ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್‌ ಸರ್ವೀಸಸ್ ಪರೀಕ್ಷೆ: ಟಿಪ್ಪಣಿ-ಯಶಸ್ಸಿನ ಏಣಿ

ಅಣಕು ಪರೀಕ್ಷೆಯ ಮಿಣುಕು
Last Updated 30 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಸಿವಿಲ್‌ ಸರ್ವೀಸಸ್‌ ಹುದ್ದೆಗಳಿಗಾಗಿ ನಡೆಯುವ ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಚಲಿತ ವಿದ್ಯಮಾನಗಳ(Current Affairs) ಕುರಿತು ಪ್ರಶ್ನೆಗಳಿರುತ್ತವೆ. ಅವುಗಳನ್ನು ಸುಲಭವಾಗಿ ಎದುರಿಸಲು ಯಾವ ದಿನಪತ್ರಿಕೆ, ವಾರ–ಮಾಸಪತ್ರಿಕೆ, ಯಾವ ಬುಕ್‌ಗಳನ್ನು ಓದಬೇಕು ಎಂಬುದು ಬಹುತೇಕ ಐಎಎಸ್, ಐಪಿಎಸ್ ಆಕಾಂಕ್ಷಿಗಳಲ್ಲಿರುವ ಪ್ರಶ್ನೆ.

ಜಗತ್ತಿನ ಯಾವುದೇ ಭಾಗದಲ್ಲಿ ಯಾವುದೇ ವಿದ್ಯಮಾನ ನಡೆದರೂ ಅದನ್ನು ಗಮನಿಸಬೇಕು.ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡೆ, ವಿಜ್ಞಾನ, ಸಂಶೋಧನೆ, ಕೃಷಿ, ರಕ್ಷಣೆ, ಸಂವಹನ, ತಂತ್ರಜ್ಞಾನ, ಸಂಪರ್ಕ, ಶಿಕ್ಷಣ, ಹಣಕಾಸು, ಸಂವಿಧಾನ, ನ್ಯಾಯಾಂಗ, ಹವಾಮಾನ, ಆರೋಗ್ಯ... ಹೀಗೆ ಯಾವುದೇ ಕ್ಷೇತ್ರವಿರಲಿ, ಅಲ್ಲಿನ ವಿದ್ಯಮಾನಗಳು ಪೂರ್ವಭಾವಿ ಪರೀಕ್ಷೆಯ ಬಹು ಮುಖ್ಯ ಭಾಗ.

ಈವರೆಗೆ ಯಶಸ್ಸು ಗಳಿಸಿದ ಬಹುತೇಕರು ಪ್ರಚಲಿತ ವಿದ್ಯಮಾನಗಳಿಗಾಗಿ ಪತ್ರಿಕೆಗಳು, ಇಯರ್‌ ಬುಕ್‌ ಓದಿದ್ದಾಗಿ ಹೇಳಿದ್ದಾರೆ. ಕೆಲವರು ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಮಾಹಿತಿಗಾಗಿ ‘ಡೌನ್ ಟು ಅರ್ಥ್’ ಪತ್ರಿಕೆಯ ವಾರ್ಷಿಕ ಪುಸ್ತಕದ ಓದು ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ. ಪತ್ರಿಕೆಗಳನ್ನು ಓದುವುದರ ಜೊತೆಗೆ, ರಾಜ್ಯಸಭಾ ಟಿವಿ ಚಾನೆಲ್, ನಿತ್ಯದ ಸುದ್ದಿ ವಿಶ್ಲೇಷಣೆ, ಪ್ರೆಸ್ ಇನ್ಫರ್ಮೇಶನ್ ಬ್ಯುರೊದ ಸುದ್ದಿ ಮತ್ತು ವಾಹಿನಿಗಳಲ್ಲಿ ಪ್ರಸಾರಗೊಳ್ಳುವ ರಸಪ್ರಶ್ನೆ ಕಾರ್ಯಕ್ರಮಗಳನ್ನು ತಪ್ಪದೇ ನೋಡಬೇಕು. ನಿರಂತರವಾಗಿ ಇವುಗಳನ್ನು ಹಿಂಬಾಲಿಸಬೇಕು.

ಯಾವುದಾದರೊಂದು ನಿಶ್ಚಿತವಾದ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಪತ್ರಿಕೆ, ಇಯರ್ ಬುಕ್, ನೀತಿ ಆಯೋಗದ ಪ್ರಕಟಣೆ, ಆರ್ಥಿಕ ಸಮೀಕ್ಷಾ ವರದಿ, ಬಜೆಟ್, ಕಾಂಪಿಟೇಷನ್ ವಿಝಾರ್ಡ್‌, ಕುರುಕ್ಷೇತ್ರ, ಯೋಜನಾ, ಸೈನ್ಸ್ ರಿಪೋರ್ಟರ್, ಡೌನ್ ಟು ಅರ್ಥ್‌ನಂತಹ ವಿಶ್ವಾಸಾರ್ಹ ನಿಯತಕಾಲಿಕೆಗಳನ್ನು ಓದಿ. ಭಾರತ ಸರ್ಕಾರದ ವೆಬ್‌ಸೈಟ್‌ಗಳಿಗೂ ಆಗಾಗ ಭೇಟಿ ನೀಡುತ್ತಿರಿ. ಹಲವು ತರಬೇತಿ ಕೇಂದ್ರಗಳು ‘ಪ್ರಚಲಿತ ವಿದ್ಯಮಾನಗಳ’ ತರಬೇತಿ ಕುರಿತು ಕೋರ್ಸ್‌ಗಳನ್ನೇ ಆರಂಭಿಸಿವೆ. ನೀವು ಶಿಸ್ತಿನಿಂದ ಅಭ್ಯಾಸ ಮಾಡಿದರೆ ಅಂಥ ಕೋರ್ಸ್‌ಗಳ ಅವಶ್ಯಕತೆ ಇರುವುದಿಲ್ಲ. ಮಾರುಕಟ್ಟೆಯಲ್ಲಿ ತರಹೇವಾರಿ ಅಧ್ಯಯನ ಸಾಮಗ್ರಿಗಳಿವೆ. ಹಾಗೆಂದು ಸಿಕ್ಕ ಸಿಕ್ಕ ಪುಸ್ತಕಗಳನ್ನು ಖರೀದಿಸಬೇಡಿ.

ಅಣಕು (Mock) ಪರೀಕ್ಷೆ

ಪೂರ್ವಭಾವಿ ಪರೀಕ್ಷೆಗೂ ಮುಂಚೆ ಅಣಕು ಪರೀಕ್ಷೆಗಳನ್ನು ಎದುರಿಸಬೇಕು. ಇದರಿಂದ ಇರುವ ಸಮಯದಲ್ಲೇ ಹೇಗೆ ಸರಿ ಉತ್ತರಗಳನ್ನು ಆಯ್ಕೆ ಮಾಡಿಕೊಳ್ಳುವುದು ಎಂದು ಗೊತ್ತಾಗುತ್ತದೆ. ಪ್ರಶ್ನೆ ಪತ್ರಿಕೆಯ ಮಾದರಿ ತಿಳಿಯುತ್ತದೆ. ಉತ್ತರಿಸುವ ವೇಗ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೆ ತಾವು ಯಾವ ವಿಷಯಗಳಲ್ಲಿ ದುರ್ಬಲರು ಎಂಬುದು ಅಭ್ಯರ್ಥಿಗಳಿಗೆ ತಿಳಿಯುತ್ತದೆ.

ಅಂದ ಹಾಗೆ, 10 ರಿಂದ 15 ಅಣಕು ಪರೀಕ್ಷೆಗಳನ್ನು ತೆಗೆದುಕೊಂಡರೆ ಸಾಕು. ‘ನಾನು 40 ಪರೀಕ್ಷೆ ಬರೆಯುತ್ತೇನೆ’ ಎಂಬ ಹುಂಬತನ ಒಳ್ಳೆಯದಲ್ಲ. ಹೀಗೆ ಮಾಡಿದರೆ, ನಿಮ್ಮ ಶಕ್ತಿಯೆಲ್ಲಾ ಪ್ರಿಲಿಮ್ಸ್‌ಗೇ ಮುಗಿದು ಹೋಗುವ ಅಪಾಯವಿರುತ್ತದೆ. ಪರೀಕ್ಷೆಯ ನಂತರ ಬರೆದಿರುವ ಉತ್ತರ ಮತ್ತು ಗಳಿಸಿದ ಅಂಕಗಳ ವಿಶ್ಲೇಷಣೆ ಮಾಡಿ. ಅಣಕು ಪರೀಕ್ಷೆಗಳನ್ನು ನೈಜ ಪರೀಕ್ಷೆಯಂತೆಯೇ ಎದುರಿಸಬೇಕು. ಅದಕ್ಕಾಗಿ ಯಾವುದಾದರೂ ಸಂಸ್ಥೆಯಲ್ಲಿ ನಿಗದಿತವಾಗಿ ಪರೀಕ್ಷೆ ತೆಗೆದುಕೊಳ್ಳಬೇಕು. ಅಣಕು ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದಾಗ ಬೀಗದೇ, ಕಡಿಮೆ ಅಂಕ ಬಂದಾಗ ಕುಸಿಯದೇ ಫಲಿತಾಂಶವನ್ನು ಸಮಚಿತ್ತದಿಂದ ಸ್ವೀಕರಿಸುವುದನ್ನು ಕಲಿಯಬೇಕು.

ಟಿಪ್ಪಣಿ ಯಶಸ್ಸಿಗೆ ಹಾದಿ

ಪ್ರಿಲಿಮ್ಸ್ ಹಾಗೂ ಮೇನ್ಸ್ ಎರಡೂ ಪರೀಕ್ಷೆ ತಯಾರಿಗೆ ಓದಿದ್ದರ ಬಗ್ಗೆ ಸರಿಯಾದ ಟಿಪ್ಪಣಿ ಮಾಡಿಕೊಳ್ಳಬೇಕು.ಟಿಪ್ಪಣಿ ಚಿಕ್ಕದಾಗಿರಲಿ. ಪ್ರತಿ ವಿಷಯಕ್ಕೂ ಪ್ರತ್ಯೇಕ ನೋಟ್‌ಬುಕ್ ಅಥವಾ ಡೈರಿ ಹಾಳೆಗಳಲ್ಲಿ ಬರೆದುಕೊಳ್ಳಬೇಕು. ಆನ್‌ಲೈನ್‌ನಲ್ಲಿ, ಮೊಬೈಲ್, ಲ್ಯಾಪ್‌ಟಾಪ್ ಸ್ಕ್ರೀನ್‌ನಲ್ಲಿ ಓದಿದರೆ ಸಾಕು ಎಂಬ ಪದ್ಧತಿ ಬಿಡಿ. ಯಾವುದಾದರೂ ವಿಷಯವನ್ನು ನೆನಪಿಟ್ಟುಕೊಳ್ಳಲು ಒಂದು ಸಾರಿಯಾದರೂ ಬರೆಯಬೇಕು. ಟಿಪ್ಪಣಿ ಬುಲೆಟ್ ಪಾಯಿಂಟ್‌ಗಳ ರೂಪದಲ್ಲಿರಲಿ. ದೀರ್ಘ ನೋಟ್ಸ್ ಬೇಡ. ಇದರಿಂದ ಮುಖ್ಯ ಪರೀಕ್ಷೆಗೂ ಸಹಾಯವಾಗುತ್ತದೆ.

ಪಠ್ಯಕ್ರಮ ಅಭ್ಯಸಿಸಿ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಿಗದಿಪಡಿಸಿರುವ ಪಠ್ಯಕ್ರಮದ ವಿಷಯಗಳನ್ನು ಸಮಗ್ರವಾಗಿ ಅಭ್ಯಸಿಸಬೇಕು. ಹಿಂದಿನ ವರ್ಷ ಇಂಥ ವಿಷಯಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು ಅದನ್ನೇ ಈ ಬಾರಿಯೂ ಗಮನಹರಿಸುತ್ತೇನೆ ಎನ್ನುವುದು ನೆರವಿಗೆ ಬರಲಾರದು. ಪ್ರತಿ ವರ್ಷವೂ ಒಂದೊಂದು ವಿಷಯವನ್ನು ಪ್ರಮುಖವಾಗಿಸಿ ಪ್ರಶ್ನೆಗಳಿರುತ್ತವೆ. ಪುರಾತನ ಮತ್ತು ಮಧ್ಯಕಾಲೀನ ಭಾರತದ ವ್ಯವಸ್ಥೆ, ಸಂಸ್ಕೃತಿ, ಆಚರಣೆ, ಪದ್ಧತಿಗಳ ಬಗ್ಗೆ ಸಾಮಾನ್ಯವಾಗಿ ಹೆಚ್ಚಿನ ಪ್ರಶ್ನೆಗಳಿರುತ್ತವೆ.

ಪುನರ್‌ಮನನ ಮಾಡಿ

ಪರೀಕ್ಷೆಗೆ ಕೇವಲ ಒಂದು ತಿಂಗಳಿದೆ ಎನ್ನುವಾಗ ಹೊಸ ವಿಷಯ ಕೈಗೆತ್ತಿಕೊಳ್ಳಬೇಡಿ. ವಿಷಯ ಅತ್ಯಂತ ಸಕಾಲಿಕ ಮತ್ತು ಮಹತ್ವದ್ದು ಎನ್ನಿಸಿದರೆ ಮಾತ್ರ ಗಮನ ಹರಿಸಿ. ಅದುವರೆಗೂ ಓದಿದ್ದನ್ನು ರಿವಿಷನ್ ಮಾಡಲು ಕೊನೆಯ ತಿಂಗಳನ್ನು ಮೀಸಲಿಡಿ.

ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ಮೇಲೆ ಗಮನ ಹರಿಸಿರಿ. ಅಲ್ಲಿನ ಪ್ರಶ್ನೆಗಳಿಗಿಂತ ಇಡೀ ಪ್ರಶ್ನೆ ಪತ್ರಿಕೆ ಹೇಗಿರುತ್ತದೆ ಎಂಬುದರ ಬಗ್ಗೆ ತೀಕ್ಷ್ಣ ಗಮನವಿರಲಿ.

(ಮುಂದಿನ ವಾರ: ಪಾಠ: 4 - ಸ್ವಯಂ ಕಲಿಕೆ ಅಥವಾ ಸ್ಪೆಷಲ್ ಕೋಚಿಂಗ್ – ಯಾವುದು ಸೂಕ್ತ?)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT