ಭಾನುವಾರ, ಜೂಲೈ 12, 2020
22 °C
ಒಡೆದ ನೀರಿನ ಪೈಪ್‌, ನೀರು ಪೋಲು, ಕ್ರಮ ವಹಿಸದ ಅಧಿಕಾರಿಗಳು

ಯಾದಗಿರಿ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿಗೆ ಜನತೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಹಳೆಯದಾದ ನೀರಿನ ಪೈಪ್‌ಗಳಿದ್ದು, ಅವು ಅಲ್ಲಲ್ಲಿ ತುಂಡಾಗಿ ನೀರು ಪೋಲಾಗುತ್ತಿವೆ. ಇದರಿಂದ ನಗರಸಭೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಪುರಸಭೆ ಇರುವಾಗ ಮಾಡಿರುವ ಪೈಪ್‌ಲೈನ್‌ನಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ. 

ನಗರದ ಆಜೀಜ್‌ ಕಾಲೊನಿ, ಸ್ಟೇಷನ್‌ ಏರಿಯಾ, ಸಹರಾ ಕಾಲೊನಿ, ನಜರಾಯ ಕಾಲೊನಿ ಸೇರಿದಂತೆ ನಗರದ ಹಲವಾರು ಬಡಾವಣೆಗಳಲ್ಲಿ ನೀರು ಪೂರೈಕೆ ಸ್ಥಗಿತಕೊಂಡಿದೆ. ಇದರಿಂದ ನಿವಾಸಿಗಳು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ನಗರದಲ್ಲಿ ಅಲ್ಲಲ್ಲಿ ನೀರಿನ ಪೈಪ್‌ ಒಡೆದು ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿವೆ. ಹತ್ತಿಕುಣಿ ರಸ್ತೆಯ ವಿವಿಧ ಬಡಾವಣೆಗಳಲ್ಲಿ ರಸ್ತೆಯಲ್ಲಿಯೇ ನೀರು ಪೋಲಾಗುತ್ತಿದ್ದರೂ ದುರಸ್ತಿ ಮಾಡಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ. 

‘ಸ್ಟೇಷನ್‌ ರಸ್ತೆಯ ಹನುಮಾನ ದೇವಸ್ಥಾನದ ಬಳಿ ಕೊಳವೆ ಬಾವಿ ಕೆಟ್ಟು 15 ದಿನಗಳಾದರೂ ದುರಸ್ತಿ ಕೈಗೊಂಡಿಲ್ಲ. ನಲ್ಲಿ ನೀರು ಬರದಿದ್ದರೆ ಇಲ್ಲಿಂದ ನೀರು ತೆಗೆದೆಕೊಳ್ಳುತ್ತಿದ್ದೀವಿ. ಈಗ ಕೊಳವೆ ಬಾವಿಯೂ ದುರಸ್ತಿಗೆ ಬಂದಿದ್ದು, ನೀರಿಗೆ ಪರದಾಡುತ್ತಿದ್ದೇವೆ’ ಎಂದು ನಗರ ನಿವಾಸಿ ರಘುನಾಥ ಚವ್ಹಾಣ ಹೇಳುತ್ತಾರೆ.

‘ಭಾನುವಾರ ಅರ್ಧ ತಾಸು ನೀರು ಬಿಟ್ಟಿದ್ದಾರೆ. ಅವು ಕೈಯಲ್ಲಿ ಹಿಡಿದರೆ ಕೆಟ್ಟ ವಾಸನೆ ಬರುತ್ತಿತ್ತು. ಪೈಪ್‌ಲೈನ್‌ ಒಡೆದಿರುವ ಪಕ್ಕದಲ್ಲೇ ಚರಂಡಿ ನೀರು ಸೇರಿ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆ ಮಾಡಿದ್ದಾರೆ. ಬಿರು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗಲಿಲ್ಲ. ಈಗ ಮಳೆಗಾಲ ಆರಂಭವಾಗಿದ್ದು, ನೀರಿನ ಸಮಸ್ಯೆ ತಲೆದೋರಿದೆ. ಶೀಘ್ರ ಪೈಪ್‌ಲೈನ್‌ ದುರಸ್ತಿ ಮಾಡಿ ಶುದ್ಧ ನೀರು ಪೂರೈಸಬೇಕು’ ಎಂದು ಆಗ್ರಹಿಸುತ್ತಾರೆ ಅವರು.

‘ಪ್ರತಿ ತಿಂಗಳು ಸರಿಯಾಗಿ ಬಿಲ್‌ ಕಟ್ಟುತ್ತಿದ್ದೇವೆ. ಆದರೆ, ನೀರು ಪೂರೈಕೆಯಲ್ಲಿ ಸಮಸ್ಯೆ ಕಾಡುತ್ತಿದೆ. ಅಲ್ಲಲ್ಲಿ ನೀರಿನ ಪೈಪ್‌ ಒಡೆದು ತಿಂಗಳಲ್ಲಿ ಒಂದೆರಡು ಬಾರಿ ನೀರಿಗಾಗಿ ಅಲೆದಾಡಬೇಕಾಗುತ್ತದೆ. ಹಳೆ ಪೈಪ್‌ ತೆಗೆದು ಹೊಸದನ್ನು ಅಳವಡಿಸಬೇಕು. ಆಗ ಮಾತ್ರ ಸಮಸ್ಯೆ ನೀಗಬಹುದು ಎಂದು ಅಜೀಜ್‌ ಕಾಲೊನಿಯ ಗೃಹಿಣಿ ಅನಿತಾ ಮಂಜುನಾಥ ಹೇಳುತ್ತಾರೆ. 

ವಿದ್ಯುತ್ ಕಣ್ಣಾಮುಚ್ಚಾಲೆ: ನಗರದಲ್ಲಿ ಆಗಾಗ ಮಳೆ ಸುರಿಯುತ್ತಿದ್ದು, ವಿಪರೀತ ವಿದ್ಯುತ್‌ ಕಡಿತ ಮಾಡಲಾಗಿದೆ ಎಂಬುದು ನಗರ ನಿವಾಸಿಗಳ ದೂರಾಗಿದೆ. ಸ್ಪಲ್ಪ ಗಾಳಿ ಬೀಸಿದರೂ ವಿದ್ಯುತ್ ಕಡಿತ ಮಾಡುವುದರಿಂದ ನೀರು ಪೂರೈಕೆಗೆ ಸಮಸ್ಯೆ ಆಗಿದೆ ಎಂದು ಅಧಿಕಾರಿಗು ದೂರಿದರು.

ನಾಲ್ಕೈದು ದಿನದಿಂದ ನೀರು ಬಿಟ್ಟಿಲ್ಲ

ನಾಲ್ಕೈದು ದಿನದಿಂದ ನೀರು ಬಿಟ್ಟಿಲ್ಲ. ಈ ಬಗ್ಗೆ ನಗರಸಭೆಯವರಿಗೆ ಕೇಳಿದರೆ ಪೈಪ್‌ಲೈನ್‌ ಒಡೆದಿದ್ದು, ದುರಸ್ತಿ ಮಾಡಿ ಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ನೀರಿಲ್ಲದೆ ತುಂಬಾ ತೊಂದರೆಯಾಗಿದೆ ಎಂದು ನಗರ ನಿವಾಸಿ ರಘುನಾಥ ಚವ್ಹಾಣ ಹೇಳುತ್ತಾರೆ.

ಹಳೆ ಪೈಪ್‌ಲೈನ್‌ನಿಂದ ಆಗಾಗ ಸಮಸ್ಯೆ ತಲೆದೊರುತ್ತದೆ. ಜೊತೆಗೆ ವಿದ್ಯುತ್‌ ಸಮಸ್ಯೆಯಿಂದ ನೀರನ್ನು ಟ್ಯಾಂಕ್‌ಗಳಿಗೆ ಏರಿಸಲು ಅಡ್ಡಿಯಾಗುತ್ತಿದೆ ಎಂದು ಎಂ.ಗಂಗಾಧರ ಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನಗರಸಭೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು