ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಐಟಿ, ಐಐಎಸ್‌ಸಿ ಸ್ನಾತಕೋತ್ತರ ದಾಖಲಾತಿ: ಮಾಸ್ಟರ್ಸ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆ

ಫಾಲೋ ಮಾಡಿ
Comments

ಕಲೆ ಅಥವಾ ವಿಜ್ಞಾನ ವಿಷಯಗಳಲ್ಲಿ ಪದವಿ ಪೂರೈಸಿದವರು ಸಾಮಾನ್ಯವಾಗಿ ತಮ್ಮ ಸಮೀಪದ ವಿಶ್ವವಿದ್ಯಾಲಯಗಳಲ್ಲಿ ಅಥವಾ ಆಯಾ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುತ್ತಾರೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ) ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಇಂಟಿಗ್ರೇಟೆಡ್ ಎಂಎಸ್‌ಸಿ, ಪಿಎಚ್‌ಡಿ ಕೋರ್ಸ್‌ಗಳು ಇವೆ ಎಂಬುದು ಹಲವರಿಗೆ ತಿಳಿಯದೇ ಇರಬಹುದು. ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೆ? ಹಾಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಪ್ರತಿ ವರ್ಷ ನಡೆಯುವ ರಾಷ್ಟ್ರಮಟ್ಟದ ‘ಮಾಸ್ಟರ್ಸ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆ’ (JAM – Joint admission test for Masters) ತೇರ್ಗಡೆ ಆಗಬೇಕು. ಈ ಪರೀಕ್ಷೆಯ ಕುರಿತ ಮಾಹಿತಿ ಇಲ್ಲಿದೆ.

ಉದ್ದೇಶ
ದೇಶದ ವಿವಿಧ ಐಐಟಿಗಳಲ್ಲಿ ಎಂಎಸ್‌ಸಿ (ಎರಡು ವರ್ಷ), ಜಂಟಿ ಎಂಎಸ್‌ಸಿ– ಪಿಎಚ್‌ಡಿ, ಎಂಎಸ್‌ಸಿ– ಪಿಎಚ್‌ಡಿ ಡ್ಯುಯಲ್ ಡಿಗ್ರಿ ಹಾಗೂ ಇತರ ಸ್ನಾತಕೋತ್ತರ ಪದವಿ ಮತ್ತು ಐಐಎಸ್‌ಸಿಯಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ಪ್ರವೇಶ ಒದಗಿಸುವ ಮೂಲಕ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಮತ್ತು ಅಧ್ಯಯನ ಪೂರ್ಣಗೊಂಡ ನಂತರ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಒದಗಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ. 2020ರವರೆಗೂ ವಿಜ್ಞಾನ ವಿಷಯಗಳಿಗೆ ಮಾತ್ರ ಆಯೋಜಿಸಲಾಗಿಸುತ್ತಿದ್ದ ಪ್ರವೇಶ ಪರೀಕ್ಷೆಯನ್ನು, 2021ರಿಂದ ಸಮಾಜ ವಿಜ್ಞಾನ ವಿಭಾಗದ ಅರ್ಥಶಾಸ್ತ್ರ ವಿಷಯಕ್ಕೂ ಆಯೋಜಿಸಲಾಗುತ್ತಿದೆ.

ಅರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯ ಒಳಗೊಂಡ ಪದವಿ ಅಥವಾ ಮೂಲವಿಜ್ಞಾನ ವಿಷಯಗಳನ್ನು (ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಜೈವಿಕ ತಂತ್ರಜ್ಞಾನ, ಸಂಖ್ಯಾಶಾಸ್ತ್ರ ಇತ್ಯಾದಿ) ಒಳಗೊಂಡ ಪದವಿ ಪೂರೈಸಿದವರು ಅಥವಾ ಪದವಿಯ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವವರು ಈ ಪ್ರವೇಶ ಪರೀಕ್ಷೆಯನ್ನು ಎದುರಿಸಬಹುದು. ಅರ್ಹತೆ, ವಯೋಮಿತಿ, ಪ್ರವೇಶ ಪರೀಕ್ಷೆಯ ವಿಷಯಗಳು ಮುಂತಾದ ಮಾಹಿತಿಗಾಗಿ https://jam.iitr.ac.inಗೆ ಭೇಟಿ ಕೊಡಿ.

