ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಂಗಳ ಗಂಗೋತ್ರಿಯಲ್ಲಿ ‘ವಾತ್ಸಲ್ಯ’ದ ಒರತೆ

Last Updated 22 ಫೆಬ್ರುವರಿ 2021, 10:55 IST
ಅಕ್ಷರ ಗಾತ್ರ

ಮಂಗಳೂರು ವಿಶ್ವವಿದ್ಯಾಲಯವು ‘ವಾತ್ಸಲ್ಯ ನಿಧಿ’ಯನ್ನು ತೆರೆಯುವ ಮೂಲಕ ಶೈಕ್ಷಣಿಕ ವಾತಾವರಣದಲ್ಲಿ ಮಾನವತೆಯ ಬೀಜ ಬಿತ್ತಿದೆ. ಜ್ಞಾನ ದೀವಿಗೆಯ ಖನಿಯಾಗಿ ವಿದ್ಯಾರ್ಥಿಗಳ ಭವಿಷ್ಯ ಪ್ರಜ್ವಲಿಸುವ ಈ ಅಕ್ಷರ ದೇಗುಲವು ನೊಂದವರ ಸಂಕಷ್ಟಕ್ಕೆ ಮಿಡಿಯುವ ಉದಾತ್ತ ವಿಚಾರದೆಡೆಗೆ ದೃಷ್ಟಿಯನ್ನು ಹೊರಳಿಸಿದೆ. ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ‘ಕರುಣೆಯ ಗೋಡೆ’ ಕಟ್ಟಿದೆ.

ಮಂಗಳ ಗಂಗೋತ್ರಿಯ ಆವರಣದಲ್ಲಿ ‘ವಾತ್ಸಲ್ಯ ನಿಧಿ’ ಎಂಬ ತಾಣ ರೂಪುಗೊಂಡಿದೆ. 15 ದಿನಗಳ ಹಿಂದೆ ಆರಂಭವಾಗಿರುವ ಇಲ್ಲಿ ಅನೇಕರು ತಮಗೆ ಬೇಡವಾಗಿರುವ ಉತ್ತಮ ಗುಣಮಟ್ಟದ ವಸ್ತುಗಳನ್ನು ತಂದಿಟ್ಟು ಹೋಗುತ್ತಾರೆ. ಅಗತ್ಯವಿದ್ದವರು ಇಲ್ಲಿ ಬಂದು ಅಂತಹ ವಸ್ತುಗಳನ್ನು ಒಯ್ಯುತ್ತಾರೆ. ಹೀಗೆ ಉಳ್ಳವರು ಮತ್ತು ಇಲ್ಲದವರ ನಡುವೆ ವಾತ್ಸಲ್ಯದ ಬಂಧ ಬೆಸೆದಿದೆ ಈ ‘ಮಂಗಳ ಗಂಗೋತ್ರಿ’.

ಉತ್ತಮ ಸ್ಥಿತಿಯಲ್ಲಿರುವ ಮನೆ ಬಳಕೆ ಸಾಮಗ್ರಿಗಳು, ಬಟ್ಟೆ, ಪುಸ್ತಕ, ಪೆನ್ನು, ಬ್ಯಾಗ್ ಹೀಗೆ ಬಳಕೆಗೆ ಯೋಗ್ಯವಾಗಿರುವ ಯಾವುದೇ ವಸ್ತುಗಳನ್ನಾದರೂ ಇಲ್ಲಿ ತಂದಿಡಬಹುದು. ಕೊಂಡುಕೊಳ್ಳಲು ಸಾಮರ್ಥ್ಯ ಇಲ್ಲದವರು, ತಮಗೆ ಅಗತ್ಯವಿರುವ ವಸ್ತುಗಳು ಇಲ್ಲಿದ್ದರೆ, ಅದನ್ನು ಮುಕ್ತವಾಗಿ ತೆಗೆದುಕೊಂಡು ಹೋಗಬಹುದು. ಸದ್ದಿಲ್ಲದೆ, ಸುದ್ದಿಯ ಹಂಗಿಲ್ಲದೇ ಬಡವರಿಗೆ ದಾನ ಮಾಡಬೇಕೆಂಬ ಅಂತಃಕರಣವುಳ್ಳ ಮನಸ್ಸುಗಳಿಗೆ, ವಿಶ್ವವಿದ್ಯಾಲಯವು ಒಳ್ಳೆಯ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ. ಇಲ್ಲಿ ಕೊಟ್ಟವರಿಗೆ ಅಹಂ ಇಲ್ಲ, ತೆಗೆದುಕೊಂಡವರಿಗೆ ಕೀಳರಿಮೆಯಿಲ್ಲ.

‘ವಿದೇಶಗಳಲ್ಲಿ ಅನೇಕ ಕಡೆಗಳಲ್ಲಿ ಕರುಣೆಯ ಗೋಡೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಶೈಕ್ಷಣಿಕ ಚಟುವಟಿಕೆಯ ವಿಸ್ತರಣೆಯಾಗಿ ವಿಶ್ವವಿದ್ಯಾಲಯದ ಅಂಗಳದಲ್ಲಿ ಇಂತಹುದೊಂದು ಕಲ್ಪನೆಯನ್ನು ಸಾಕಾರಗೊಳಿಸಲಾಗಿದೆ. ಮನೆಯಲ್ಲಿರುವ ಹೆಚ್ಚುವರಿ ವಸ್ತುಗಳನ್ನು ಇಲ್ಲಿ ತಂದಿಟ್ಟರೆ ಅವಶ್ಯಕತೆ ಇದ್ದವರು ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ’ ಎನ್ನುತ್ತಾರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ.

ಇರಾನ್‌ನಲ್ಲಿ ನಿರಾಶ್ರಿತರು, ಅಸಹಾಯಕರಿಗೆ ನೆರವಾಗಲು ಹುಟ್ಟಿದ ವ್ಯವಸ್ಥೆ ‘ಕರುಣೆಯ ಗೋಡೆ’. ಈಗ ಭಾರತದ ಅನೇಕ ರಾಜ್ಯಗಳಲ್ಲಿ ಇದೆ. ಕರ್ನಾಟಕದಲ್ಲೂ ಮೈಸೂರು, ಬೆಂಗಳೂರಿನಂತಹ ಮಹಾನಗರಗಳಲ್ಲಿ, ಸಣ್ಣ ಸಣ್ಣ ಪಟ್ಟಣಗಳಲ್ಲೂ ಇಂತಹ ‘ದಾನ ತಾಣ’ಗಳಿವೆ. ಆದರೆ, ಶಿಕ್ಷಣ ಸಂಸ್ಥೆಯಲ್ಲಿ ಈ ಮಮತೆಯ ಚಿಗುರು ಮೊಳೆತಿದ್ದು ಮಂಗಳ ಗಂಗೋತ್ರಿಯಲ್ಲೇ ಮೊದಲು ಎನ್ನುತ್ತಾರೆ ವಿಶ್ವವಿದ್ಯಾಲಯದ ಪ್ರಮುಖರು.

‘ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಯ ಸಮೀಪದ ಜಾಗವನ್ನೇ ಆಯ್ಕೆ ಮಾಡಿಕೊಂಡು ‘ವಾತ್ಸಲ್ಸ ನಿಧಿ’ ಸ್ಥಾಪಿಸಲಾಗಿದೆ. ಬರುವ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯಿದೆ. ಜನರು ಬಳಕೆ ಮಾಡದೇ ಉಳಿಸಿಕೊಂಡಿರುವ, ಅವಧಿ ಮೀರದ ಔಷಧ, ಗುಳಿಗೆಗಳನ್ನು ಇಲ್ಲಿ ತಂದಿಟ್ಟರೆ, ಅಗತ್ಯವಿದ್ದವರಿಗೆ ಅದು ಜೀವರಕ್ಷಕವಾಗಬಹುದು. ಅದಕ್ಕಾಗಿ ಒಂದು ಪ್ರತ್ಯೇಕ ಡಬ್ಬ ಇಡಲು ಯೋಚಿಸಲಾಗಿದೆ’ ಎಂದು ಕುಲಸಚಿವ ರಾಜು ಮೊಗವೀರ ತಿಳಿಸಿದರು.

‘ಯಾರು ಬೇಕಾದರೂ ಇಲ್ಲಿ ವಸ್ತುಗಳನ್ನು ತಂದಿಡಬಹುದು. ವಸ್ತುಗಳನ್ನು ತಂದು ಇಡುವವರು ಇಷ್ಟವಿದ್ದಲ್ಲಿ ಹೆಸರು ದಾಖಲಿಸಬಹುದು. ಆದರೆ, ಅದನ್ನು ಒಯ್ಯುವವರು ಹೆಸರು ದಾಖಲಿಸಬೇಕಾಗಿಲ್ಲ. ಯಾವುದೇ ಮುಜುಗರವಿಲ್ಲದೇ ವಸ್ತುಗಳನ್ನ ತೆಗೆದುಕೊಂಡು ಹೋಗಬಹುದು. ವಿಶ್ವವಿದ್ಯಾಲಯ ದತ್ತು ಪಡೆದಿರುವ ಹಳ್ಳಿಗಳಲ್ಲಿ ಈ ಯೋಜನೆಯ ಬಗ್ಗೆ ಅರಿವು ಮೂಡಿಸಲು ಯೋಚಿಸಲಾಗಿದೆ’ ಎಂದು ‘ವಾತ್ಸಲ್ಯ ನಿಧಿ’ಯ ಸಂಯೋಜಕ ಪ್ರೊ. ರಮೇಶ್ ಗನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT