ಭಾನುವಾರ, ಮೇ 29, 2022
21 °C

ಸತತ ಅಧ್ಯಯನವೇ ಸಾಧನೆಯ ಮಂತ್ರ: ಕೆಎಎಸ್‌ ಪಾಸ್‌ ಮಾಡಿದ ಗರ್ಜಿಲಿಂಗಪ್ಪ ಸಂದರ್ಶನ

ಶಿ.ಗು.ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ ಜಿಲ್ಲೆಯ ಸಿರಿಗೇರಿ ಗ್ರಾಮದ ಗರ್ಜಿಲಿಂಗಪ್ಪ, ಪ್ರಸ್ತುತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಡುಬಡತನದ ಕುಟುಂಬದಲ್ಲಿ ಬೆಳೆದ ಅವರು, ಶಿಕ್ಷಕಿಯೊಬ್ಬರ ಪ್ರೋತ್ಸಾಹದಿಂದ ಪ್ರಾಥಮಿಕ–ಪ್ರೌಢಶಿಕ್ಷಣ ಮುಗಿಸಿ, ಶಿಕ್ಷಕರೊಬ್ಬರ ನೆರವು ಹಾಗೂ ಮಾರ್ಗದರ್ಶನದಿಂದ ಪದವಿ ಮುಗಿಸಿ, ಸತತ ಪ್ರಯತ್ನಗಳ ಮೂಲಕ ಕೆಎಎಸ್‌ ಪಾಸ್‌ ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದವರ ಮಾತುಗಳಿಂದ ಪ್ರೇರಿತರಾಗಿ ತಾವು ಕೆಎಎಸ್‌ ಪಾಸ್‌ ಮಾಡಿದ ವಿವರವನ್ನು ಈ ಕಿರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಶೈಕ್ಷಣಿಕ ಜೀವನ ಹೇಗಿತ್ತು?

ನಮ್ಮದು ಕಡುಬಡತನದ ಕುಟುಂಬ. ಅಪ್ಪ–ಅಮ್ಮ ಕೂಲಿ ಕೆಲಸ ಮಾಡುತ್ತಿದ್ದರು. ನನ್ನನ್ನು ಶಾಲೆಗೆ ಕಳುಹಿಸುವಷ್ಟು ಶಕ್ತರಾಗಿರಲಿಲ್ಲ. ಅವರು ಕೂಲಿ ಕೆಲಸಕ್ಕೆ ಹೋಗುವಾಗ ನನ್ನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಕೂಲಿ ಕೆಲಸಕ್ಕೆ ಹೋಗುತ್ತಾ, ಅರ್ಧಕ್ಕೆ ಶಾಲೆ ಬಿಟ್ಟ ನನ್ನನ್ನು ಪುನಃ ಶಾಲೆ ಸೇರುವಂತೆ ಪ್ರೋತ್ಸಾಹಿಸಿದ್ದು ಶಿಕ್ಷಕಿ ಹಂಪಮ್ಮ. ಅವರ ನೆರವಿನಿಂದ ಸಿರಿಗುಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 7ರವರೆಗೆ ಓದಿದೆ. ಸಂಡೂರು ತಾಲ್ಲೂಕಿನ ವಿಠಲಾಪುರದಲ್ಲಿ ಪ್ರೌಢಶಿಕ್ಷಣ ಪೂರೈಸಿದೆ. ಆ ಶಾಲೆಯ ಗಣಿತ ಶಿಕ್ಷಕ ರಾಣೆಪ್ಪ ಅವರು ನನಗೆ ಶಿಕ್ಷಣದ ಜೊತೆಗೆ, ಜೀವನದ ಮೌಲ್ಯಗಳನ್ನು ಕಲಿಸಿ, ಮಾರ್ಗದರ್ಶನ ನೀಡಿದರು. ಹೀಗೆ ಪರಿಶ್ರಮದೊಂದಿಗೆ ಪದವಿ ಪೂರೈಸಿದೆ. ಹಣದ ಕೊರತೆಯಿಂದ ಮುಂದಕ್ಕೆ ಓದಲಾಗಲಿಲ್ಲ. ನಂತರ ಹುಬ್ಬಳ್ಳಿಯ ಲಾಡ್ಜ್‌ವೊಂದರಲ್ಲಿ ರೂಮ್ ಬಾಯ್ ಆಗಿ ಕೆಲಸಕ್ಕೆ ಸೇರಿದೆ. ಈ ವಿಷಯ ತಿಳಿದ ರಾಣೆಪ್ಪ ಮೇಷ್ಟ್ರು, ನನ್ನನ್ನ ಕರೆಸಿ ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲ ಕೊಡಿಸಿ, ಉನ್ನತ ವ್ಯಾಸಂಗಕ್ಕೆ ಉತ್ತೇಜಿಸಿದರು. ಈ ಆರ್ಥಿಕ ಸಹಕಾರದಿಂದ ಬಿ.ಇಡಿ ಪದವಿ ಪಡೆದೆ. ಬಿ.ಇಡಿ ಓದುವಾಗ ಬಳ್ಳಾರಿಯ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರೊ. ಸುರೇಶ ಬಾಬು ಅಗತ್ಯ ಪುಸ್ತಕಗಳನ್ನು ನೀಡಿದರು. ಅವರ ನೆರವು ಮರೆಯುವಂತಿಲ್ಲ. ಎಲ್ಲರ ಸಹಕಾರದಿಂದ 2008ರಲ್ಲಿ ಸಿರುಗುಪ್ಪ ತಾಲ್ಲೂಕಿನ ಕರೂರ ಗ್ರಾಮದ ಅಗಸರ ದ್ಯಾವಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ನೇಮಕಗೊಂಡೆ. 

ಶಿಕ್ಷರಾಗಿದ್ದು ಸರಿ, ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಒಲವು ಮೂಡಿದ್ದು ಹೇಗೆ?

ಶಿಕ್ಷಕನಾಗಿ ಸೇರುವ ಪೂರ್ವದಲ್ಲಿ 2006 ರಲ್ಲಿ ಎಸ್.ಡಿ.ಎ ಪರೀಕ್ಷೆ ಬರೆದಿದ್ದೆ. ಅದೇ ವರ್ಷ ಕೆಎಎಸ್ ಪರೀಕ್ಷೆಯನ್ನೂ ಬರೆದಿದ್ದೆ. ಮನೆಯಲ್ಲಿ ಬಡತನವಿದ್ದ ಕಾರಣ ಸಂಸಾರ ಸಾಗಿಸಲು ತುಂಬಾ ಒದ್ದಾಡುತ್ತಿದ್ದೆ. ಯಾವುದಾದರೂ ಒಂದು ಕೆಲಸ ಬೇಕಾಗಿತ್ತು. ಪ್ರೌಢಶಾಲಾ ಶಿಕ್ಷಕನಾಗಿ ನೇಮಕವಾದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಹತ್ತು ವರ್ಷ ಶಿಕ್ಷಕನಾಗಿ ಕಾರ್ಯನಿರ್ವಹಿಸಿದೆ. ಆ ಸಂದರ್ಭದಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕೆಎಎಸ್ ಮತ್ತು ಐಎಎಸ್ ಪಾಸಾದವರ ಸಂದರ್ಶನಗಳನ್ನು ಓದುತ್ತಿದ್ದೆ. ಅಂಥವರ ಮಾತುಗಳು ನನ್ನ ಮನಸ್ಸಿಗೆ ಬಹಳ ಹಿಡಿಸಿದವು. ಕೆಎಎಸ್‌ ಪರೀಕ್ಷೆ ಬರೆಯಲು ಸ್ಫೂರ್ತಿ ನೀಡಿದವು. ಆ ಹೊತ್ತಿಗೆ ಮೂರು ಬಾರಿ ಕೆಎಎಸ್ ಬರೆದ ಅನುಭವವೂ ಇತ್ತು. ಮತ್ತೆ ನಿರಂತರ ಅಧ್ಯಯನದೊಂದಿಗೆ 2014ರಲ್ಲಿ ಕೆಎಎಸ್‌ ಪರೀಕ್ಷೆ ಪಾಸ್ ಮಾಡಿದೆ. 

ಒಂದು ಕಡೆ ಶಿಕ್ಷಕ ವೃತ್ತಿ, ಇನ್ನೊಂದೆಡೆ ಕೆಎಎಸ್ ಪರೀಕ್ಷೆ ಎರಡನ್ನೂ ಹೇಗೆ ನಿಭಾಯಿಸಿದಿರಿ?

ನಾನು ಕೆಎಎಸ್ ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡಿದವರು ರಾಣೆಪ್ಪ ಶಿಕ್ಷಕರು. ಅವರು ಹೇಳುತ್ತಿದ್ದ ಸಮಯಪಾಲನೆ ನನ್ನ ನೆರವಿಗೆ ಬಂದಿತು. ಸಮಯ ಪಾಲನೆ ಜೊತೆಗೆ ಪರೀಕ್ಷೆ ಸಿದ್ಧತೆಗಾಗಿಯೇ ಸಮಯ ಮೀಸಲಿಟ್ಟೆ. ಶಾಲಾ ಅವಧಿಯ ನಂತರ ಕೆಎಎಸ್ ಪರೀಕ್ಷೆಗೆ ಓದುತ್ತಿದ್ದೆ. ಶನಿವಾರ ಮತ್ತು ಭಾನುವಾರದ ರಜೆ  ದಿನಗಳನ್ನು ಅಧ್ಯಯನಕ್ಕಾಗಿ ಬಳಸಿಕೊಳ್ಳುತ್ತಿದ್ದೆ. ಓದು, ಮರು ಓದು, ನಿರಂತರ ಅಭ್ಯಾಸ.. ಇಂಥ ಪ್ರಯತ್ನಗಳು ಪರೀಕ್ಷೆಯ ಯಶಸ್ಸಿಗೆ ನೆರವಾದವು. ಕೆಲಸದ ನಡುವೆ ಸಮಯ ಸಿಗುತ್ತಿರಲಿಲ್ಲ. ನಾನೇ ಸಮಯ ಹೊಂದಿಸಿಕೊಳ್ಳುತ್ತಿದ್ದೆ.

ನಾಲ್ಕನೇ ಪ್ರಯತ್ನದಲ್ಲಿ ಕೆಎಎಸ್‌ ಪಾಸ್‌ ಮಾಡಿದಿರಿ. ಈ ಪಯಣದಲ್ಲಿ ಓದಿನ ನಿರಂತರತೆ ಹೇಗೆ ಕಾಪಾಡಿಕೊಂಡಿರಿ?

ಬಿ.ಇಡಿ ಪದವಿ ಮುಗಿದ ನಂತರ ಕೆಲಸಕ್ಕಾಗಿ ಹುಡುಕಾಡುತ್ತಿದ್ದೆ. ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದೆ. ಕೆಎಎಸ್ ಪರೀಕ್ಷೆ ಬರೆಯಬೇಕೆಂಬ ತುಡಿತವಿತ್ತು. ಹಾಗೆಯೇ ಪರೀಕ್ಷೆ ಪಾಸ್‌ ಮಾಡಬೇಕೆಂಬ ಸ್ಪಷ್ಟಗುರಿ ಹಾಗೂ ಆತ್ಮವಿಶ್ವಾಸದೊಂದಿಗೆ ಮುನ್ನಡೆದೆ. ಮೊದಲು ಮುಖ್ಯ ಪರೀಕ್ಷೆಗೆ ಬೇಕಾದ ಅಧ್ಯಯನ ಸಾಮಗ್ರಿಗಳನ್ನು ಕಲೆ ಹಾಕಿದೆ. ಸ್ನೇಹಿತ ರೊಟ್ಟಿಗೆ ಕೆಎಎಸ್ ಪರೀಕ್ಷೆ ಕುರಿತು ಚರ್ಚಿಸುತ್ತಿದ್ದೆ. ಪದವಿಯಲ್ಲಿ ಕನ್ನಡ ಸಾಹಿತ್ಯ ಒಂದು ವಿಷಯವಾಗಿ ಓದಿದ್ದರಿಂದ ನನಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಯಿತು. ಮುಖ್ಯ ಶಿಕ್ಷಕ ಕಲ್ಲಗುಡಿ ವಿರುಪಾಕ್ಷಿ ಹಾಗೂ ಹೊನ್ನುರವಲಿಯವರ ಮಾರ್ಗದರ್ಶನ, ನನಗೆ ತುಂಬಾ ನೆರವಾಯಿತು.

ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುತ್ತಿರುವ ಇಂದಿನ ಅಭ್ಯರ್ಥಿಗಳಿಗೆ ನಿಮ್ಮ ಸಲಹೆ ಏನು?

ಕೆಎಎಸ್, ಐಎಎಸ್ ಪರೀಕ್ಷೆ ಬರೆಯುವವರು ಅಧ್ಯಯನದ ಜೊತೆಗೆ, ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಧ್ಯಯನ– ಅಭ್ಯಾಸ ಕುರಿತು ನಿಖರವಾದ ಯೋಜನೆ ಹಾಕಿಕೊಳ್ಳಬೇಕು. ಅಧ್ಯಯನದ ವೇಳೆ ಎಂಥದ್ದೇ ಸಮಸ್ಯೆ ಎದುರಾದರೂ ಧೃತಿಗೆಡಬಾರದು. ಈಗಾಗಲೇ ಕೆಎಎಸ್ ಮತ್ತು ಐಎಎಸ್ ಪರೀಕ್ಷೆ ಉತ್ತೀರ್ಣರಾದವರ ಬಳಿ ಮಾರ್ಗದರ್ಶನ ಪಡೆಯಬೇಕು. ಈ ಪರೀಕ್ಷೆಗಳಲ್ಲಿ ನಪಾಸಾದವರ ಬಳಿ ಪರೀಕ್ಷೆಯ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಬೇಕು. ಬಹು ಮುಖ್ಯವಾಗಿ ಪರೀಕ್ಷೆಗೆ ಅಗತ್ಯವಾದ ಅಧ್ಯಯನ ಸಾಮಗ್ರಿಗಳನ್ನು ಅನುಕ್ರಮವಾಗಿ ಜೋಡಿಸಿಟ್ಟುಕೊಂಡು, ಸತತ ಅಧ್ಯಯನ ಕೈಗೊಳ್ಳಬೇಕು. ಓದಿದ್ದನ್ನು ಅರ್ಥವಾಗುವ ರೀತಿಯಲ್ಲಿ ಪರೀಕ್ಷೆಯಲ್ಲಿ ಪ್ರಸ್ತುತಪಡಿಸಬೇಕು. ಹಾಗೆ ಬರೆಯುವ ವಿಧಾನವನ್ನು ಕಲಿಯಬೇಕು. ನೂರು ಪುಟಗಳಷ್ಟು ಬರೆಯಬೇಕಾಗಿರುವುದರಿಂದ ಆಳವಾದ ಅಧ್ಯಯನ ಅಗತ್ಯ. ನಿರಂತರ ಓದಿನ ಜೊತೆಗೆ ಓದಿದ್ದನ್ನು ಪುನರಾವರ್ತನೆ ಖಂಡಿತ ಮಾಡಲೇಬೇಕು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು