ಯಾದಗಿರಿ: ಒಂದು ದಶಕದ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮಂಗಳವಾರ (ಸೆ. 17) ನಡೆಯಲಿದ್ದು, ಗಿರಿನಾಡಿನ ಪ್ರವಾಸೋದ್ಯಮಕ್ಕೆ ಆದ್ಯತೆ ಸಿಗುವುದೇ ಎಂಬ ಕಾತರ ಜಿಲ್ಲೆಯ ಜನರದ್ದಾಗಿದೆ.
ಯಾದಗಿರಿ ಜಿಲ್ಲೆಯು ಕಲಬುರಗಿಯಿಂದ ಬೇರ್ಪಟ್ಟು 14 ವರ್ಷವಾಗಿದ್ದು, ಇಲ್ಲಿಯತನಕ ಸಮಗ್ರ ಅಭಿವೃದ್ಧಿಗೆ ಇನ್ನೂ ಆದ್ಯತೆ ಸಿಕ್ಕಿಲ್ಲ.
ಪ್ರಾಗೈತಿಹಾಸಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ಹೊಂದಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನೆ ಸಿಕ್ಕಿಲ್ಲ. ಜಿಲ್ಲೆಯೂ ಆರು ತಾಲ್ಲೂಕುಗಳನ್ನು ಹೊಂದಿದ್ದು, ಪ್ರತಿ ತಾಲ್ಲೂಕಿನಲ್ಲೂ ಪ್ರವಾಸಿ ತಾಣಗಳಿವೆ. ಇವುಗಳ ಅಭಿವೃದ್ಧಿಗೆ ವಿಶೇಷ ಒತ್ತು ಅಗತ್ಯ ಎಂದು ಪ್ರವಾಸಿಗರ ಒತ್ತಾಯವಾಗಿದೆ.
ಪ್ರಮುಖವಾಗಿ ಜಿಲ್ಲೆಯ ಆದಾಯ ಹೆಚ್ಚಿಸುವ ತಾಣಗಳನ್ನು ಅಭಿವೃದ್ಧಿ ಪಡಿಸಿದರೆ ಮೂರು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ನಾಮಫಲಕ ಅಳವಡಿಸಿ ಪ್ರವಾಸಿಗರನ್ನು ಸೆಳೆಯಬಹುದಾಗಿದೆ.
ನಗರದಲ್ಲಿ ಯಾದವರ ಕಾಲದ ಐತಿಹಾಸಿಕ ಕೋಟೆ ಇದೆ. ಯಾದಗಿರಿ ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನ , ಹತ್ತಿಕುಣಿ, ಸೌದಗಾರ್ ಜಲಾಶಯ, ಬಳಿಚಕ್ರ ಗ್ರಾಮದಲ್ಲಿ ಗುಹಾಂತರ ಚಿತ್ರಕಲೆ, ಶಹಾಪುರದಲ್ಲಿ ಬುದ್ದ ಮಲಗಿರುವ ಬೆಟ್ಟ , ದಕ್ಷಿಣದ ವಾರಣಾಸಿ (ಕಾಶಿ) ಎಂದೇ ಖ್ಯಾತಿ ಹೊಂದಿರುವ ಶಿರವಾಳ, ಸುರಪುರ ತಾಲ್ಲೂಕಿನ ವಾಗಣಗೇರಾ ಕೋಟೆ, ವೇಣುಗೋಪಾಲಸ್ವಾಮಿ ದೇವಸ್ಥಾನ, ತಿಂಥಣಿ ಮೌನೇಶ್ವರ ದೇವಾಲಯ, ಬೋನಾಳ ಕೆರೆ, ಹತ್ತಿಕುಣಿ ಜಲಾಶಯ ಗುರುಮಠಕಲ್ ತಾಲ್ಲೂಕಿನ ಗವಿಸಿದ್ದಲಿಂಗೇಶ್ವರ ಗುಹೆ ಮತ್ತು ದಬ್ ದಭಿ, ಬಂಡಲೋಗು ಜಲಪಾತ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪ್ರವಾಸಿ ತಾಣಗಳಿವೆ.
ನಾರಾಯಣಪುರ ಜಲಾಶಯ
ಜಿಲ್ಲೆಯ ಮೂರು ಜಿಲ್ಲೆಯ ಗಡಿಗಳನ್ನು ಹೊಂದಿರುವ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದ ಬಳಿ ಆಲಮಟ್ಟಿ ಮಾದರಿಯ ಉದ್ಯಾನ ನಿರ್ಮಾಣ ಇನ್ನೂ ಕನಸಾಗಿಯೇ ಉಳಿದಿದೆ.
ಜಲಾಶಯದ ಬಳಿ ಆರವತ್ತು ಎಕರೆ ಉದ್ಯಾನ ನಿರ್ಮಿಸಲು ಜಾಗ ಲಭ್ಯವಿದೆ. ಉದ್ಯಾನಕ್ಕೆ ಬೇಕಾದ ಜಾಗ ಮತ್ತು ನೀರು, ಪಕ್ಕದಲ್ಲೇ ಸಸ್ಯ ಕ್ಷೇತ್ರವಿದ್ದು, ಇದನ್ನು ಅನುಷ್ಠಾನ ಮಾಡಲು ಇಚ್ಛಾಶಕ್ತಿ ಕೊರತೆ ಇದೆ.
‘ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾಗಿ ರೂಪುಗೊಳ್ಳಬೇಕಾದ ಅರ್ಹತೆ ಇದ್ದರೂ ಬಸವಸಾಗರ ಜಲಾಶಯದ ಬಳಿ ಉದ್ಯಾನ ನಿರ್ಮಾಣ ಇನ್ನೂ ಆಗದಿರುವುದು ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳ ಕಾರ್ಯ ವೈಖರಿಗೆ ಕನ್ನಡಿಯಾಗಿದೆ’ ಎಂದು ಮುಖಂಡ ಯಲ್ಲಯ್ಯ ನಾಯಕ ವನದುರ್ಗ.
––––
ಜಿಲ್ಲೆಯಲ್ಲಿ ಕಳೆದ ದಶಕದಲ್ಲಿ ಪ್ರವಾಸೋದ್ಯಮಕ್ಕಾಗಿ ಅನುದಾನ ಬಂದಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಲು ಆಗಿಲ್ಲ. ಕೂಡಲೇ ಸಚಿವ ಸಂಪುಟದಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು
–ಭಾಸ್ಕರರಾವ್ ಮುಡಬೂಳ ಹಿರಿಯ ವಕೀಲ
ಹೊಸ ತಾಲ್ಲೂಕು ಕೇಂದ್ರದಲ್ಲಿ ಕೋರ್ಟ್ ಸ್ಥಾಪನೆ
ಯಾದಗಿರಿ: ಹೊಸ ತಾಲ್ಲೂಕುಗಳಾದ ಗುರುಮಠಕಲ್ ಹುಣಸಗಿ ವಡಗೇರಾ ಸ್ಥಾಪನೆಗೊಂಡು ಹಲವು ವರ್ಷ ಸಂದಿವೆ. ಆದರೆ ತಾಲ್ಲೂಕು ಕೇಂದ್ರದ ಪ್ರಮುಖ ಕಚೇರಿಗಳನ್ನು ಸ್ಥಾಪಿಸಿಲ್ಲ. ಅದರಲ್ಲಿ ಕೋರ್ಟ್ ಸ್ಥಾಪನೆಯು ಒಂದಾಗಿದೆ. ಆಯಾ ತಾಲ್ಲೂಕು ಕೇಂದ್ರದ ಸ್ಥಳಕ್ಕೆ ಕಂದಾಯ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಆಗಮಿಸಿ ಕೋರ್ಟ್ ಸ್ಥಾಪನೆಯ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವುದರಲ್ಲಿ ಮಗ್ನರಾಗಿದ್ದಾರೆ. ಆದರೆ ಕೋರ್ಟ್ ಸ್ಥಾಪನೆಯ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ ಎಂದು ಹೊಸ ತಾಲ್ಲೂಕು ಕೇಂದ್ರದ ಜನತೆಯು ಬೇಸರ ವ್ಯಕ್ತಪಡಿಸಿದ್ದಾರೆ. ‘ಕಕ್ಷಿದಾರರ ಹಿತದೃಷ್ಟಿಯಿಂದ ತ್ವರಿತ ನ್ಯಾಯದಾನ ಹಾಗೂ ಮನೆ ಬಾಗಿಲಿಗೆ ನ್ಯಾಯ ಎಂಬ ಸರ್ಕಾರದ ಘೋಷಣೆಯಾಗಿ ಉಳಿದುಕೊಂಡಿದೆ. ಆದರೆ ಕೋರ್ಟ್ ಸ್ಥಾಪನೆ ಮಾತ್ರ ದೂರವಾಗಿದೆ. ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟದಲ್ಲಿ ಹೊಸ ತಾಲ್ಲೂಕು ಕೇಂದ್ರದಲ್ಲಿ ತ್ವರಿತವಾಗಿ ಕೋರ್ಟ್ ಸ್ಥಾಪನೆಗೆ ಕ್ರಮ ತೆಗೆದುಕೊಂಡು ಅನುದಾನ ಬಿಡುಗಡೆ ಮಾಡಬೇಕು’ ಎಂದು ನ್ಯಾಯದಿಂದ ದೂರವಾಗಿರುವ ಕಕ್ಷಿದಾರರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.