ಐಐಎಸ್‌ಸಿಯಲ್ಲಿ ಲಭ್ಯವಿರುವ ವಿಷಯಗಳು
ಇಂಟಿಗ್ರೇಟೆಡ್ ಎಂಎಸ್‌ಸಿ– ಪಿಎಚ್‌ಡಿ:
ಜೀವ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ ವಿಜ್ಞಾನ ಹಾಗೂ ಭೌತ ವಿಜ್ಞಾನ.

ವಿವಿಧ ಐಐಟಿಯಲ್ಲಿ ಲಭ್ಯವಿರುವ ಕೋರ್ಸ್‌ಗಳು
ಎರಡು ವರ್ಷದ ಎಂಎಸ್‌ಸಿ:
ರಸಾಯನ ಶಾಸ್ತ್ರ, ಗಣಿತ ಮತ್ತು ಕಂಪ್ಯೂಟಿಂಗ್, ಗಣಿತ, ಭೌತಶಾಸ್ತ್ರ, ಅನ್ವಯಿಕ ಭೂಗರ್ಭಶಾಸ್ತ್ರ, ಅನ್ವಯಿಕ ಭೂಭೌತಶಾಸ್ತ್ರ, ಅಪ್ಲೈಡ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಇನ್‌ಫಾರ್ಮ್ಯಾಟಿಕ್ಸ್, ಜೈವಿಕ ತಂತ್ರಜ್ಞಾನ, ಖಗೋಳವಿಜ್ಞಾನ, ಸಂಖ್ಯಾಶಾಸ್ತ್ರ.

ಜಂಟಿ ಎಂಎಸ್‌ಸಿ– ಪಿಎಚ್‌ಡಿ: ವಾತಾವರಣ ಮತ್ತು ಸಾಗರ ಅಧ್ಯಯನ, ರಸಾಯನಶಾಸ್ತ್ರ, ಭೂಗರ್ಭಶಾಸ್ತ್ರ, ಗಣಿತ, ಭೌತಶಾಸ್ತ್ರ, ಭೂಭೌತಶಾಸ್ತ್ರ, ವೈದ್ಯಕೀಯ ಭೌತಶಾಸ್ತ್ರ, ಅನ್ವಯಿಕ ವೈದ್ಯಕೀಯ ಸೂಕ್ಷ್ಮಜೀವಶಾಸ್ತ್ರ, ನ್ಯೂಕ್ಲಿಯರ್ ಮೆಡಿಸಿನ್.

ಎಂಎಸ್‌ಸಿ– ಪಿಎಚ್‌ಡಿ ಡ್ಯುಯಲ್ ಡಿಗ್ರಿ: ಶಕ್ತಿ, ಪರಿಸರ ವಿಜ್ಞಾನ, ಆಪರೇಷನ್ಸ್ ರಿಸರ್ಚ್, ಅನ್ವಯಿಕ ಭೂಗರ್ಭಶಾಸ್ತ್ರ, ಅನ್ವಯಿಕ ಭೂಭೌತಶಾಸ್ತ್ರ.

ಮೂರು ವರ್ಷದ ಎಂಎಸ್‌ಸಿ (ತಂತ್ರಜ್ಞಾನ): ಎಂಎಸ್‌ಸಿ-ಎಂ.ಟೆಕ್ ಡ್ಯುಯಲ್ ಡಿಗ್ರಿ: ಗಣಿತ – ಡೇಟಾ & ಕಂಪ್ಯುಟೇಷನಲ್ ಸೈನ್ಸಸ್, ಫಿಸಿಕ್ಸ್ ಮತ್ತು ಮೆಟೀರಿಯಲ್ಸ್ ಎಂಜಿನಿಯರಿಂಗ್.

ಐಐಟಿ, ಐಐಎಸ್‌ಸಿ ಏಕೆ?
ದೇಶದಾದ್ಯಂತ ಇರುವ ವಿಶ್ವವಿದ್ಯಾಲಯಗಳ ಶಿಕ್ಷಣದ ಗುಣಮಟ್ಟಕ್ಕಿಂತ ಐಐಟಿ, ಐಐಎಸ್‌ಸಿಯಲ್ಲಿ ದೊರೆಯುವ ಶಿಕ್ಷಣದ ಗುಣಮಟ್ಟ ಅತ್ಯುತ್ತಮವಾಗಿದೆ. ವಿಶ್ವದರ್ಜೆಯ ಶಿಕ್ಷಣ, ಅನುಭವಿ ಹಾಗೂ ಪ್ರತಿಭಾವಂತ ಪ್ರಾಧ್ಯಾಪಕರು, ಸುಧಾರಿತ ಪ್ರಯೋಗಾಲಯಗಳು, ಆಧುನಿಕ ಪ್ರಯೋಗಾಲಯ ಉಪಕರಣಗಳು, ಸಂಶೋಧನೆಗೆ ಅವಕಾಶ, ವೈವಿಧ್ಯಮಯ ಹಾಗೂ ವಿಶಿಷ್ಟ ಕೋರ್ಸ್‌ಗಳು ಇಲ್ಲಿ ಲಭ್ಯ. ಇಲ್ಲಿನ ಕೋರ್ಸ್‌ಗಳಿಗೆ ಪ್ರವೇಶ ಗಿಟ್ಟಿಸಲು ಇರುವ ಸ್ಪರ್ಧೆ, ಈ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಪೂರೈಸಿ ಹೊರಬಂದವರಿಗೆ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಔದ್ಯೋಗಿಕ ವಲಯದಲ್ಲಿ ಇರುವ ಬೇಡಿಕೆ ಗಮನಿಸಿದರೆ ಇಲ್ಲಿ ಏಕೆ ಅಧ್ಯಯನ ಮಾಡಬೇಕು ಎಂಬುದು ಮನವರಿಕೆಯಾಗುತ್ತದೆ.

ಸಿದ್ಧತೆ, ತರಬೇತಿ
‘ಮಾಸ್ಟರ್ಸ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆ’ಗೆ ಸಿದ್ಧರಾಗುವುದು ಸುಲಭವೇನಲ್ಲ. ಪದವಿ ಮುಗಿಸಿದ ನಂತರ ಈ ಪರೀಕ್ಷೆ ಎದುರಿಸುವ ಬಗ್ಗೆ ಯೋಚಿಸಿದರೆ, ಸಿದ್ಧತೆಗಾಗಿ ಕನಿಷ್ಠ 8 – 12 ತಿಂಗಳು ಬೇಕಾಗಬಹುದು. ಐಐಟಿ, ಐಐಎಸ್‌ಸಿಯಲ್ಲಿ ಅಧ್ಯಯನ ಮಾಡುವ ಕನಸನ್ನು ಎಳವೆಯಲ್ಲಿಯೇ ಕಂಡಿದ್ದರೆ, ಪದವಿಯ ಮೊದಲ ವರ್ಷದಿಂದಲೇ ಸಿಲಬಸ್‌ಗೆ ಅನುಗುಣವಾಗಿ ನಿರಂತರ ಅಧ್ಯಯನ ಮಾಡುವುದು ಅತ್ಯವಶ್ಯ. ಯಾವ ಐಐಟಿಗಳಲ್ಲಿ ಯಾವ ಕೋರ್ಸ್‌ಗಳಿವೆ, ಭವಿಷ್ಯದಲ್ಲಿ ಅವುಗಳಿಗೆ ಬರಬಹುದಾದ ಬೇಡಿಕೆ ಏನು, ಪ್ರಶ್ನೆಗಳ ಕಠಿಣತೆ, ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ, ಈ ಎಲ್ಲ ವಿವರಗಳನ್ನು ತಿಳಿದುಕೊಳ್ಳುವುದು ಅಗತ್ಯ. ಪರೀಕ್ಷೆಯ ಸ್ವರೂಪದ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಕೆಲವು ಯೂಟ್ಯೂಬ್ ಚಾನೆಲ್‌ಗಳು ನೀಡುತ್ತವೆ. ಅವುಗಳನ್ನು ವೀಕ್ಷಿಸುವುದು ಒಳಿತು. ಈ ಎಲ್ಲವುಗಳನ್ನೂ ವಿವರವಾಗಿ ತಿಳಿದ ಮೇಲೆ ಸಿದ್ಧತೆ ಬಗೆಗಿನ ಯೋಜನೆಗಳನ್ನು ರೂಪಿಸಿಕೊಳ್ಳಿ. ಸಮಯಾವಕಾಶ ಕಡಿಮೆ ಇದ್ದರೆ ಅಥವಾ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಲು ತರಬೇತಿ ಅಗತ್ಯವೆನಿಸಿದರೆ ಆಫ್‌ಲೈನ್ ಅಥವಾ ಆನ್‌ಲೈನ್ ತರಬೇತಿ ಪಡೆದುಕೊಳ್ಳಿ. ಈ ಹಿಂದೆ ಪರೀಕ್ಷೆ ಬರೆದು ತೇರ್ಗಡೆಯಾದವರು, ಐಐಟಿ, ಐಐಎಸ್‌ಸಿಯಲ್ಲಿ ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಪೂರಕ ಮಾಹಿತಿ ಕಲೆಹಾಕಿ.

ಅರ್ಥಶಾಸ್ತ್ರದಲ್ಲಿ ಮಾಸ್ಟರ್ಸ್ ಪದವಿ
ಸಾಮಾನ್ಯವಾಗಿ ಐಐಟಿಗಳು ಎಂದರೆ ಎಂಜಿನಿಯರಿಂಗ್ ವಿಷಯದ ಅಧ್ಯಯನಕ್ಕೆ ಮಾತ್ರ ಎಂಬ ಭಾವನೆ ಇದೆ. ಆದರೆ, ಐಐಟಿಗಳಲ್ಲಿ ಮೂಲವಿಜ್ಞಾನದ ವಿಷಯಗಳು ಸೇರಿದಂತೆ, ಅರ್ಥಶಾಸ್ತ್ರ ವಿಷಯದಲ್ಲಿಯೂ ಸ್ನಾತಕೋತ್ತರ ಪದವಿ ಕೋರ್ಸ್ ಲಭ್ಯವಿದೆ. ಐಐಟಿ ದೆಹಲಿ ಮತ್ತು ಐಐಟಿ ರೂರ್ಕಿಯಲ್ಲಿ 2020ರಿಂದ ಅರ್ಥಶಾಸ್ತ್ರ ವಿಷಯದಲ್ಲಿ ಎರಡು ವರ್ಷದ ಸ್ನಾತಕೋತ್ತರ ಕೋರ್ಸ್ ಪ್ರಾರಂಭಿಸಲಾಗಿದೆ. ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುವ ಬಗ್ಗೆ ಯೋಚಿಸುವುದು ಒಳಿತು.

ಎಲ್ಲೆಲ್ಲಿ ಮಾನ್ಯತೆ?
ಈ ಪರೀಕ್ಷೆಯು ಐಐಟಿ, ಐಐಎಸ್‌ಸಿ ಪ್ರವೇಶಕ್ಕೆ ಮಾತ್ರವಲ್ಲದೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಬಹುತೇಕ ವಿವಿಗಳು ವಿವಿಧ ಕೋರ್ಸ್‌ಗಳ ಪ್ರವೇಶಕ್ಕೂ ಈ ಫಲಿತಾಂಶಕ್ಕೆ ಮನ್ನಣೆ ನೀಡುತ್ತವೆ. ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್), ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ), ಗುಲ್ಬರ್ಗಾ ಕೇಂದ್ರೀಯ ವಿವಿ ಸೇರಿದಂತೆ ಕೆಲವು ಕೇಂದ್ರೀಯ ವಿಶ್ವವಿದ್ಯಾಲಯಗಳು ಈ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಫಲಿತಾಂಶವನ್ನು ಪರಿಗಣಿಸುತ್ತವೆ. ಅದರ ಆಧಾರದಲ್ಲಿ ಉನ್ನತ ಶಿಕ್ಷಣಕ್ಕೆ ಅಥವಾ ಸಂಶೋಧನೆಗೆ ಅವಕಾಶ ನೀಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT