ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದ ಗ್ರಹಿಕೆ ಸುಧಾರಿಸುವ ಸೂತ್ರಗಳು

Last Updated 10 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಯ ಇಂಗ್ಲಿಷ್ ವಿಷಯದಲ್ಲಿ ಪಠ್ಯದ ಗ್ರಹಿಕೆ (ರೀಡಿಂಗ್‌ ಕಾಂಪ್ರ್‌ಹೆನ್ಶನ್‌) ಎನ್ನುವುದು ಇಂಗ್ಲಿಷ್ ಭಾಷೆಯನ್ನು ಪರೀಕ್ಷಿಸುವ ಮೂರು ವಿವಿಧ ಮಟ್ಟಗಳನ್ನೊಳಗೊಂಡ ವಿಧಾನ.

1. ಲಿಟರಲ್‌ (ಅಕ್ಷರಾಧಾರಿತ)

2. ಇನ್‌ಫೆರೆನ್ಶಿಯಲ್‌ (ತಾರ್ಕಿಕ)

3. ಎವಾಲ್ಯುವೇಟಿವ್‌ ( ಮೌಲ್ಯಾಧಾರಿತ)

ಯಾವುದೇ ವಿಷಯವನ್ನು ಸಂಪೂರ್ಣವಾಗಿ ಗ್ರಹಿಸಿ ನಿಮ್ಮ ಜ್ಞಾನದ ಅನುಸಾರ ಸಂಯೋಜಿಸುವುದು ಮತ್ತು ವಿಷಯವನ್ನು ಮಾನಸಿಕವಾಗಿ ಕಲ್ಪಿಸಿಕೊಳ್ಳುವುದಕ್ಕೆ ಗ್ರಹಿಕೆ ಎನ್ನಬಹುದು ಅಥವಾ ಲೇಖನವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಎನ್ನಬಹುದು. ಓದಲು ಇರಬೇಕಾದ ಕೌಶಲಗಳೆಂದರೆ ಓದುವ ಸಾಮರ್ಥ್ಯ, ಬಳಸುವ ಭಾಷೆಯೊಂದಿಗೆ ಅರ್ಥೈಸಿಕೊಳ್ಳುವುದು, ವ್ಯಾಖ್ಯಾನಿಸುವುದು.

ಇಂಗ್ಲಿಷ್ ಒಂದು ವಿಷಯವಾಗಿರುವ ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಹ ಪಠ್ಯಕ್ರಮಕ್ಕೆ ಅನುಸಾರವಾಗಿ ರೀಡಿಂಗ್‌ ಕಾಂಪ್ರ್‌ಹೆನ್ಶನ್‌ ಬಹು ಮುಖ್ಯ ಪಾತ್ರವಹಿಸುತ್ತವೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿವಿಧ ಅಂಕಗಳ ಹಾಗೂ ವಿವಿಧ ಕ್ಲಿಷ್ಟತೆಯ ಮಟ್ಟಕ್ಕೆ ಅನುಸಾರವಾಗಿ 5ರಿಂದ 10 ಅಂಕಗಳ ಆರ್‌ಸಿ ಪ್ರಶ್ನೆಗಳು ಕಾಣಸಿಗುತ್ತವೆ ಹಾಗೂ ಈ ಅಂಕಗಳು ವಿದ್ಯಾರ್ಥಿಯ ಒಟ್ಟಾರೆ ಅಂಕಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಹಾಗಾಗಿ ಈ ವಿಷಯದ ಮೇಲೆ ಗಹನವಾದ ತಯಾರಿ ಅವಶ್ಯಕ.

ಆರ್‌ಸಿ ಪ್ರಶ್ನೆಗಳನ್ನು ಉತ್ತರಿಸುವ ವಿಧಾನ

ಸಂಪೂರ್ಣ ಲೇಖನವನ್ನು ಮೊದಲು ಓದುವುದು ನಂತರ ಪ್ರಶ್ನೆಗಳಿಗೆ ಉತ್ತರಿಸುವುದು

ಇದು ಸಾಮಾನ್ಯವಾಗಿ ಉತ್ತರಿಸುವ ವಿಧಾನ. ಇದರಲ್ಲಿ ಮೊದಲು ಸಂಪೂರ್ಣ ಲೇಖನವನ್ನು ಓದಿ ಅರ್ಥೈಸಿಕೊಳ್ಳಲಾಗುವುದು. ಇದರಿಂದ ಲೇಖನದ ಸಾರಾಂಶ ಹಾಗೂ ಪ್ರತಿ ಪ್ಯಾರಾಗ್ರಾಫ್‌ನ ಅರ್ಥ ಹಾಗೂ ಲೇಖನದ/ ಲೇಖಕರ ಮನೋಭಾವ (ಟೋನ್) ತಿಳಿದುಕೊಳ್ಳಲಾಗುವುದು.

ಈ ವಿಧಾನ ಅನುಸರಿಸುವುದರಿಂದ ಕೇಳಿರುವ ಕೆಲವು ಪ್ರಶ್ನೆಗಳಿಗೆ ಅವಶ್ಯಕತೆ ಇಲ್ಲದಿದ್ದರೂ ಸಂಪೂರ್ಣ ಲೇಖನ ಓದಿ ಸಮಯ ವ್ಯಯಿಸಬೇಕಾಗುತ್ತದೆ. ಅಲ್ಲದೆ ಒಂದು ವೇಳೆ ಪರೀಕ್ಷೆ ಅವಧಿಯ ಕೊನೆಯ ಕ್ಷಣಗಳಲ್ಲಿ ಪೂರ್ತಿ ಲೇಖನ ಓದಿ ಕೊನೆಗೆ ಉತ್ತರ ತಿಳಿದರೂ ಸಹ ಸಮಯ ಮುಕ್ತಾಯವಾದರೆ ಉತ್ತರಿಸಲಾಗದ ಸಂದರ್ಭ ಬರಬಹುದು. ಹಾಗೆಯೇ ನೇರವಾದ ಸುಲಭವಾದ ಕೆಲವು ಪ್ರಶ್ನೆಗಳು ಇದ್ದಾಗ ಉದಾಹರಣೆಗೆ ಶಬ್ದಕೋಶ ಆಧಾರಿತ ಸಮ ಅಥವಾ ವಿರುದ್ಧ ಪದಗಳು, ನುಡಿಗಟ್ಟುಗಳು ಮತ್ತು ಅಂಕಿ– ಅಂಶಗಳು, ಹೆಸರು, ಸ್ಥಳ ಮುಂತಾದ ಪ್ರಶ್ನೆಗಳಿಗೆ ಸಂಪೂರ್ಣ ಲೇಖನ ಓದಿದಲ್ಲಿ ಸಮಯ ವ್ಯರ್ಥ ಮಾಡಿದಂತೆಯೇ ಸರಿ.

ಇನ್ನು ಪರೋಕ್ಷ ಪ್ರಶ್ನೆಗಳಾದ ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಹಾಗೂ ಲೇಖನದ/ ಲೇಖಕರ ಅಭಿಪ್ರಾಯ, ಲೇಖನದ ಶೀರ್ಷಿಕೆ ಮುಂತಾದ ಪ್ರಶ್ನೆಗಳಿಗೆ ಮಾತ್ರ ಪೂರ್ತಿ ಲೇಖನವನ್ನು ಓದುವುದು ಅನಿವಾರ್ಯ ಮತ್ತು ಮೊದಲೇ ಲೇಖನ ಓದುವುದರಿಂದ ಒಂದು ವೇಳೆ ಪ್ರಶ್ನೆ-ಉತ್ತರ ಸಿಗದಿದ್ದಲ್ಲಿ ಪದೇಪದೇ ಲೇಖನ ಓದಿ ಸಮಯ ವ್ಯರ್ಥವಾಗುವ ಸಂಭವವಿರುತ್ತದೆ.

ಮೊದಲು ಪ್ರಶ್ನೆಗಳನ್ನು ಓದಿ ನಂತರ ಲೇಖನವನ್ನು ಓದುವುದು

ಈ ವಿಧಾನದಲ್ಲಿ ಮೊದಲು ಎಲ್ಲ ಪ್ರಶ್ನೆಗಳನ್ನು ಓದಿ ಕೀವರ್ಡ್ಸ್ ಗುರುತು ಮಾಡಿಕೊಳ್ಳಬೇಕು. ನಂತರ ಶೀಘ್ರವಾಗಿ ಲೇಖನವನ್ನು ಓದಿ ಕೀವರ್ಡ್ಸ್ ಸಹಾಯದಿಂದ ಪ್ರಶ್ನೆಗಳಿಗೆ ಉತ್ತರಿಸಬೇಕು. ಸಮಯ ಸಾಕಷ್ಟಿದ್ದರೆ ಅಥವಾ ಸಂದೇಹವಿದ್ದರೆ ಪುನಃ ಲೇಖನ ಪರಿಶೀಲಿಸಬೇಕು. ಲೇಖನವನ್ನು ಕ್ಷಿಪ್ರವಾಗಿ ಓದುತ್ತಿರುವಾಗ ಗ್ರಾಫ್‌ಗಳು, ಚಾರ್ಟ್‌ಗಳು, ಅಂಕಿ– ಅಂಶಗಳು, ಬೋಲ್ಡ್ ಟೈಪ್, ಕ್ಯಾಪ್ಷನ್, ಇಟಾಲಿಕ್ ಮುಂತಾದವುಗಳನ್ನು ಗಮನಿಸಬೇಕು. ಇವುಗಳಿಂದ ಪ್ರಶ್ನೆಗಳಿಗೆ ಶೀಘ್ರವಾಗಿ ಉತ್ತರಿಸಲು ಸಹಾಯವಾಗಬಹುದು.

ಲೇಖನದಲ್ಲಿ ಕ್ಲಿಷ್ಟಕರ ಪದ ಬಳಕೆ ಆಧಾರಿತ ಪ್ರಶ್ನೆಗಳಿದ್ದಲ್ಲಿ ಥೀಮ್, ಶೀರ್ಷಿಕೆ ಇತ್ಯಾದಿ ಪ್ರಶ್ನೆಗಳಿಗಾಗಿ ನಿಗದಿತ ಸಮಯವನ್ನು ಮಾತ್ರ ಮೀಸಲಿಡಬೇಕೆ ಹೊರತು ಅದೇ ಪ್ರಶ್ನೆಗಳಿಗೆ ಹೆಚ್ಚು ಸಮಯ ಮೀಸಲಿಡುವುದು ಹಾಗೂ ಅಂದಾಜು ಉತ್ತರ ಗುರುತಿಸುವ ಪ್ರಯತ್ನ ಮಾಡದಿರಿ. ಲೇಖನವನ್ನು ತಾತ್ಕಾಲಿಕವಾಗಿ ನೆನಪಿಡುವ ಗೋಜಿಗೆ ಹೋಗದಿರಿ. ಇದರಿಂದ ಸಮಾನ ರೂಪದ ಪದ ಬಳಕೆ, ಅಂಕಿ ಅಂಶಗಳು, ಸ್ಥಳಗಳು, ಹೆಸರುಗಳು ಇತ್ಯಾದಿಗಳ ಬಗ್ಗೆ ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಮೊದಲು ನೇರವಾದ ಪ್ರಶ್ನೆಗಳಿಗೆ ಉತ್ತರಿಸಿ. ಲೇಖನ ಓದುವಾಗ ಪ್ರಶ್ನೆಯಲ್ಲಿ ಗುರುತಿಸಿಕೊಂಡ ಕೀವರ್ಡ್‌ ಕಂಡ ತಕ್ಷಣ ಓದುವುದನ್ನು ನಿಲ್ಲಿಸಿ ಆ ಪ್ರಶ್ನೆಗೆ ಉತ್ತರಿಸಿ ಸಮಯ ಉಳಿಸಿಕೊಳ್ಳಿ.

ಮೊದಲು ಸುಲಭವಾದ ಸಮನಾರ್ಥಕ, ವಿರುದ್ಧಾರ್ಥಕ, ನುಡಿಗಟ್ಟುಗಳು, ಭಾಷಾ ವೈಶಿಷ್ಟ ಆಧಾರಿತ ಸುಲಭ ಪ್ರಶ್ನೆಗಳಿಗೆ ಉತ್ತರಿಸಿ. ನಂತರ ಪರೋಕ್ಷ ಪ್ರಶ್ನೆಗಳಾದ ಶೀರ್ಷಿಕೆ, ಟೋನ್ ಥೀಮ್ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿ. ಕೀವರ್ಡ್ಸ್ ಗುರುತಿಸಿಕೊಂಡಿರುವುದರಿಂದ ಲೇಖನ ಓದಲು ಅತ್ಯಂತ ಕಡಿಮೆ ಸಮಯ ವ್ಯಯಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT