ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಯಲ್ಲಿ ಮೇಲೇರಲು ಎಂಜಿನಿಯರಿಂಗ್‌ ಮ್ಯಾನೇಜ್‌ಮೆಂಟ್ ಕೋರ್ಸ್‌

Last Updated 27 ಜೂನ್ 2021, 19:30 IST
ಅಕ್ಷರ ಗಾತ್ರ

ಒಂದು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಜಿನಿಯರ್‌ ಕೇವಲ ತಾಂತ್ರಿಕ ಕೌಶಲಗಳನ್ನು ಹೊಂದಿದ್ದರೆ ಸಾಲದು, ಅವರು ಕಂಪನಿಯಲ್ಲಿ ತಮ್ಮ ವ್ಯಕ್ತಿಗತ ಹಾಗೂ ಸಂಸ್ಥೆಯ ಗುರಿಗಳನ್ನು ಮುಟ್ಟಲು ಅಲ್ಲಿಯ ತಂಡಗಳ ನಾಯಕರಾಗಿ ಮುನ್ನಡೆಸುವ ಅನಿವಾರ್ಯತೆ ಇರುತ್ತದೆ. ಹೀಗಾಗಿ ಅವರು ನಿರ್ವಹಣಾ ಕೌಶಲಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಈ ರೀತಿಯ ತಾಂತ್ರಿಕ ಹಾಗೂ ನಿರ್ವಹಣಾ ಕೌಶಲಗಳನ್ನು ‘ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್’ (ಎಂಇ) ಸ್ನಾತಕೋತ್ತರ ಪದವಿಯ ಮೂಲಕ ತಮ್ಮದಾಗಿಸಿಕೊಳ್ಳಬಹುದು.

ಏನಿದು ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್?

ಎಂಜಿನಿಯರಿಂಗ್ ಎನ್ನುವುದು ಗೊತ್ತೇ ಇದೆ. ಇದರಲ್ಲಿ ವಿಜ್ಞಾನ ಮತ್ತು ಗಣಿತ ಸೇರಿಕೊಂಡಿರುತ್ತದೆ. ವಿವಿಧ ಯಂತ್ರಗಳು, ಸಾಫ್ಟ್‌ವೇರ್‌ ನಿಭಾಯಿಸುವುದು ಎಂಜಿನಿಯರ್‌ಗಳ ಹೊಣೆ. ಮ್ಯಾನೇಜ್‌ಮೆಂಟ್‌ ಅಥವಾ ನಿರ್ವಹಣೆ ಎನ್ನುವುದು ಉದ್ಯಮಗಳನ್ನು, ಕಾರ್ಯಾಚರಣೆಯನ್ನು ಅಥವಾ ವ್ಯಕ್ತಿಗಳನ್ನು ನಿಯಂತ್ರಿಸುವುದು ಅಥವಾ ಅವರ ಜೊತೆ ವ್ಯವಹರಿಸುವುದು. ಎಂಜಿನಿಯರಿಂಗ್‌ ಮ್ಯಾನೇಜ್‌ಮೆಂಟ್‌ನಲ್ಲಿ ಒಬ್ಬ ಎಂಜಿನಿಯರ್‌ಗೆ ನಿರ್ವಹಣೆಯ ಕೌಶಲಗಳನ್ನು ಕಲಿಸಲಾಗುತ್ತದೆ. ಅಂದರೆ ಒಂದು ಕಂಪನಿಯಲ್ಲಿ ಆರಂಭದಿಂದ ಹಿಡಿದು ಕೊನೆಯವರೆಗೂ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಹೊಣೆಗಾರಿಕೆಯಿಂದ ನಿಭಾಯಿಸಲು ಪರಿಪೂರ್ಣತೆ ಪಡೆಯುವುದು. ತಾಂತ್ರಿಕವಾಗಿ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ ವ್ಯವಹಾರ ಕೌಶಲ ಹಾಗೂ ನಿರ್ವಹಣೆಯನ್ನು ಇಲ್ಲಿ ಕಲಿಯಬಹುದು. ಕಾರ್ಯಕ್ಷಮತೆಯಿಂದ ನಿರ್ವಹಿಸುವ ಅಥವಾ ಮೇಲ್ವಿಚಾರಣೆ ಮಾಡುವ ಸಲುವಾಗಿ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಮ್ಯಾನೇಜ್‌ಮೆಂಟ್ ಅಥವಾ ನಿರ್ವಹಣೆಯ ಅಧ್ಯಯನದಲ್ಲಿ ಬರುವ ಪರಿಕಲ್ಪನೆಗಳನ್ನು ಅನ್ವಯಿಸಿ ಯಶಸ್ಸು ಪಡೆಯಬಹುದು. ಈ ಸ್ನಾತಕೋತ್ತರ ಪದವಿಯಿಂದ ಒಬ್ಬ ಎಂಜಿನಿಯರಿಂಗ್ ಪದವೀಧರ ತಾಂತ್ರಿಕ ಮತ್ತು ನಿರ್ವಹಣಾ ಕೌಶಲಗಳನ್ನು ಏಕಕಾಲದಲ್ಲಿ ತನ್ನದಾಗಿಸಿಕೊಳ್ಳಬಹುದಾಗಿದೆ.

ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಕೋರ್ಸ್‌ ಎನ್ನುವುದು ಎಂಜಿನಿಯರಿಂಗ್ ತಂತ್ರಜ್ಞಾನ ಮತ್ತು ನಿರ್ವಹಣೆಯ ನಡುವಿನ ಅಂತರವನ್ನು ನಿವಾರಿಸಲು ‘ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ’ ವೃತ್ತಿಪರ ಕೋರ್ಸ್‌. ಇದು ಇತ್ತೀಚಿನ ದಿನಗಳಲ್ಲಿ ಒಂದು ಜನಪ್ರಿಯ ಕೋರ್ಸ್ ಆಗಿದ್ದು, ಎಂಜಿನಿಯರಿಂಗ್‌ ಎಂಬಿಎ ಎನ್ನಲಾಗುತ್ತಿದೆ.

ಯಾರು ಈ ಕೋರ್ಸ್‌ಗೆ ಸೇರಬಹುದು?

ನೀವು ಎಂಜಿನಿಯರಿಂಗ್ ಅಥವಾ ವಿಜ್ಞಾನ ಪದವೀಧರರಾಗಿದ್ದರೆ ಮತ್ತು ಸಾಂಪ್ರದಾಯಿಕವಲ್ಲದ ಸ್ನಾತಕೋತ್ತರ ಪದವಿಯನ್ನು ಹುಡುಕುತ್ತಿದ್ದರೆ, ಈ ಕೋರ್ಸ್ ಸರಿಯಾದ ಆಯ್ಕೆ ಆಗಬಹುದು. ಯಾವುದೇ ನಿರ್ದಿಷ್ಟ ಎಂಜಿನಿಯರಿಂಗ್ ವಿಭಾಗದ ಹಿನ್ನಲೆಯ ಅಗತ್ಯವಿಲ್ಲ. ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ವಹಣೆ, ತಂತ್ರಜ್ಞಾನ, ಉದ್ಯಮಶೀಲತೆ, ಕೈಗಾರಿಕಾ ನಿರ್ವಹಣೆ, ಗುಣಮಟ್ಟ ನಿಯಂತ್ರಣ, ಬೌದ್ಧಿಕ ನಿರ್ವಹಣೆ, ದತ್ತಾಂಶ ವಿಶ್ಲೇಷಣೆಯಲ್ಲಿ ಆಸಕ್ತಿ ಇದ್ದಲ್ಲಿ ಈ ಕೋರ್ಸ್ ಹೆಚ್ಚು ಸೂಕ್ತ.

ಪಠ್ಯ ಹೇಗಿರುತ್ತದೆ?

1) ಕಂಪ್ಯೂಟರ್ ಸಿಮ್ಯುಲೇಶನ್ ಫಾರ್ ರಿಸ್ಕ್ ಅಂಡ್ ಆಪರೇಶನಲ್ ಅನಾಲಿಟಿಕ್ಸ್, 2) ಪ್ರಾಜೆಕ್ಟ್ ಮ್ಯಾನೇಜ್‌ ಮೆಂಟ್, 3) ಪ್ರಾಡಕ್ಟ್ ಮ್ಯಾನೇಜ್‌ಮೆಂಟ್, 4) ಮ್ಯಾನು ಫ್ಯಾಕ್ಚರಿಂಗ್ ಮ್ಯಾನೇಜ್ ಮೆಂಟ್, 5) ಸಿಸ್ಟಂ ಎಂಜಿನಿಯರಿಂಗ್ ಅಂಡ್ ಆರ್ಕಿಟೆಕ್ಚರ್, 6) ಎನ್ವಿರಾನ್‌ ಮೆಂಟಲ್ ಸಿಸ್ಟಂ ಅನಾಲಿಸಿಸ್, 7) ಎಕನಾಮಿಕ್ಸ್ ಅಂಡ್ ಪಬ್ಲಿಕ್ ಪಾಲಿಸಿ, 8) ಅಪ್ಲೈಡ್‌ ಮಷೀನ್ ಲರ್ನಿಂಗ್, 9) ಡೇಟಾ ಸೈನ್ಸ್ ಮತ್ತು ಮಶೀನ್ ಲರ್ನಿಂಗ್, 10) ಆಪರೇಶನ್ಸ್‌ ಅಂಡ್ ಸಪ್ಲೈಚೈನ್ ಮ್ಯಾನೇಜ್‌ಮೆಂಟ್, 11) ಟೆಕ್ನಾಲಜಿ ಡೆವಲೆಪ್‌ಮೆಂಟ್, 12) ನಾಯಕತ್ವ ಮತ್ತು ಆರ್ಗನೈಜೇಶನಲ್‌ ಬಿಹೇವಿಯರ್, ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್, ಅಕೌಂಟಿಂಗ್ ಅಂಡ್ ಫೈನಾನ್ಸ್.

ಕೋರ್ಸ್ ಪೂರ್ಣಾವಧಿ ಆಗಿದ್ದಲ್ಲಿ 12– 24 ತಿಂಗಳುಗಳು. ಅರೆಕಾಲಿಕ ಅಥವಾ ದೂರ ಶಿಕ್ಷಣ ಕಾರ್ಯಕ್ರಮ 6–9 ತಿಂಗಳು ಅಥವಾ ಒಂದು ವರ್ಷದವರೆಗೆ ಇರುತ್ತದೆ. ಭಾರತದಲ್ಲಿ ಜೆ.ಎಸ್.ಎಸ್. ಸೈನ್ಸ್ ಅಂಡ್ ಟೆಕ್ನಾಲಜಿಕ್ ವಿಶ್ವವಿದ್ಯಾಲಯ ಮೈಸೂರು, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ‍್ಕೆಲಾ, ನೇತಾಜಿ ಸುಭಾಷ್ ಯೂನಿರ್ವಸಿಟಿ ಆಫ್ ಟೆಕ್ನಾಲಜಿ, ನವದೆಹಲಿ, ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ವಿಶ್ವವಿದ್ಯಾಲಯ, ಬೆಳಗಾವಿ ಮೊದಲಾದ ಕಡೆ ಈ ಕೋರ್ಸ್‌ ಇದೆ. ವೆಚ್ಚ ವಿಶ್ವವಿದ್ಯಾಲಯವನ್ನು ಅವಲಂಬಿಸಿರುತ್ತದೆ.

ಐ.ಬಿ.ಎಂ, ಗೂಗಲ್, ಬ್ಯೂ ಬರ್ಗ್, ಡೆಲಾಯಿಟ್, ಆ್ಯಪಲ್, ಅಮೆಜಾನ್, ಜನರಲ್ ಮೋಟರ್ಸ್, ಗೋಲ್ಡ್ಮನ್ ಸ್ಯಾಚಸ್, ಮೈಕ್ರೋಸಾಫ್ಟ್, ಓರಾಕಲ್, ಕಾಗ್ನಿಜೆಂಡ್, ಟಾಟಾ ಮೊದಲಾದ ಕಡೆ ಉದ್ಯೋಗ ನಿರೀಕ್ಷಿಸಬಹುದು. ಸೀನಿಯರ್ ಎಂಜಿನಿಯರಿಂಗ್ ಮ್ಯಾನೇಜರ್, ಎಂಜಿನಿಯರಿಂಗ್ ಪ್ರಾಡಕ್ಟ್ ಮ್ಯಾನೇಜರ್, ಎಂಜಿನಿಯರಿಂಗ್ ಸೂಪರ್‌ವೈಸರ್, ಸೀನಿಯರ್ ಲೀಡ್ ಅನಾಲಿಸ್ಟ್, ಆಪರೇಷನ್ಸ್ ಅನಾಲಿಸ್ಟ್ ಮೊದಲಾದ ಹುದ್ದೆಗಳಿಗೆ ಬೇಡಿಕೆ ಇದೆ. ಭಾರತದಲ್ಲಿ ಸುಮಾರು 15– 30 ಲಕ್ಷ ರೂಪಾಯಿ ವಾರ್ಷಿಕ ವರಮಾನವನ್ನು ನಿರೀಕ್ಷಿಸಬಹುದು.

ಅರ್ಹತೆಗಳೇನು?

ಈ ಕೋರ್ಸ್‌ ಅನ್ನು ಅಮೆರಿಕ, ಕೆನಡಾ ಹಾಗೂ ಆಸ್ಟ್ರೇಲಿಯಾ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಮಾಡುವುದು ಹೆಚ್ಚು ಸೂಕ್ತ. ಈ ಕೋರ್ಸ್‌ ಪೂರ್ಣಕಾಲಿಕ, ಅರೆಕಾಲಿಕ ಹಾಗೂ ದೂರ ಶಿಕ್ಷಣ ವಿಧಾನಗಳ ಮೂಲಕ ಕಲಿಯಬಹುದು. ಪ್ರವೇಶದ ನಿಯಮಗಳು ಮತ್ತು ಕಲಿಕಾ ವಿಧಾನಗಳು ವಿಶ್ವವಿದ್ಯಾಲಯದಿಂದ ವಿಶ್ವವಿದ್ಯಾಲಯಕ್ಕೆ ಬದಲಾಗುತ್ತವೆ.

*ಉತ್ತಮ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಜಿ.ಮ್ಯಾಟ್ ಮತ್ತು ಜಿಆರ್‌ಇ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಉತ್ತಮ ಅಂಕಗಳನ್ನು ಪಡೆದಿರಬೇಕು. ಐದು ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವಿದ್ದರೆ, ಈ ಅಂಕಗಳ ಮಿತಿಯಿಂದ ವಿನಾಯಿತಿ ಪಡೆಯಬಹುದು.

*ಅಭ್ಯರ್ಥಿಯ ಶೈಕ್ಷಣಿಕ, ಕೆಲಸ ಹಾಗೂ ನಾಯಕತ್ವ ಕೌಶಲಗಳನ್ನು ಪ್ರದರ್ಶಿಸುವ ಎರಡು ಅಥವಾ ಮೂರು ಶಿಫಾರಸು ಪತ್ರಗಳು.

*ಸ್ಥಳೀಯ ವಿದ್ಯಾರ್ಥಿಗಳಿಗೆ ಅಥವಾ ಇಂಗ್ಲಿಷ್ ಮಾತೃ ಭಾಷೆಯಲ್ಲದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಟೋಫಲ್ ಅಥವಾ ಐ.ಇ.ಎಲ್.ಟಿ.ಎಸ್. ಅಂಕಗಳು.

*ಅಭ್ಯರ್ಥಿಯು ಗಣಿತ, ಸಂಖ್ಯಾಶಾಸ್ತ್ರದಂತಹ ವಿಷಯಗಳಲ್ಲಿ ಹೆಚ್ಚು ಪರಿಣತಿ ಹೊಂದಿರಬೇಕು.

(ಲೇಖಕರು: ವೃತ್ತಿ ಸಲಹೆಗಾರರು, ಸಹಾಯಕ ಪ್ರಾಧ್ಯಾಪಕರು, ಎಂಬಿಎ ವಿಭಾಗ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT