ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಭವಿಷ್ಯದ ಓದಿನ ಆಯ್ಕೆ: ಪೋಷಕರ ಬೆಂಬಲ ಹೇಗಿರಬೇಕು?

Last Updated 25 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

10ನೇ ತರಗತಿಯ ಮಕ್ಕಳು ಮುಂದೆ ಏನು ಓದಬೇಕು ಎಂಬ ಗೊಂದಲಕ್ಕೆ ಈಡಾಗುವುದು ಸಹಜ. ಆದರೆ ಅವರ ಆಸಕ್ತಿ, ಗುರಿಯನ್ನು ಪೋಷಕರು ತಿಳಿದುಕೊಂಡು ಪ್ರೋತ್ಸಾಹ ನೀಡಬೇಕಾಗುತ್ತದೆ.

ಬೆಂಗಳೂರಿನ ಸಿರಿ ಶೆಟ್ಟರ್‌ 10ನೇ ತರಗತಿಯಲ್ಲಿದ್ದಾಗ ಮುಂದೆ ಯಾವುದನ್ನು ಓದಬೇಕು ಎಂಬ ಗೊಂದಲದಲ್ಲಿದ್ದಳು. ಶಾಲೆಯಲ್ಲಿ ನಡೆಸಿದ ಆಪ್ತ ಸಮಾಲೋಚನೆಯಲ್ಲಿ ಆಕೆ ಎಂಜಿನಿಯರಿಂಗ್‌ ಓದುವುದು ಉತ್ತಮ ಎಂದು ಹೇಳಲಾಗಿತ್ತು. ಆದರೆ ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಓದು ಮುಂದುವರಿಸಿದರೆ ಪಠ್ಯೇತರ ಚಟುವಟಿಕೆಗಳಿಗೆ ಸಮಯ ಸಿಗುತ್ತದೆ ಎಂಬುದು ಆಕೆಯ ಆಲೋಚನೆ. ಈ ಗೊಂದಲಗಳ ನಡುವೆ ಆಕೆಯ ತಂದೆ ವೃತ್ತಿ ಮಾರ್ಗದರ್ಶಕರ ಬಳಿ ಕರೆದೊಯ್ದರು. ಎಂಜಿನಿಯರಿಂಗ್‌ ಓದಬೇಕೆಂಬ ಆಸೆ ಸಿರಿಗಿದ್ದರೂ ಆಕೆಯ ಆಸಕ್ತಿ ಮತ್ತು ಗುರಿಯನ್ನು ವಾಣಿಜ್ಯ ಕೋರ್ಸ್‌ ಓದುವುದರ ಮೂಲಕ ಪೂರೈಸಿಕೊಳ್ಳಬಹುದು ಎಂಬ ಸಲಕೆ ಮಾರ್ಗದರ್ಶಕರಿಂದಲೂ ಬಂತು. ಆಗ ಸಿರಿಗೆ ಭವಿಷ್ಯದ ಓದು, ವೃತ್ತಿಯ ಬಗ್ಗೆ ಒಂದು ರೀತಿಯ ಆತ್ಮವಿಶ್ವಾಸ ಮೂಡಿದ್ದು ಸುಳ್ಳಲ್ಲ.

ಈ ರೀತಿಯ ಗೊಂದಲಗಳು ಹದಿಹರೆಯದವರಲ್ಲಿ ಸಹಜ. ಎಂಜಿನಿಯರಿಂಗ್‌, ವೈದ್ಯಕೀಯ, ವಿಜ್ಞಾನದಂತಹ ಸಾಂಪ್ರದಾಯಿಕ ಕೋರ್ಸ್‌ಗಳ ಹೊರತಾಗಿ ಅವರ ಮುಂದೆ ಜಾಹೀರಾತು, ಮಾಧ್ಯಮ ಕ್ಷೇತ್ರ, ಫೋಟೊಗ್ರಫಿ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳ ಆಕರ್ಷಣೆಯೂ ಇದೆ. ಜೊತೆಗೆ ತಮ್ಮ ಸ್ನೇಹಿತರು, ಸಹಪಾಠಿಗಳು ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದೂ ಪ್ರಭಾವ ಬೀರಬಹುದು. ಇಂತಹ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ಆಯ್ಕೆಯ ಬಗ್ಗೆ ಗಮನಹರಿಸಿ ಒಳಿತು– ಕೆಡಕುಗಳನ್ನು ಪರಿಶೀಲಿಸಿ ಒಳ್ಳೆಯ ಕೋರ್ಸ್‌ ಆಯ್ಕೆ ಮಾಡಿಕೊಳ್ಳಲು ನೆರವಾಗುವುದು ಸೂಕ್ತ. ಹಾಗಂತ ತಮ್ಮ ಬಯಕೆಯನ್ನು, ಮಹತ್ವಾಕಾಂಕ್ಷೆಯನ್ನು ಮಕ್ಕಳ ಮೇಲೆ ಹೇರುವುದೂ ಸರಿಯಲ್ಲ.

ಆಸಕ್ತಿಯ ಅವಲೋಕನ
ಮಕ್ಕಳ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅಷ್ಟು ಸುಲಭವಲ್ಲ. ಆರಂಭದಿಂದಲೂ ತಮ್ಮ ಮಕ್ಕಳ ಆಸಕ್ತಿ, ಗುರಿಯನ್ನು ಅವಲೋಕಿಸುತ್ತ ಸ್ವತಃ ನಿರ್ಧಾರ ಕೈಗೊಳ್ಳಲು ಅವರನ್ನು ಉತ್ತೇಜಿಸುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ತಾವೂ ಈ ವಿಚಾರದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕಾಗುತ್ತದೆ. ಅಂದರೆ ಮಕ್ಕಳ ಆಯ್ಕೆಯನ್ನು ಕೇಳಿ ನೆರವು ನೀಡಬೇಕಾಗುತ್ತದೆ, ಆರ್ಥಿಕ ಬೆಂಬಲವನ್ನೂ ಕೊಡಬೇಕಾಗುತ್ತದೆ.

ಕೋರ್ಸ್‌ ಬಗ್ಗೆ ಮಾರ್ಗದರ್ಶನ ನೀಡುವಾಗ ವೃತ್ತಿ ಮಾರ್ಗದರ್ಶಕರಲ್ಲದೇ, ಅಂತರ್ಜಾಲ, ಶಿಕ್ಷಣ ತಜ್ಞರ ನೆರವನ್ನೂ ಪಡೆಯಬಹುದು. ಶಿಕ್ಷಣ ಕ್ಷೇತ್ರದಲ್ಲಿ ಅಥವಾ ಇತರ ಹುದ್ದೆಗಳಲ್ಲಿ ಸಾಧನೆ ಮಾಡಿದ ಬಂಧುಗಳು, ಪರಿಚಿತರ ಸಲಹೆ ಕೋರಬಹುದು.

ಇಂಗ್ಲಿಷ್‌ ಸಾಹಿತ್ಯದಲ್ಲಿ ಐರ್ಲೆಂಡ್‌ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಕೀರ್ತಿ ಶರ್ಮಾ ಅವರ ಉದಾಹರಣೆಯನ್ನೇ ತೆಗೆದುಕೊಂಡರೆ, 10ನೇ ತರಗತಿಯಲ್ಲಿ ಶೇ 95ರಷ್ಟು ಅಂಕ ಗಳಿಸಿದರೂ ಆಕೆಗೆ ಕಲಾ ವಿಭಾಗದಲ್ಲಿ ಪದವಿ ಪಡೆಯಬೇಕೆಂಬ ಆಸೆ. ಆದರೆ ಪಿಯುಸಿ ನಂತರ ಎಂಜಿನಿಯರಿಂಗ್‌, ವೈದ್ಯಕೀಯ ಓದಬೇಕೆಂಬ ಬಯಕೆಯಾದರೆ.. ಈ ಕಾರಣ ಮುಂದಿಟ್ಟ ಆಕೆಯ ತಂದೆ ವಿಜ್ಞಾನ ಓದುವಂತೆ ಒತ್ತಾಯಿಸಿದರು. ಅರೆ ಮನಸ್ಸಿನಿಂದ ಪಿಯುಸಿಯಲ್ಲಿ ವಿಜ್ಞಾನ ಓದಿದ ಆಕೆ ಎಷ್ಟೇ ಒತ್ತಾಯಿಸಿದರೂ ಸಿಇಟಿಗೂ ಕೂರಲಿಲ್ಲ. ಪದವಿಯಲ್ಲಿ ಕಲಾ ವಿಭಾಗಕ್ಕೆ ಸೇರಿಕೊಂಡು ಮನಶ್ಶಾಸ್ತ್ರ, ಇಂಗ್ಲಿಷ್‌, ಪತ್ರಿಕೋದ್ಯಮ ಓದಿದಳು. ಜೊತೆಗೆ ಚರ್ಚಾಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲೂ ಬಹುಮಾನ. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ನೊಂದಿಗೆ ಮುಗಿಸಿ ಈಗ ಸಂಶೋಧನೆ ಮಾಡುತ್ತಿದ್ದಾಳೆ.

ಹೀಗಾಗಿ ಮಕ್ಕಳ ಮನಸ್ಸಿನಲ್ಲಿ ಏನಿದೆ ಎಂಬುದು ಮಾತ್ರವಲ್ಲ, ಅದಕ್ಕೆ ಕಾರಣಗಳನ್ನೂ ತಿಳಿದುಕೊಳ್ಳಬೇಕು. ಎಂಜಿನಿಯರ್‌ ಆಗಬೇಕು ಎಂದು ಹೇಳಿದರೆ, ಕಾರಣಗಳನ್ನು ಒಂದೊಂದಾಗಿ ತಿಳಿದುಕೊಂಡು, ಅದು ಕೇವಲ ತಾತ್ಕಾಲಿಕ ಬಯಕೆಯೇ ಎಂಬುದನ್ನು ತೀರ್ಮಾನಿಸುವುದು ಪೋಷಕರ ಕರ್ತವ್ಯ. ಕೇವಲ ಆಸೆ ಮಾತ್ರವಲ್ಲ, ತೀವ್ರವಾದ ವೈಯಕ್ತಿಕ ಆಸಕ್ತಿ, ಗುರಿ ಕೂಡ ಮುಖ್ಯ.

ನಿರ್ಧಾರಕ್ಕೆ ಪೋಷಕರ ಬೆಂಬಲ
ಸಣ್ಣ ವಯಸ್ಸಿನಿಂದಲೇ ಕೆಲವರು ನಿರ್ಧಾರ ಕೈಗೊಳ್ಳುವಲ್ಲಿ ನೈಪುಣ್ಯ ಬೆಳೆಸಿಕೊಳ್ಳುತ್ತಾರೆ. ಇದಕ್ಕೆ ಪೋಷಕರೂ ನೀರೆರೆಯಬೇಕು. ಒಮ್ಮೆಲೇ 14–15ನೇ ವಯಸ್ಸಿನಲ್ಲಿ ಅವರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಹಾಗೆಯೇ ಅವರ ಆಸಕ್ತಿಗೆ ಉತ್ತೇಜನ ನೀಡಬೇಕೇ ಹೊರತು ಟೀಕೆ ಮಾಡುವುದು, ಲೇವಡಿ ಮಾಡುವುದು ಕೂಡ ಒಳ್ಳೆಯದಲ್ಲ. ಇದರಿಂದ ಮಕ್ಕಳಲ್ಲಿ ಕೀಳರಿಮೆ, ಹಿಂಜರಿಕೆ ಬೆಳೆಯುವುದಲ್ಲದೇ, ತಮ್ಮ ಮೇಲೇ ವಿಶ್ವಾಸ ಮೂಡುವುದಿಲ್ಲ.

*ಚಿಕ್ಕಂದಿನಿಂದಲೇ ವಿವಿಧ ವೃತ್ತಿಗಳ ಬಗ್ಗೆ ಪ್ರಶ್ನೆ ಕೇಳುವಂತೆ ಮಕ್ಕಳಿಗೆ ಪ್ರೋತ್ಸಾಹಿಸಿ

*ಮಕ್ಕಳಿಗೆ ಮಾಹಿತಿ ನೀಡಿ, ವಿವಿಧ ಅವಕಾಶಗಳ ಬಗ್ಗೆ ಅರ್ಥವಾಗುವಂತೆ ವಿವರಿಸಿ

*ಭವಿಷ್ಯದ ವೃತ್ತಿಯ ಬಗ್ಗೆ ಗೊಂದಲವಿದ್ದರೆ ಆಪ್ಟಿಟ್ಯೂಡ್‌ ಪರೀಕ್ಷೆಗೆ ಕೂರಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT