ಮಂಗಳವಾರ, ಮೇ 24, 2022
27 °C

ಪ್ರಬಂಧ ಬರಹ, ಭಾಷಾಂತರಕ್ಕೆ ಸಿದ್ಧತೆ ಹೇಗೆ?

ವೈ.ವಿ. ಗಾಯತ್ರಿ Updated:

ಅಕ್ಷರ ಗಾತ್ರ : | |

Prajavani

ಪಿಎಸ್‌ಐ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ-1 ರ‍್ಯಾಂಕಿಂಗ್ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆ-2 ರಲ್ಲಿ ಸಾಮಾನ್ಯವಾಗಿ ಅಭ್ಯರ್ಥಿಗಳು ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಆದರೆ ಪ್ರಶ್ನೆ ಪತ್ರಿಕೆ 1ರ 50 ಅಂಕಗಳು ಅಭ್ಯರ್ಥಿಯ ಯಶಸ್ಸನ್ನು ಖಚಿತಪಡಿಸುತ್ತವೆ. ಹಾಗಾಗಿ ಪ್ರಶ್ನೆಪತ್ರಿಕೆ 1ರ ತಯಾರಿ ಅತಿ ಮುಖ್ಯವಾಗಿದೆ.

ಪತ್ರಿಕೆ-1ರಲ್ಲಿನ ಮೂರು ವಿಭಾಗಗಳು ಹೀಗಿವೆ: ಪ್ರಬಂಧ ಬರವಣಿಗೆ- 600 ಪದಗಳಲ್ಲಿ– 20 ಅಂಕಗಳು; ಭಾಷಾಂತರ–ಕನ್ನಡದಿಂದ ಇಂಗ್ಲಿಷ್‌ಗೆ–10 ಅಂಕಗಳು; ಇಂಗ್ಲಿಷ್‌ನಿಂದ ಕನ್ನಡಕ್ಕೆ–10 ಅಂಕಗಳು; ಸಂಕ್ಷಿಪ್ತ ಬರವಣಿಗೆ–10 ಅಂಕಗಳು.

ಪ್ರಬಂಧ

ಪ್ರಬಂಧದ ವಿಷಯ ಸಾಮಾನ್ಯವಾಗಿ ಪ್ರಚಲಿತ ಘಟನೆಗಳನ್ನು ಒಳಗೊಂಡಿರುತ್ತದೆ. ಅಂದರೆ ರಾಜಕೀಯ, ಸಾಮಾಜಿಕ, ಆರ್ಥಿಕ, ವಿವಾದ ಮತ್ತು ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದಂತೆ ಇರುತ್ತದೆ. ಪ್ರಂಬಂಧಗಳ ಮಾಹಿತಿ ಕ್ರೋಢೀಕರಣಕ್ಕೆ ಪತ್ರಿಕೆಗಳ ಸಂಪಾದಕೀಯವನ್ನು ಓದಿ. ಮಾರುಕಟ್ಟೆಯಲ್ಲಿ ದೊರೆಯುವ ಪ್ರಬಂಧ ಪುಸ್ತಕಗಳಲ್ಲಿರುವ ಮಾಹಿತಿ ಪರೀಕ್ಷಾ ಸಮಯಕ್ಕೆ ಅಪ್‌ಡೇಟ್ ಆಗಿರುವುದಿಲ್ಲ. ಪ್ರಬಂಧ ಬರವಣಿಗೆಯಲ್ಲಿ ಕೆಳಗಿನ ವಿವರಗಳನ್ನು ಗಮನಿಸಿ, ತಯಾರಿ ನಡೆಸಿ.

ಒಟ್ಟು ಪ್ಯಾರಾಗಳ ಸಂಖ್ಯೆ ಗರಿಷ್ಠ 6ಕ್ಕೆ ಸೀಮಿತವಾಗಿರಲಿ.

ಬರೆದ ಪುಟ ಸ್ಫುಟವಾಗಿದ್ದು ಚಿತ್ತುಕಾಟು ಇಲ್ಲದಂತಿರಲಿ.

ಈ ವಿಭಾಗದಲ್ಲಿ ಕೆಲವು ಆಯ್ಕೆಗಳಿರುತ್ತವೆ. ಪ್ರಶ್ನೆ ಆಯ್ಕೆ ಮಾಡುವಾಗ ವಿವಾದಾತ್ಮಕವಲ್ಲದ ವಿಷಯವನ್ನು ಆರಿಸಿಕೊಳ್ಳಿ.

ಪೀಠಿಕೆ, ಒಕ್ಕಣೆ, ಉಪಸಂಹಾರ.. ಎಂದೆಲ್ಲಾ ಸೂಚಿಸಲು ಮರೆಯಬೇಡಿ.

ಪೀಠಿಕೆ ಮೂರ‍್ನಾಲ್ಕು ಸಾಲುಗಳಿಗೆ ಸೀಮಿತವಾಗಿರಲಿ.

ಒಕ್ಕಣೆ ನಿರೂಪಿಸುವಾಗ ವಿಷಯವನ್ನು ಕ್ರಮಬದ್ಧವಾಗಿ ಜೋಡಿಸಿ ರಚಿಸಿ.

ಉಪಸಂಹಾರವೂ ಕೂಡ ಮೂರ‍್ನಾಲ್ಕು ಸಾಲು ಮೀರದಿರಲಿ.

ಮೊದಲು ಅಥವಾ ಕೊನೆ ನಕಾರಾತ್ಮಕವಾಗಿ ಮಾಡದಿರಿ.

ದತ್ತಾಂಶ ನಮೂದಿಸುವಾಗ ನಿಖರತೆಯನ್ನು ಖಾತ್ರಿಪಡಿಸಿಕೊಳ್ಳಿ.

ವಿಷಯ ಪ್ರಬಲವಾಗಿ, ಪ್ರಬುದ್ಧವಾಗಿ, ಆಸಕ್ತಿ ಮತ್ತು ಮಾಹಿತಿ ಒಳಗೊಂಡಿದೆ ಎನಿಸಿ, ಗರಿಷ್ಠ ಅಂಕ ನೀಡುವಂತಿರಲಿ.

ಸಂಕ್ಷಿಪ್ತ ಬರವಣಿಗೆ

ಈ ವಿಭಾಗದಲ್ಲಿ ಕೊಟ್ಟಿರುವ ಮೂಲ ವಾಕ್ಯವೃಂದವನ್ನು ಸರಿಯಾಗಿ ಅರ್ಥೈಸಿಕೊಳ್ಳಿ.

ಮುಖ್ಯ ಎನಿಸುವ ಸಾಲುಗಳನ್ನು ಗುರುತು ಮಾಡಿಕೊಳ್ಳಿ.

ಮೂಲದಲ್ಲಿ ಇರುವ ಪದಗಳ ಸಂಖ್ಯೆಯ 1/3ರಷ್ಟು ಪದಗಳಿಗೆ ನಿಮ್ಮ ನಿರೂಪಣೆಯನ್ನು ಮಿತಿಯಾಗಿಸಿ, ವಾಕ್ಯವೃಂದದಲ್ಲಿನ ಪ್ರತಿ ಪದವನ್ನೂ ಎಣಿಸಿ, ಅದರ 1/3ರಷ್ಟಕ್ಕೆ ನಿರೂಪಿಸಿ.

ಸಾಧ್ಯವಾದಷ್ಟು ನಿಮ್ಮ ಸ್ವಂತ ಮಾತುಗಳಲ್ಲಿ ಬರೆಯಿರಿ. ನೆನಪಿರಲಿ, ಮೂಲ ಅರ್ಥಕ್ಕೆ ಧಕ್ಕೆ ಬರುವಂತಿರಬಾರದು.

ಶೀರ್ಷಿಕೆ ಬರೆಯಲು ಮರೆಯದಿರಿ.

ಶೀರ್ಷಿಕೆ ಗರಿಷ್ಠ 3 ಪದಗಳು ಮಾತ್ರ ಇರಲಿ.

ಅದಕ್ಕೆಂದೇ ಕೊಟ್ಟಿರುವ ವಿಶೇಷ ಉತ್ತರ ಪತ್ರಿಕೆಯನ್ನು ಬಳಸುವುದನ್ನು ಅಭ್ಯಸಿಸಿ. ಈ ನಮೂನೆಯ ಹಾಳೆಗಳು ಪುಸ್ತಕ ಮಳಿಗೆಯಲ್ಲಿ ಲಭ್ಯ.

ವಾಕ್ಯವೃಂದವನ್ನು ಇಡಿಯಾಗಿ ಓದಿಕೊಳ್ಳಿ, ಸಾಲು ಅಥವಾ ಕೆಲವು ಸಾಲುಗಳು ಎಂದೆಲ್ಲಾ ವಿಭಜಿಸಬಾರದು.

ಯಾವ ಕಾರಣಕ್ಕೂ ಮಧ್ಯದಲ್ಲಿ ಚೌಕಗಳನ್ನು ಬಿಡಬೇಡಿ ಅಥವಾ ಚಿತ್ತುಕಾಟು ಮಾಡಬೇಡಿ.

ವಿರಾಮ ಚಿಹ್ನೆಗಳನ್ನು ಅರ್ಥಪೂರ್ಣವಾಗಿ ಬಳಸಿ.

ಭಾಷಾಂತರ

ಈ ವಿಭಾಗದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಷಯವನ್ನು ನೀಡಿರುತ್ತಾರೆ. ಭಾಷಾಂತರಕ್ಕೆ ಕೆಳಗಿನ ವಿವರಗಳನ್ನು ಗಮನಿಸಿ, ತಯಾರಿ ನಡೆಸಿ.

ಓದುವಾಗ ಸಂಪೂರ್ಣ ಅರ್ಥ ಗ್ರಹಿಸಿ.

ಮುಖ್ಯ ಪದಗಳ ಅನುವಾದಿತ ಪದಗಳನ್ನು ಬರೆದಿಟ್ಟುಕೊಳ್ಳಿ.

ವ್ಯಾಕರಣದ ಬಗ್ಗೆ ಹೆಚ್ಚಿನ ಗಮನ ವಹಿಸಿ, ಬಹಳ ಆಡಂಬರದ ಭಾಷೆಯನ್ನು ನಿಮ್ಮಿಂದ ನಿರೀಕ್ಷಿಸುವುದಿಲ್ಲ, ಆದರೆ ತಪ್ಪಿಲ್ಲದಂತೆ ಬರೆಯಬೇಕು.

ಇಲ್ಲಿ ಪದಶಃ ಅರ್ಥ ಮುಖ್ಯವಲ್ಲ, ಭಾವಾರ್ಥಕ್ಕೆ ಧಕ್ಕೆ ಬರದಂತೆ ಮಂಡಿಸಬೇಕು.

ಗಾದೆ ಮಾತುಗಳು, ನಾಣ್ಣುಡಿಗಳು ಮುಂತಾದ ಭಾಷಾ ವೈಶಿಷ್ಟ್ಯಗಳಿದ್ದಲ್ಲಿ, ಪದಶಃ ಅನುವಾದ ಮಾಡದಿರಿ, ಅರ್ಥದ ತರ್ಜುಮೆ ಮಾಡದಿದ್ದಲ್ಲಿ ಇಡೀ ವಿಷಯದ ಭಾವಾರ್ಥವೇ ಅನರ್ಥವಾಗಿಬಿಡುತ್ತದೆ. ಹೀಗಾಗಿ ಗಮನವಿರಲಿ.

ಯಾವುದೇ ನಿರ್ದಿಷ್ಟ ನಾಮಪದಗಳನ್ನು ಬಳಸಿದ್ದರೆ, ಅನುವಾದಿಸಬಾರದು. ಉದಾಹರಣೆ: ಯಾವುದೊ ಸಂಸ್ಥೆಯ ಅಥವಾ ಅಂಗಡಿ ಮುಂಗಟ್ಟಿನ ಹೆಸರು ಇತ್ಯಾದಿ.

ಭಾಷಾಂತರ ಒಂದು ವಾಕ್ಯದಿಂದ ಮುಂದಿನ ವಾಕ್ಯಕ್ಕೆ ಮಾಡಬೇಕು, ಇಡೀ ವಿಷಯವನ್ನು ಒಟ್ಟಾಗಿ ಅನುವಾದಿಸಬಾರದು.

ಎಲ್ಲಾ ವಿಭಾಗಗಳಿಗೂ ಬರವಣಿಗೆ ಸ್ಪಷ್ಟ ಮತ್ತು ಸ್ಫುಟವಾಗಿರುವುದು ಮುಖ್ಯ. ಸಮಯ ನಿರ್ವಹಣೆ ಅತೀ ಮುಖ್ಯ. ಪ್ರತಿ ವಿಭಾಗಕ್ಕೆ ಎಷ್ಟು ಸಮಯ ಮೀಸಲಿಡಬೇಕೆಂಬುದು ವ್ಯಕ್ತಿಗತ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು, ಸಾಧಾರಣವಾಗಿ ಪ್ರಶ್ನೆ ಪತ್ರಿಕೆ ಅವಗಾಹನೆ ಮತ್ತು ಉತ್ತರಗಳ ಸ್ಥೂಲ ರೂಪುರೇಷೆ-10 ನಿಮಿಷಗಳು; ಪ್ರಬಂಧ- 30 ನಿಮಿಷಗಳು; ಸಂಕ್ಷಿಪ್ತ ಬರವಣಿಗೆ- 15 ನಿಮಿಷಗಳು; ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ-15 ನಿಮಿಷಗಳು; ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರ-15 ನಿಮಿಷಗಳು; ಪುನರ್‌ಪರಿಶೀಲನೆಗೆ 5 ನಿಮಿಷಗಳು; ಒಟ್ಟು ನಿಗದಿ ಪಡಿಸಿದ ಸಮಯ-90 ನಿಮಿಷಗಳಲ್ಲಿ ಪ್ರಶ್ನೆ ಪತ್ರಿಕೆ 1ನ್ನು ಪೂರ್ಣಗೊಳಿಸುವುದಕ್ಕೆ ತಯಾರಿ ನಡೆಸಬಹುದು. ಅಭ್ಯಾಸಕ್ಕೆ ಹಳೆಯ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ.

(ಲೇಖಕಿ: ನಿರ್ದೇಶಕರು, ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಪರೀಕ್ಷೆ ಕೇಂದ್ರ, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು