಜಿಯೂ ಹೊಂದಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿರೂಪಿಸಿದ್ದಾರೆ.

ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿಯವರು ಸ್ವಂತ ಖರ್ಚಿನಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಸಾರ್ವಜನಿಕರಿಗೆ ಉಚಿತ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

100 ಗಣೇಶ ಮೂರ್ತಿ: ಶುದ್ಧ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದ್ದು, 100 ಮೂರ್ತಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಎಸ್‌ಪಿ ತಿಳಿಸುತ್ತಾರೆ.

₹15 ಸಾವಿರ ಖರ್ಚು: 10 ಇಂಚಿನ ಗಣೇಶ ಮೂರ್ತಿ ಇದ್ದು, ತಲಾ ಒಂದಕ್ಕೆ ₹150ರಂತೆ 100 ಮೂರ್ತಿಗಳಿಗೆ ₹15,000 ಸಾವಿರ ಖರ್ಚು ತಗುಲಿದೆ. ಇದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭರಿಸಿ ಪರಿಸರ ಕಾಳಜಿ ಮೆರೆದಿದ್ದಾರೆ.

ಸೆಲ್ಫೀ ಫೋಟೋ ಹಾಕಬೇಕು: ಮಣ್ಣಿನ ಗಣೇಶ ಮೂರ್ತಿಗಳನ್ನು ಪಡೆಯುವವರು ಮನೆಯಲ್ಲಿ ವಿಸರ್ಜನೆ ಮಾಡಿದ ಕರಗಿದ ಮಣ್ಣಿನಿಂದ ಬೀಜ ತೆಗೆದು ಗುಂಡಿ ತೋಡಿ ಅದೇ ಮಣ್ಣಿನಲ್ಲಿ ಹೂತು ಹಾಕಿ ಫೋಟೋ ಹಾಕಬೇಕು. ಅದರ ಬೆಳವಣಿಗೆ ಕುರಿತು ಆಗಾಗ ಫೋಟೋ ಕಳಿಸಿ ಅದರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು ಎನ್ನುತ್ತಾರೆ ಪೊಲೀಸರು.

ಪರಿಸರ ಸ್ನೇಹಿ, ಮರುಬಳಕೆಗೆ ಯೋಗ್ಯ:ಗಣೇಶ ಮೂರ್ತಿಯನ್ನು ಪರಿಸರ ಸ್ನೇಹಿಯಾಗಿ ತಯಾರಿಸಲಾಗಿದ್ದು, ವಿಸರ್ಜನೆ ನಂತರ ಮರುಬಳಕೆಗೆ ಯೋಗ್ಯವಾಗುವಂತೆ ಮಾಡಿಸಿದ್ದಾರೆ. ಇದರಲ್ಲಿ ಹೊಂಗೆ, ನೇರಳೆ, ಬಾದಾಮಿ ಹಣ್ಣಿನ ಬೀಜಗಳನ್ನು ಹಾಕಿ ನಿರ್ಮಿಸಲಾಗಿದೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯಾಗಿದ್ದರಿಂದ ಬಕೆಟ್‌ ನೀರಿನಲ್ಲಿ ಮುಳಗಿಸಿ ಅದನ್ನೇ ಬೀಜ ನೆಡಲು ಸಹಾಯಕವಾಗುವಂತೆ ಮಾಡಿದ್ದಾರೆ.

ಕರಗಿದ ಮನಸು: ಎಸ್‌ಪಿಯವರು ಒಪಿಒ ಗಣೇಶ ಮೂರ್ತಿ ವಿಸರ್ಜನೆ ನಂತರ ಕೆರೆ, ಕುಂಟೆ, ನದಿಗಳಲ್ಲಿ ತೇಲಿ ಬಂದಿರುವುದನ್ನು ಪತ್ರಿಕೆ, ಟಿವಿಗಳಲ್ಲಿ ನೋಡಿ ಇದರಿಂದ ಬೇಸರವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒತ್ತು ನೀಡಿದ್ದಾರೆ. ಪ್ಲಾಸ್ಟಿಕ್‌ ಕಂಡರೆ ಅದನ್ನು ತೆಗೆದಿಟ್ಟುಕೊಂಡು ಮನೆಯಲ್ಲಿ ಬೀಜ ನೆಟ್ಟು ಸಸಿ ಮಾಡುತ್ತಾರೆ. ಈ ಮೂಲಕ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.

ಮೊದಲ ಬಾರಿಗೆ ಕೊಡುಗೆ: ಪೊಲೀಸ್‌ ಇಲಾಖೆ ವತಿಯಿಂದ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತಿದೆ. ಈ ಮೂಲಕ ಪರಿಸರ ಸಂರಕ್ಷಣೆಗೆ ಮೇಲ್ಪಂಕ್ತಿ ಹಾಕಿದಂತೆ ಆಗಿದೆ.

‘ಸಸಿ ಬೆಳೆಸುವವರಿಗೆ ಉಚಿತ ವಿತರಣೆ’

ಶುದ್ಧವಾದ ಮಣ್ಣಿನಿಂದ ಹೊಂಗೆ, ನೇರಳೆ ಮತ್ತು ಬಾದಾಮಿ ಬೀಜಗಳನ್ನು ಹಾಕಿ ಮಾಡಿದ್ದ ಗಣೇಶ ಮೂರ್ತಿಗಳು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಉಚಿತವಾಗಿ ಲಭ್ಯವಿದ್ದು, ಸಸಿ ಬೆಳೆಸುವ ಆಸಕ್ತರು ಜಿಲ್ಲಾ ಪೊಲೀಸ್ ಕಚೇರಿಗೆ ಸಂಪರ್ಕಿಸಿ ಶುದ್ಧ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು ಪಡೆಯಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳುತ್ತಾರೆ.

ಇದೇ ಸೆಪ್ಟೆಂಬರ್ 10ರಿಂದ ಗಣೇಶ ಹಬ್ಬವನ್ನು ಆಚರಿಸುತ್ತಿದ್ದು, ಈ ಬಾರಿ ಎಲ್ಲರೂ ಶುದ್ಧ ಮಣ್ಣಿನಿಂದ ಮಾಡಿದ ಪರಿಸರ ಪ್ರೇಮಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸೋಣಾ. ಯಾವುದೇ ಕಾರಣಕ್ಕೂ ರಾಸಾಯನಿಕ ಬಣ್ಣದಿಂದ ಮತ್ತು ಪಿಒಪಿ ಗಣೇಶನನ್ನು ಕೂಡಿಸದೇ ಪರಿಸರ ಪ್ರೇಮಿ ಗಣೇಶನನ್ನು ಬಳಸಿರಿ ಎಂದು ಕರೆ ನೀಡುತ್ತಾರೆ.

ಪಿಒಪಿ, ರಸಾಯನಿಕ ಬಣ್ಣಿಗಳಿಂದ ಅಲಂಕಾರ ಮಾಡಿದ ಗಣೇಶ ಮೂರ್ತಿಗಳನ್ನು ಕೆರೆ, ಕುಂಟೆಯಲ್ಲಿ ವಿಸರ್ಜಿಸಿದ ನಂತರ ಅದೇ ನೀರನ್ನು ಸೇವಿಸುವ ಪಶು, ಪಕ್ಷಿಗಳು ಸಾವಿಗೀಡಾಗುತ್ತವೆ. ಇದರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ವಿನಂತಿಸಿದ್ದಾರೆ.

ಕೋವಿಡ್‌ ಮಾರ್ಗಸೂಚಿ ಇರುವುದರಿಂದ ಮನೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ವಿರ್ಸಜಿಸಬೇಕು. ಸಾರ್ವಜನಿಕ ಗಣೇಶೋತ್ಸವದಿಂದ ದೂರ ಇರಿ. ಇದರಿಂದ ಕೋವಿಡ್‌ ಹರಡುವುದನ್ನು ತಪ್ಪಿಸಬಹುದು.
- ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಜಿಲ್ಲೆಯಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಮೂರ್ತಿಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಸರ ಸ್ನೇಹಿಗೆ ಪೊಲೀಸರು ಒತ್ತು ನೀಡುವುದು ಶ್ಲಾಘನೀಯ.
- ಸಣ್ಣ ವೆಂಕಟೇಶ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT