ಮಂಗಳವಾರ, ಜೂನ್ 28, 2022
20 °C
ಪ್ರಸಕ್ತ ಸಾಲಿನಿಂದಲೇ ಆರಂಭಿಸಲು ಎಐಸಿಟಿಇನಿಂದ ಅವಕಾಶ

ಕನ್ನಡದಲ್ಲಿ ಎಂಜಿನಿಯರಿಂಗ್ ಶಿಕ್ಷಣ: ವಿಟಿಯು ತಯಾರಿ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಎಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡದಲ್ಲಿ ನೀಡುವುದಕ್ಕೆ ಅಗತ್ಯವಾದ ತಯಾರಿಯನ್ನು ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಆರಂಭಿಸಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಸಾಲಿನಲ್ಲಿ ಕನ್ನಡದ ವಿದ್ಯಾರ್ಥಿಗಳು ಮಾತೃ ಭಾಷೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಬಹುದಾಗಿದೆ.

ಕನ್ನಡ ಸೇರಿದಂತೆ ಏಳು ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ನೀಡುವಂತೆ ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು) ಎಂಜಿನಿಯರಿಂಗ್‌ ಕಾಲೇಜುಗಳಿಗೆ ಸೂಚಿಸಿದೆ. 2021–22ನೇ ಸಾಲಿನಲ್ಲಿ ಕನ್ನಡ, ಹಿಂದಿ, ಬಂಗಾಳಿ, ತೆಲುಗು, ತಮಿಳು, ಗುಜರಾತಿ ಮತ್ತು ಮಲಯಾಳಂ ಭಾಷೆಗಳಲ್ಲಿ ‌ವಿದ್ಯಾರ್ಥಿಗಳು ಕಲಿಯಬಹದಾಗಿದೆ.

ಪ್ರತ್ಯೇಕ ವಿಭಾಗಕ್ಕೆ ಅವಕಾಶ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಾರ ಪ್ರಾದೇಶಿಕ ಭಾಷೆಗಳಲ್ಲಿ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ. ಈ ವಿಷಯದಲ್ಲಿ ಆಯಾ ಕಾಲೇಜುಗಳವರು ಕ್ರಮ ವಹಿಸಬೇಕು ಎಂದು ಎಐಸಿಟಿಇ ಸೂಚಿಸಿದೆ. ಹೀಗೆ ಕನ್ನಡದಲ್ಲಿ ಓದಲು ಬಯಸುವ 30 ಅಥವಾ 60 ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗ ಮಾಡುವುದಕ್ಕೂ ಅವಕಾಶವಿದೆ.

ಕನ್ನಡದಲ್ಲಿ ಬೋಧನೆಗೆ ಬೇಕಾಗುವ ಪರಿಕರವನ್ನು ಹೊಂದುವುದಕ್ಕೆ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ‘ಕನ್ನಡ ತಾಂತ್ರಿಕ ಪುಸ್ತಕ ಪ್ರಕಟಣಾ ಸಮಿತಿ’ ರಚಿಸಲಾಗಿದೆ.

ಕನ್ನಡದಲ್ಲಿ ತಾಂತ್ರಿಕ ಪುಸ್ತಕಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಎಐಸಿಟಿಇ ವಿಟಿಯುಗೆ ಜವಾಬ್ದಾರಿ ನೀಡಿದೆ. ಈ ಹಿನ್ನೆಲೆಯಲ್ಲಿ ‘ಕನ್ನಡ ತಾಂತ್ರಿಕ ಪುಸ್ತಕ ಪ್ರಕಟಣಾ ಸಮಿತಿ’ಯಿಂದ ಸದ್ಯಕ್ಕೆ ಮೊದಲನೇ ಸೆಮಿಸ್ಟರ್‌ಗೆ ಬೇಕಾಗುವ ತಾಂತ್ರಿಕ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಲು ಅನುವಾದಕರು, ವಿಜ್ಞಾನ ಬರಹಗಾರರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಹೀಗೆ ಬಂದ ಅರ್ಜಿಗಳಲ್ಲಿ ಕೆಲವು ಹೆಸರುಗಳನ್ನು ಅಂತಿಮಗೊಳಿಸಿ ಅನುಮೋದನೆಗಾಗಿ ಎಐಸಿಟಿಇಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ಕೂಡಲೇ ಅನುವಾದ ಕಾರ್ಯ ಆರಂಭವಾಗಲಿದೆ ಎಂದು ವಿಟಿಯು ಮೂಲಗಳು ತಿಳಿಸಿವೆ.

ಕನ್ನಡಕ್ಕೆ ಅನುವಾದಿಸಲು: ಎಐಸಿಟಿಇ ಮತ್ತು ವಿಟಿಯು ಪಠ್ಯಕ್ರಮಗಳನ್ನು ಪ್ರತ್ಯೇಕವಾಗಿ ಕನ್ನಡಕ್ಕೆ ಅನುವಾದಿಸುವ ಕಾರ್ಯ ನಡೆಯಬೇಕಾಗಿದೆ. ಇದರೊಂದಿಗೆ ‘ಕನ್ನಡ ತಾಂತ್ರಿಕ ಶಬ್ದಕೋಶ’ ರಚನೆಗೂ ನಿರ್ಧರಿಸಲಾಗಿದೆ. ಶಬ್ದಗಳನ್ನು ಕನ್ನಡೀಕರಿಸುವುದಕ್ಕಾಗಿ ಆಯಾ ಬ್ರಾಂಚ್‌ವಾರು ಉಪ ಸಮಿತಿಗಳನ್ನು ರಚಿಸಲಾಗಿದೆ. ಕನ್ನಡ ಚೆನ್ನಾಗಿ ಬಲ್ಲ ಉಪನ್ಯಾಸಕರನ್ನು ಬಳಸಲಾಗುತ್ತಿದೆ. ‘ಎಲ್ಲ ತಾಂತ್ರಿಕ ಶಬ್ದಗಳನ್ನೂ ಕನ್ನಡದಲ್ಲಿ ಅನುವಾದಿಸುವುದಕ್ಕೆ ಆಗುವುದಿಲ್ಲ; ಹಾಗೊಂದು ವೇಳೆ ಅನುವಾದಿಸಿದರೂ ಅರ್ಥವಾಗುವುದಿಲ್ಲ. ಹೀಗಾಗಿ, ಇಂಗ್ಲಿಷ್‌ನಲ್ಲೇ ಉಳಿಸಿಕೊಂಡು ಅದಕ್ಕೆ ವಿವರಣೆಯನ್ನು ಕನ್ನಡದಲ್ಲಿ ನೀಡಬೇಕು’ ಎಂದು ಎಐಸಿಟಿಇ ಸೂಚಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ, ‘ಎಐಸಿಟಿಇ ಸೂಚನೆ ಪ್ರಕಾರ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕಾಲೇಜುಗಳು ಪ್ರಸ್ತಾವ ಸಲ್ಲಿಸಿದರೆ ಅನುಮೋದನೆ ನೀಡುತ್ತೇವೆ. ಇದಕ್ಕೆ ಪೂರಕವಾಗಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ರೂಪಿಸಲು ತಜ್ಞರನ್ನು ಗುರುತಿಸಲಾಗಿದೆ. ವಿಷಯವಾರು ಪುಸ್ತಕಗಳನ್ನು ಸಿದ್ಧಪಡಿಸಲಾಗುವುದು. ಮೊದಲನೇ ಸೆಮಿಸ್ಟರ್‌ ಪುಸ್ತಕಗಳು ಸಿದ್ಧಗೊಂಡ ನಂತರ ಮುಂದಿನ ಸೆಮಿಸ್ಟರ್‌ ಪುಸ್ತಕಗಳ ಅನುದಾದ ಶುರುವಾಗಲಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು