ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಪರೀಕ್ಷೆ: ಸಾಮಾನ್ಯ ಅಧ್ಯಯನ ಪತ್ರಿಕೆಗೆ ತಯಾರಿ

Last Updated 10 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ (ಜನರಲ್‌ ಸ್ಟಡಿ) ಪ್ರಶ್ನೆ ಪತ್ರಿಕೆಯು ಮುಖ್ಯವಾದ ಮತ್ತು ಹುದ್ದೆಗಳ ಆಯ್ಕೆಗೆ ನಿರ್ಧಾರ ಮಾಡುವಂತಹ ಪತ್ರಿಕೆ. ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗಳ ಪರೀಕ್ಷೆಯಿಂದ ಪ್ರಾರಂಭವಾಗಿ ಐಎಎಸ್‌ ಹಂತದ ಪರೀಕ್ಷೆಗಳವರೆಗೆ, ಸಾಮಾನ್ಯ ಅಧ್ಯಯನ ವಿಷಯಗಳ ಬಗ್ಗೆ ಮೂಲಜ್ಞಾನದ ಜೊತೆಗೆ ಆಳವಾದ ವಿಷಯ ಜ್ಞಾನವೂ ಅತ್ಯವಶ್ಯ.

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಬೇಕಾಗಿರುವ ಪುಸ್ತಕಗಳನ್ನು ಮೊದಲು ಕ್ರೋಢೀಕರಿಸಿ, ಮನೆಯಲ್ಲಿಯೇ ವೈಯಕ್ತಿಕ ಚಿಕ್ಕ ಗ್ರಂಥಾಲಯ ಮಾಡಿಕೊಳ್ಳಬೇಕು. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಅಭ್ಯರ್ಥಿಗಳಿಗೆ ರಾಜ್ಯಸರ್ಕಾರದ5ರಿಂದ,10ನೇತರಗತಿಪಠ್ಯಪುಸ್ತಕಗಳು(http://ktbs.kar.nic.in/New/index.html#!/textbook) ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಎನ್‌ಸಿಇಆರ್‌ಟಿ 5ನೇ ತರಗತಿಯಿಂದ 12 ನೇ ತರಗತಿ ಪಠ್ಯಪುಸ್ತಕಗಳನ್ನು ಕೂಡ ಅಭ್ಯಾಸ ಮಾಡಬಹುದು. ಈ ಪುಸ್ತಕಗಳು ಮಾರುಕಟ್ಟೆಯಲ್ಲಿಯೂ ಲಭ್ಯವಿದ್ದು, ಈ ಪಠ್ಯಪುಸ್ತಕಗಳನ್ನು ಕನಿಷ್ಠ ಮೂರು ನಾಲ್ಕು ಬಾರಿಯಾದರೂ ಓದಿ, ಉತ್ತಮ ಜ್ಞಾನದ ತಳಹದಿ ಹಾಕಿಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಲಭಿಸುವ ಪ್ರತಿ ವಿಷಯಕ್ಕೆ ಸಂಬಂಧಿಸಿದ ವಿಷಯ ತಜ್ಞರು ರಚಿಸಿದ ಪುಸ್ತಕಗಳನ್ನು ಓದುವುದು ಕೂಡ ಅವಶ್ಯ. ಪ್ರಚಲಿತ ಘಟನೆಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ನಿಯತಕಾಲಿಕ, ದಿನಪತ್ರಿಕೆಗಳು ಮತ್ತು ತರಬೇತಿ ಸಂಸ್ಥೆಗಳ ಉಚಿತ ತಿಂಗಳ ಇ– ಮ್ಯಾಗಜೀನ್‌ಗಳ ಸಹಾಯ ಪಡೆಯಬಹುದು. ಹಾಗೆಯೇ ವಿವಿಧ ತರಬೇತಿ ಸಂಸ್ಥೆಗಳ ಬೋಧನಾ ಪರಿಕರಗಳ ನಕಲು ಪ್ರತಿ ಪಡೆದು, ಎಲ್ಲಾ ಪುಸ್ತಕಗಳನ್ನು ಒಂದು ಕಡೆ ಕ್ರೋಢೀಕರಿಸಿ, ಸೂಕ್ತ ಸ್ಥಳವನ್ನು ನಿರ್ಧರಿಸಿ ಓದಲು ಪ್ರಾರಂಭಿಸಬೇಕು. ಪ್ರತಿ ವಿಷಯಕ್ಕೆ ಒಂದೊಂದು ನೋಟ್ ಪುಸ್ತಕವನ್ನು ಇಟ್ಟು ಅದರಲ್ಲಿ ನೋಟ್ಸ್ ಮಾಡಿಕೊಳ್ಳುವುದು ಸೂಕ್ರ.

ದೈಹಿಕ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ತಯಾರಿಗೆ ಬೇಕಾಗುವ ಸಮಯ ಮತ್ತು ಕೋಚಿಂಗ್ ತರಗತಿಗಳ ಸಮಯ ಹೊರತುಪಡಿಸಿ, ಕನಿಷ್ಠ ಆರು ಗಂಟೆಗಳ ಕಾಲ ಓದಲು ಮನಸ್ಸನ್ನು ಹಂತ ಹಂತವಾಗಿ ಅಣಿಗೊಳಿಸಿಕೊಳ್ಳಿ. ಎಲ್ಲಾ ವಿಷಯಗಳ ಮನನಕ್ಕೆ ಬೇಕಾಗುವ ಸಮಯವನ್ನು ವಿಭಜಿಸಿ ಓದುವ ಯೋಜನೆಯನ್ನು ತಯಾರಿಸಿಕೊಳ್ಳಬೇಕು. ಪ್ರತಿ ದಿನದ ಓದಿನ ಬಗ್ಗೆ ನಿಗಾ ಇಡಲು ದಿನಚರಿ ಪುಸ್ತಕವಿಟ್ಟು ಆಯಾ ದಿನ ಎಷ್ಟು ಗಂಟೆಗಳ ಕಾಲ ಓದಿದ್ದೀರಿ ಎನ್ನುವ ಮಾಹಿತಿ ಅನುಸರಿಸಿ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅರ್ಧ ಗಂಟೆಯಂತೆ ಓದುವ ಸಮಯವನ್ನು ಹೆಚ್ಚಿಸುತ್ತಾ, ಕನಿಷ್ಠ 6 ಗಂಟೆಗಳ ಕಾಲ ಉತ್ತಮ ಓದಿಗೆ ಗುರಿ ಇಟ್ಟುಕೊಳ್ಳಬೇಕಾಗುತ್ತದೆ. ಪರೀಕ್ಷೆ ಹತ್ತಿರದಲ್ಲಿ ಈ ಸಮಯವನ್ನು ಹೆಚ್ಚಿಸಿ ಶಿಸ್ತುಬದ್ಧವಾಗಿ ಓದುವುದರಿಂದ ಯಶಸ್ಸು ಖಂಡಿತ.

ದಿನಚರಿಯಲ್ಲಿ ಆಯಾದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯವರೆಗೆ ಓದಿದ ವಿಷಯಗಳ ಬಗೆಗಿನ ‘ಕೀ ವರ್ಡ್‌’ ಗಳನ್ನು ಮತ್ತು ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಬರೆದು, ಬಿಡುವಿನ ಸಮಯದಲ್ಲಿ ಅದನ್ನು ಪದೇ ಪದೇ ಓದಿ ಮನನ ಮಾಡಿಕೊಳ್ಳಬಹುದು. ‘ರೀಡ್‌, ರೀಕಾಲ್‌, ರಿಪ್ರೊಡ್ಯೂಸ್‌; ಅಂದರೆ ಓದುವುದು, ಜ್ಞಾಪಿಸಿಕೊಳ್ಳುವುದು ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಓದಿದ್ದನ್ನು ಪುನಃ ಪ್ರಸ್ತುತ ಪಡಿಸುವುದರಿಂದ ಓದಿದ ವಿಷಯಗಳು ಜ್ಞಾಪಕದಲ್ಲಿರುವುದಕ್ಕೆ ಸಹಕಾರಿ. ಪರೀಕ್ಷೆಯ ಸಮೀಪದಲ್ಲಿ ನೋಟ್ ಪುಸ್ತಕಗಳ ಮತ್ತು ದಿನಚರಿಯ ಸಹಾಯದಿಂದ ಪುನರಾವರ್ತನೆಯನ್ನು ಕಡಿಮೆ ಸಮಯದಲ್ಲಿ ಆತಂಕವಿಲ್ಲದೆ ಮಾಡಬಹುದಾಗಿದೆ.

ಓದಿನ ಮಧ್ಯದಲ್ಲಿ ವಿರಾಮ ಪಡೆದು, ಆ ಸಮಯದಲ್ಲಿ ಓದಿದ್ದನ್ನು ನೆನಪಿಸಿಕೊಳ್ಳಬೇಕು. ವಿರಾಮದ ನಂತರ ಮನಸ್ಸನ್ನು ಮತ್ತೆ ಅಣಿಗೊಳಿಸಲು, ಏಕಾಗ್ರತೆ ವೃದ್ಧಿಸಲು ಧ್ಯಾನ ಮಾಡಿ, ಪುಸ್ತಕ ಓದಿನ ಏಕತಾನತೆಯನ್ನು ಮುರಿಯಲು ಆ ದಿನದ ವೃತ್ತ ಪತ್ರಿಕೆ ಓದಿ. ಓದಿನ ಮಧ್ಯದಲ್ಲಿ ಆಲಸ್ಯ, ನಿದ್ದೆ ಸಹಜವಾಗಿದ್ದು, ಬಿಸಿಯಾದ ಕಾಫಿ/ಟೀ ಸೇವನೆ ಉತ್ತಮ. ಹಾಗೇ ಓದಿನ ದಣಿವಿದ್ದರೆ 10–15 ನಿಮಿಷಗಳ ಕಾಲ ಶವಾಸನ ಮಾಡಿ, ಪಾದದ ತುದಿಯಿಂದ ಮುಡಿಯವರೆಗೆ ಮನಸ್ಸಿನಲ್ಲಿ ‘ರಿಲ್ಯಾಕ್ಸ್‌ ರಿಲ್ಯಾಕ್ಸ್‌’ ಎಂದು ಹೇಳುತ್ತಾ ಮನಸ್ಸು ಮತ್ತು ಶರೀರದ ಬಿಗಿತನವನ್ನು ನಿವಾರಿಸಿ ಮತ್ತೆ ಓದಲು ಅಣಿಗೊಳಿಸಬಹುದು.

ಅಭ್ಯಾಸದ ಸಮಯದಲ್ಲಿ ಬರಬಹುದಾದ ಒತ್ತಡಗಳು, ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳು, ಭಾವನಾತ್ಮಕ ಒತ್ತಡಗಳು ಈ ಎಲ್ಲವನ್ನೂ ಸಕಾರಾತ್ಮಕವಾಗಿ ನಿಭಾಯಿಸಿ, ಯಶಸ್ಸು ನನ್ನದೇ ಎಂಬ ದೃಢ ನಿರ್ಧಾರದಿಂದ, ಶಾಂತ ಚಿತ್ತತೆಯಿಂದ ಯಶಸ್ಸಿಗೆ ಹಂತ ಹಂತವಾಗಿ ಓದುವುದು ಸ್ಪರ್ಧಾರ್ಥಿಗಳ ಜಾಣತನ.

(ಲೇಖಕರು: ನಿರ್ದೇಶಕರು, ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT