ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸ್ಪೆಷಲ್‌ ಆಫೀಸರ್ಸ್‌ ಹುದ್ದೆಗಳು

Last Updated 16 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ (ಐ.ಟಿ.), ಕಾನೂನು, ಮಾರುಕಟ್ಟೆ ಸೇರಿದಂತೆ ವಿವಿಧ ವಿಭಾಗಗಳಿಗೆ ವಿಶೇಷ ಅಧಿಕಾರಿಗಳನ್ನು (ಸ್ಪೆಷಲ್‌ ಆಫೀಸರ‍್ಸ್‌) ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಸಂಚಿಕೆಯಲ್ಲಿ ‘ಸ್ಪೆಷಲ್ ಆಫೀಸರ‍್ಸ್‌’ ಹುದ್ದೆಗಳ ಭರ್ತಿಗಾಗಿ, ದೇಶದ 11 ಬ್ಯಾಂಕ್‌ಗಳು ಅರ್ಜಿ ಆಹ್ವಾನಿಸಿರುವ ಕುರಿತು ಮಾಹಿತಿ ನೀಡಲಾಗಿತ್ತು. ಅರ್ಜಿ ಸಲ್ಲಿಕೆ, ಆಯ್ಕೆಯ ವಿಧಾನಗಳ ಬಗ್ಗೆಯೂ ವಿವರಿಸಲಾಗಿತ್ತು.

ಈ ಸಂಚಿಕೆಯಲ್ಲಿ ನೇಮಕಾತಿಯ ವಿವಿಧ ಹಂತಗಳು, ಪರೀಕ್ಷೆಗಳು, ಪ್ರಶ್ನೆ ಪತ್ರಿಕೆಗಳು, ಅಂಕಗಳು ಹಾಗೂ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಒಟ್ಟು ಮೂರು ಹಂತಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ, ಇವೇ ಆ ಹಂತಗಳು.

ಪೂರ್ವಭಾವಿ ಪರೀಕ್ಷೆ

ಇದು 2 ಗಂಟೆ ಅವಧಿಯ ಪರೀಕ್ಷೆ. ಮೂರು ವಿವಿಧ ವಿಷಯಗಳ ಮೇಲೆ ಪ್ರಶ್ನೆ ಪತ್ರಿಕೆಗಳಿರುತ್ತವೆ.ಪ್ರತಿ ಪತ್ರಿಕೆಗೂ 40 ನಿಮಿಷಗಳು ಸಿಗುತ್ತವೆ. ಮೂರು ಪತ್ರಿಕೆಗಳಲ್ಲಿ 125 ಅಂಕಗಳಿಗೆ 150 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಇಂಗ್ಲಿಷ್ ಭಾಷೆಗೆ 50, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಪರೀಕ್ಷೆಗೆ 50 ಹಾಗೂ ರೀಸನಿಂಗ್ ಎಬಿಲಿಟಿ ಪರೀಕ್ಷೆಗೆ 50 ಪ್ರಶ್ನೆಗಳಿರಲಿವೆ. (ಇದು ರಾಜ್‌ಭಾಷಾ ಅಧಿಕಾರಿ ಹಾಗೂ ಲಾ ಆಫೀಸರ್ ಹುದ್ದೆಗಳಿಗೆ ಹೊರತಾಗಿ, ಇವೆರಡೂ ಹುದ್ದೆಗಳಿಗೆ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಪರೀಕ್ಷೆಗೆ ಬದಲಾಗಿ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜನರಲ್‌ ಅವೇರ್‌ನೆಸ್‌ ವಿಷಯಕ್ಕೆ ಸಂಬಂಧಿಸಿದಂತೆ 50 ಪ್ರಶ್ನೆಗಳಿರಲಿವೆ). ಪ್ರತಿ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕಗಳಿಸುವುದು ಮುಖ್ಯ.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಮಾತ್ರ ನಡೆಯಲಿದ್ದು, ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಪರೀಕ್ಷೆ ನಡೆಯಲಿದೆ.

ಮುಖ್ಯ ಪರೀಕ್ಷೆ

ಮುಖ್ಯ ಪರೀಕ್ಷೆಯು ವೃತ್ತಿಪರ ಜ್ಞಾನಕ್ಕೆ ಸಂಭಂದಿಸಿದ್ದಾಗಿದೆ. 45 ನಿಮಿಷಗಳ ಅವಧಿಯ ಪರೀಕ್ಷೆ ಇದು. ಇದರಲ್ಲಿ 60 ಅಂಕಗಳಿಗೆ 60 ಪ್ರಶ್ನೆಗಳನ್ನು ಕೇಳಲಾಗುತ್ತದೆ. ರಾಜ್‌ಭಾಷಾ ಅಧಿಕಾರಿಗಳ ಹುದ್ದೆಗಳಿಗೆ ಎರಡು ಹಂತಗಳಲ್ಲಿ ಡಿಸ್ಕ್ರಿಪ್ಟಿವ್‌ ಮಾದರಿಯ ಪರೀಕ್ಷೆಗಳು ನಡೆಯಲಿವೆ. ಒಂದು ವೃತ್ತಿಪರ ಜ್ಞಾನಕ್ಕೆ ಸಂಬಂಧಿಸಿದ 45 ಪ್ರಶ್ನೆಗಳಿರುತ್ತವೆ. ಇವು ವಸ್ತುನಿಷ್ಠ ಪರೀಕ್ಷೆಯ (ಆಬ್ಜೆಕ್ಟಿವ್) ಮಾದರಿಯಲ್ಲಿರುತ್ತವೆ. ಇದೇ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ವಿವರಣಾತ್ಮಕ(ಡಿಸ್ಕ್ರೆಪ್ಟಿವ್) ಪತ್ರಿಕೆಯ ಮಾದರಿಯಲ್ಲಿ ಎರಡು ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗೆ ತಲಾ 30 ನಿಮಿಷಗಳಂತೆ, ಒಂದು ಗಂಟೆಯ ಅವಧಿ ನೀಡಲಾಗಿರುತ್ತದೆ. ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿಯೇ ಉತ್ತರವನ್ನು ಬರೆಯಬೇಕು.

ಒಂದಿಷ್ಟು ಬದಲಾವಣೆ

ಈ ಬಾರಿ ಮುಖ್ಯ ಪರೀಕ್ಷೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿದ್ದು, ಅಭ್ಯರ್ಥಿ ಗಳು ವೃತ್ತಿಪರ ಜ್ಞಾನಕ್ಕೆ ಸಂಬಂಧಿಸಿದ ಪರೀಕ್ಷೆ ಬರೆಯಬೇಕು (ಸ್ಪೆಷಲಿಸ್ಟ್‌ ಹುದ್ದೆಗಳಾಗಿರುವುದರಿಂದ).

ಇಂಗ್ಲಿಷ್ ಭಾಷೆ ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತವೆ. ತಪ್ಪು ಉತ್ತರ ಗುರುತಿಸಿದರೆ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.

ಮೂರನೇ ಹಂತಕ್ಕೆ ಅರ್ಹತೆ

ಮುಖ್ಯ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ. ಇವುಗಳಿಗೆ ಬೇಕಾಗುವ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ.

ಮೂರನೇ ಹಂತದಲ್ಲಿ ಬ್ಯಾಂಕ್‌, ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನ (100 ಅಂಕಗಳು) ನಡೆಸಲಿದೆ. ಸಂದರ್ಶನದ ಸಂದರ್ಭದಲ್ಲಿ ಒಬಿಸಿ ವರ್ಗದ ಅಡಿಯಲ್ಲಿ 3ನೇ ಹಂತಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ’('Non-Creamy layer') ಷರತ್ತು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. ‌ಒಬಿಸಿ ಎಂದು ನೋಂದಾಯಿಸಿಕೊಂಡಿರುವ ಆದರೆ ('Non-Creamy layer')'ಕೆನೆರಹಿತ ಪದರ' ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

ಆರ್ಥಿಕ ದುರ್ಬಲ ವರ್ಗದ(EWS) ಅಡಿಯಲ್ಲಿ 3ನೇ ಹಂತಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕು. ಪ್ರಮಾಣಪತ್ರ ಸಲ್ಲಿಸದಿದ್ದಲ್ಲಿ ಅಂತಹವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

ಆಯ್ಕೆ ಪಟ್ಟಿ

ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು 2ನೇ ಹಂತಕ್ಕೆ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು. ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು (ಹಂತ- 2), ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ 3ನೇ ಹಂತದಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ (ಹಂತ -1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ.

ಅಭ್ಯರ್ಥಿಗಳು 2ನೇ ಹಂತದಲ್ಲಿ ಪಡೆದಿರುವ ಅಂಕಗಳಲ್ಲಿ (60 ಅಂಕಗಳನ್ನು 100 ಕ್ಕೆ ಪರಿವರ್ತನೆ ಮಾಡಿ) ಶೇ 80 ಅಂಕಗಳು ಮತ್ತು 3ನೇ ಹಂತದಲ್ಲಿ ಪಡೆದ ಅಂಕಗಳಲ್ಲಿ (100 ಅಂಕಗಳಲ್ಲಿ) ಶೇ 20 ಅಂಕಗಳನ್ನು ಸೇರಿಸಿ (100 ರಲ್ಲಿ) ಪರಿವರ್ತಿತ ಅಂಕಗಳನ್ನು ಒಟ್ಟು ಸೇರಿಸಿ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಹಂತ- 2 ಮತ್ತು ಹಂತ- 3 ರಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.

ಕಳೆದ ಸಂಚಿಕೆಯ ಲೇಖನಕ್ಕೆ https://www.prajavani.net/education-career/career/need-special-officers-for-bank-987161.html ಲಿಂಕ್ ನೋಡಿ. ನೇಮಕಾತಿ ಕುರಿತ ಅಧಿಸೂಚನೆಗಾಗಿ https://bit.ly/3frUh70 ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ www.ibps.in ಭೇಟಿ ನೀಡಬಹುದು.

ಲೇಖಕರು: ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ, ತರಬೇತುದಾರರು, ವೃತ್ತಿ ಮಾರ್ಗದರ್ಶಕರು, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT