ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣಕ್ಕಾಗಿ ಈಗ ವಿದೇಶಗಳಿಗೆ ಹೋಗಬಹುದೆ?

Last Updated 27 ಜೂನ್ 2021, 19:30 IST
ಅಕ್ಷರ ಗಾತ್ರ
ADVERTISEMENT

1. ನಾನು ಸೈಕಾಲಜಿ, ಎಕನಾಮಿಕ್ಸ್ ಮತ್ತು ಸೋಷಿಯಾಲಜಿ ವಿಷಯಗಳಲ್ಲಿ 2020ರಲ್ಲಿ ಪದವಿಯನ್ನು ಗಳಿಸಿ ವಿದೇಶದಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡುವ ಯೋಜನೆಯಿದ್ದು ಕೋವಿಡ್ ಕಾರಣದಿಂದ ಕಳೆದ ವರ್ಷ ಮಾಡಲಾಗಲಿಲ್ಲ. ಹಾಗಾಗಿ ಈ ವರ್ಷ ಸೂಕ್ತವೇ? ಅಥವಾ ಈ ಪಿಡುಗು ಶಮನವಾಗುವ ತನಕ ಕಾಯುವುದು ಒಳ್ಳೆಯದೇ, ತಿಳಿಸಿ.

- ಆಕಾಶ್, ಕೊಪ್ಪ

ನೀವು ನೀಡಿರುವ ಮಾಹಿತಿಯಂತೆ ಈಗಾಗಲೇ ನಿಮ್ಮ ಯೋಜನೆಯನ್ನು ಕಳೆದ ವರ್ಷದಿಂದ ಈ ವರ್ಷಕ್ಕೆ ಮುಂದೂಡಿದ್ದೀರಿ. ಈಗ ಅನೇಕ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುವ ಅಂತಿಮ ತಯಾರಿಯಲ್ಲಿದ್ದಾರೆ. ಜೊತೆಗೆ ವಿದೇಶಗಳಲ್ಲಿನ ಹಲವಾರು ವಿಶ್ವವಿದ್ಯಾಲಯಗಳು ಪ್ರವೇಶದ ನಿಯಮಾವಳಿಗಳನ್ನು ಬದಲಿಸಿ ವಿದ್ಯಾರ್ಥಿ-ಸ್ನೇಹಿ ಸುಧಾರಣೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಹಾಗಾಗಿ, ನೀವು ಉನ್ನತ ಶಿಕ್ಷಣ ಬಯಸುವ ದೇಶ ಮತ್ತು ವಿಶ್ವವಿದ್ಯಾಲಯದ ನಿಯಮಗಳು ಮತ್ತು ಅಲ್ಲಿನ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ನಿರ್ಧರಿಸಿ.

2. ನಾನು ಬಿಬಿಎ ಪದವಿ ಮುಗಿಸಿದ್ದೇನೆ. ಎಂಎ ಎಕನಾಮಿಕ್ಸ್ ಮಾಡಬೇಕು ಎಂಬ ಆಸೆ ಇದೆ ಮತ್ತು ಪಿಎಚ್‌ಡಿ ಮಾಡಿ ಡಾಕ್ಟರೇಟ್ ಗೌರವ ಪಡೆಯುವ ಕನಸು ಇದೆ. ನಾನು ಪದವಿ ಮಾಡುವ ವಿಷಯದಲ್ಲಿಯೇ ಮಾಡಬೇಕೆ? ಅಧ್ಯಾಪಕ ವೃತ್ತಿಯಲ್ಲಿ ಆಸಕ್ತಿಯಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.

- ಜಿ.ಎಮ್. ಮಹೇಶ್, ಸಿದ್ದಾಪುರ

ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ– 2020ರಂತೆ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿಗಳ ಉದ್ದೇಶ, ನಿಯಮ ಮತ್ತು ಪ್ರವೇಶ ಪ್ರಕ್ರಿಯೆಯಲ್ಲಿ ತೀವ್ರವಾದ ಬದಲಾವಣೆಗಳಿವೆ. ಆದರೆ, ಅನುಷ್ಠಾನದ ಪ್ರಕ್ರಿಯೆ ಈಗಷ್ಟೇ ಶುರುವಾಗುತ್ತಿದೆ. ಹಾಗಾಗಿ, ಈ ವಿಷಯದಲ್ಲಿ ನಿಖರವಾದ ಮಾಹಿತಿಗಾಗಿ ನೇರವಾಗಿ ನೀವು ಮಾಡಬೇಕೆಂದು ಇಚ್ಛಿಸಿರುವ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.

3. ಬಿಟೆಕ್ (ಎಐ ಮತ್ತು ಮೆಷೀನ್ ಲರ್ನಿಂಗ್) ಮತ್ತು ಬಿಟೆಕ್ (ಡೇಟಾ ಸೈನ್ಸ್) ನಡುವೆ ಯಾವ ಕೋರ್ಸಿಗೆ ಹೆಚ್ಚು ವೃತ್ತಿಯ ಅವಕಾಶಗಳಿವೆ?

- ಡೀಲಾನ್ ಲಾಸ್ರಾಡೊ, ಊರು ತಿಳಿಸಿಲ್ಲ

ಈ ಎರಡೂ ಕೋರ್ಸ್‌ಗಳಿಗೆ ಈಗ ಬೇಡಿಕೆಯಿದ್ದು ಹೆಚ್ಚಿನ ಅವಕಾಶಗಳಿವೆ. ಹಾಗಾಗಿ, ನಿಮಗೆ ಇಷ್ಟವಿರುವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು.

4. ನಾನು ಈಗ ಬಿಎ ಎರಡನೇ ಸೆಮಿಸ್ಟರ್ ಓದುತ್ತಾ ಇದ್ದೀನಿ. ನಾನು ಐಎಎಸ್ ಪರೀಕ್ಷೆ ಬರೆಯಬೇಕು. ಹಾಗಾಗಿ, ಐಎಎಸ್ ಪರೀಕ್ಷೆಯ ತಯಾರಿ ಬಗ್ಗೆ ತಿಳಿಸಿ.

- ಮಲ್ಲಿಕಾರ್ಜುನ ಪೂಜೇರಿ, ಊರು ತಿಳಿಸಿಲ್ಲ.

ಐಎಎಸ್ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.

1.ಪೂರ್ವಭಾವಿ. 200 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳು.

2.ಮುಖ್ಯ ಪರೀಕ್ಷೆ. ಪ್ರಬಂಧ ರೂಪದ ಲಿಖಿತ ಪರೀಕ್ಷೆ. 250 ಅಂಕಗಳ ಒಂಬತ್ತು ಪ್ರಶ್ನೆಪತ್ರಿಕೆಗಳು.

3.ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬ್‌ನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೊಗಳನ್ನು ವೀಕ್ಷಿಸಿ. ಐಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದು ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.

5. ನಾನು ಡಿಪ್ಲೊಮಾ ಇ ಅಂಡ್ ಸಿ ಮಾಡಿದ್ದು ಲ್ಯಾಟರಲ್ ಎಂಟ್ರಿ ಎಂಜಿನಿಯರಿಂಗ್ ಆಗಿದೆ. ಕಾನ್‌ಸ್ಟೆಬಲ್ ಮತ್ತು ಎಸ್‌ಡಿಎ ಗೆ ಅರ್ಹತೆ ಇದೆಯೇ? ಹಾಗೂ ಕೆಎಎಸ್, ಪಿಡಿಒ, ಎಸ್‌ಡಿಎ ಪರೀಕ್ಷೆ ಬರೆಯಬಹುದೇ?

- ಕೀರ್ತಿ ರಾಜ್ ಎನ್, ಊರು ತಿಳಿಸಿಲ್ಲ.

ನೀವು ಎಂಜಿನಿಯರಿಂಗ್ ಪದವೀಧರರಾಗಿದ್ದಲ್ಲಿ ಈ ಎಲ್ಲಾ ಪರೀಕ್ಷೆಗಳನ್ನು ಬರೆಯಬಹುದು. ನಿಮ್ಮಲ್ಲಿ ಎನ್‌ಐಒಎಸ್ ಸರ್ಟಿಫಿಕೇಟ್ ಇಲ್ಲದಿದ್ದರೆ ಅರ್ಜಿ ಸಲ್ಲಿಸಿ ಪಡೆಯುವುದು ಉತ್ತಮ.

6. ನಾನು ಬಿಬಿಎಂ ಡಿಗ್ರಿ ಮುಗಿಸಿದ್ದೇನೆ. ಪಿಎಸ್‌ಐ ಪರೀಕ್ಷೆಗೆ ತಯಾರಾಗಬೇಕೆಂದುಕೊಂಡಿದ್ದೇನೆ. ಆದರೆ, 3ಬಿ ಕೋಟಾದಡಿಯಲ್ಲಿ ಕೆಲಸ ಸುಲಭವಾಗಿ ಸಿಗುವುದಿಲ್ಲ ಎನ್ನುತ್ತಾರೆ. ಖಾಸಗಿ ಕೆಲಸ ಒಳ್ಳೆಯದೇ?

- ಚೇತನ್ ಸುಂಕಡ್, ಊರು ತಿಳಿಸಿಲ್ಲ.

ವೃತ್ತಿ ನಮ್ಮ ಇಡೀ ಜೀವನವನ್ನ ಆವರಿಸಿಕೊಳ್ಳೋ ಒಂದು ಆಯಾಮ. ಕಲಿತ ವಿದ್ಯೆಗೂ, ನಿಮ್ಮಲ್ಲಿರುವ ಸ್ವಾಭಾವಿಕ ಕೌಶಲಗಳಿಗೂ ಸರಿಹೊಂದುವಂತಹ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವಂತಹ ವೃತ್ತಿಯನ್ನು ಗುರುತಿಸಬೇಕು. ಹಾಗಾಗಿ, ಇಲ್ಲಿ ಮುಖ್ಯವಾದ ಪ್ರಶ್ನೆಯೆಂದರೆ ನಿಮಗೆ ಒಲವಿರುವ ವೃತ್ತಿ ಯಾವುದು? ಅದನ್ನು ಗುರುತಿಸಿ, ಅದರಂತೆ ನಿಮ್ಮ ವೃತ್ತಿಯ ಆಯ್ಕೆ ಇರಲಿ. ಸಾಧನೆಯ ಹಾದಿಯಲ್ಲಿ ಸುಲಭವಾದದ್ದು ಯಾವುದೂ ಇಲ್ಲ; ಅದರಂತೆಯೇ ಅಸಾಧ್ಯವೆನ್ನುವುದೂ ಇಲ್ಲ.

7. ನಾನು ಬಿಇ (ಇಸಿಇ) ನಾಲ್ಕನೇ ವರ್ಷದಲ್ಲಿ ಓದುತ್ತಿದ್ದು ಈ ವಿಭಾಗದಲ್ಲಿ ಆಸಕ್ತಿ ಇದೆ. ಈ ಕೋರ್ಸ್ ಆದ ನಂತರ ಯಾವ ಕೋರ್ಸ್ ಮಾಡಬಹುದು? ಸಂಬಳ ಹೆಚ್ಚು ಸಿಗುವ ಕೋರ್ಸ್ ಕುರಿತು ಸಲಹೆ ನೀಡಿ.

- ಹೆಸರು, ಊರು ತಿಳಿಸಿಲ್ಲ.

ಎಂಜಿನಿಯರಿಂಗ್ ಪದವಿಯ ನಂತರ ನೀವು ರೊಬೊಟಿಕ್, ಎಲೆಕ್ಟ್ರಾನಿಕ್ಸ್, ಟೆಲಿಕಮ್ಯೂನಿಕೇಷನ್, ಮೈಕ್ರೊ ಎಲೆಕ್ಟ್ರಾನಿಕ್ಸ್, ವಿ.ಎಲ್.ಎಸ್.ಐ. ಮುಂತಾದ ವಿಷಯಗಳಲ್ಲಿ ಎಂಟೆಕ್ ಮಾಡಿ ಪ್ಲೇಸ್‌ಮೆಂಟ್ ಪ್ರಕ್ರಿಯೆಯಲ್ಲಿ ಭಾಗವಹಿಸಿ. ವೃತ್ತಿಯಲ್ಲಿ ಸಿಗುವ ಆದಾಯಕ್ಕಿಂತ ಸಾಧನೆಯ ಮಾರ್ಗದಲ್ಲಿ ಸಿಗುವ ಸಂತೃಪ್ತಿ ಹೆಚ್ಚು ಮುಖ್ಯ. ಹಾಗಾಗಿ, ನಿಮಗೆ ಇಷ್ಟವಿರುವ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಿ.

8. ನಾನು ಈಗ ಎಂಎಸ್‌ಸಿ ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ. ಈಗ, ಎಂಎಸ್‌ಸಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸರಿಯೇ?

- ಗುರುಕಿರಣ್‌ ಮಾಲಿಪಾಟೀಲ್, ಊರು ತಿಳಿಸಿಲ್ಲ

ನಿಮಗೆ ಐಎಎಸ್ ಅಂತಹ ಕಠಿಣವಾದ ಪರೀಕ್ಷೆಗಳ ಬಗ್ಗೆ ಉತ್ಸುಕತೆಯಿದ್ದರೆ ಈಗಿನಿಂದಲೇ ತಯಾರಿ ಮಾಡುವುದು ಒಳ್ಳೆಯದು. ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಾದರೆ ಮುಂದಿನ ವರ್ಷದಿಂದ ತಯಾರಿ ಮಾಡಬಹುದು. ಆದರೆ, ಇದರಿಂದ ನಿಮ್ಮ ಕೋರ್ಸ್ ಮೇಲೆ ಪರಿಣಾಮವಾಗದಂತೆ ಸಮಯದ ನಿರ್ವಹಣೆಯಿರಲಿ.

9. ನಾನು ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಓದುತ್ತಿದ್ದೀನಿ. ಕ್ಯಾಂಪಸ್ ನೇಮಕಾತಿ ಆಗಿದೆ. ಎಂಬಿಎ ಮಾಡುವ ಆಸೆ ಇದೆ. ನಿಮ್ಮ ಮಾರ್ಗದರ್ಶನ ಬೇಕಾಗಿದೆ.

- ದೀಕ್ಷಿತ ರಾಮಲಿಂಗಣ್ಣ, ಊರು ತಿಳಿಸಿಲ್ಲ.

ಕ್ಯಾಂಪಸ್ ನೇಮಕಾತಿಗೆ ಅಭಿನಂದನೆಗಳು. ಈಗಾಗಲೇ ನೇಮಕಾತಿ ಆಗಿರುವುದರಿಂದ, ಎಂಬಿಎ ಕೋರ್ಸ್‌ ಅನ್ನು ಐಐಎಂನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಲಭ್ಯವಿರುವ ವಾರಾಂತ್ಯದ ಎಕ್ಸಿಕ್ಯೂಟಿವ್ ಕೋರ್ಸ್ ಮಾಡುವುದು ಉತ್ತಮ.

10. ನಾನು ಬಿಕಾಂ 2ನೇ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿ ಇದೆ. ನಾನು ಮುಂದೆ ಏನು ಮಾಡಬಹುದು ಸರ್?

- ಗಂಗಪ್ಪ, ನವಲಗಿ.

ನಿಮ್ಮ ವೃತ್ತಿ ಯೋಜನೆಯ ಆದ್ಯತೆಯಂತೆ ಮೊದಲಿಗೆ ನಿಮ್ಮ ಓದನ್ನು ಮುಂದುವರಿಸಬೇಕೆ ಅಥವಾ ಕೆಲಸಕ್ಕೆ ಸೇರಬೇಕೆ ಎಂದು ನಿರ್ಧರಿಸಿ. ಬಿಕಾಂ ನಂತರ ಎಂಕಾಂ, ಎಂಬಿಎ, ಚಾರ್ಟರ್ಡ್ ಅಕೌಂಟೆಂಟ್, ಕಂಪನಿ ಸೆಕ್ರೆಟರಿ ಕೋರ್ಸ್‌ಗಳಿವೆ. ಸಾರ್ವಜನಿಕ ವಲಯದಲ್ಲಿ ಕೆಲಸಕ್ಕೆ ಸೇರಬೇಕಾದರೆ ನಿಮಗಿಷ್ಟವಿರುವ ವೃತ್ತಿ ಸಂಬಂಧಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ.

11. ನಾನು 10ನೇ ತರಗತಿಯಲ್ಲಿ ಓದುತ್ತಿದ್ದು ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್ ಮಾಡಬೇಕೆಂದುಕೊಂಡಿದ್ದೇನೆ. ಹಾಗಾಗಿ, ಇದರ ಖರ್ಚು ಎಷ್ಟು ಮತ್ತು ಯಾವ ಪರೀಕ್ಷೆ ಬರೆದು ಉತ್ತೀರ್ಣನಾಗಬೇಕು?

- ಬಸವರಾಜಸಿಂಗ್, ತಾವರಗೇರಾ

10ನೇ ತರಗತಿಯಲ್ಲಿರುವಾಗಲೇ ಡಾಕ್ಟರೇಟ್ ಮಾಡಬೇಕೆನ್ನುವ ದೂರದೃಷ್ಟಿಯಿರುವ ನಿಮಗೆ ಅಭಿನಂದನೆಗಳು. ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮಾಡಿ ನಂತರ ನಿಮಗಿಷ್ಟವಿರುವ ವಿಜ್ಞಾನದ ವಿಷಯದಲ್ಲಿ ಬಿಎಸ್‌ಸಿ ಮತ್ತು ಎಂಎಸ್‌ಸಿ ಮಾಡಿ. ಇದಾದ ನಂತರ, ಅಂದರೆ ಸುಮಾರು 7 ವರ್ಷಗಳ ನಂತರ ಡಾಕ್ಟರೇಟ್ ಮಾಡಬಹುದು. ಆದರೆ, ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ– 2020 ಅನುಷ್ಠಾನಗೊಳ್ಳುತ್ತಿದ್ದು ಅದರಂತೆ 4 ವರ್ಷದ ಬಿಎಸ್‌ಸಿ (ರಿಸರ್ಚ್) ನಂತರ ನೇರವಾಗಿ ಡಾಕ್ಟರೇಟ್ ಮಾಡುವ ಅವಕಾಶವಿರುವ ಸಾಧ್ಯತೆಯಿದೆ. ಹಾಗಾಗಿ, ದ್ವಿತೀಯ ಪಿಯುಸಿ ಮಾಡುತ್ತಿರುವಾಗ ಈ ಸಾದ್ಯತೆ, ನಿಯಮ, ಖರ್ಚುವೆಚ್ಚಗಳ ಕುರಿತು ವಿಚಾರಿಸಿ.

12. ನಾನು ಅಂತಿಮ ವರ್ಷದ ಎಂಎಸ್‌ಸಿ (ಗಣಿತ) ಮಾಡುತ್ತಿದ್ದೇನೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿನ ವೃತ್ತಿಯ ಅವಕಾಶಗಳ ಬಗ್ಗೆ ತಿಳಿಸಿ.

- ಸಿಂಚನ, ಊರು ತಿಳಿಸಿಲ್ಲ.

ಎಂಎಸ್‌ಸಿ(ಗಣಿತ) ನಂತರ ಶಿಕ್ಷಕ ವೃತ್ತಿಯಲ್ಲಿಯೇ ಹೆಚ್ಚು ಅವಕಾಶಗಳಿವೆ ಎನ್ನುವ ಅಭಿಪ್ರಾಯ ಸರಿಯಲ್ಲ. ನಿಮಗೆ ವಿಷಯದಲ್ಲಿ ಪರಿಣತಿಯಿದ್ದರೆ ಖಾಸಗಿ ಕ್ಷೇತ್ರದ ಐಟಿ, ತಂತ್ರಜ್ಞಾನ, ರಿಸರ್ಚ್ ಕಂಪನಿಗಳಲ್ಲಿ ಹಾಗೂ ಸರ್ಕಾರಿ ವಲಯದಲ್ಲಿ ವೃತ್ತಿಯ ಅವಕಾಶಗಳಿವೆ. ಹಾಗಾಗಿ, ಸರ್ಕಾರಿ ವಲಯದ ಕೆಲಸಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಪ್ರಯತ್ನಿಸಿ ಮತ್ತು ಖಾಸಗಿ ಕ್ಷೇತ್ರದ ಅವಕಾಶಗಳನ್ನೂ ಗಮನಿಸಿ.

13. ನಾನು ಆರ್ಟ್ಸ್ ವಿಭಾಗದ ಎರಡನೇ ಪಿಯುಸಿ ಖಾಸಗಿ ವಿದ್ಯಾರ್ಥಿ. ಮುಂದೆ ಐಎಎಸ್ ಮಾಡುವ ಗುರಿ ಇದೆ. ಡಿಗ್ರಿಯಲ್ಲಿ ಯಾವ ವಿಷಯ ತೆಗೆದುಕೊಂಡರೆ ಅನುಕೂಲವಾಗಬಹುದು.

- ಹರೀಶ್ ಕುಮಾರ್, ಯಲ್ಲಾಪುರ.

ನಿಮ್ಮ ಸ್ವಾಭಾವಿಕ ಆಸಕ್ತಿ ಮತ್ತು ಪ್ರತಿಭೆಯಿರುವ ವಿಷಯದಲ್ಲಿ ಡಿಗ್ರಿ ಮಾಡಿದರೆ ಅನುಕೂಲ. ಉದಾಹರಣೆಗೆ, ಎಕಾನಾಮಿಕ್ಸ್, ಸೋಶಿಯಾಲಜಿ, ಪೊಲಿಟಿಕಲ್ ಸೈನ್ಸ್ ಇತ್ಯಾದಿ. ಐಎಎಸ್ ಮಾಡಿದ ಮೇಲೆ ಯಾವ ಸರ್ವೀಸ್ ವಿಭಾಗಕ್ಕೆ ಸೇರಬೇಕು ಎಂದು ಆಲೋಚಿಸಿ, ಅದರ ಅನುಗುಣವಾಗಿ ಡಿಗ್ರಿ ವಿಷಯಗಳ ಆಯ್ಕೆ ಸುಲಭ.

14. ನಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ. ನನಗೆ ಪದವಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ (ನರ್ಸಿಂಗ್) ಮುಂದುವರಿಯಬೇಕು ಎಂಬ ಬಯಕೆ. ಆದರೆ ನನ್ನ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಸರ್ಕಾರದಿಂದ ನಾನು ಪಡೆಯಬಹುದಾದ ವಿದ್ಯಾರ್ಥಿ ವೇತನಗಳು ಮತ್ತು ಸರ್ಕಾರದ ಸೀಟು ಪಡೆಯಲು ನಾನು ಏನು ಮಾಡಬೇಕು ಎಂಬುದನ್ನು ತಿಳಿಸಿ.

- ಪ್ರವೀಣ್ ಬಡಿಗೇರ್, ಊರು ತಿಳಿಸಿಲ್ಲ.

ಬಿಎಸ್‌ಸಿ ನರ್ಸಿಂಗ್ ಕೋರ್ಸ್‌ಗೆ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಪ್ರವೇಶದ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ, ಡೈರೆಕ್ಟೊರೇಟ್ ಅಫ್ ಮೆಡಿಕಲ್ ಎಜುಕೇಷನ್ ವೆಬ್‌ಸೈ್‌ ಅನ್ನು ಪರಾಮರ್ಶಿಸಿ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿದ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ.

ಹೆಚ್ಚಿನ ವಿವರಗಳಿಗಾಗಿ ಗಮನಿಸಿ https://scholarships.gov.in/. ಇದರ ಜೊತೆಗೆ ವಿದ್ಯಾ ಸಂಸ್ಥೆಗಳು, ಖಾಸಗಿ ಕಂಪನಿಗಳು, ಟ್ರಸ್ಟ್‌ಗಳು ಈ ನಿಟ್ಟಿನಲ್ಲಿ ಅನೇಕ ಸ್ಕಾಲರ್‌ಶಿಪ್ ಸೌಲಭ್ಯಗಳನ್ನು ನೀಡುತ್ತಿವೆ.

15. ನಾನು 10ನೇ ತರಗತಿಯಲ್ಲಿ ಓದುತ್ತಿದ್ದು, ಇದಾದ ನಂತರ ಪಿಯುಸಿ ಮತ್ತು ಡಿಪ್ಲೊಮಾ ಇವೆರಡರಲ್ಲಿ ಯಾವುದು ಒಳ್ಳೆಯದು? ಮುಂದೆ ಏರೋನಾಟಿಕಲ್ ಎಂಜಿನಿಯರಿಂಗ್ ಮಾಡುವ ಆಲೋಚನೆ ಇದೆ. ಇದಕ್ಕಾಗುವ ಖರ್ಚು ಮತ್ತು ಯಾವ ಕಾಲೇಜು ಉತ್ತಮ?

- ಶ್ರೀಷ ಗಂಜಿ ಲಕ್ಷ್ಮೇಶ್ವರ, ಗದಗ

ಪಿಯುಸಿ ಮಾಡಿ ಏರೋನಾಟಿಕಲ್ ಎಂಜಿನಿಯರಿಂಗ್ ಡಿಗ್ರಿ ಮಾಡುವುದು ಉತ್ತಮ. ಉತ್ತಮ ಕಾಲೇಜುಗಳ ಆಯ್ಕೆಗೆ ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಫರ್ಮೇಷನ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ ಮತ್ತು ಇನ್ನಿತರ ಸಂಸ್ಥೆಗಳ ರ‍್ಯಾಂಕಿಂಗ್ ಮಾಹಿತಿಯನ್ನು ಪರಾಮರ್ಶಿಸಿ. ಸರ್ಕಾರಿ ಕಾಲೇಜು, ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಮತ್ತು ಮ್ಯಾನೇಜ್‌ಮೆಂಟ್ ಕೋಟಾಗಳಲ್ಲಿನ ಶುಲ್ಕ ಮತ್ತು ಇನ್ನಿತರ ಶುಲ್ಕಗಳಲ್ಲಿ ತೀವ್ರವಾದ ವ್ಯತ್ಯಾಸಗಳಿರುವುದರಿಂದ ನಿಖರವಾಗಿ ಈಗಲೇ ಹೇಳಲಾಗುವುದಿಲ್ಲ. ಹಾಗಾಗಿ, ನೀವು ಎರಡನೇ ಪಿಯುಸಿ ಓದುತ್ತಿರುವಾಗ ಈ ಬಗ್ಗೆ ವಿಚಾರಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT