ಯಾದಗಿರಿ: ನಗರಸಭೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ 1,310 ಅಕ್ರಮ ಖಾತಾ ನಕಲು, ₹ 4 ಕೋಟಿ ಮೌಲ್ಯದ ಸರ್ಕಾರಿ ಜಮೀನು ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತರು ಬದಲಾಗಿ ಇದೇ ಆಗಸ್ಟ್ 22ಕ್ಕೆ ಒಂದು ವರ್ಷ ಕಳೆದಿದ್ದು, ಇಲ್ಲಿಯವರೆಗೆ ಕಾಯಂ ಪೌರಾಯುಕ್ತರು ನೇಮಕವಾಗಿಲ್ಲ.
2023ರ ಆಗಸ್ಟ್ 22ರಿಂದ ಪೌರಾಯುಕ್ತರ ಹುದ್ದೆ ಖಾಲಿ ಉಳಿದಿದ್ದು, ಪ್ರಭಾರ ಆಡಳಿತದಲ್ಲಿ ನಡೆಯುತ್ತಿದೆ.
ಹಿಂದಿನ ನಗರಸಭೆ ಪೌರಾಯುಕ್ತರಾಗಿದ್ದ ಸಂಗಮೇಶ ಉಪಾಸೆಯವರು ಅಕ್ರಮ ಖಾತಾ ನಕಲು, ಸರ್ಕಾರಿ ಜಮೀನು ಪರಭಾರೆ ಪ್ರಕರಣಗಳನ್ನು ಪತ್ತೆ ಹತ್ತಿ ತನಿಖೆ ಕೈಗೊಳ್ಳುವಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ಸೇರಿ ಜಿಲ್ಲಾಧಿಕಾರಿ, ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಾದ ನಂತರ ಪೌರಾಯುಕ್ತರನ್ನು ಬಿಡುಗಡೆ ಮಾಡಲಾಗಿತ್ತು. ಅವರಿಂದ ತೆರವಾದ ಸ್ಥಾನಕ್ಕೆ ಇಲ್ಲಿಯವರೆಗೆ ನೇಮಕವಾಗಿಲ್ಲ.
ಆಗ ತಾನೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಈ ಪ್ರಕರಣದಿಂದ ಮುಜುಗರವಾಗಿತ್ತು. ಆದರೂ ಅದು ಹಿಂದಿನ ಅವಧಿಯಲ್ಲಿ ನಡೆದ ಪ್ರಕರಣ ಎಂದು ಕೈತೊಳೆದುಕೊಂಡು ಪೌರಾಯುಕ್ತರ ನೇಮಕಕ್ಕೆ ಮೀನಮೇಷ ಎಣಿಸಿತ್ತು ಎಂಬುದು ಸಾರ್ವಜನಿಕರ ಆರೋಪವಾಗಿದೆ.
ನಗರಸಭೆಯ ಸರ್ಕಾರಿ ಸರ್ವೆ ನಂ.391/1,2 ರಲ್ಲಿ ಮನೆ ಸಂಖ್ಯೆ 5-1- 408/23 ಎ ಹಾಗೂ 24 ಎ, 25ಎ, 26 ಎ, 27ಎ ಮತ್ತು 5-1-408/28ಎ ಎಂದು ಖಾಸಗಿ ವ್ಯಕ್ತಿಗಳಿಗೆ ಕಾನೂನು ಬಾಹಿರವಾಗಿ ಖಾತಾ ನಕಲು ನೀಡಿರುವ ಪ್ರಕರಣ ಜಿಲ್ಲಾ ಮಟ್ಟದಲ್ಲಿ ಸದ್ದು ಮಾಡಿತು.
‘ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ಕಳೆದ ಒಂದು ವರ್ಷದಿಂದ ಕಾಯಂ ಪೌರಾಯುಕ್ತರಿಲ್ಲದಿರುವುದು ಜಿಲ್ಲೆಯ ಬಗೆಗಿರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ’ ಎನ್ನುತ್ತಾರೆ ಹಿರಿಯ ವಕೀಲ ಭಾಸ್ಕರರಾವ ಮುಡಬೂಳ.
‘ಇಷ್ಟೆಲ್ಲ ಹಗರಣಗಳು ನಡೆದಿದ್ದರಿಂದ ಕಾಯಂ ಪೌರಾಯುಕ್ತರಾಗಲು ಯಾವೊಬ್ಬ ಅಧಿಕಾರಿಯೂ ಮುಂದೆ ಬರುತ್ತಿಲ್ಲ. ಇದರಿಂದ ನಗರದ ಅಭಿವೃದ್ಧಿ ಜೊತೆಗೆ ಕಡತಗಳು ಮುಂದೆ ಸಾಗುತ್ತಿಲ್ಲ. ಕೂಡಲೇ ಸಂಬಂಧಿಸಿದವರು ಎಚ್ಚೆತ್ತುಕೊಂಡು ಜಿಲ್ಲಾ ಕೇಂದ್ರಕ್ಕೆ ಅಗಿರುವ ಅನ್ಯಾಯ ಸರಿಪಡಿಸಲು ಮುಂದಾಗಬೇಕು‘ ಎನ್ನುತ್ತಾರೆ ಅವರು.
ಶೀಘ್ರದಲ್ಲೇ ಯಾದಗಿರಿ ನಗರಸಭೆಗೆ ನೂತನ ಕಾಯಂ ಪೌರಾಯುಕ್ತರು ಬರಲಿದ್ದಾರೆ. ಈಗಾಗಲೇ ಸಂಬಂಧಿಸಿದವರು ಕ್ರಮ ವಹಿಸಲಿದ್ದಾರೆಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಯಾದಗಿರಿ ನಗರಸಭೆಯಲ್ಲಿ ಕಾಯಂ ಪೌರಾಯುಕ್ತರಿಲ್ಲದಿರುವುದು ಸರ್ಕಾರದ ಗಮನಕ್ಕಿದ್ದು ಶೀಘ್ರದಲ್ಲೇ ಸಚಿವರು ಶಾಸಕರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗುವುದುಅವಿನಾಶ ಜಗನ್ನಾಥ ರಾಜ್ಯ ಕಾರ್ಯದರ್ಶಿ ಕರ್ನಾಟಕ ಯುವ ಕಾಂಗ್ರೆಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.