ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಧನೆ: ಕಣ್ಣುಮುಚ್ಚಿ ಓದುವ ದಾಖಲೆ...

Published : 14 ಸೆಪ್ಟೆಂಬರ್ 2024, 2:22 IST
Last Updated : 14 ಸೆಪ್ಟೆಂಬರ್ 2024, 2:22 IST
ಫಾಲೋ ಮಾಡಿ
Comments

ಕಣ್ಣುಮುಚ್ಚಿ ಪುಸ್ತಕ ಓದಿ ದಾಖಲೆ ಬರೆದ ಬಾಲಕ. ಹೀಗೆ ಹೇಳಿದೊಡನೆ, ಅರೆ.. ಇದು ಹೇಗೆ ಸಾಧ್ಯ. ಕಣ್ಣುಮುಚ್ಚಿಕೊಂಡು ಪುಸ್ತಕ ಓದುವುದು ಹೇಗೆ ಎನ್ನುವ ಪ್ರಶ್ನೆ ಕಾಡತೊಡಗುತ್ತದೆ. ಕಣ್ಣುಮುಚ್ಚಿಕೊಂಡು ಪುಸ್ತಕ ಓದಿದ ವಿಡಿಯೊ ತೋರಿಸಿದರೂ ನಂಬುವುದಕ್ಕೆ ಸಾಧ್ಯವೇ ಇಲ್ಲ. ಈ ಬಾಲಕ ಕಣ್ಣುಮುಚ್ಚಿ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಗಳನ್ನು ಓದುವುದು ಮಾತ್ರವಲ್ಲ, ವಸ್ತುವಿನ ಬಣ್ಣ, ಗಾತ್ರ, ಆಕಾರವನ್ನೂ ಕರಾರುವಕ್ಕಾಗಿ ಹೇಳುತ್ತಾನೆ. ಯಾರು ಈ ಹುಡುಗ, ಏನಿದು ವಿದ್ಯೆ?

ಬಾಲಕನ ಹೆಸರು ಸುಭಾಷ್‌ ವಿ. ಬೆಂಗಳೂರಿನ ಗೌಡನಪಾಳ್ಯದ ನಿವಾಸಿಗಳಾದ ವಿಜಯಕುಮಾರ್‌ ಎಸ್‌. ಹಾಗೂ ಲಾವಣ್ಯ ಎಂ. ಅವರ ಮಗ. ನಗರದ ಶ್ರೀ ಚೈನತ್ಯ ಟೆಕ್ನೊ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಾನೆ. ಲಾವಣ್ಯ ವಿಪ್ರೊ ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜಯ್‌ಕುಮಾರ್‌ ಅವರು ಇಕ್ವಾ ಕಂಪನಿಯಲ್ಲಿ ಪೇರೋಲ್‌ ಅನಲಿಸ್ಟ್‌ ಆಗಿ ಕೆಲಸ ಮಾಡುತ್ತಾರೆ.

ಇದೇ ವರ್ಷದ ಜುಲೈನಲ್ಲಿ ಸುಭಾಷ್‌ ಎರಡು ದಾಖಲೆಗಳನ್ನು ಬರೆದಿದ್ದಾನೆ. ಒಂದು: ಕಣ್ಣುಮುಚ್ಚಿಕೊಂಡು ಐದನೇ ತರಗತಿಯ ಇಂಗ್ಲಿಷ್‌ ಪುಸ್ತಕವನ್ನು 1 ಗಂಟೆ, 10 ನಿಮಿಷ, 53 ಸೆಕೆಂಡ್‌ನಲ್ಲಿ ಓದಿ ಮುಗಿಸಿದ್ದಾನೆ. ಇದು ಇಂಟರ್‌ನ್ಯಾಷನಲ್‌ ಬುಕ್ ಆಫ್‌ ವರ್ಲ್ಡ್‌ ರೆಕಾರ್ಡ್‌ನಲ್ಲಿ ಸೇರಿದೆ. ಅತ್ಯಂತ ವೇಗವಾಗಿ ಕಣ್ಣುಮುಚ್ಚಿಕೊಂಡು ಓದಿ ಸುಭಾಷ್‌ ದಾಖಲೆ ಬರೆದಿದ್ದಾನೆ. ಇನ್ನೊಂದು: 3X3 ರುಬಿಕ್ಸ್‌ ಕ್ಯೂಬ್ಸ್‌ ಸಮಸ್ಯೆ ಅನ್ನು ಕಣ್ಣುಮುಚ್ಚಿಕೊಂಡು ಬಿಡಿಸಿದ್ದಾನೆ. ಜೊತೆಗೆ, ಕಂಪ್ಯೂಟರ್‌ ಪರದೆ ಮೇಲೆ ಡಿಸ್ಲೇ ಆಗಿದ್ದನ್ನು ಕಣ್ಣುಮುಚ್ಚಿಕೊಂಡು ಓದಿದ್ದಾನೆ. ಈ ಕಾರಣದಿಂದಾಗಿ ‘ಇನ್‌ಫ್ಲ್ಯುಎನ್ಸರ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌’ನಲ್ಲಿ ಸುಭಾಷ್ ಹೆಸರು ಅಚ್ಚಾಗಿದೆ.

ಇಡೀ ಇಂಗ್ಲಿಷ್‌ ಪುಸ್ತಕವನ್ನು ಮೊದಲೇ ಬಾಯಿಪಾಠ ಮಾಡಿಕೊಂಡು ಓದಿರಬಹುದು ಎಂದು ಅನ್ನಿಸಬಹುದು. ಆದರೆ, ಸುಭಾಷ್‌ಗೆ ತಕ್ಷಣದಲ್ಲಿ ಯಾವ ಪುಸ್ತಕವನ್ನು ಕೊಟ್ಟರು ಆತ ಪುಸ್ತಕದಲ್ಲಿ ಇರುವುದನ್ನು ಓದಬಲ್ಲ. ಆಲ್ಬಂನಲ್ಲಿನ ಫೋಟೊಗಳನ್ನು ನೀಡಿದರೆ, ಫೋಟೊದಲ್ಲಿನ ವ್ಯಕ್ತಿಗಳ ಅಥವಾ ವಸ್ತುವಿನ ಬಣ್ಣ, ಆಕಾರಗಳನ್ನು ಕಣ್ಣುಮುಚ್ಚಿಕೊಂಡೇ ಹೇಳಬಲ್ಲ. ಇವೆಲ್ಲದೂ ಸಾಧ್ಯವಾಗುದ್ದು, ‘ಮಿಡ್‌ಬ್ರೈನ್‌ ಆ್ಯಕ್ಟಿವಿಟಿ’ ಕಾರ್ಯಾಗಾರದಿಂದ.

‘ಸಾಮಾಜಿಕ ಜಾಲತಾಣದ ಮೂಲಕ ಮಿಡ್‌ಬ್ರೈನ್‌ ಆ್ಯಕ್ಟಿವಿಟಿ’ಯ ಕುರಿತು ತಿಳಿದುಕೊಂಡೆವು. ಬೆಂಗಳೂರಿನಲ್ಲಿ ಈ ಆ್ಯಕ್ಟಿವಿಟಿಯನ್ನು ಹೇಳಿಕೊಡುವ ಶಾಲೆಯೊಂದಿದೆ. ಅಲ್ಲಿಗೆ ಸೇರಿಸಿದೆವು. ಕೆಲವು ದಿನಗಳು ತರಗತಿಗಳು ನಡೆದವು. ಇನ್ನುಮುಂದೆ ನೀವೇ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು. ಈಗ ದಿನಾಲು ಮಗ, ಕಣ್ಣುಮುಚ್ಚಿಕೊಂಡು ಓದುವ ಅಭ್ಯಾಸ ಮಾಡುತ್ತಾನೆ’ ಎನ್ನುತ್ತಾರೆ ತಾಯಿ ಲಾವಣ್ಯ.

ನನಗೆ ನೌಕಾಪಡೆಯಲ್ಲಿ ಸೈನಿಕನಾಗಿ ದೇಶ ಕಾಯುವ ಆಸೆ ಇದೆ
ಸುಭಾಷ್‌ ವಿ.

ಏನಿದು ‘ಮಿಡ್‌ಬ್ರೈನ್‌ ಆ್ಯಕ್ಟಿವಿಟಿ’?

ಮಿಡ್‌ಬ್ರೈನ್‌ ಅನ್ನುವುದು ಒಂದು ಸ್ಥಿತಿ. ಮಿದುಳನ್ನು ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬಳಸಿಕೊಳ್ಳಲು ಈ ಸ್ಥಿತಿಗೆ ತಲುಪಬೇಕಾಗುತ್ತದೆ. ಇದು ಸ್ವಯಂ ವಿದ್ಯೆಯಲ್ಲ. ಇದನ್ನು ಕಲಿಸಲೆಂದೇ ಅಕಾಡೆಮಿಗಳಿವೆ. ದೇಹದಲ್ಲಿ ಹಾರ್ಮೋನ್‌ ಬದಲಾವಣೆಯ ಮೂಲಕ ಈ ಸ್ಥಿತಿಯನ್ನು ತಲುಪಬೇಕಾಗುತ್ತದೆ. ಈ ಹಾರ್ಮೋನ್‌ಗಳು ಕತ್ತಲಲ್ಲಿ ಮಾತ್ರವೇ ಕೆಲಸ ಮಾಡುತ್ತವೆ. ಇದಕ್ಕಾಗಿಯೇ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಓದಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT