ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹವಾಮಾನ ವೈಪರೀತ್ಯದಿಂದ ವೈರಾಣು ಜ್ವರ, ಹೈರಾಣಾದ ಜನರು

ನೆಗಡಿ, ಕೆಮ್ಮು, ಜ್ವರ ಹೆಚ್ಚಳ
Last Updated 22 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಹವಾಮಾನ ವೈಪರೀತ್ಯದಿಂದ ನೆಗಡಿ, ಕೆಮ್ಮು, ಜ್ವರ ಹೆಚ್ಚಳವಾಗಿದ್ದು, ಆಸ್ಪತ್ರೆಗಳಲ್ಲಿ ಜನ ಜಂಗುಳಿ ತುಂಬಿದೆ.

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಎಲ್ಲಿ ನೋಡಿದರೂ ನೆಗಡಿ, ಕೆಮ್ಮು, ಜ್ವರದ್ದೆ ಮಾತುಕತೆಯಾಗುತ್ತಿದೆ. ಹಲವು ಜನ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ.

30 ರಿಂದ 32 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುತ್ತಿದೆ. ಒಂದೊಂದು ಬಾರಿ 29ಕ್ಕೆ ಇಳಿದರೆ ಮತ್ತೊಂದು ಬಾರಿ 33 ಡಿಗ್ರಿ ತಾಪಾಮಾನ ದಾಖಲಾಗುತ್ತಿದೆ. ಇದು ಕೂಡ ಆರೋಗ್ಯ ಬದಲಾವಣೆಯಲ್ಲಿ ಪ್ರಮುಖ ಕಾರಣವಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು: ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳತ್ತ ಜನತೆ ತೆರಳುತ್ತಿದ್ದಾರೆ. ಆಗಸ್ಟ್‌, ಸೆಪ್ಟೆಂಬರ್ ತಿಂಗಳಲ್ಲಿ 1,344 ಸರ್ಕಾರಿ, 8,541 ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ಒಪಿಡಿ ತಪಾಸಣೆ ಕೈಗೊಂಡಿದ್ದಾರೆ. ಇದರಲ್ಲಿ 651 ಸರ್ಕಾರಿ, 1,080 ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಸೊಳ್ಳೆಗಳ ಹೆಚ್ಚಳ–ರೋಗ ಭೀತಿ: ಗುರುಮಠಕಲ್ ತಾಲ್ಲೂಕಿನಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚಿವೆ. ಸೊಳ್ಳೆಗಳ ಕಡಿತದಿಂದ ಹರಡಬಹುದಾದ ರೋಗಗಳ ಭೀತಿಯಲ್ಲಿ ಸಾರ್ವಜನಿಕರಿದ್ದಾರೆ.

ವಾತಾವರಣ ತಂಪಾಗಿದ್ದರಿಂದ ಬರುವ ನೆಗಡಿ, ಕೆಮ್ಮು ಸೇರಿದಂತೆ ಸಾಧಾರಣ ಜ್ವರದ ಪ್ರಕರಣಗಳು ಹೆಚ್ಚಿದ್ದು, ವೈರಾಣು ಜ್ವರಗಳಾದ ಡೆಂಗಿ, ಟೈಫಾಯಿಡ್ ಹಾಗೂ ಮಲೇರಿಯಾ ಪ್ರಕರಣಗಳು ಕಂಡು ಬರುತ್ತಿವೆ.

ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ, ವೈದ್ಯಕೀಯ ಉಪಕರಣಗಳ ಕೊರತೆ ಯಿದ್ದರಿಂದ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಅನಿವಾರ್ಯ ಎನ್ನು ವಂತಾಗಿದೆ. ಬಡವರು ಸಂಕಷ್ಟದಲ್ಲಿದ್ದು, ಈ ಸಮಯದಲ್ಲಿ ಆಸ್ಪತ್ರೆಯ ಖರ್ಚು ಹೊರೆಯಾಗುತ್ತಿದೆ ಎಂದು ಗ್ರಾಮೀಣ ಪ್ರದೇಶದ ಜನರು ಆಲವತ್ತುಕೊಂಡರು.

‘ಬದಲಾದ ಹವಾಮಾನ ವೈಪರೀತ್ಯದಿಂದಾಗಿ ಕಳೆದ ಎರಡು ವಾರಗಳಿಂದಲೂ ಹುಣಸಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳ್ಳಿಗಳಲ್ಲಿ ನೆಗಡಿ ಕೆಮ್ಮು ಮತ್ತು ಮತ್ತಿತರ ವೈರಾಣು ಇನ್ಫೆಕ್ಷನ್ ಇರುವಂತ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದರಿಂದಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯ 150 ರಿಂದ ಎರಡು ನೂರು ಜನ ರೋಗಿಗಳು ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಧರ್ಮರಾಜ್ ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೂ ಹೆಚ್ಚಿನ ರೋಗಿಗಳು ಅಂದರೆ ನಿತ್ಯ ಪ್ರತಿ ಆಸ್ಪತ್ರೆಯಲ್ಲಿ ಐವತ್ತಕ್ಕೂ ಹೆಚ್ಚು ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಇದೆ.

‘ಆಸ್ಪತ್ರೆಗಳಲ್ಲಿ ದಾಖಲಾಗುವವರು ಆರೋಗ್ಯದಲ್ಲಿ ಗಂಭೀರ ಇರುವು ದಿಲ್ಲ. ಸೂಕ್ತ ಚಿಕಿತ್ಸೆ ಪಡೆದ ನಂತರ ಗುಣ ಮುಖರಾಗುತ್ತಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳು ತಪಾಸಣೆಗಾಗಿ ಹೆಸರು ನೋಂದಾಯಿಸಿಕೊಳ್ಳುವವ ವಿವರ ಪಡೆಯಲಾಗುತ್ತಿದೆ. ಈ ಬಗ್ಗೆ ಎಲ್ಲ ಕಡೆ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಕೋವಿಡ್‌ ಪ್ರಕರಣಗಳು ಕಂಡು ಬರುತ್ತಿಲ್ಲ’ ಎನ್ನುತ್ತಾರೆ ಡಿಎಚ್‌ಒ ಡಾ.ಇಂದುಮತಿ ಕಾಮಶೆಟ್ಟಿ.

‘ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡವರು ಬಿಸಿ ಆಹಾರ, ನೀರು ಸೇವಿಸಿಬೇಕು. ಹೆಚ್ಚಿನ ತಂಪಿನ ವಾತಾವರಣದಲ್ಲಿ ಹೊರಗೆ ಓಡಾಡದೇ ಈ ಮೂಲಕ ಅರೋಗ್ಯ ಕಾಪಾಡಿಕೊಳ್ಳಬೇಕು. ಔಷಧಿಗಳ ಕೊರತೆ ಇಲ್ಲ’ ಎನ್ನುತ್ತಾರೆ ಅವರು.

‘ಆಸ್ಪತ್ರೆಗಳಲ್ಲಿ ಮಾತ್ರೆಗಳ ಕೊರತೆ’
‘ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ಯರಗೋಳ, ಹೊನಗೇರಾ, ಅರಿಕೇರಾ (ಬಿ), ಕೋಟಗೇರಾ, ಅಲ್ಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಹಳ್ಳಿಗಳ ಮನೆಗಳಲ್ಲಿನ ಜನರಿಗೆ ಜ್ವರ, ನೆಗಡಿ, ಕೆಮ್ಮು, ಕೀಲು ನೋವು ಕಾಣಿಸಿಕೊಂಡಿದೆ. ಪ್ರತಿನಿತ್ಯ ಸರ್ಕಾರಿ ಆಸ್ಪತ್ರೆಯಗಳಲ್ಲಿ ನೂರಾರು ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ, 3 ರಿಂದ 5 ದಿನಗಳ ಕಾಲ ರೋಗಿಯ ದೇಹದಲ್ಲಿ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಚಿಕ್ಕ ಮಕ್ಕಳಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿದ್ದು, ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ’ ಎಂದು ವೈದ್ಯ ಡಾ.ರಾಮಕೃಷ್ಣ ಮತ್ತು ಡಾ.ಫಿರ್ದೋಜ್ ಝರೀನಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರೆಗಳ ಕೊರತೆ ಎದ್ದು ಕಾಣುತ್ತಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರೋಗಿಗಳಿಗೆ ಏನು ಕೊಡಬೇಕು. ಅವರ ಆರೋಗ್ಯ ಸುಧಾರಣೆ ಮಾಡೋದು ಹೇಗೆ’ ಎಂದು ಹೆಸರು ಹೇಳದ ಆರೋಗ್ಯ ಸಿಬ್ಬಂದಿ ‘ಪ್ರಜಾವಾಣಿ’ ಜೊತೆ ತಮ್ಮ ನೋವು ತೋಡಿಕೊಂಡರು.

*
ಪ್ರತಿ ಮಳೆಗಾಲದಲ್ಲಿ ವೈರಾಣು ಜ್ವರ ಸಾಮಾನ್ಯ. ಈ ವರ್ಷ ಶೇ 15ರಿಂದ 20ರಷ್ಟು ಹೆಚ್ಚಾಗಿದೆ. ವಾತಾವರಣದಲ್ಲಿ ಬದಲಾವಣೆ ಆಗಿದ್ದು ಪ್ರಮುಖ ಕಾರಣವಾಗಿದೆ.
–ಡಾ.ಇಂದುಮತಿ ಕಾಮಶೆಟ್ಟಿ, ಡಿಎಚ್‌ಒ

*
ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ತೆರಳಿ ಜನ ಜಾಗೃತಿ ಮೂಡಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಚಿಕಿತ್ಸೆ ಲಭ್ಯವಿರಬೇಕು.
–ಜಯಕುಮಾರ, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT