ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಇಪತ್ನಾಲ್ಕು ಗಂಟೆಗಳು.. ಕೊನೆ ಹಂತದ ಪರೀಕ್ಷಾ ಸಿದ್ಧತೆ ಹೇಗೆ– ತಜ್ಞರ ಲೇಖನ

Last Updated 6 ಮಾರ್ಚ್ 2023, 0:00 IST
ಅಕ್ಷರ ಗಾತ್ರ

ವರ್ಷಪೂರ್ತಿ ಓದಿದ್ದರೂ, ಪರೀಕ್ಷೆ ಸಮೀಪದಲ್ಲಿದ್ದಾಗ ನಡೆಸುವ ತಯಾರಿ, ವಿದ್ಯಾರ್ಥಿಗಳಿಗೆ ಸಾಕಷ್ಟು ನೆರವಾಗುತ್ತದೆ. ಆದರೆ, ಆ ಸಿದ್ಧತೆ ಹೇಗಿರಬೇಕೆಂಬುದು ಬಹಳ ಮುಖ್ಯ. ಅಂಥ ಕೊನೆಕ್ಷಣದ ತಯಾರಿ ಕುರಿತ ಮಾಹಿತಿ ಇಲ್ಲಿದೆ.,,

ಕಳೆದ ವರ್ಷ, ಪಿಯುಸಿ ಪರೀಕ್ಷೆ ಬರೆಯುತ್ತಿದ್ದ ಹುಡುಗಿಯೊಬ್ಬಳು ಪರೀಕ್ಷಾ ಕೇಂದ್ರದಲ್ಲಿ ಕುಸಿದು ಹೋದಳು. ಆಕೆಯನ್ನು ಎಬ್ಬಿಸಿ, ನೀರು ಕುಡಿಸಿದ ಮೇಲೆ 'ಕಣ್ಣು ಮಂಜು ಮಂಜು ಆಗ್ತಿದೆ. ಬರೆಯೋಕೆ ಆಗ್ತಿಲ್ಲ' ಅಂತ ಗೊಳೋ ಅಂದಳು. ವಿಚಾರಿಸಿದಾಗ ಗೊತ್ತಾಗಿದ್ದು, ಆಕೆ ಪರೀಕ್ಷೆ ಭಯದಲ್ಲಿ ನಿನ್ನೆಯಿಂದ ಊಟ ಮಾಡಿರ ಲಿಲ್ಲವಂತೆ. ಪರೀಕ್ಷೆ ಎಂದರೆ ’ಬರೀ ಓದುವುದಷ್ಟೇ ಮುಖ್ಯ‘ ಅಂತ ಅದ್ಯಾರು ಅವಳಿಗೆ ಹೇಳಿದ್ದರೊ? ಓದಿಲ್ಲದೇ ಪರೀಕ್ಷೆ ಇಲ್ಲ ನಿಜ; ಆದರೆ ಅದನ್ನು ಬರೆಯಲು ನೀವು ಕೂಡ ನಿಮ್ಮ ಓದಿನಷ್ಟೇ ದೃಢವಾಗಿರಬೇಕಲ್ವಾ?

ವರ್ಷಪೂರ್ತಿ ಎಷ್ಟೇ ತಯಾರಿ ನಡೆಸಿದ್ದರೂ, ಪರೀಕ್ಷೆಗೂ ಮೊದಲಿನ ಆ 24 ಗಂಟೆಗಳನ್ನು ಸಮರ್ಪಕವಾಗಿ ದುಡಿಸಿಕೊಳ್ಳಬೇಕು. ಯಾರು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೊ ಅವರ ಗೆಲುವು ಕೂಡ ಅಷ್ಟೇ ಅದ್ಭುತವಾಗಿರುತ್ತದೆ. ವರ್ಷದ ಶ್ರಮದೊಂದಿಗೆ 'ಯೆಸ್ ನಾನು ಮಾಡಬಲ್ಲೆ! ಇದೆಲ್ಲವೂ ನನಗೂ ಗೊತ್ತು. ಇಷ್ಟನ್ನು ನಾನು ಬರೆಯಬೇಕು' ಎಂಬ ಆತ್ಮವಿಶ್ವಾಸವನ್ನು ಸೇರಿಸಿಕೊಂಡು ಪರೀಕ್ಷೆ ಹೊರಟರೆ, ಆ ‌ಶ್ರಮಕ್ಕೆ ಬೆಲೆ ಸಿಕ್ಕೇಸಿಗುತ್ತದೆ.

ಕಾಡುವ ಪರೀಕ್ಷೆ ಎಂಬ ಭೂತವನ್ನು ಕೊನೆಗಳಿಗಳಲ್ಲಿ ವಿದ್ಯಾರ್ಥಿಗಳು ಪಳಗಿಸಿಕೊಳ್ಳಬೇಕು. ಭಯ, ಒತ್ತಡ, ಕಿರಿಕಿರಿ, ಖಿನ್ನತೆ ಇವೆಲ್ಲವೂ ಈ ಹೊತ್ತಿನಲ್ಲೇ ಆಕ್ರಮಿಸಿಕೊಳ್ಳಲು ಹವಣಿಸುತ್ತಿರುತ್ತವೆ. ಅವುಗಳನ್ನು ಹದಗೊಳಿಸುವುದನ್ನು ಕಲಿತರಬೇಕು. ಇಲ್ಲದಿದ್ದರೆ ನೀವು ಸೋತು; ಅವೇ ಗೆದ್ದು ಬೀಗುತ್ತವೆ.

ಅಧ್ಯಯನಗಳ ಪ್ರಕಾರ, ಪರೀಕ್ಷೆಗಳ ಮುನ್ನಾ ದಿನದಲ್ಲಿ ಪರೀಕ್ಷಾರ್ಥಿ ಹೇಗಿದ್ದ, ಅವನು ಮನಸ್ಸು ಹೇಗಿತ್ತು, ಅವನ ತಯಾರಿಗಳು ಹೇಗಿದ್ದವು– ಇವೆಲ್ಲವೂ ಅವನ ಫಲಿತಾಂಶಗಳನ್ನು ನಿರ್ಧರಿಸುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಹೇಗಿರಬೇಕೆಂಬ ಮಾಹಿತಿ ಒದಗಿಸುವ ಅಗತ್ಯ ಎಂದು ಅಧ್ಯಯನಗಳು ಒತ್ತಿ ಹೇಳುತ್ತವೆ. ಹಾಗೆಂದು, ಇದು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸವಲ್ಲ. ಇದು ಶಸ್ತ್ರಾಸ್ತ್ರಗಳನ್ನು ಹೊಂದಿಸಿಕೊಳ್ಳುವುದು. ಮೊಂಡಾಗಿದ್ದರೆ ಸಾಣೆ ಹಿಡಿದು ಚೂಪುಗೊಳಿಸುವುದು. ಯಾವುದಕ್ಕೆ ಯಾವ ಬಾಣ ಎಂಬುದನ್ನು ನೋಡಿಕೊಳ್ಳುವುದು. ‌ಹಾಗಾದರೆ ಈಗ ವಿದ್ಯಾರ್ಥಿಗಳು ಏನು ಮಾಡಬೇಕು ? ಇಲ್ಲಿದೆ ಒಂದಷ್ಟು ಟಿಪ್ಸ್‌.

1. ಓದುಗಾರಿಕೆ

• ಪರೀಕ್ಷೆಗೂ ಮುನ್ನಾ ದಿನ ಯಾವುದೇ ಹೊಸ ವಿಚಾರವನ್ನು ಓದಬೇಡಿ, ಈ ಹಿಂದೆ ಓದಿದ್ದು ಮಾತ್ರ ಮನನವಾಗಲಿ.
• ಮೊದಲೇ ಕೀ ಪಾಯಿಂಟ್ಸ್ ಮಾಡಿಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಅದು ಪರೀಕ್ಷೆಯ ಹಿಂದಿನ ದಿನ ಶೀಘ್ರ ಪುನರಾವರ್ತನೆಗೆ ಸಹಕಾರಿ.
• ಎಲ್ಲವನ್ನೂ ವಿವರವಾಗಿ ಓದುತ್ತಾ ಕೂರಬೇಡಿ. ನಿಮಗೆ ಯಾವುದು ಬೇಕೊ ಅದರ ಕಡೆ ಕಣ್ಣು ಹಾಯಿಸಿ.

• ಓದಿದ್ದರಲ್ಲಿ ನಿಮಗೆ ಖುಷಿ ಎನಿಸಿದ್ದನ್ನು ಒಂದೆರಡು ಪುಟಗಳಷ್ಟು ಬರೆಯಿರಿ.

• ಓದದ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಓದಿದ್ದನ್ನು ಚೆನ್ನಾಗಿ ಬರೆಯುವ ವಿಶ್ವಾಸವಿರಲಿ ಸಾಕು.

2. ಮನಸ್ಸು ಸ್ವಸ್ಥವಾಗಿರಲಿ

ಮನಸ್ಸು ಪ್ರಭಾವಶಾಲಿ. ಅದಕ್ಕೆ ಎಲ್ಲವೂ ಸಾಧ್ಯವಿದೆ. ಗೆಲುವಿಗೂ, ಎಡವಟ್ಟುಗಳಿಗೂ ಅದೇ ಕಾರಣ. ಆದರೆ ನೀವು ಅದನ್ನು ಹೇಗಿಟ್ಟುಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧರಿತ. ಪರೀಕ್ಷೆ ಬರೆಯಲು ಹೊರಡುವ ಕೊನೆಯ ಕ್ಷಣದಲ್ಲಿ ನಿಮ್ಮ ಮನಸ್ಸು ಹೀಗಿರಲಿ.

• ನಾಳೆಯೇ ಪರೀಕ್ಷೆ ಎಂದು ದಿಗಿಲು ಬೀಳಬೇಡಿ. ಹಾಗಂತ ಪರೀಕ್ಷೆಯನ್ನು ತುಂಬಾ ಕಾಳಜಿ ಮಾಡಬೇಡಿ ಅಂತಲ್ಲ. ಒಂದು ಆರೋಗ್ಯಯುತ ಭಯವಿರಲಿ.

• ತೀರಾ ತಡರಾತ್ರಿಯವರೆಗೂ ಓದುತ್ತಾ ಕೂರಬೇಡಿ. ಎಲ್ಲವನ್ನೂ ಹರಡಿಕೊಂಡು ಒದ್ದಾಡಬೇಡಿ. ಅದು ನಿಮಗೆ ಒತ್ತಡ ಉಂಟು ಮಾಡುತ್ತದೆ.

• ಟಿವಿ, ಮೊಬೈಲ್, ಚಾಟ್‌ಗಳಿಂದ ದೂರವಿರಿ. ಅಪ್ಪ–ಅಪ್ಪನ ಜೊತೆಗೆ ಖುಷಿಯಾಗಿರಿ, ನಕ್ಕು ಹಗುರಾಗಿ. ಆದರೆ, ಕಾಡು ಹರಟೆ ಬೇಡ.

• ಚೆನ್ನಾಗಿ ನಿದ್ದೆ ಮಾಡಿ. ಬೆಳಿಗ್ಗೆ ಸಮಯವಿದ್ದರೆ ಒಂದಿಷ್ಟು ಮುಖ್ಯಾಂಶಗಳನ್ನು ತಿರುವಿ ಹಾಕಿ. ಇಲ್ಲದಿದ್ದರೆ ಬೇಡವೇ ಬೇಡ. ಪೂಜೆ – ಧ್ಯಾನದ ಅಭ್ಯಾಸವಿದ್ದರೆ ತೊಡಗಿಸಿಕೊಳ್ಳಿ.

• ಪರೀಕ್ಷೆಯ ಮುಂಚಿನ ಮೂರ್ನಾಲ್ಕು ಗಂಟೆಗಳ ಅವಧಿಯಲ್ಲಿ ಏನನ್ನೂ ಓದಬೇಡಿ.

• ಮನೆಯಿಂದ ಹೊರಡುವಾಗ ಖುಷಿಯಿಂದಲೇ ಹೊರಡಿ. ಚೆನ್ನಾಗಿ ಬರೆಯುವೆ ಎಂಬ ಆತ್ಮವಿಶ್ವಾಸವೂ ಜೊತೆಗಿಟ್ಟುಕೊಳ್ಳಿ.

• ಅರ್ಧಗಂಟೆ ಮುಂಚಿತವಾಗಿ ಪರೀಕ್ಷೆ ಕೇಂದ್ರ ತಲುಪಿ. ಅಲ್ಲಿ ಮಾತು ಬೇಡ. ಅತೀ ಮಾತು ನೆನಪಿನ ಶಕ್ತಿ ಕುಂದಿಸುತ್ತದೆ.

3. ಆರೋಗ್ಯಕ್ಕೆ ಆದ್ಯತೆ

ಎಲ್ಲವೂ ಸರಿಯಿದ್ದು ಬರೆಯಲು ನೀವೇ ಆರೋಗ್ಯವಾಗಿಲ್ಲದಿದ್ದರೆ ಹೇಗೆ? ಓದಿನಷ್ಟೇ ಪರೀಕ್ಷೆಯ ಸಮಯದಲ್ಲಿ ಆರೋಗ್ಯ ಕಾಪಾಡಿ ಕೊಳ್ಳುವುದು ತುಂಬಾ ಮುಖ್ಯ. ಅನಾರೋಗ್ಯ ಖಂಡಿತ ಪರೀಕ್ಷೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

• ಪರೀಕ್ಷೆ ಮುನ್ನಾ ದಿನದ ಆಹಾರಕ್ರಮ ಬಹಳ ಮುಖ್ಯ. ಹಿತಮಿತವಾದ, ಶುಚಿಯಾದ ಆಹಾರ ಸೇವೆಸಿ.

• ಜಾತ್ರೆ, ಸಂತೆ, ಹಬ್ಬಗಳ ತಿನಿಸುಗಳಿಂದ ದೂರವಿರಿ. ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳನ್ನೂ ನಿರ್ಲಕ್ಷಿಸಬೇಡಿ. ಅಗತ್ಯವಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

• ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಕನಿಷ್ಠ ಆರೇಳು ಗಂಟೆಗಳಷ್ಟು ನಿದ್ದೆಯ ಅವಶ್ಯಕತೆ ಇದೆ.

• ಮನೆಯಿಂದ ಪರೀಕ್ಷೆಗೆ ಹೊರಡುವಾಗ ತುಂಬಾ ನೀರು ಕುಡಿಯುವುದು ಒಳ್ಳೆಯದಲ್ಲ.

4. ಪೆನ್ನು ಗಿನ್ನು.. ಇತ್ಯಾದಿ.

* ಓದಿದ್ದೀರಿ, ಬರೆಯುವೆ ಎಂಬ ಆತ್ಮವಿಶ್ವಾಸವಿದೆ. ಆದರೆ ಪರೀಕ್ಷೆಗೆ ಹೋಗುವಾಗ ಐಡಿ ಕಾರ್ಡ್, ಪೆನ್ನು ಮತ್ತಿತರ ಅಗತ್ಯ ಪರಿಕರಗಳನ್ನು ನೆನಪಿನಲ್ಲಿ ತೆಗೆದುಕೊಂಡು ಹೋಗಿ.

• ಯಾರೋ ಗಿಫ್ಟ್ ಕೊಟ್ರು ಅಂತ ಹೊಸ ಪೆನ್ನನ್ನು ಹಿಡಿದು ಬರೆಯಲು ಹೊರಬೇಡಿ. ಪರೀಕ್ಷೆಗೆ ವರ್ಷಪೂರ್ತಿ ಬಳಸಿದ ಪೆನ್ನೇ ಇರಲಿ.

• ಮೂರ್ನಾಲ್ಕು ಪೆನ್ನುಗಳರಲಿ. ಹಿಂದಿನ ದಿನವೇ ಬೇಕಾಗುವ ಪರಿಕರಗಳನ್ನು ಮತ್ತು ಪ್ರವೇಶಪತ್ರವನ್ನು ಜತನವಾಗಿ ಎತ್ತಿಟ್ಟುಕೊಳ್ಳಿ.

• ವಾಚ್, ಆಭರಣ, ಮೊಬೈಲ್, ಪರ್ಸ್ ಮುಂತಾದವುಗಳಿಗೆ ಅವಕಾಶಗಳಿರುವುದಿಲ್ಲ. ಅವುಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗುವುದು ಒಳ್ಳೆಯದು. ಅವುಗಳನ್ನು ಹೊರಗಿಟ್ಟು ಬಂದಾಗ ಬರೀ ಅದರ ಕಡೆಯೇ ಗಮನವಿರುತ್ತದೆ.

• ಗಡಿಬಿಡಿಯಲ್ಲಿ ಮರೆವು ಸಹಜ. ಮನೆ ಬಿಡುವಾಗ ಎಲ್ಲವೂ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

• ನಿಮಗೆ ಖುಷಿ ಎನಿಸುವ, ಕಂಫರ್ಟ್ ಎನಿಸುವ ಧಿರುಸು ಧರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT