ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೊಂದು ಕಲಿಕಾ ಕಾರ್ನರ್

Last Updated 20 ನವೆಂಬರ್ 2022, 22:15 IST
ಅಕ್ಷರ ಗಾತ್ರ

ಎಂಟು ವರ್ಷದ ಸುಮ ಅಂದವಾದ ರಂಗೋಲಿ ಬಿಡಿಸುತ್ತಾಳೆ. ಪ್ರತಿದಿನ ಅಕ್ಕಪಕ್ಕದ ನಾಲ್ಕಾರು ಮನೆಗಳ ಮುಂದೆ ಇವಳ ರಂಗೋಲಿಯೇ ಎಲ್ಲರನ್ನೂ ಸ್ವಾಗತಿಸುತ್ತದೆ. ಅವಳ ರಂಗೋಲಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದಾಗ ಸಂತಸದಿಂದ ಬೀಗುತ್ತಾಳೆ. ಇನ್ನಷ್ಟು ಹೊಸ ವಿನ್ಯಾಸದ ರಂಗೋಲಿ ಕಲಿಯಲು ಹಾತೊರೆಯುತ್ತಾಳೆ.

ಸುಮಳಂತೆ ಬಹುತೇಕ ಮಕ್ಕಳು ತಮ್ಮ ಕಲಿಕೆಯ ಪ್ರದರ್ಶನವನ್ನು ಇಷ್ಟಪಡುತ್ತಾರೆ. ಈ ಪ್ರದರ್ಶನಕ್ಕೆ ದೊಡ್ಡ ದೊಡ್ಡ ವೇದಿಕೆಗಳು ಬೇಕಾಗಿಲ್ಲ. ಮನೆಯ ಮೂಲೆಯೂ ಕೂಡಾ ಮಗುವಿನ ಕಲಿಕೆಯ ಷೋಕೇಸ್ ಆಗಬಹುದು. ಇದನ್ನೇ ಕಲಿಕಾ ಕಾರ್ನರ್ ಎನ್ನುವುದು.

ಏನಿದು ಕಲಿಕಾ ಕಾರ್ನರ್?

ಇದು ಮಕ್ಕಳ ಕಲಿಕೆಯನ್ನು ಪ್ರದರ್ಶಿಸುವ ಒಂದು ನಿಗದಿತ ಸ್ಥಳ. ಇದು ಸಂಪೂರ್ಣವಾಗಿ ಮಕ್ಕಳಿಂದಲೇ ರಚನೆಗೊಂಡ ಕಲಿಕೆಯ ಪ್ರದರ್ಶಿತ ವೇದಿಕೆ. ಅಲ್ಲಿ ಮಕ್ಕಳು ಬಿಡಿಸಿದ ಚಿತ್ರಗಳು, ಅವರೇ ತಯಾರಿಸಿದ ಆಕೃತಿಗಳು, ಮಾದರಿಗಳು, ಕೈಬರಹದ ತುಣುಕುಗಳು, ಮಕ್ಕಳು ರಚಿಸಿದ ಕಥೆ, ಕವನಗಳು ಇರುತ್ತವೆ. ಅಲ್ಲದೇ ಮಕ್ಕಳ ವಿನೂತನ ಕಲಿಕೆಗೆ ಅಗತ್ಯವಾದ ಪರಿಕರಗಳೆಲ್ಲವೂ ಅಲ್ಲಿ ಸ್ಥಾನ ಪಡೆದಿ ರುತ್ತವೆ. ವಿನೂತನ ಹಾಗೂ ವಿಶಿಷ್ಟ ವಸ್ತುಗಳನ್ನು ಷೋಕೇಸ್‌ನಲ್ಲಿ ಪ್ರದರ್ಶನಕ್ಕೆ ಇಟ್ಟಂತೆ ಮಕ್ಕಳ ಕಲಿಕೆಯನ್ನೂ ಪ್ರದರ್ಶನಕ್ಕಿಡಬಹುದು.

ಈ ಕಲಿಕಾ ಸ್ಥಳ ಮಕ್ಕಳ ಕಲಿಕೆಗೆ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ಉತ್ತೇಜಿಸುತ್ತದೆ. ಕಲಿಕೆಗೆ ಸಂಬಂಧಿತ ಚಟುವಟಿಕೆಗಳನ್ನು ಕಾರ್ಯ ರೂಪಕ್ಕೆ ತರಲು ಸಹಾಯ ಮಾಡುತ್ತದೆ. ಪಾಲಕರ ಮೇಲ್ವಿಚಾರಣೆಯಲ್ಲಿ ತರಗತಿಯಲ್ಲಿನ ಕಲಿಕೆಯನ್ನು ಪೂರ್ಣಗೊಳಿಸಲು ಸಹಾಯವಾಗುತ್ತದೆ. ಮಕ್ಕಳು ಇಲ್ಲಿ ಖುಷಿಯಿಂದ ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಬಯಸುವ ಪ್ರತಿಯೊಬ್ಬ ಪಾಲಕರೂ ಸಹ ಶಿಶುಕೇಂದ್ರಿತ ಕಲಿಕೆಯತ್ತ ಗಮನ ಹರಿಸುತ್ತಾರೆ. ಮಕ್ಕಳ ಕಲಿಕೆಯಲ್ಲಿ ಪರಿಣಾಮಕಾರಿ ಯಶಸ್ಸು ತರಬಯಸುವವರು ಮನೆಯ ವಾತಾವರಣವನ್ನು ಶಾಲೆಯಂತೆ ಬದಲಿಸಿಕೊಳ್ಳುತ್ತಾರೆ. ಅಲ್ಲಿ ಮಕ್ಕಳ ಕಲಿಕೆಗೆ ಮುಕ್ತ ಅವಕಾಶ ನೀಡುತ್ತಾರೆ. ತಮ್ಮಲ್ಲಿನ ಮಾಹಿತಿ ಯನ್ನು ಮಕ್ಕಳಿಗೆ ಜ್ಞಾನವಾಗಿ ಪರಿವರ್ತನೆ ಮಾಡಲು ಬೇಕಾದ ಸಕಲ ಅವಕಾಶಗಳನ್ನು ಸೃಷ್ಟಿಸುತ್ತಾರೆ

ಕಲಿಕಾ ಷೋಕೇಸ್ ಏಕೆ ಬೇಕು?: ಕಲಿಕೆ ಕೇವಲ ತರಗತಿ ಕೋಣೆಯಲ್ಲಿ ನಡೆಯುವ ಪ್ರಕ್ರಿಯೆ ಎಂಬುದು ಬಹುತೇಕ ಪಾಲಕರ ಅಭಿಮತ. ಆದರೆ ಕಲಿಕೆಗೆ ನಿಗದಿತ ಸ್ಥಳವಿಲ್ಲ. ಪ್ರದರ್ಶಿತಗೊಳ್ಳಲು ಸೂಕ್ತ ಸಮಯ ಬೇಕಾಗಿಲ್ಲ. ಏಕೆಂದರೆ ಕಲಿಕೆ ವಿಶಾಲ ವ್ಯಾಪ್ತಿ ಹೊಂದಿದ ಪ್ರಕ್ರಿಯೆ. ಮಗು ಶಾಲೆಗಿಂತ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುವುದರಿಂದ ಅಲ್ಲಿಯೇ, ಕಲಿಕಾ ಪೂರಕ ವಾತಾವರಣ ಸೃಷ್ಟಿಸಿದರೆ ಖಂಡಿತವಾಗಿಯೂ ಮನೆಯೇ ಶಾಲೆಯಾಗುತ್ತದೆ.

ಮನೆಯಲ್ಲಿ ಕಲಿಕಾ ಕಾರ್ನರ್ ನಿರ್ಮಾಣದಿಂದ ಮಕ್ಕಳಲ್ಲಿ ಅಶಿಸ್ತಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಏಕೆಂದರೆ ಮಗು ತನ್ನಿಷ್ಟದ ಚಟುವಟಿಕೆ ಆಯ್ಕೆಯಲ್ಲಿ ಸ್ವಾತಂತ್ರ್ಯವಿರುವುದರಿಂದ ಸಂತಸದಿಂದ ಕಲಿಕೆಯಲ್ಲಿ ತೊಡಗುತ್ತದೆ. ಹಾಗಾಗಿ ಅಶಿಸ್ತು ಮಾಯವಾಗುತ್ತದೆ. ಕಲಿಕಾ ಕಾರ್ನರ್‌ನಲ್ಲಿನ ವಸ್ತುಗಳು, ಆಟಿಕೆಗಳಿಂದ ಮಗು ಅನ್ವೇಷಿಸುತ್ತ ಕಲಿಯುತ್ತದೆ. ಆ ಮೂಲಕ ಅರಿವಿಲ್ಲದಂತೆ ಪ್ರಯೋಗ ಗಳಲ್ಲಿ ತೊಡಗಿಕೊಳ್ಳುತ್ತದೆ. ಕಲಿಕಾ ಕಾರ್ನರ್ ಬಳಸುವ ಮಕ್ಕಳು ನಿಯಮಗಳನ್ನು ಸುಲಭವಾಗಿ ಪಾಲಿಸುತ್ತಾರೆ. ಕಲಿಕೆಯ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಮಕ್ಕಳು ತಮ್ಮ ಕಲಿಕಾ ಮಟ್ಟವನ್ನು ತಾವೇ ಗುರುತಿಸಿಕೊಂಡು ಅಭಿವೃದ್ದಿ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕಲಿಕೆಯಲ್ಲಿ ಮುಕ್ತತೆ ಇರುವುದರಿಂದ ಭಯರಹಿತ ವಾತಾವರಣದಲ್ಲಿ ಮಗು ಬೆಳೆಯುತ್ತದೆ.

ಕಲಿಕಾ ಕಾರ್ನರ್‌ನಿಂದ ಮಕ್ಕಳು ತಮ್ಮ ಕಲಿಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಅಂತೆಯೇ ಮನೆಯಲ್ಲಿನ ಇತರರ ಕಲಿಕೆಯನ್ನು ಗೌರವಿಸುತ್ತಾರೆ. ಕಲಿಕೆಯಲ್ಲಿ ಸೃಜಶೀಲತೆ ಗಳಿಸಿಕೊಳ್ಳುತ್ತಾ ಸಾಗುತ್ತಾರೆ. ಮಕ್ಕಳು ತಮ್ಮದೇ ವೇಗದಲ್ಲಿ ಕಲಿಯುವುದರಿಂದ ಒತ್ತಡ ಇರುವುದಿಲ್ಲ. ಅರ್ಥವಾಗದಿರುವುದನ್ನು ಪುನಃ ಪುನಃ ಕಲಿಯುವ ಅವಕಾಶ ಇರುತ್ತದೆ. ಪಠ್ಯದ ಹೊರಗಿನ ಕಲಿಕೆಯನ್ನು ತರಗತಿಯಲ್ಲಿ ಸಮೀಕರಿಸಲು ಕಲಿಕಾ ಕಾರ್ನರ್ ತುಂಬಾ ಅನುಕೂಲ. ಕಲಿಕಾ ಕಾರ್ನರ್ ನಿರ್ಮಾಣದಿಂದ ಮಗುವಿನ ಚಿಂತನೆ, ಭಾಷೆ ಮತ್ತು ಕೌಶಲಗಳು ಅಭಿವೃದ್ದಿಯಾಗುತ್ತವೆ.

ಸುಲಭ ನಿರ್ಮಾಣ: ಕಲಿಕಾ ಕಾರ್ನರ್ ನಿರ್ಮಾಣ ಬಹಳ ಸುಲಭ. ಅದು ಮನೆಯಲ್ಲಿನ ಷೋಕೇಸ್ ಆಗಬಹುದು ಅಥವಾ ಒಂದೆಡೆ ಇಟ್ಟಿರುವ ಟೇಬಲ್ ಆಗಿರಬಹುದು. ಅಲ್ಲಿ ಮಗುವಿನ ಕಲಿಕೆಗೆ ಸಂಬಂಧಿಸಿದ ಎಲ್ಲಾ ಮಾದರಿಗಳು, ಚಟುವಟಿಕೆಗಳು, ಚಾರ್ಟ್‌ಗಳು, ನೈಜ ವಸ್ತುಗಳು, ಪ್ರಯೋಗ ಸಾಮಗ್ರಿಗಳು ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕು. ಮಕ್ಕಳು ಇಷ್ಟಪಡುವ ಆಟದ ಸಾಮಗ್ರಿಗಳೂ ಸಹ ಅಲ್ಲಿ ಸ್ಥಾನ ಪಡೆಯಲಿ. ಅವುಗಳ ಮೂಲಕವೂ ಕಲಿಯುವುದು ಬಹಳ ಇದೆ. ಸಾಧ್ಯವಾದರೆ ಮಕ್ಕಳ ಕೈಗೆ ಎಟುಕುವಂತೆ ಒಂದು ಭಾಗದ ಕೆಳಸ್ತರದ ಗೋಡೆಯನ್ನು ಬ್ಲಾಕ್‌ಬೋರ್ಡನ್ನಾಗಿ ಪರಿವರ್ತಿಸಿ. ಇಲ್ಲವಾದರೆ ಗ್ರೀನ್ ಬೋರ್ಡ್, ವೈಟ್‌ಬೋರ್ಡ್ ವ್ಯವಸ್ಥೆಯನ್ನಾದರೂ ಮಾಡಬಹುದು. ಮಕ್ಕಳು ಕಲಿಕಾ ಅಭ್ಯಾಸದಲ್ಲಿ ತೊಡಗಲು ಇದು ಸಹಕಾರಿ.

ಮಕ್ಕಳ ಕಲಿಕಾ ಹಾಳೆಗಳನ್ನು ನೇತು ಹಾಕಲು ದಾರ ಅಥವಾ ಕ್ಲಿಪ್‌ಗಳಿರಲಿ. ಮಕ್ಕಳ ಕಲಿಕಾ ಹಾಳೆಗಳನ್ನು ನೇತುಹಾಕಿ ಮತ್ತು ಆಗಾಗ ಇವುಗಳನ್ನು ಬದಲಿಸಿ. ಮಕ್ಕಳ ತರಗತಿ, ಆಸಕ್ತಿ ಮತ್ತು ಅವರ ಕಲಿಕಾ ಮಟ್ಟಕ್ಕನುಗುಣವಾದ ವಸ್ತುಗಳಿರಲಿ. ಮಕ್ಕಳಿಗೆ ಅಪಾಯಕಾರಿ ಎನಿಸುವ ವಸ್ತುಗಳನ್ನು ಇಲ್ಲಿಡುವುದು ಬೇಡ. ಪ್ರಾರಂಭದಲ್ಲಿ ಒಂದಿಷ್ಟು ದಿನ ಮಕ್ಕಳು ಕಾರ್ನರ್‌ನಲ್ಲಿ ಕುಳಿತು ಕಲಿಯುವ ಅಭ್ಯಾಸ ಮಾಡಿಸಿದರೆ ನಿತ್ಯವೂ ಅದನ್ನೇ ಪಾಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT