ಬೆಂಗಳೂರು: ಭಾರತದಲ್ಲಿ ಸುಮಾರು 1,000 ನೌಕರರೂ ಸೇರಿದಂತೆ ಜಾಗತಿಕವಾಗಿ 18,000 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವುದಾಗಿ ಅಮೆಜಾನ್ ಘೋಷಿಸಿದೆ. ವಜಾಗೊಳ್ಳುವ ಪಟ್ಟಿಯಲ್ಲಿರುವ ಉದ್ಯೋಗಿಗಳು ಸುದ್ದಿ ತಿಳಿಯುತ್ತಿದ್ದಂತೆ ದಿಗ್ಭ್ರಾಂತರಾಗಿದ್ದಾರೆ. ಕೆಲ ಮಂದಿ ಅಳುತ್ತಾ ಕಚೇರಿ ತೊರೆದಿರುವುದಾಗಿ ಗೊತ್ತಾಗಿದೆ.
ವಜಾಗೊಳಿಸುವ ಘೋಷಣೆ ಹೊರಬೀಳುತ್ತಲೇ ಸಿಬ್ಬಂದಿ ಅಳುತ್ತಿರುವ, ಕಚೇರಿಗಳಲ್ಲಿ ದುಃಖದ ವಾತಾವರಣ ಆವರಿಸುವ ದೃಶ್ಯಗಳನ್ನು ‘ಅಮೆಜಾನ್ ಇಂಡಿಯಾ’ ಉದ್ಯೋಗಿಯೊಬ್ಬರು ‘ಗ್ರೇಪ್‌ವೈನ್’ ಎಂಬ ವೃತ್ತಿಪರರ ಸಮುದಾಯ ಅಪ್ಲಿಕೇಶನ್‌ನಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ತಂಡದ ಶೇಕಡ 75ರಷ್ಟು ಉದ್ಯೋಗಿಗಳು ವಜಾಗೊಂಡಿದ್ದಾರೆ. ಉಳಿದುಕೊಂಡಿರುವ ಶೇ 25ರಲ್ಲಿ ನಾನೂ ಒಬ್ಬ. ಆದರೆ, ನಾನು ನೆಮ್ಮದಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಅವರು ಕ್ಯಾಬಿನ್‌ಗಳಲ್ಲಿ ಕುಳಿತು ಸಿಬ್ಬಂದಿಯನ್ನು ವಜಾ ಮಾಡುತ್ತಿದ್ದಾರೆ. ಸಿಬ್ಬಂದಿ ಕಚೇರಿಯಲ್ಲಿ ಅಳುತ್ತಿದ್ದಾರೆ’ ಎಂದು ಮತ್ತೊಬ್ಬ ಉದ್ಯೋಗಿ ಪೋಸ್ಟ್ ಮಾಡಿದ್ದಾರೆ. .
‘ಗ್ರೇಪ್‌ವೈನ್’ನಲ್ಲಿನ ಪೋಸ್ಟ್‌ಗಳನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.
‘ಅಮೇಜಾನ್ ಇಂಡಿಯಾದಲ್ಲಿ ವಜಾ ಪ್ರಕ್ರಿಯೆಗಳು ಆರಂಭವಾಗಿವೆ’ ಎಂದು ಉದ್ಯೋಗಿಯೊಬ್ಬರು ಬರೆದುಕೊಂಡಿರುವ ಪೋಸ್ಟ್‌ನ ಸ್ಕ್ರೀನ್‌ಶಾಟನ್ನು ‘ಕಾರ್ಪೊರೇಟ್ ಚಾಟ್ ಇಂಡಿಯಾ’ ಎಂಬ ವೇದಿಕೆಯಲ್ಲಿ ಹಂಚಿಕೊಳ್ಳಲಾಗಿದೆ.
ಹೊಸಬರು, ಅನುಭವಸ್ಥರು, ಹಳಬರು ಎಂದು ಲೆಕ್ಕ ಇಡದೇ ಭಾರತದಲ್ಲಿ ಸಾವಿರ ಮಂದಿಯನ್ನು ವಜಾಗೊಳಿಸಲಾಗುತ್ತಿದೆ. ಬೆಂಗಳೂರು, ಗುರುಗ್ರಾಮ್ ಮತ್ತು ಇತರ ಸ್ಥಳಗಳಲ್ಲಿನ ಅಮೆಜಾನ್ ಇಂಡಿಯಾ ಕಚೇರಿಗಳಲ್ಲಿನ ಉದ್ಯೋಗಿಗಳಲ್ಲಿ ಈಗ ಆತಂಕ ಮನೆ ಮಾಡಿದೆ.
ಕಂಪನಿಯು ಆರಂಭಿಕ ಹಂತದಲ್ಲಿರುವ ವ್ಯವಹಾರಗಳನ್ನೂ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ.
ಸಾಮೂಹಿಕ ವಜಾ ಮತ್ತು ಸ್ವಯಂಪ್ರೇರಿತ ಪ್ರತ್ಯೇಕತೆ ನೀತಿಗೆ ಸಂಬಂಧಿಸಿದಂತೆ ಕಳೆದ ವಾರ ಪುಣೆಯಲ್ಲಿರುವ ಲೇಬರ್ ಕಮಿಷನ್ ಕಚೇರಿಯು ಅಮೆಜಾನ್‌ಗೆ ಸಮನ್ಸ್ ಜಾರಿ ಮಾಡಿತ್ತು.
ಇವುಗಳನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.