ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: Digital Marketing ಕೋರ್ಸ್‌ ನಂತರ ಮುಂದೇನು?

ಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
Published : 30 ಜುಲೈ 2023, 11:29 IST
Last Updated : 30 ಜುಲೈ 2023, 11:29 IST
ಫಾಲೋ ಮಾಡಿ
Comments

1. ನಾನು ಡಿ.ಇಡಿ ಮುಗಿಸಿದ್ದು, ಈಗ ಬಿ.ಇಡಿ ತತ್ಸಮಾನ ಇಂಟಿಗ್ರೇಟೆಡ್ ಕೋರ್ಸ್ ಮಾಡಲು ಬಯಸಿದ್ದೇನೆ. ಯಾವ ವಿಶ್ವವಿದ್ಯಾಲಯದಲ್ಲಿ ಮಾಡಬಹುದು?

ಗಜೇಂದ್ರ, ಬಳ್ಳಾರಿ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಐಟಿಇಪಿ (ಇಂಟಿಗ್ರೇಟೆಡ್ ಟೀಚರ್ ಎಜುಕೇಷನ್ ಪ್ರೋಗ್ರಾಮ್) ಅನುಸಾರ ನಾಲ್ಕು ವರ್ಷದ ಇಂಟಿಗ್ರೇಟೆಡ್ ಬಿ.ಇಡಿ ಕೋರ್ಸ್‌ನ್ನು ವಿಜ್ಞಾನ (ಬಿ.ಎಸ್ಸಿ), ವಾಣಿಜ್ಯ(ಬಿಕಾಂ) ಕಲಾ (ಬಿಎ) ವಿಭಾಗಗಳೊಂದಿಗೆ ಮಾಡುವುದು ನಿಮ್ಮ ಭವಿಷ್ಯದ ದೃಷ್ಠಿಯಿಂದ ಸೂಕ್ತವೆನಿಸುತ್ತದೆ. ಉದಾಹರಣೆಗೆ, ವಿಜ್ಞಾನದ ವಿಷಯಗಳನ್ನು ಬೋಧಿಸುವ ಆಸಕ್ತಿಯಿದ್ದರೆ, ಬಿ.ಎಸ್ಸಿ, ಬಿ.ಇಡಿ ಕೋರ್ಸ್ ಮಾಡಬಹುದು. ಈ ಕೋರ್ಸನ್ನು ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಮಾಡಬಹುದು. ಪ್ರವೇಶ ಪ್ರಕ್ರಿಯೆ ನ್ಯಾಷನಲ್ ಕಾಮನ್ ಎಂಟ್ರನ್ಸ್ ಟೆಸ್ಟ್ (ಎನ್‌ಸಿಇಟಿ) ಮೂಲಕ ನಡೆಯುತ್ತದೆ. ಇದಲ್ಲದೆ, ಅನೇಕ ಖಾಸಗಿ ವಿಶ್ವವಿದ್ಯಾಲಯಗಳಲ್ಲಿಯೂ ಇಂಟಿಗ್ರೇಟೇಡ್ ಬಿ.ಇಡಿ ಕೋರ್ಸ್ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ncet.samarth.ac.in

2. ನಾನು ಮೂರು ವರ್ಷದ ಪ್ಯಾರಮೆಡಿಕಲ್ ಕೋರ್ಸ್‌ ಮುಗಿಸಿದ್ದು, ಈಗ ಬಿಕಾಂ ಮಾಡಬಹುದೇ? ಅಥವಾ ಈ ಕೋರ್ಸ್ ಪಿಯುಸಿಗೆ ಸಮಾನವೇ?

ಪ್ರಜ್ವಲ್, ಹುಮನಾಬಾದ್.

ನಮ್ಮ ಅಭಿಪ್ರಾಯದಂತೆ, ಮೂರು ವರ್ಷದ ಪ್ಯಾರಮೆಡಿಕಲ್ ಕೋರ್ಸ್ ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ನಿಮಗೆ ಬಿಕಾಂ ಮಾಡುವ ಅರ್ಹತೆಯಿರುತ್ತದೆ. ನಿಖರವಾದ ಮಾಹಿತಿಗಾಗಿ, ನೀವು ಬಿಕಾಂ ಮಾಡಬಯಸುವ ಕಾಲೇಜನ್ನು ಸಂಪರ್ಕಿಸಿ.

3. ಡಿಜಿಟಲ್ ಮಾರ್ಕೆಟಿಂಗ್ ಕಲಿಯುವುದರಿಂದ ಆಗುವ ಪ್ರಯೋಜನಗಳೇನು? ಇದರ ಬಗ್ಗೆ ಮಾಹಿತಿ ನೀಡಿ.

ಜೀವನ್, ಕೊಡಗು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಉದ್ಯಮವನ್ನು ಅಭಿವೃದ್ಧಿಪಡಿಸಲು ಡಿಜಿಟಲ್ ಮಾರ್ಕೆಟಿಂಗ್ ಪ್ರಮುಖವಾದ ಮತ್ತು ಪರಿಣಾಮಕಾರಿಯಾದ ಸಾಧನವಾಗಿದೆ. ಗ್ರಾಹಕರ ಗಮನವನ್ನು ಸೆಳೆಯುವುದು, ಪದಾರ್ಥ ಮತ್ತು ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಒದಗಿಸುವುದು, ಗ್ರಾಹಕರ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ, ವಿಶ್ವಾಸಾರ್ಹ ಬ್ರ್ಯಾಂಡ್‌ ನಿರ್ಮಾಣ ಮುಂತಾದ ಉದ್ಯಮ ಕ್ಷೇತ್ರದ ಬಹುತೇಕ ಕಾರ್ಯಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸಿದ್ದಾಂತಗಳ ಬಳಕೆಯಾಗುತ್ತದೆ. ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ ಬಿಬಿಎ/ಎಂಬಿಎ ಪದವಿಗಳಲ್ಲದೆ, ಅರೆಕಾಲಿಕ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಿ ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದು.

4. ನಾನು ಬಿಕಾಂ ಮುಗಿಸಿದ್ದು, ಈಗ ಎಂಎ (ಅರ್ಥಶಾಸ್ತ್ರ) ಮಾಡುವ ಅಭಿರುಚಿಯಿದೆ. ಈ ಕೋರ್ಸ್ ನನಗೆ ಸೂಕ್ತವೇ?

ಮಾದೇವ ಮೌರ್ಯ, ಜಮಖಂಡಿ.

ನಿಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವ ಕೋರ್ಸ್ ನಿಮಗೆ ಸೂಕ್ತವೆಂದು ನಿರ್ಧರಿಸಬೇಕು. ಇಂದಿನ ಪ್ರಶ್ನೋತ್ತರದಲ್ಲಿ ವಿವರಿಸಿರುವಂತೆ ಎಂಎ (ಅರ್ಥಶಾಸ್ತç) ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಎಂಎ (ಅರ್ಥಶಾಸ್ತç) ಪದವಿಯ ನಂತರ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

5. ನಾನು ಅಂತಿಮ ಸೆಮಿಸ್ಟರ್ ಬಿ.ಕಾಂ ಓದುತ್ತಿದ್ದೇನೆ. ಮುಂದೆ ಸಿಎ ಮಾಡುವ ಗುರಿ ಇದೆ. ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಬಿ.ಕಾಂ ಪರೀಕ್ಷೆಯಲ್ಲಿ ಶೇ 55 ಅಂಕಗಳನ್ನು ಗಳಿಸಿದಲ್ಲಿ, ಇಂಟರ್‌ಮೀಡಿಯಟ್ ಕೋರ್ಸ್‌ಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ 3 ವರ್ಷದ ಆರ್ಟಿಕಲ್ಡ್ ಟ್ರೈನಿಂಗ್‌ಗೆ ಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗ ಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಟ 3-4 ವರ್ಷ ಬೇಕಾಗುತ್ತದೆ.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=fuTaa5UjZCo

6. ನನ್ನ ಮಗಳು ದ್ವಿತೀಯ ಪಿಯುಸಿ (ವಾಣಿಜ್ಯ) ಓದುತ್ತಿದ್ದಾಳೆ. ಮುಂದೆ ಜೀವನದ ಭದ್ರತೆಯ ದೃಷ್ಠಿಯಿಂದ ಯಾವ ಕೋರ್ಸ್ ಓದುವುದು ಉತ್ತಮ? ದ್ವಿತೀಯ ಪಿಯುಸಿ ಪರೀಕ್ಷೆಯ ನಂತರದ ರಜೆಯಲ್ಲಿ ಅವಳಿಗೆ ಯಾವ ತರಬೇತಿಯ ಅವಶ್ಯಕತೆ ಇದೆ? ನಾವು ಶಿವಮೊಗ್ಗದಲ್ಲಿ ಇರುತ್ತೇವೆ. ಇಲ್ಲಿ ಯಾವ ತರಬೇತಿ ಸಿಗಬಹುದು? ದಯವಿಟ್ಟು ಉತ್ತರಿಸಿ.

ಹೆಸರು, ಊರು ತಿಳಿಸಿಲ್ಲ.

ಈ ಸಲಹೆಗಳನ್ನು ಗಮನಿಸಿ:

• ಪಿಯುಸಿ ನಂತರ ಬಿಕಾಂ ಮಾಡಿ ಉದ್ಯೋಗ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದು. ಈಗ ಬಿಕಾಂ ಪದವಿಯನ್ನು ಸುಮಾರು ಹತ್ತು ವಿಷಯಗಳಲ್ಲಿ (ಬ್ಯಾಂಕಿಂಗ್, ಇನ್‌ಶ್ಯೂರೆನ್ಸ್, ಇನ್ವೆಸ್ಟ್‌ಮೆಂಟ್, ಅಕೌಂಟಿಂಗ್ ಟ್ರಾವೆಲ್ ಇತ್ಯಾದಿ) ಮಾಡಬಹುದು  ಪದವಿಯ ನಂತರ ಆಯಾ ಕ್ಷೇತ್ರಗಳಲ್ಲಿ, ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

• ಆಸಕ್ತಿ, ಅಭಿರುಚಿಯಿದ್ದಲ್ಲಿ ಪಿಯುಸಿ ನಂತರ ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳಿಗೆ, ಅತ್ಯುನ್ನತ ಆಯ್ಕೆ ಎನ್ನಬಹುದಾದ ಸಿಎ ಕೋರ್ಸ್ ಮಾಡಬಹುದು.

• ವಾಣಿಜ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಹಾಗಾಗಿ, ಮುಂದಿನ ಶೈಕ್ಷಣಿಕ ಕೋರ್ಸ್ ಜೊತೆಗೆ, ವ್ಯಕ್ತಿತ್ವ ಮತ್ತು ಕೌಶಲಾಭಿವೃದ್ಧಿ ಕೋರ್ಸ್ ಮಾಡುವುದು ಸೂಕ್ತ.

• ನಮಗಿರುವ ಮಾಹಿತಿಯಂತೆ, ಕೌಶಲಾಭಿವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಸಿಎ ಕೋರ್ಸ್ ಮಾಡಲು ಆರ್ಟಿಕಲ್ಡ್ ಟ್ರೈನಿಂಗ್‌ ಮುಂತಾದ ಸೌಕರ್ಯಗಳು ಶಿವಮೊಗ್ಗದಲ್ಲೂ ದೊರಕುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=jmijSoqBDVw

7. ನಾನು ಎಂಎ (ಅರ್ಥಶಾಸ್ತ್ರ) ಮಾಡುತ್ತಿದ್ದು, ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿಯಿದೆ. ಯುಪಿಎಸ್‌ಸಿ ಮೂಲಕ ಉದ್ಯೋಗವನ್ನು ಮಾಡಲು ಆಸಕ್ತಿಯಿದೆ. ಎಂಎ (ಅರ್ಥಶಾಸ್ತ್ರ) ಹೇಗೆ ಉಪಯೋಗವಾಗಬಹುದು?

ಹೆಸರು, ಊರು ತಿಳಿಸಿಲ್ಲ.

ಎಂಎ (ಅರ್ಥಶಾಸ್ತ್ರ) ಕೋರ್ಸ್ ನಂತರ ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ, ನಿಮ್ಮ ಆಸಕ್ತಿಯ ಅನುಸಾರ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಶಿಕ್ಷಣ, ಬ್ಯಾಂಕಿಂಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ, ಮಾಧ್ಯಮ, ವಿಷಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದಲ್ಲೂ ವೃತ್ತಿಯನ್ನು ಅರಸಬಹುದು. ಡಾಕ್ಟರೇಟ್ ಮಾಡಿದರೆ, ಶಿಕ್ಷಕ ವೃತ್ತಿಯಲ್ಲಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬಹುದು.

ಪ್ರಮುಖವಾಗಿ, ನೀವು ಸ್ವಯಂ-ಮೌಲ್ಯಮಾಪನ ಮಾಡಿಕೊಂಡು ಯಾವ ವೃತ್ತಿ ನಿಮಗೆ ಸರಿಹೊಂದುತ್ತದೆ ಎಂದು ನಿರ್ಧರಿಸಿ, ವೃತ್ತಿಯೋಜನೆಯನ್ನು ಮಾಡಿದರೆ, ಅದರಂತೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

8. ನಾನು ಬಿ.ಎಸ್ಸಿ (ಮೈಕ್ರೊಬಯಾಲಜಿ ಮತ್ತು ಬಯೋಟೆಕ್ನಾಲಜಿ) ಮಾಡಿ ಎಂಬಿಬಿಎಸ್ ಸೇರಬಹುದೇ?

ಹೆಸರು, ಊರು ತಿಳಿಸಿಲ್ಲ.

ಎಂಬಿಬಿಎಸ್ ಕೋರ್ಸ್ ಪ್ರವೇಶಕ್ಕೆ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಅಂಡ್ ಎಂಟ್ರೆನ್ಸ್ ಟೆಸ್ಟ್) ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಕಳೆದ ವರ್ಷದ ಅಧಿಸೂಚನೆಯಂತೆ, ಕನಿಷ್ಠ ವಯೋಮಿತಿ 17 ವರ್ಷಕ್ಕೆ ಸೀಮಿತವಾಗಿದ್ದು, ಗರಿಷ್ಠ ವಯೋಮಿತಿಯನ್ನು ತೆಗೆದುಹಾಕಲಾಗಿದೆ. ನೀವು ಬಿ.ಎಸ್ಸಿ ಕೋರ್ಸ್ ಮೂಲಕ ಈಗಾಗಲೇ ಗಳಿಸಿರುವ ಜ್ಞಾನ, ಎಂಬಿಬಿಎಸ್ ಕೋರ್ಸ್ಗೆ ಉಪಯುಕ್ತವಾಗುತ್ತದೆ.

9. ನಾನು ಎಂ.ಟೆಕ್ (ಮೆಕ್ಯಾನಿಕಲ್) ಮುಗಿಸಿದ್ದೇನೆ. ಪೂರ್ಣಾವಧಿ ಮತ್ತು ಅರೆಕಾಲಿಕ ಪಿಎಚ್.ಡಿ ಮಾಡುವುದು ಹೇಗೆ? ಕರ್ನಾಟಕದಲ್ಲಿ ಉತ್ತಮ ವಿಶ್ವವಿದ್ಯಾಲಯಗಳು ಯಾವುವು?

ಹೆಸರು, ಊರು ತಿಳಿಸಿಲ್ಲ.

ಕರ್ನಾಟಕದಲ್ಲಿ ಪಿಎಚ್.ಡಿ ಮಾಡಲು ಐಐಎಸ್‌ಸಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ಬೆಂಗಳೂರು), ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ಧಾರವಾಡ), ಮಣಿಪಾಲ್ ಅಕಾಡೆಮಿ ಅಫ್ ಹೈಯರ್ ಎಜುಕೇಷನ್, ಮಣಿಪಾಲ್ ಹಾಗೂ ಇನ್ನಿತರ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಾಡಬಹುದು.

ವಿಶ್ವವಿದ್ಯಾಲಯ ಅನುದಾನ ಆಯೋಗದ 2022ರ ಕರಡು ನಿಯಮಾವಳಿಗಳಂತೆ ಉದ್ಯೋಗದಲ್ಲಿರುವ ಅಭ್ಯರ್ಥಿಗಳು ಪಿಎಚ್.ಡಿ (ಅರೆಕಾಲಿಕ) ಮಾಡಬಹುದು. ಆದರೆ, ಪೂರ್ಣಾವಧಿ ಪಿಎಚ್.ಡಿ ಮಾಡಲು ಅನ್ವಯವಾಗುವ ಎಲ್ಲಾ ನಿಯಮಾವಳಿಗಳು ಉದ್ಯೋಗದಲ್ಲಿರುವ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.ugc.gov.in/pdfnews/4405511_Draft-UGC-PhD-regulations-2022.pdf

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT