ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸದಿಂದಲೇ ಭಾಷಣಕಲೆ ಸಿದ್ಧಿ

Published 10 ಮಾರ್ಚ್ 2024, 23:45 IST
Last Updated 10 ಮಾರ್ಚ್ 2024, 23:45 IST
ಅಕ್ಷರ ಗಾತ್ರ

ಮೊನ್ನೆ ನಮ್ಮ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಯೋಜನಾಬದ್ಧವಾಗಿ ಸಾಗಿತ್ತು. ಮಧ್ಯದಲ್ಲಿ ಕಿರಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಹೊರ ಹೋಗುತ್ತಿರುವ ಹಿರಿಯ ಸಹಪಾಠಿಗಳ ಕುರಿತು ಮಾತನಾಡಬೇಕಾದ ಸಂದರ್ಭದಲ್ಲಿ ಹೆದರಿಕೆಯಿಂದ ವೇದಿಕೆಯಿಂದ ಹಿಂತಿರುಗಿದ್ದನ್ನು ಕಂಡು ಬೇಸರವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಹೀಗೇಕೆ ಮಾಡಿದಿರೆಂದು ಅವರನ್ನು ಪ್ರಶ್ನಿಸಿದಾಗ ಅವರಿಂದ ಬಂದ ಉತ್ತರ ‘ಸಾರ್, ನಾನು ಸಾಕಷ್ಟು ಮಾತನಾಡಬೇಕೆಂದಿದ್ದೆ ಆದರೆ ವೇದಿಕೆಯ ಮುಂದೆ ಕುಳಿತಿದ್ದವರನ್ನು ಕಂಡು ಇದ್ದಕ್ಕಿದ್ದಂತೆಯೇ ಮಾತುಗಳು ಮರೆತು ಹೋದವು. ಭಯ ಶುರುವಾಯ್ತು. ಏನು ಹೇಳಬೇಕೆಂಬುದೇ ತಿಳಿಯದಾಯ್ತು’.

ನಿಜ. ಪ್ರಾರಂಭದಲ್ಲಿ ವೇದಿಕೆಯನ್ನೇರಿ ಮಾತನಾಡಬೇಕೆನ್ನುವವರಿಗೆ ಇಂಥ ಅನುಭವಗಳು ಆಗುವುದು ಸಹಜ. ಅದಕ್ಕೆ ಕಾರಣ ಹಲವು. ಮಕ್ಕಳಲ್ಲಿ ಭಾಷಣ ಕಲೆಯನ್ನು ರೂಢಿಸಬೇಕಾದದ್ದು ಶಾಲಾ ಶಿಕ್ಷಕರು ಮತ್ತು ಪಾಲಕರ ಆದ್ಯ ಕರ್ತವ್ಯ. ಮಕ್ಕಳು ಉತ್ತಮ ಭಾಷಣಕಾರರಾಗಬೇಕೆಂಬ ಅಭಿಲಾಷೆ ನಿಮ್ಮಲ್ಲಿದ್ದರೆ ಮೊದಲಿಗೆ ಅವರಿಗೆ ಭಾಷಣ ಕಲೆಯ ಮಹತ್ವದ ಬಗ್ಗೆ ತಿಳಿಸಿಕೊಡಿ.

ಹೇಗಿರಬೇಕು ಭಾಷಣ?: ಭಾಷಣವೆಂಬುದು ಒಂದು ಕಲೆ. ಬರೀ ಮಾತಿನ ಸುರಿಮಳೆಯಲ್ಲ. ಉತ್ತಮ ಭಾಷಣಕಾರರಾಗಲು ನಿರಂತರ ಪ್ರಯತ್ನ ಮತ್ತು ಸಾಧನೆ ಅವಶ್ಯಕ. ಮಾತುಗಳು ಭಾವನೆಗಳೊಂದಿಗೆ ಕೊಂಡಿಯಾಗಿ ಬೆಸೆಯುವಂತಿರಬೇಕು. ಒಂದೊಳ್ಳೆಯ ಭಾಷಣ ಕವಿತೆಯಿದ್ದಂತೆ. ಉಪಯೋಗಿಸುವ ಪದಗಳು ಅರ್ಥವಾಗುವಂತೆಯೂ, ಮನಮುಟ್ಟುವಂತೆಯೂ ಇದ್ದರೆ ಕೇಳುಗರ ಮನಸ್ಸನ್ನು ನೇರವಾಗಿ ತಲುಪುತ್ತವೆ.

ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವಂತೆ ಭಾಷಣ ಕಲೆಯನ್ನು ವಿದ್ಯಾರ್ಥಿಗಳಿಗೆ ಆರಂಭದಿಂದಲೇ ರೂಢಿಸಿದರೆ ಮುಂದೆ ಅವರೊಬ್ಬ ಉತ್ತಮ ವಾಗ್ಮಿಗಳಾಗುವುದರಲ್ಲಿ ಅನುಮಾನವಿಲ್ಲ. ಹಿಂದೆ ನಮಗೆಲ್ಲಾ ಶಾಲಾ ಹಂತಗಳಲ್ಲಿ ಮಾತನಾಡಲು ವೇದಿಕೆಗಳು ದೊರೆಯುತ್ತಿದ್ದುದೇ ವಿರಳವಾಗಿತ್ತು. ಈಗಿನ ಶಾಲಾ ಕಾಲೇಜುಗಳಲ್ಲಿ ವರ್ಷಪೂರ್ತಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಇಂಥ ವಿಶೇಷ ದಿನಗಳಿಗಾಗಿ ಮಕ್ಕಳನ್ನು ಸಿದ್ಧಪಡಿಸುವ ಮೂಲಕ ಅವರಲ್ಲಿನ ಮಾತುಗಾರನನ್ನು ನಾವು ಪ್ರೇರೇಪಿಸಿ ಭವಿಷ್ಯಕ್ಕಾಗಿ ತಯಾರುಗೊಳಿಸಬಹುದು.

ವೇದಿಕೆ ಮೇಲೆ ಮಾತನಾಡುವ ಅವಕಾಶವನ್ನು ಕಳೆದುಕೊಳ್ಳದಂತೆ ನಮ್ಮ ಮಕ್ಕಳನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕು. ಇದಕ್ಕಾಗಿ ಮನೆ ಹಾಗೂ ಶಾಲೆಯಲ್ಲಿ ನಲ್ಮೆಯ ನುಡಿಗಳನ್ನು ಮಕ್ಕಳಿಗೆ ಕಲಿಸಿಕೊಡುವುದು ಮುಖ್ಯ. ಈ ನಿಟ್ಟಿನಲ್ಲಿ ಕುಟುಂಬಸ್ಥರು ಮತ್ತು ಶಿಕ್ಷಕರ ಮಾರ್ಗದರ್ಶನ ಮತ್ತು ಸಹಕಾರ ಅತ್ಯಗತ್ಯ. ನಿತ್ಯದ ಎಲ್ಲಾ ಸಂದರ್ಭಗಳಲ್ಲಿಯೂ ಅವರ ಮಾತುಗಳನ್ನು ಆಲಿಸಿ ಪದೇ ಪದೇ ಸೂಚನೆಗಳನ್ನು ನೀಡುತ್ತಾ ತಪ್ಪುಗಳನ್ನು ಸರಿಪಡಿಸುತ್ತಿರಬೇಕು. ಮಕ್ಕಳು ಉತ್ತಮ ಭಾಷಣಕಾರರಾಗುವಂತೆ ಪ್ರೇರೇಪಿಸಬೇಕು.

ಉತ್ತಮ ಭಾಷಣಕಾರರಾಗಬೇಕಾದವರು ತಾನು ಮಾತನಾಡಬೇಕಾದ ವಿಷಯದ ಬಗ್ಗೆ ಸಾಕಷ್ಟು ತಿಳಿದಿರಬೇಕು. ಅದಕ್ಕಾಗಿ ನಿರಂತರ ಓದು ಮತ್ತು ಅಭ್ಯಾಸ ಮುಖ್ಯ. ಚರ್ಚೆ ಮತ್ತು ಸಂವಾದಗಳಲ್ಲಿ ಭಾಗವಹಿಸುವುದು ಅವಶ್ಯಕ. ಅಲ್ಲಿ ಕಲಿತ ಜ್ಞಾನ ಭಾಷಣದ ಸಂದರ್ಭದಲ್ಲಿ ನೆರವಿಗೆ ಬರುತ್ತದೆ.

  • ಉತ್ತಮ ವಾಗ್ಮಿಯಾಗಬೇಕಾದವರು ಇತರರ ಭಾಷಣಗಳನ್ನು ಆಲಿಸುವುದೂ ಮುಖ್ಯ. ಭಾಷಣಕಾರರ ಹಾವಭಾವ, ಭಂಗಿಗಳು ಮತ್ತು ಭಾಷಾ ಚತುರತೆ ತಿಳಿಯಲು ಇದು ಸಹಕಾರಿ.

  • ಬರೆದಿದ್ದನ್ನು ಹಿಡಿದು ಓದುವ ಅಭ್ಯಾಸ ಒಳ್ಳೆಯದಲ್ಲ. ಸ್ವಂತವಾಗಿ ಮಾತನಾಡುವ ಕಲೆ ರೂಢಿಸಿಕೊಳ್ಳಬೇಕು.

  • ವೇದಿಕೆಯ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರಿಂದ ಸಭಾಕಂಪನ ದೂರವಾಗಿಸಿಕೊಳ್ಳಬಹುದು.

  • ಮಾತನಾಡಲೆಂದು ತೆರಳುವಾಗ ನಮ್ಮ ಉಡುಪು ಮತ್ತು ನಡವಳಿಕೆ ಬಹು ಮುಖ್ಯ ಅಂಶವಾಗಿ ಪರಿಗಣಿಸಲ್ಪಡುತ್ತದೆ. ಮಾತನಾಡುವಾಗ ಪದೇ ಪದೇ ಬಟ್ಟೆ ಸರಿಪಡಿಸಿಕೊಳ್ಳುವುದು, ಗಡಿಯಾರ ನೋಡಿಕೊಳ್ಳುವುದು, ಮೂಗು ಕಣ್ಣು ಕಿವಿ ಒರೆಸಿಕೊಳ್ಳುವುದು, ಕೂದಲು ಸರಿಪಡಿಸಿಕೊಳ್ಳುವುದು, ಪದೇ ಪದೇ ನೀರು ಕುಡಿಯುವುದು, ಗಂಟಲು ಸರಿಪಡಿಸಿಕೊಳ್ಳುವುದು ಮಾಡಬಾರದು. ಇಂಥ ನಡವಳಿಕೆಗಳು ಅಭಾಸಕ್ಕೆ ಕಾರಣವಾಗುತ್ತದೆ. 

  • ಅತಿಯಾದ ಪದಬಳಕೆ ಮತ್ತು ಭಾಷಾಜ್ಞಾನದ ಬಳಕೆ ನಿರುಪಯುಕ್ತ. ಸರಳ ಪದಗಳನ್ನೇ ಬಳಸಿ ಕೇಳುಗರಿಗೆ  ಅರ್ಥವಾಗುವಂತೆ ತಿಳಿಯಪಡಿಸಿ.

  • ಹೇಳಬೇಕಾದ ವಿಷಯವನ್ನು ನೇರವಾಗಿ ಪ್ರಸ್ತಾಪಿಸಿ. ನಿಮ್ಮ ಮತ್ತು ಕೇಳುಗರ ಸಮಯ ಉಳಿಸಬಹುದು. ಸಂಕ್ಷಿಪ್ತವಾಗಿ ನಿಮ್ಮನ್ನು ಪರಿಚಯಿಸಿಕೊಂಡು ಮಾತುಗಳನ್ನು ಮುಂದುವರಿಸಿ.

  • ಮಾತನಾಡುವಾಗ ನಿಮ್ಮ ಧ್ವನಿಯಲ್ಲಿ ಸ್ಪಷ್ಟತೆ, ಏರಿಳಿತವಿರಲಿ. ಖ್ಯಾತನಾಮರ ಹೇಳಿಕೆಗಳನ್ನು ನಿಮ್ಮ ಮಾತುಗಳಲ್ಲಿ ಬೆಸೆಯಿರಿ. ಮಾತುಗಳ ನಡುವೆ ಸಂದರ್ಭಾನುಸಾರ ಹಾಸ್ಯವನ್ನು ಬೆರೆಸಿ. ಕೇಳುಗರ ಬೇಸರ ಕಳೆಯಲು ಸಹಾಯಕವಾಗಬಹುದು.

  • ಭಾಷಣಕಾರರಾದ ನೀವು ಹಸನ್ಮುಖಿಗಳಾಗಿರುವುದು ಒಳಿತು. ಮಾತಿನ ಮಧ್ಯೆ ಯಾರನ್ನೂ ನಿಂದಿಸುವುದಾಗಲೀ ಅಥವಾ ಹೀಗಳೆಯುವುದಾಗಲೀ ಮಾಡಬಾರದು.

  • ಮಾತುಗಳ ಮಧ್ಯೆ ಅವಾಚ್ಯ  ಪದಗಳನ್ನು ಬಳಸಬಾರದು. ಮಾತಿನ ನಡುವೆ ಹೇಳಿದ್ದನ್ನೇ ಹೇಳಿ ಪುನರಾವರ್ತಿಸುವುದು ಬೇಡ.

  • ಮಾತುಗಾರನಿಗೆ ಪ್ರಚಲಿತ ವಿದ್ಯಮಾನಗಳ ಅರಿವಿರಬೇಕು. ಮಾತು ಮತ್ತು ಶೈಲಿ ಕೇಳುಗರ ವಯೋಮಾನಕ್ಕನುಗುಣವಾಗಿರಬೇಕು.

ಮಾತನಾಡುತ್ತಿರುವ ಸ್ಥಳದ ಹಿನ್ನೆಲೆ, ಮಹತ್ವ ಮತ್ತು ವಿಶೇಷತೆಗಳನ್ನು ತಿಳಿದು ನಿಮ್ಮ ಮಾತಿನ ಮಧ್ಯೆ ಬಳಸಿಕೊಳ್ಳಿ. ಕೇಳುಗರಲ್ಲಿ ‘ಇಷ್ಟು ಬೇಗ ಮುಗೀತಾ? ಇನ್ನೂ ಇದ್ದಿದ್ದರೆ ಚೆನ್ನಾಗಿತ್ತು’ ಎನಿಸುವಾಗಲೇ ಮಾತುಗಳನ್ನು ಮುಗಿಸಿಬಿಡುವುದು
ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT